ನವದೆಹಲಿ: ಹೊಸ ವೇತನ ಸಂಹಿತೆಗೆ ಸಂಬಂಧಿಸಿದಂತೆ ಸರ್ಕಾರವು ಶೀಘ್ರದಲ್ಲೇ ಮಾರ್ಗದರ್ಶಿ ಸೂತ್ರವನ್ನು ಘೋಷಣೆ ಮಾಡಲಿದೆ. ಏಪ್ರಿಲ್ 1, 2021ರಿಂದ ಅದು ಜಾರಿಗೆ ಬರುವ ಸಾಧ್ಯತೆ ಇದೆ. ಇನ್ನು ಎರಡು ವಾರದೊಳಗೆ ಕಾರ್ಮಿಕ ಸಚಿವಾಲಯದಿಂದ ಹೊಸ ಮಾರ್ಗದರ್ಶಿ ಸೂಚನೆಗಳ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು. ಕಾರ್ಮಿಕ ಒಕ್ಕೂಟಗಳು ಮತ್ತು ಕೈಗಾರಿಕೆ ವಲಯಗಳ ತಜ್ಞರ ಜತೆಗೆ ಚರ್ಚೆ ನಡೆಯುತ್ತಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ಆದರೆ ಕಾರ್ಮಿಕ ಸುಧಾರಣೆ ಜಾರಿಯು ತಡವಾಗಬಹುದು. ಏಕೆಂದರೆ ಕೆಲವು ರಾಜ್ಯಗಳಲ್ಲಿ ನಿಯಮವಾಳಿಗಳನ್ನು ರೂಪಿಸಿ, ಅಧಿಸೂಚನೆ ಹೊರಡಿಸಬೇಕಾಗಿದೆ.
ಇಪಿಎಫ್ಒ ಸದಸ್ಯರು ಹಾಗೂ ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿಯಾದ ವಿರ್ಜೇಶ್ ಉಪಾಧ್ಯಾಯ್ ಹೇಳುವಂತೆ, ಹೊಸ ವೇತನ ಸಂಹಿತೆ ಕರಡಿನಲ್ಲಿ ಕೆಲವು ಬದಲಾವಣೆ ಆಗಬೇಕಿದೆ. ಸಾಮಾಜಿಕ ಭದ್ರತೆಗಳಾದ ಕೆಲಸ ನಿರ್ವಹಿಸುವ ಅವಧಿ, ವಾರ್ಷಿಕ ರಜಾ, ಟೇಕ್ ಹೋಮ್ ಸ್ಯಾಲರಿ (ಎಲ್ಲ ಕಡಿತದ ನಂತರ ಕೈಗೆ ಬರುವ ವೇತನ), ಪಿಂಚಣಿ, ಪ್ರಾವಿಡೆಂಟ್ ಫಂಡ್ ಮತ್ತು ಇತರ ನಿವೃತ್ತಿ ಯೋಜನೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಕರಡಿನಲ್ಲಿ ಈ ಬದಲಾವಣೆಗಳನ್ನು ಏಪ್ರಿಲ್ 1ನೇ ತಾರೀಕಿನ ಮುಂಚೆ ತಂದು, ಜಾರಿಯಲ್ಲಿ ಯಾವುದೇ ಬದಲಾವಣೆ ಆಗದಂತೆ ನೋಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಗಳಿಕೆ ರಜಾ ವಿಸ್ತರಣೆಗೆ ಬೇಡಿಕೆ
ಗಳಿಕೆ ರಜಾ ದಿನವನ್ನು 3 ವರ್ಷಗಳ ಅವಧಿಗೆ 240 ದಿನದಿಂದ 300 ದಿನಕ್ಕೆ ಏರಿಕೆ ಮಾಡಬೇಕು ಎಂದು ಕಾರ್ಮಿಕ ಒಕ್ಕೂಟಗಳು ಆಗ್ರಹಪಡಿಸಿವೆ ಎಂದು ಹೆಸರು ಹೇಳಲು ಇಚ್ಛಿಸದ ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ. ಕಟ್ಟಡ ಮತ್ತು ನಿರ್ಮಾಣ ವಲಯ, ತಂಬಾಕು ಕೈಗಾರಿಕೆ ಹಾಗೂ ಪತ್ರಕರ್ತರಿಗೆ ಪ್ರತ್ಯೇಕ ನಿಯಮ ರೂಪಿಸುವಂತೆ ಒಕ್ಕೂಟಗಳು ಬೇಡಿಕೆ ಇಟ್ಟಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಸ ಇಪಿಎಫ್ ನಿಯಮ
ಸಾಮಾಜಿಕ ಭದ್ರತೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕಡ್ಡಾಯ ಇಪಿಎಫ್ ಕಡಿತವನ್ನು ತಿಂಗಳಿಗೆ 15,000 ರೂಪಾಯಿಯಿಂದ 25,000 ರೂಪಾಯಿ ತನಕ ಮಿತಿ ಹೆಚ್ಚಿಸಬೇಕು ಕಾರ್ಮಿಕ ಒಕ್ಕೂಟಗಳು ಒತ್ತಾಯಿಸಿವೆ ಎಂದು ಉಪಾಧ್ಯಾಯ್ ಹೇಳಿದ್ದಾರೆ. ಇಪಿಎಫ್ ನಿಯಮಾವಳಿಗಳ ತಿದ್ದುಪಡಿಗೆ ಕೊನೆ ಸುತ್ತಿನ ಮಾತುಕತೆ ಚರ್ಚೆಯಲ್ಲಿದೆ ಎಂದಿದ್ದಾರೆ.
ಹೊಸ ವೇತನ ಸಂಹಿತೆ ಏಪ್ರಿಲ್ 1ರಿಂದ ಜಾರಿ
29 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ಒಗ್ಗೂಡಿಸಿರುವ ಸರ್ಕಾರ, ನಾಲ್ಕು ಸಂಹಿತೆಯಾಗಿ ರೂಪಿಸಿದೆ. ಕೈಗಾರಿಕೆ ಸಂಬಂಧ, ವೃತ್ತಿಪರ ಸುರಕ್ಷತೆ, ಆರೋಗ್ಯ ಹಾಗೂ ಕಾರ್ಯ ನಿರ್ವಹಣೆ ಸ್ಥಿತಿ ಸಂಹಿತೆ ಹೀಗೆ ನಾಲ್ಕನ್ನು ಮಾಡಿದೆ. ಹೊಸ ಕಾರ್ಮಿಕ ಸಂಹಿತೆಯ ಪ್ರಕಾರ, ಭತ್ಯೆಗಳೆಲ್ಲ ಸೇರಿ ಒಟ್ಟಾರೆ ವೇತನದ ಶೇಕಡಾ 50 ದಾಟುವಂತಿಲ್ಲ. ಅದರರ್ಥ ಏನೆಂದರೆ ಒಟ್ಟಾರೆ ವೇತನದ ಕನಿಷ್ಠ ಶೇ 50ರಷ್ಟು ಮೂಲವೇತನ ಇರಬೇಕು. ಈ ಹಿಂದೆ ಗ್ರಾಚ್ಯುಟಿಯನ್ನು ಮೂಲವೇತನದ ಮೇಲೆ ಲೆಕ್ಕ ಹಾಕಲಾಗುತ್ತಿತ್ತು. ಈಗ ಒಟ್ಟಾರೆ ವೇತನದ ಮೇಲೆ ಲೆಕ್ಕ ಹಾಕಲಾಗುತ್ತದೆ. ಇದೇ ರೀತಿಯಲ್ಲಿ ಪಿ.ಎಫ್.ಕೂಡ ಜಾಸ್ತಿಯಾಗುತ್ತದೆ. ಆ ಮೂಲಕ ಕೈಗೆ ಬರುವ ವೇತನ (ಟೇಕ್ ಹೋಮ್ ಸ್ಯಾಲರಿ) ಕಡಿಮೆ ಆಗುತ್ತದೆ. ಈ ಮೂಲಕ ನಿವೃತ್ತರಾದ ಮೇಲೆ ಪಿ.ಎಫ್. ಹಾಗೂ ಗ್ರಾಚ್ಯುಟಿ ಜಾಸ್ತಿ ಬರುತ್ತದೆ. ಸದ್ಯಕ್ಕೆ ಉದ್ಯೋಗದಾತರು ಸಿಬ್ಬಂದಿಗೆ ಸಿ.ಟಿ.ಸಿ.ಯ (ಕಾಸ್ಟ್ ಟು ಕಂಪೆನಿ) ಶೇಕಡಾ 25ರಿಂದ 40ರಷ್ಟನ್ನು ಮೂಲವೇತನವಾಗಿ ನೀಡುತ್ತಿದ್ದಾರೆ. ಇದರ ಆಧಾರದಲ್ಲೇ ಪಿ.ಎಫ್, ಗ್ರಾಚ್ಯುಟಿ ನೀಡಲಾಗುತ್ತಿದೆ. ಹೊಸ ನಿಯಮಾವಳಿ ಬಂದು ಸಿಟಿಸಿಯ ಕನಿಷ್ಠ ಶೇ 50ರಷ್ಟು ವೇತನವಾಗಿ ಮಾರ್ಪಾಡಾದ ಮೇಲೆ ಪಿ.ಎಫ್, ಗ್ರಾಚ್ಯುಟಿ ಮೇಲೆ ಪರಿಣಾಮ ಆಗುತ್ತದೆ. ಆದ್ದರಿಂದ ಏಪ್ರಿಲ್ನಿಂದ ನಿಮ್ಮ ವೇತನ ಲೆಕ್ಕಾಚಾರದಲ್ಲಿ ಬದಲಾವಣೆ ಆಗಲಿದೆ.