Omicron: ಭಾರತದಲ್ಲಿ ಒಮಿಕ್ರಾನ್ ಸೋಂಕು ಹೆಚ್ಚಾಗುವ ಸಾಧ್ಯತೆ ಕಡಿಮೆ; ತಜ್ಞರ ಅಭಿಮತ
ಭಾರತದಲ್ಲಿ ಓಮಿಕ್ರಾನ್ ಆಗಮನದ ಆಧಾರದ ಮೇಲೆ ಸದಸ್ಯರು ರಚಿಸಿದ ತಾಜಾ ಅಂದಾಜಿನ ಪ್ರಕಾರ, ದೇಶವು ಜನವರಿಯಲ್ಲಿ ಪ್ರಕರಣಗಳ ಏರಿಕೆಯನ್ನು ನೋಡಬಹುದು. ಫೆಬ್ರವರಿ ಅಂತ್ಯದ ವೇಳೆಗೆ ಗರಿಷ್ಠ ಮಟ್ಟವನ್ನು ತಲುಪಬಹುದು.
ನವದೆಹಲಿ: ಭಾರತದಲ್ಲಿ ಈಗ ಒಮಿಕ್ರಾನ್ ಪ್ರಭೇದದ ವೈರಸ್ ಬಹಳ ವೇಗವಾಗಿ ಹರಡುವ ಭಯ ಶುರುವಾಗಿದೆ. ಇಂಗ್ಲೆಂಡ್, ಫ್ರಾನ್ಸ್ ದೇಶಗಳಂತೆ ಭಾರತದಲ್ಲಿ ಒಮಿಕ್ರಾನ್ ಪ್ರಭೇದದ ಕೇಸ್ ಪತ್ತೆಯಾದರೆ, ಭಾರತದ ಜನಸಂಖ್ಯೆಗೆ ನಿತ್ಯ 14 ಲಕ್ಷ ಕೊರೊನಾ ಕೇಸ್ ಪತ್ತೆಯಾಗಬಹುದು ಎಂದು ಕೊರೊನಾ ಟಾಸ್ಕ್ ಪೋರ್ಸ್ ಮುಖ್ಯಸ್ಥ ವಿ.ಕೆ. ಪೌಲ್ ಹೇಳಿದ್ದಾರೆ. ಆದರೆ, ಭಾರತವು ಒಮಿಕ್ರಾನ್ ಪ್ರಭೇದದ ಕೊರೊನಾ ಸೋಂಕಿಗೆ ಹೆಚ್ಚಾಗಿ ತುತ್ತಾಗುವುದಿಲ್ಲ ಎಂದು ಕೇಂದ್ರ ಸರ್ಕಾರವೇ ನೇಮಿಸಿರುವ ಸೂಪರ್ ಮಾಡೆಲ್ ಸಮಿತಿಯ ತಜ್ಞರು ಹೇಳಿದ್ದಾರೆ.
ನಂಬಲಾಗದಷ್ಟು ವೇಗದ ಒಮಿಕ್ರಾನ್ ರೂಪಾಂತರದ ವೈರಸ್ನಿಂದಾಗಿ ಇಂಗ್ಲೆಂಡ್ ದೇಶವು ಹೆಚ್ಚಿನ ಸಂಖ್ಯೆಯ ಕೊರೊನಾ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಆದರೆ, ಭಾರತವು ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಗೆ ಹೆಚ್ಚಾಗಿ ತುತ್ತಾಗುವ ಸಾಧ್ಯತೆ ಕಡಿಮೆ ಎಂದು ರಾಷ್ಟ್ರೀಯ ಕೋವಿಡ್ -19 ಸೂಪರ್ ಮಾಡೆಲ್ ಸಮಿತಿಯ ಮುಖ್ಯಸ್ಥ ಎಂ. ವಿದ್ಯಾಸಾಗರ್ ಹೇಳಿದ್ದಾರೆ.
ಹೈದರಾಬಾದ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಪ್ರೊಫೆಸರ್ ಆಗಿರುವ ವಿದ್ಯಾಸಾಗರ್, ಇಂಗ್ಲೆಂಡ್ ಮಾದರಿಯು ಭಾರತಕ್ಕೆ ಅಪ್ರಸ್ತುತವಾಗಿದೆ ಎಂದು ಹೇಳಿದ್ದಾರೆ. ಈ ವಾದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ ಇಂಗ್ಲೆಂಡ್‌ನಲ್ಲಿ ಕಡಿಮೆ ಸೆರೋ ಪಾಸಿಟಿವಿಟಿ ಇದೆ. ಜೊತೆಗೆ ಇಂಗ್ಲೆಂಡ್‌ನಲ್ಲಿ ಹೆಚ್ಚಿನ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಆದರೆ, ಭಾರತದಲ್ಲಿ ಇದಕ್ಕೆ ವಿರುದ್ಧವಾದ ಸನ್ನಿವೇಶ ಇದೆ. ಹೀಗಾಗಿ, ಭಾರತವು ಒಮಿಕ್ರಾನ್ ಪ್ರಭೇದದ ವೈರಸ್ ಗೆ ತುತ್ತಾಗುವ ಸಾಧ್ಯತೆ ಕಡಿಮೆ ಎಂದು ಪ್ರೊಫೆಸರ್ ವಿದ್ಯಾಸಾಗರ್ ಹೇಳಿದ್ದಾರೆ.
ಎರಡನೆಯ ಕಾರಣವನ್ನು ಉಲ್ಲೇಖಿಸಿ, “ಇಂಗ್ಲೆಂಡ್ ಹೆಚ್ಚಾಗಿ mRNA ಲಸಿಕೆಗಳನ್ನು ಬಳಸುತ್ತದೆ. ಅದು ಅಲ್ಪಾವಧಿಗೆ ಮಾತ್ರ ರಕ್ಷಣೆ ನೀಡುತ್ತದೆ. ಭಾರತದಲ್ಲಿ, ನಾವು ಈ ಲಸಿಕೆಗಳನ್ನು ಬಳಸಿಲ್ಲ. ಕಡಿಮೆ ಸೆರೋ-ಪಾಸಿಟಿವಿಟಿ ಎಂದರೆ ನೈಸರ್ಗಿಕ ಸೋಂಕಿನ ಮೂಲಕ ಕಡಿಮೆ ಸೋಂಕು ಉಂಟಾಗುತ್ತದೆ. ಆದರೆ, ಭಾರತದಲ್ಲಿ ಹೆಚ್ಚಿನ ಸೆರೋ ಪಾಸಿಟಿವಿಟಿ ಇರೋದು ಸೆರೋ ಸರ್ವೇಗಳಿಂದ ತಿಳಿದು ಬಂದಿದೆ. ಇದರರ್ಥ ಭಾರತದಲ್ಲಿ ಈಗಾಗಲೇ ಹೆಚ್ಚಿನ ಜನರಿಗೆ ಕೊರೊನಾ ಸೋಂಕು ಬಂದು ಹೋಗಿದೆ. ಅಂಥವರಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳು ಬೆಳವಣಿಗೆಯಾಗಿವೆ. ದೇಹದಲ್ಲಿ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳು ಅಥವಾ ಆ್ಯಂಟಿಬಾಡಿಗಳ ಬೆಳವಣಿಗೆ ಒಳ್ಳೆಯದು.
ಪ್ರೊಫೆಸರ್ ವಿದ್ಯಾಸಾಗರ್ ನೇತೃತ್ವದ ಸಮಿತಿಯು ಐಐಟಿ-ಕಾನ್ಪುರದ ಪ್ರೊಫೆಸರ್ ಮನೀಂದ್ರ ಅಗರವಾಲ್ ಮತ್ತು ಸೇನಾ ವೈದ್ಯಕೀಯ ಸೇವೆಯ ಉಪ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಮಾಧುರಿ ಕಾನಿಟ್ಕರ್ ಅವರನ್ನು ಸಹ ಒಳಗೊಂಡಿದೆ. ಕೊವಿಡ್ -19 ಸಾಂಕ್ರಾಮಿಕ ರೋಗದ ಹರಡುವಿಕೆಯ ಬಗ್ಗೆ ಪ್ರಕ್ಷೇಪಗಳನ್ನು ಮಾಡಲು ನರೇಂದ್ರ ಮೋದಿ ಸರ್ಕಾರದಿಂದ ಇದನ್ನು ರಚಿಸಲಾಗಿದೆ.
ಭಾರತದಲ್ಲಿ ಓಮಿಕ್ರಾನ್ ಆಗಮನದ ಆಧಾರದ ಮೇಲೆ ಸದಸ್ಯರು ರಚಿಸಿದ ತಾಜಾ ಅಂದಾಜಿನ ಪ್ರಕಾರ, ದೇಶವು ಜನವರಿಯಲ್ಲಿ ಪ್ರಕರಣಗಳ ಏರಿಕೆಯನ್ನು ನೋಡಬಹುದು. ಫೆಬ್ರವರಿ ಅಂತ್ಯದ ವೇಳೆಗೆ ಗರಿಷ್ಠ ಮಟ್ಟವನ್ನು ತಲುಪಬಹುದು. ಆದರೂ ಈ ಸಂಶೋಧನೆಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲಾಗಿಲ್ಲ ಮತ್ತು ವೈಯಕ್ತಿಕ ಮಟ್ಟದಲ್ಲಿ ಮಾಡಲಾಗಿದೆ. ಸಮಿತಿಯ ಕೊನೆಯ ಅಧಿಕೃತ ಸಭೆಯು ಸೆಪ್ಟೆಂಬರ್ 2020 ರಲ್ಲಿ ನಡೆಯಿತು.
ಇನ್ನೂ ಇಮ್ಯೂನ್ ಎಸ್ಕೇಪ್ ಅನ್ನು ಅಂದಾಜು ಮಾಡಲು ಸಮಿತಿಯ ಇತರ ಸದಸ್ಯರಾದ ಮನೀಂದ್ರ ಅಗರವಾಲ್, ನಮ್ಮ ಇತ್ತೀಚಿನ ಮೌಲ್ಯಮಾಪನದ ಪ್ರಕಾರ, ದಕ್ಷಿಣ ಆಫ್ರಿಕಾ, ಯುಕೆ ಮತ್ತು ಡೆನ್ಮಾರ್ಕ್‌ನಿಂದ ಬರುವ ಮಾಹಿತಿಯ ಆಧಾರದ ಮೇಲೆ, ನಾವು ಜನವರಿಯಲ್ಲಿ ಏರಿಕೆಯನ್ನು ನೋಡಬಹುದು. ಅದು ಫೆಬ್ರವರಿ ಅಂತ್ಯದ ವೇಳೆಗೆ ಗರಿಷ್ಠ ಮಟ್ಟಕ್ಕೆ ತಲುಪಬಹುದು ಎಂದಿದ್ದಾರೆ.
ಆದರೆ, ದಿನಕ್ಕೆ ಎಷ್ಟು ಪ್ರಕರಣಗಳ ಪತ್ತೆಯಾಗಬಹುದು ಎಂಬ ಲೆಕ್ಕದ ಅಂದಾಜು ಹಾಕುವುದನ್ನು ಮಾಡಿಲ್ಲ. “ಈ ಸಮಯದಲ್ಲಿ ಸಂಖ್ಯೆಗಳು ಸ್ವಲ್ಪ ಅನಿಶ್ಚಿತವಾಗಿವೆ ಏಕೆಂದರೆ ಭಾರತದಲ್ಲಿ ನಡೆಯಬಹುದಾದ ರೋಗನಿರೋಧಕ ತಪ್ಪಿಸಿಕೊಳ್ಳುವಿಕೆಯ ನಿಖರವಾದ ಪ್ರಮಾಣವನ್ನು ಅಂದಾಜು ಮಾಡುವುದು ಕಷ್ಟ. ಇತರ ದೇಶಗಳ ಡೇಟಾ ಇನ್ನೂ ಸಾಕಷ್ಟು ಭಾಗಶಃ ಆಗಿದೆ. ದೇಹದ ರೋಗನಿರೋಧಕ ವ್ಯವಸ್ಥೆಯು ವೈರಸ್ ಅನ್ನು ಗುರುತಿಸಿ, ವೈರಸ್ ಅನ್ನು ಸಾಯಿಸಲು ಸಾಧ್ಯವಾಗದೇ ಹೋದಾಗ, ವೈರಸ್ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುತ್ತದೆ.
ಆದಾಗ್ಯೂ, ಭಾರತದಲ್ಲಿನ ಎರಡನೇ ಕೋವಿಡ್ -19 ಅಲೆಯ ಪೀಕ್‌ಗಿಂತ ಈ ಒಮಿಕ್ರಾನ್ ಪ್ರಭೇದದ ಪೀಕ್ ತುಂಬಾ ಚಿಕ್ಕದಾಗಿದೆ ಎಂದು ಮಣೀಂದ್ರ ಅಗರವಾಲ್ ಹೇಳಿದರು. ಇದು ತಾತ್ಕಾಲಿಕ (ಪ್ರೊಜೆಕ್ಷನ್) ಮತ್ತು ಹೆಚ್ಚಿನ ಡೇಟಾ ಬಂದ ನಂತರ ಬದಲಾಗುವ ಸಾಧ್ಯತೆಯಿದೆ ಎಂದು ಹೇಳಿದರು. ವಾಸ್ತವವಾಗಿ, ಇತರ ದೇಶಗಳಿಂದ ಬರುವ ಹೆಚ್ಚುವರಿ ಮಾಹಿತಿಯಿಂದಾಗಿ ಕಳೆದ ಎರಡು ವಾರಗಳಲ್ಲಿ ತಜ್ಞರ ಸಮಿತಿಯ ಹಿಂದಿನ ಭವಿಷ್ಯವಾಣಿಗಳು ಬದಲಾಗಿವೆ.
ಯಾವುದೇ ಪ್ರಯಾಣದ ಇತಿಹಾಸದ ಹೊರತಾಗಿಯೂ ಓಮಿಕ್ರಾನ್ ರೂಪಾಂತರದ ಹಲವಾರು ಕೋವಿಡ್ -19 ಪ್ರಕರಣಗಳನ್ನು ಭಾರತ ಪತ್ತೆಹಚ್ಚುವುದರೊಂದಿಗೆ, ಸಮುದಾಯ ಪ್ರಸರಣವು ಈಗಾಗಲೇ ಪ್ರಾರಂಭವಾಗಿದೆ ಎಂದು ಸಮಿತಿಯು ಊಹಿಸುತ್ತದೆ ಎಂದು ಅಗರವಾಲ್ ಹೇಳಿದರು.