PM Modi in West Bengal: ಪಶ್ಚಿಮ ಬಂಗಾಳದ ಜನರು ಬದಲಾವಣೆ ಬಯಸುತ್ತಿದ್ದಾರೆ: ನರೇಂದ್ರ ಮೋದಿ

PM Modi in West Bengal: ಪಶ್ಚಿಮ ಬಂಗಾಳದ ಜನರು ಬದಲಾವಣೆ ಬಯಸುತ್ತಿದ್ದಾರೆ: ನರೇಂದ್ರ ಮೋದಿ
ನರೇಂದ್ರ ಮೋದಿ

Narendra Modi in West Bengal: ಬಂಗಾಳದ ಗೌರವದ ಬಗ್ಗೆ ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಸರಿಯಾಗಿ ನಡೆದುಕೊಳ್ಳಲಿಲ್ಲ. ಇಲ್ಲಿನ ರಾಜಕೀಯ ದೇಶಭಕ್ತಿಯ ಬದಲು ವೋಟ್​ಬ್ಯಾಂಕ್​ ಆಧಾರವಾಗಿ ಹೊಂದಿವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

Rashmi Kallakatta

| Edited By: Apurva Kumar Balegere

Feb 22, 2021 | 4:48 PM

ಹೂಗ್ಲಿ: ಚುನಾವಣೆಗೆ ಸಿದ್ಧವಾಗಿರುವ ಪಶ್ಚಿಮ ಬಂಗಾಳಕ್ಕೆ ಸೋಮವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಮತ್ತು ಮೆಟ್ರೊ ಸಂಪರ್ಕ ಸುಧಾರಣೆ ಪ್ರಕ್ರಿಯೆ ಆರಂಭವಾಗುತ್ತೆ. ಸಂಪರ್ಕ ಸುಧಾರಣೆಯ ಸಾಕಷ್ಟು ಹೊಸ ಕಾಮಗಾರಿಗಳಿಗೆ ಶೀಘ್ರ ಚಾಲನೆ ಸಿಗಲಿದೆ. ಬಂಗಾಳದ ಅಭಿವೃದ್ಧಿಗೆ ನಮ್ಮ ಪ್ರಯತ್ನ ಸತತವಾಗಿ ನಡೆಯಲಿದೆ ಎಂದಿದ್ದಾರೆ. ವಿಶ್ವದಲ್ಲಿ ಎಷ್ಟೋ ದೇಶಗಳು ಬಡತನದಿಂದ ಹೊರಗೆ ಬಂದಿವೆ.ಆಧುನಿಕ ರೈಲ್ವೆ, ಏರ್​ವೇ ಗಳನ್ನು ಹೊಂದಿವೆ. ದೇಶವನ್ನು ಆಧುನಿಕಗೊಳಿಸುವ ಪ್ರಯತ್ನ ಸತತವಾಗಿ ನಡೆಯುತ್ತಿದೆ. ದೇಶಗಳ ಬದಲಾವಣೆಯಲ್ಲಿ ಇಂಥ ಸುಧಾರಣೆಗಳು ಸಾಕಷ್ಟು ಪರಿಣಾಮ ಬೀರುತ್ತವೆ.ಈಗಾಗಲೇ ಸಾಕಷ್ಟು ತಡವಾಗಿದೆ. ಈಗ ನಾವು ತಡಮಾಡಬಾರದು ಎಂದು ಹೇಳಿದ್ದಾರೆ.

ಉತ್ತಮ ಮೂಲಸೌಕರ್ಯ, ಕೃಷಿ, ಉದ್ಯೋಗ, ಪ್ರವಾಸೋದ್ಯಮ, ಯುವಕರಿಗೆ ಉದ್ಯೋಗ ಸೇರಿದಂತೆ ಅಭಿವೃದ್ಧಿಯ ಪ್ರತಿ ಹೆಜ್ಜೆಯೂ ಮೂಲಭೂತ ಅಗತ್ಯ ಎನಿಸಿಕೊಳ್ಳುತ್ತದೆ. ಪಶ್ಚಿಮ ಬಂಗಾಳವೂ ಭಾರತದಲ್ಲಿಯೇ ಇದೆ. ಪಶ್ಚಿಮ ಬಂಗಾಳದ ಅಭಿವೃದ್ಧಿಯೂ ಭಾರತ ಸರ್ಕಾರದ ಜವಾಬ್ದಾರಿಯೇ ಆಗಿದೆ. ಪಶ್ಚಿಮ ಬಂಗಾಳದಲ್ಲಿಯೂ ಸಾವಿರಾರು ಕೋಟಿ ರೂಪಾಯಿಯನ್ನು ನಾವು ಸಂಪರ್ಕ ಅಭಿವೃದ್ಧಿಗಾಗಿ ಹೂಡಿಕೆ ಮಾಡಿದ್ದೇವೆ. ಜೋಡಿ ರೈಲು ಮಾರ್ಗಗಳ ನಿರ್ಮಾಣ, ವಿದ್ಯುದೀಕರಣ ವೇಗವಾಗಿ ನಡೆಯುತ್ತಿದೆ. ಗೂಡ್ಸ್​ ಗಾಡಿಗಳ ಸಂಚಾರಕ್ಕಾಗಿ ರೂಪಿಸುತ್ತಿರುವ ಡೆಡಿಕೇಟೆಡ್​ ಫ್ರೈಟ್ ಕಾರಿಡಾರ್ ಯೋಜನೆಯಿಂದ ಬಂಗಾಳಕ್ಕೆ ಹೆಚ್ಚು ಲಾಭವಾಗಲಿದೆ ಎಂದಿದ್ದಾರೆ  ಪ್ರಧಾನಿ ಮೋದಿ.

ನಾವು ಕಿಸಾನ್ ರೈಲು ಆರಂಭಿಸಿದ್ದೇವೆ. ಇದರಿಂದಾಗಿ ಪಶ್ಚಿಮ ಬಂಗಾಳದ ಸಣ್ಣಪುಟ್ಟ ರೈತರಿಗೂ ಸಾಕಷ್ಟು ಅನುಕೂಲ ವಾಗುತ್ತಿದೆ. ಮಹಾರಾಷ್ಟ್ರದ ಸಿಂಗೋಲದಿಂದ ಪಶ್ಚಿಮ ಬಂಗಾಳದ ಶಾಲೀಮಾರ್​ವರೆಗೆ ಕಿಸಾನ್ ರೈಲು ಓಡಾಡುತ್ತಿದೆ. ಸಣ್ಣ ರೈತರು ಮುಂಬೈ-ಪುಣೆ ಸೇರಿದಂತೆ ದೊಡ್ಡ ಊರುಗಳ ಮಾರುಕಟ್ಟೆಗಳನ್ನು ಸುಲಭದಲ್ಲಿ ತಲುಪಲು ಸಾಧ್ಯವಾಗುತ್ತಿದೆ. ಕೊಲ್ಕತ್ತಾಗೆ ಬಂದು ಹೋಗಲು ಅತ್ಯಾಧುನಿಕ ಮತ್ತು ಅತಿವೇಗದ ಸಾರಿಗೆ ವ್ಯವಸ್ಥೆ ರೂಪಿಸಿದ್ದೇವೆ. ಚಂದ್ರನಗರ ಸೇರಿದಂತೆ ಇಡೀ ರಾಜ್ಯವು ಭಾರತದ ಬೆಳವಣಿಗೆಗೆ ಕೊಡುಗೆ ನೀಡಿದೆ.

ಬಿಪಿನ್ ಬಿಹಾರಿ ಗಂಗೂಲಿ, ಉಪೇಂದ್ರನಾಥ್ ಬಂಡೋಪಾಧ್ಯಾಯ, ಮಹರ್ಷಿ ಅರವಿಂದ ಸೇರಿದಂತೆ ಹಲವು ಸಂತರು-ವಿಜ್ಞಾನಿ ದೇಶವನ್ನು ಮುನ್ನಡೆಸಿದ್ದಾರೆ. ಅವರೆಲ್ಲರೂ ಇದೇ ಬಂಗಾಳದ ನೆಲದವರು ಎನ್ನುವುದು ದೇಶಕ್ಕೆ ಹೆಮ್ಮೆಯ ವಿಚಾರ ಇಷ್ಟು ವರ್ಷಗಳಲ್ಲಿ ಇಲ್ಲಿ ಎಷ್ಟೊಂದು ಸರ್ಕಾರಗಳು ಬಂದು ಹೋಗಿವೆ. ಆದರೂ ಈ ಐತಿಹಾಸಿಕ ಕ್ಷೇತ್ರವನ್ನು ನಿರ್ಲಕ್ಷಿಸಿವೆ. ಇಲ್ಲಿನ ಮೂಲ ಸೌಕರ್ಯ ವ್ಯವಸ್ಥೆಯನ್ನು ಹಾಳು ಮಾಡಿವೆ.

ವಂದೇ ಮಾತರಂ ಘೋಷಣೆ ಕೊಟ್ಟಿದ್ದು ಈ ನೆಲ. ಗುಲಾಮಿ ಮನಸ್ಥಿತಿಯಿಂದ ಹೊರಬರಲು ನೆರವಾದ ಘೋಷಣೆ ಅದು. ಬಂಗಾಳದ ಗೌರವದ ಬಗ್ಗೆ ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಸರಿಯಾಗಿ ನಡೆದುಕೊಳ್ಳಲಿಲ್ಲ. ಇಲ್ಲಿನ ರಾಜಕೀಯ ದೇಶಭಕ್ತಿಯ ಬದಲು ವೋಟ್​ಬ್ಯಾಂಕ್​ ಆಧಾರವಾಗಿ ಹೊಂದಿವೆ. ತುಷ್ಟೀಕರಣವನ್ನು ರಾಜಕೀಯದ ಆಧಾರವಾಗಿಸಿಕೊಂಡಿವೆ. ದುರ್ಗಾಪೂಜೆಯನ್ನೂ ಅನುಮಾನದ ಕಣ್ಣುಗಳಿಂದ ನೋಡುತ್ತಿವೆ. ನಾನು ಈಗ ಬಂಗಾಳದ ಜನರಿಗೆ ವಿಶ್ವಾಸ ಮೂಡಿಸಲು ಯತ್ನಿಸುತ್ತೇನೆ. ಬಂಗಾಳದಲ್ಲಿ ಬಿಜೆಪಿಯ ಸರ್ಕಾರ ಬರುತ್ತೆ.

ಬಂಗಾಳದ ಪ್ರತಿ ಜನರೂ ತಮ್ಮ ಸಾಂಸ್ಕೃತಿಯ ಬಗ್ಗೆ ಹೆಮ್ಮೆಯಿಂದ ಮಾತನಾಡಲು, ಅನುಸರಿಸಲು ಸಾಧ್ಯವಾಗುತ್ತೆ. ನಿಮ್ಮನ್ನು ಯಾರೂ ಹೆದರಿಸಲಾರರು. ಇಲ್ಲಿ ಬಂಗಾರದ ಬಾಂಗ್ಲಾ ನಿರ್ಮಿಸಲು ಬಿಜೆಪಿ ಕೆಲಸ ಮಾಡುತ್ತೆ ದಿನದಿಂದ ದಿನಕ್ಕೆ ಇಲ್ಲಿನ ಸಂಸ್ಕೃತಿ ಹೊಸ ಬಲದೊಂದಿಗೆ ವೃದ್ಧಿಸುತ್ತೆ. ಇಲ್ಲಿನ ಧರ್ಮ, ಉದ್ಯಮ ಬೆಳೆಯುತ್ತೆ. ಯಾರನ್ನೂ ತುಷ್ಟೀಕರಣ ಮಾಡುವುದಿಲ್ಲ. ಉದ್ಯೋಗ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

ಸ್ವಾತಂತ್ರ್ಯ ಬಂದ ಹೊಸತರಲ್ಲಿ ಬಂಗಾಳವು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟು ಮುಂದೆ ಇತ್ತು. ಆದರೆ ಇಲ್ಲಿ ಆಡಳಿತ ನಡೆಸಿದವರು ಅದನ್ನು ಹಿಂದಕ್ಕೆ ಎಳೆದರು. ಮಾ, ಮಾಟಿ, ಮಾನುಷ್​ ಬಗ್ಗೆ ಮಾತನಾಡುವವರು ಅದರ ಅಭಿವೃದ್ಧಿಗೆ ಲಕ್ಷ್ಯ ಕೊಡಲಿಲ್ಲ. ಕೇಂದ್ರ ಸರ್ಕಾರವು ಫಲಾನುಭವಿಗಳ ಖಾತೆಗೆ ಸಹಾಯಧನ ಕೊಡುತ್ತೆ. ಆದರೆ ಇಲ್ಲಿನ ರಾಜ್ಯ ಸರ್ಕಾರವು ಬಡವರ ಹೆಸರಿನಲ್ಲಿ ಟಿಎಂಸಿ ನಾಯಕರಿಗೆ ಹಣ ಕೊಡುತ್ತಿದೆ. ಹಳ್ಳಿಹಳ್ಳಿಗಳಲ್ಲಿ ಟಿಎಂಸಿ ನಾಯಕರ ಮನೆಗಳು ಬೆಳೆಯುತ್ತಿವೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ.

ಇಂಥ ಮನಸ್ಥಿತಿಯ ಕಾರಣದಿಂದಲೇ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ ಜನರನ್ನು ತಲುಪಲಿಲ್ಲ. ಆಯುಷ್ಮಾನ್ ಭಾರತ್​ ಯೋಜನೆಯ ಉಚಿತ ಚಿಕಿತ್ಸೆಯ ಸೌಲಭ್ಯವೂ ಬಂಗಾಳಕ್ಕೆ ಈವರೆಗೆ ಸಿಕ್ಕಿಲ್ಲ. ಇಲ್ಲಿನ ರಾಜ್ಯ ಸರ್ಕಾರ ಅಡ್ಡಿಯಾಗಿದೆ.ದೇಶದ ಇತರ ರಾಜ್ಯಗಳ ಮನೆಗಳಲ್ಲಿ ಪೈಪ್​ಗಳ ಮೂಲಕ ಶುದ್ಧ ನೀರು ಸರಬರಾಜು ಮಾಡಲು ಜಲ್​ಜೀವನ್ ಮಿಷನ್ ಮೂಲಕ ಪ್ರಯತ್ನ ನಡೆಯುತ್ತಿದೆ. ಆದರೆ ಬಂಗಾಳದಲ್ಲಿ ಈ ಯೋಜನೆ ಜಾರಿಯಾಗಲಿಲ್ಲ.

ಇತರೆಲ್ಲಾ ರಾಜ್ಯಗಳಿಗಿಂತಲೂ ಬಂಗಾಳದಲ್ಲಿ ಈ ಯೋಜನೆ ಅಗತ್ಯವಿದೆ. ಇಲ್ಲಿ ಕೋಟ್ಯಂತರ ಜನರು ಹಳ್ಳಿಗಳಲ್ಲಿದ್ದಾರೆ. ಇಲ್ಲಿ ಕೇವಲ 2 ಲಕ್ಷ ಗ್ರಾಮೀಣ ಮನೆಗಳಿಗೆ ನಲ್ಲಿಯಿಂದ ನೀರು ಬರುತ್ತಿದೆ. ಇದು ವಿಪರ್ಯಾಸವಲ್ಲದೇ ಮತ್ತೇನು? ನಾವು ದುಡ್ಡುಕೊಟ್ಟು, ಒತ್ತಡ ಹೇರಿದರೂ ಇಲ್ಲಿನ ಸರ್ಕಾರ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ಇಲ್ಲಿನ ಸರ್ಕಾರ ಕೆಲಸ ಮಾಡುತ್ತಿರುವ ರೀತಿಯಿದು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರವೇ ಮುಂದುವರಿದರೆ ಜನರ ಮನೆಗಳಿಗೆ ನಲ್ಲಿ ಮೂಲಕ ನೀರು ತಲುಪಲು ಇನ್ನೂ ಎಷ್ಟು ವರ್ಷಗಳು ಬೇಕಾಗುತ್ತೋ?

ಬಂಗಾಳದ ಜನರಿಗೆ ಶುದ್ಧ ಕುಡಿಯುವ ನೀರು ಬೇಕೇ? ಬೇಡವೇ? ಹಳ್ಳಿಗಳಿಗೆ ನೀರು ಬೇಕೇ? ಬೇಡವೇ? ಇದು ನಿಮ್ಮ ಹಕ್ಕೋ ಅಲ್ಲವೋ? ಇಲ್ಲಿನ ಸರ್ಕಾರ ಕೆಲಸ ಮಾಡಬೇಕೋ ಬೇಡವೋ? ಆದರೆ ಆಗಿದ್ದೇನು? 1700 ಕೋಟಿಗೂ ಹೆಚ್ಚು ಹಣವನ್ನು ದೆಹಲಿಯ ಕೇಂದ್ರ ಸರ್ಕಾರ ಬಂಗಾಳದ ರಾಜ್ಯ ಸರ್ಕಾರಕ್ಕೆ ಕೊಟ್ಟಿದೆ. ಆದರೆ ಇಲ್ಲಿನ ರಾಜ್ಯ ಸರ್ಕಾರ ಹಣವನ್ನು ಖರ್ಚು ಮಾಡುತ್ತಿಲ್ಲ.

ಟಿಎಂಸಿ ಸರ್ಕಾರವು ಬಡವರಿಗೆ, ಅಕ್ಕತಂಗಿಯರಿಗೆ ಮೋಸ ಮಾಡುತ್ತಿದೆ. ಬಂಗಾಳದ ಮಗಳಿಗೆ ನೀರು ಕೊಡಬೇಕು. ಬಂಗಾಳದ ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡುವವರನ್ನು ಕ್ಷಮಿಸಲು ಆಗುತ್ತಾ? ಪಶ್ಚಿಮ ಬಂಗಾಳದಲ್ಲಿ ಭಾರತ ಸರ್ಕಾರವು ಕೇವಲ ಸರ್ಕಾರದಲ್ಲಿ ಪರಿವರ್ತನೆ ತರುವುದು ಮಾತ್ರವಲ್ಲ, ಸಮಗ್ರ ಪರಿವರ್ತನೆ ಮಾಡಲು ಯತ್ನಿಸುತ್ತದೆ.

ಪೂರ್ವ ಭಾರತದ ಅನೇಕ ಜಾನಪದ ಗೀತೆಗಳಲ್ಲಿ ಮನೆಮನೆಗಳಲ್ಲಿ ಕಲಕತ್ತಾ ಎನ್ನುವುದು ದೊಡ್ಡತನದ ಹೆಸರಾಗಿತ್ತು. ಬಿಹಾರ, ಒಡಿಶಾದಲ್ಲಿಯೂ ಕೊಲ್ಕತ್ತಾ ಅಂದ್ರೆ ದೊಡ್ಡ ಹೆಸರು ಇತ್ತು. ಇಲ್ಲಿನ ಜನರು ಈಗ ಬೇರೆ ರಾಜ್ಯಗಳಿಗೆ ಹೋಗಿ ಕೆಲಸ ಮಾಡಬೇಕಾದ ಸ್ಥಿತಿ ಬಂದಿದೆ.

ಇದಕ್ಕೆ ರಾಜ್ಯ ಸರ್ಕಾರದ ಹೊಣೆಗೇಡಿತನವೇ ಕಾರಣ. ಬೇರೆಯವರಿಗೆ ಕೆಲಸ ಕೊಡುವ ಸ್ಥಾನದಲ್ಲಿದ್ದ ಬಂಗಾಳ ಇಂದು, ಇಲ್ಲಿನ ಜನರನ್ನೇ ಕೆಲಸಕ್ಕಾಗಿ ಹೊರಗೆ ಕಳಿಸುತ್ತಿದೆ. ನಾವು ಬಂಗಾಳದಲ್ಲಿ ಉದ್ಯೋಗ ಸೃಷ್ಟಿಗೆ ಗಮನ ಕೊಡುತ್ತಿದ್ದೇವೆ. ಸಕ್ಕರೆ ಮತ್ತು ಗೋಧಿ ಪ್ಯಾಕೇಜಿಂಗ್​ಗೆ ಸೆಣಬಿನ ಚೀಲ ಕಡ್ಡಾಯ ಮಾಡಿದ್ದೇವೆ. ಇಲ್ಲಿ ಉತ್ಕೃಷ್ಟ ಗುಣಮಟ್ಟದ ಆಲೂಗಡ್ಡೆ ಬೆಳೆಯುತ್ತಾರೆ. ಅದರೆ ಸಂಸ್ಕರಣಾ ಘಟಕಗಳು ಇಲ್ಲ. ಇದಕ್ಕೇನು ಕಾರಣ?  ಬಂಗಾಳದಲ್ಲಿ ಹೂಡಿಕೆ ಮಾಡಲು ಉತ್ಸಾಹಿತರು ಸಾಕಷ್ಟು ಜನರಿದ್ದಾರೆ. ಆದರೆ ಕಾನೂನು ಸುವ್ಯವಸ್ಥೆ ಕುಸಿದಿದೆ. ಹೀಗಾಗಿ ಬಂಡವಾಳ ಹೂಡಿಕೆಗೆ ಇಲ್ಲಿಗೆ ಬರುವವರು ಹಿಂಜರಿಯುತ್ತಾರೆ.

ಹೊರದೇಶಗಳಲ್ಲಿರುವ ಬಂಗಾಳದ ಜನರು ತಮ್ಮ ನಾಡಿನ ಅಭಿವೃದ್ಧಿಗಾಗಿ ಶ್ರಮಿಸಲು ಸಿದ್ಧರಿದ್ದಾರೆ. ಆದರೆ ಎಲ್ಲೆಲ್ಲೂ ‘ಕಟ್’ ಪದ್ಧತಿ, ‘ಸಿಂಡಿಕೇಟ್​’ ಪದ್ಧತಿ ಬಂದಿದೆ. ಇದಕ್ಕೆ ಹೆದರಿ ಜನರು ಇಲ್ಲಿ ಹಣ ಹೂಡುತ್ತಿಲ್ಲ. ಈ ವ್ಯವಸ್ಥೆಯನ್ನು ನಾವು ಬದಲಿಸಬೇಕಿದೆ. ಇಲ್ಲಿ ಪೂರ್ಣ ಪ್ರಮಾಣದಲ್ಲಿ ಕಮಲ ಅರಳಿದರೆ ಮಾತ್ರ ಈ ವ್ಯವಸ್ಥೆ ಬದಲಾಗುತ್ತೆ. ಅಭಿವೃದ್ಧಿ ಸಾಧ್ಯವಾಗುತ್ತೆ ಬಂಗಾಳದಲ್ಲಿ ಸಿಂಡಿಕೇಟ್ ರಾಜ್ಯವಿರುವವರೆಗೆ, ಟೋಲ್​ಬಾಜ್​ ರಾಜ್ಯವಿರುವವರೆಗೆ, ಕಟ್​ ಸಂಸ್ಕೃತಿ ಇರುವವರೆಗೆ, ಸರ್ಕಾರವೇ ಗೂಂಡಾಗಳಿಗೆ ಆಶ್ರಯ ನೀಡುವವರೆಗೆ, ಕಾನೂನು ಇಲ್ಲಿ ನಗಣ್ಯ ಎಂಬ ಪರಿಸ್ಥಿತಿ ಇರುವವರೆಗೆ ಇಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ.ಇಲ್ಲಿ ಸಂಪೂರ್ಣ ಪರಿವರ್ತನೆ ಆಗಬೇಕಿದೆ. ನಾವೆಲ್ಲರೂ ಸೇರಿ ರೈತರು, ಕಾರ್ಮಿಕರು, ಯುವಕರಿಗೆ ಉತ್ತಮ ಭವಿಷ್ಯ ರೂಪಿಸಲು ಇಲ್ಲಿಗೆ ಬಿಜೆಪಿ ಬರಬೇಕು. ಬಂಗಾಳದ ಉಜ್ವಲ ಭವಿಷ್ಯಕ್ಕಾಗಿ, ಮೂಲ ಸೌಕರ್ಯಕ್ಕಾಗಿ ನೀವೆಲ್ಲರೂ ನೆರವಾಗಬೇಕು.

 ಇದನ್ನೂ ಓದಿ:  PM Modi in Assam: ಅಸ್ಸಾಂನಲ್ಲಿ ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸಲಾಗುವುದು: ನರೇಂದ್ರ ಮೋದಿ

Follow us on

Related Stories

Most Read Stories

Click on your DTH Provider to Add TV9 Kannada