ಬೆಂಗಳೂರು: ಭಾರತವು ಸ್ವಾತಂತ್ರ್ಯ ಪಡೆದು ಇದೇ ಆಗಸ್ಟ್ 15ಕ್ಕೆ 75 ವರ್ಷವಾಗಲಿದೆ. ಸ್ವತಂತ್ರ ಭಾರತದ ಅಮೃತ ಮಹೋತ್ಸವ (Azadi Ka Amrit Mahotsav) ಹಿನ್ನೆಲೆಯಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆಯೋಜಿಸಿವೆ. ಪ್ರತಿ ವರ್ಷ ಆಗಸ್ಟ್ 15ರಂದು ಪ್ರಧಾನಿ ಸ್ಥಾನದಲ್ಲಿರುವವರು ದೆಹಲಿಯ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಭಾಷಣ (Independence Day Speech) ಮಾಡುವ ಶಿಷ್ಟಾಚಾರ ಬೆಳೆದುಬಂದಿದೆ. ಅದರಂತೆ ಈ ಬಾರಿ ನರೇಂದ್ರ ಮೋದಿ (PM Narendra Modi) ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಸತತ 9ನೇ ಬಾರಿಗೆ ಕೆಂಪುಕೋಟೆಯಲ್ಲಿ (Red Fort) ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುತ್ತಿದ್ದಾರೆ.
ಅಮೃತ ಮಹೋತ್ಸವ ವಿಶೇಷದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಯಾವೆಲ್ಲಾ ಅಂಶಗಳು ಪ್ರಸ್ತಾಪವಾಗಬಹುದು ಎಂಬ ಬಗ್ಗೆ ನಿರೀಕ್ಷೆಗಳು ಹುಟ್ಟಿಕೊಂಡಿವೆ. ‘ಮನ್ ಕಿ ಬಾತ್’ (Mann Ki Baat) ಮಾದರಿಯಲ್ಲಿ ಸ್ವಾತಂತ್ರ್ಯ ದಿನದ ಭಾಷಣಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ತಾವು ಪ್ರಸ್ತಾಪಿಸಬಹುದಾದ ವಿಚಾರಗಳ ಬಗ್ಗೆ ಸಲಹೆ ಮಾಡುವಂತೆ ದೇಶದ ಜನರನ್ನು ಕೋರಿದ್ದರು. ಕೇಂದ್ರ ಸರ್ಕಾರದ MyGov ವೆಬ್ಸೈಟ್ ಮೂಲಕ ಜುಲೈ 31ರವರೆಗೆ ಭಾಷಣದ ಅಂಶಗಳನ್ನು ಸಲಹೆ ಮಾಡಲು ಅವಕಾಶ ನೀಡಲಾಗಿತ್ತು.
ಈ ಬಾರಿಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚು ಒತ್ತು ಕೊಡುವ ಸಾಧ್ಯತೆಯಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಕೊವಿಡ್ ಪಿಡುಗಿನ ವೇಳೆಯಲ್ಲಿ ಮತ್ತು ಅನಂತರ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರ್ಕಾರ ತೆಗೆದುಕೊಂಡ ಕ್ರಮಗಳು, ಅವುಗಳಿಂದ ಆದ ಬದಲಾವಣೆಗಳು ಹಾಗೂ ಮುಂದಿನ ದಿನಗಳಲ್ಲಿ ಸರ್ಕಾರ ಜಾರಿಗೆ ತರಲಿರುವ ಯೋಜನೆಗಳನ್ನು ಮೋದಿ ವಿವರಿಸಬಹುದು. ನರೇಂದ್ರ ಮೋದಿ ಅವರ ಮತ್ತೊಂದು ದೊಡ್ಡ ಕನಸಾದ ಡಿಜಿಟಲ್ ಆರ್ಥಿಕತೆಯ ಬಗ್ಗೆಯೂ ಭಾಷಣ ಬೆಳಕು ಚೆಲ್ಲಬಹುದು. ಎಲ್ಲರನ್ನೂ ಒಳಗೊಳ್ಳುವ ಆರ್ಥಿಕತೆ, ಆತಂಕ ಮೂಡಿಸುವ ಜಾಗತಿಕ ವಿದ್ಯಮಾನಗಳ ನಡುವೆಯೂ ಭಾರತದ ಆರ್ಥಿಕತೆ ಮುನ್ನಡೆ ದಾಖಲಿಸಿದ ವಿಷಯದ ಬಗ್ಗೆ ಮೋದಿ ಪ್ರಸ್ತಾಪಿಸಬಹುದು ಎಂದು ‘ಬ್ಯುಸಿನೆಸ್ ಸ್ಟಾಂಡರ್ಡ್’ ವರದಿ ಮಾಡಿದೆ.
ಆರೋಗ್ಯಕ್ಕೆ ಒತ್ತು
ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮ (Medical Tourism) ಉತ್ತೇಜಿಸಲು ಮೋದಿ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ‘ಭಾರತದಲ್ಲಿ ಗುಣಮುಖರಾಗಿರಿ’ (Heal In India) ಮತ್ತು ‘ಭಾರತದಿಂದ ಗುಣಮುಖರಾಗಿರಿ’ (Heal By India) ಯೋಜನೆಗಳನ್ನು ಮೋದಿ ಘೋಷಿಸಬಹುದು. ವಿದೇಶಿಯರಿಗೆ ಭಾರತದಲ್ಲಿ ಲಭ್ಯವಿರುವ ಎಲ್ಲ ವೈದ್ಯಕೀಯ ಸೇವೆಗಳ ಮಾಹಿತಿ ಸುಲಭವಾಗಿ ಸಿಗುವಂತೆ ಮಾಡಲು ‘ಆಯುಷ್ಮನ್ ಭಾರತ್ ಡಿಜಿಟಲ್ ಮಿಷನ್ ಪೋರ್ಟಲ್’ಗೆ ಮತ್ತಷ್ಟು ಶಕ್ತಿ ತುಂಬಲಾಗುವುದು. ಇದರಲ್ಲಿ ಆಸ್ಪತ್ರೆಗಳ ಮಾಹಿತಿಯ ಜೊತೆಗೆ ಚಿಕಿತ್ಸಾ ವಿವರ, ವೆಚ್ಚ, ವಿಸಾ ಪ್ರಕ್ರಿಯೆಯ ವಿವರಗಳನ್ನೂ ಒದಗಿಸಲು ಮೋದಿ ಚಿಂತನೆ ನಡೆಸಿದ್ದಾರೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಭಾರತದಲ್ಲಿ ಹೊಸದಾಗಿ ಇನ್ನಷ್ಟು ‘ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆ’ (All India Institute of Medical Sciences – AIIMS) ಆರಂಭಿಸುವ ಸಾಧ್ಯತೆಯಿದ್ದು, ಈ ಘೋಷಣೆಯೂ ಪ್ರಧಾನಿ ಭಾಷಣದಲ್ಲಿಯೇ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಇದರ ಜೊತೆಗೆ ಆಯುಷ್ಮಾನ್ ಭಾರತ್ ಪ್ರಯೋಜನವನ್ನು ಇನ್ನೂ ಹೆಚ್ಚು ಜನರಿಗೆ ಲಭಿಸುವಂತೆ ಮಾಡಲು ಹೊಸ ಉಪಕ್ರಮಗಳ ಜಾರಿಯ ಬಗ್ಗೆ ಈ ಭಾಷಣ ಬೆಳಕು ಚೆಲ್ಲಬಹುದು ಎಂದು ತಿಳಿದುಬಂದಿದೆ.
ಡಿಜಿಟಲ್ ಬ್ಯಾಂಕಿಂಗ್
ಈ ಬಾರಿಯ ಭಾಷಣದಲ್ಲಿ ‘ಡಿಜಿಟಲ್ ಬ್ಯಾಂಕಿಂಗ್ ಯೂನಿಟ್’ಗಳನ್ನು (Digital Banking Units – DBUs) ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಗೆ ಮೊದಲೇ ಉದ್ಘಾಟಿಸಬಹುದು ಎಂಬ ನಿರೀಕ್ಷೆಯಿದೆ. ದೇಶದ 75 ಜಿಲ್ಲೆಗಳಲ್ಲಿ 75 ಘಟಕಗಳು ಕಾರ್ಯನಿರ್ವಹಿಸುತ್ತಿರುವ ಕುರಿತು ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಬಹುದು. ಕಳೆದ ಬಜೆಟ್ನಲ್ಲಿ ಎಲ್ಲ ಬ್ಯಾಂಕ್ಗಳಿಗೆ ಡಿಜಿಟಲ್ ಯೂನಿಟ್ ಸ್ಥಾಪಿಸಲು ಗುರಿಗಳನ್ನು ನಿಗದಿಪಡಿಸಲಾಗಿತ್ತು.
ಪ್ರತಿಕೂಲ ಪರಿಸ್ಥಿತಿಯಲ್ಲೂ ನಿಲ್ಲದ ಪ್ರಗತಿ
ಉಕ್ರೇನ್ ಯುದ್ಧದ ನಂತರ ವಿಶ್ವದ ಹಲವು ದೇಶಗಳು ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿದರೂ ಭಾರತದ ಪ್ರಗತಿ ಮಾತ್ರ ಕುಂಠಿತಗೊಂಡಿಲ್ಲ. ಇತ್ತೀಚೆಗೆ ಹಣಕಾಸು ನೀತಿ ಸಮಿತಿ ಸಭೆಯ ನಂತರ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಸಹ ಇದೇ ಅಂಶವನ್ನು ಪ್ರಸ್ತಾಪಿಸಿದ್ದರು. ಭಾರತದಲ್ಲಿ ಹಣದುಬ್ಬರ ಕಡಿಮೆಯಾಗುತ್ತಿರುವುದು ಮತ್ತು ಜಿಡಿಪಿಯ ಮುನ್ನೋಟ ಯಥಾಸ್ಥಿತಿಯಲ್ಲಿ ಇರುವ ಬಗ್ಗೆಯ ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುವ ನಿರೀಕ್ಷೆಯಿದೆ.
ಉಕ್ರೇನ್ ಸಂಘರ್ಷ ಮತ್ತು ಮಲೇಷ್ಯಾ ಸರ್ಕಾರವು ತಾಳೆ ಎಣ್ಣೆ ರಫ್ತನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದ ಸಂದರ್ಭದಲ್ಲಿ ಭಾರತದಲ್ಲಿ ಅಡುಗೆ ಎಣ್ಣೆ ದರಗಳು ಏರಿಕೆಯಾಗಿದ್ದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೃಷಿ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ಪ್ರಮುಖ ಕ್ರಮಗಳ ಬಗ್ಗೆಯೂ ಮೋದಿ ಅವರು ಮಾತನಾಡುವ ಸಾಧ್ಯತೆಯಿದೆ.