ಕೊವಿಡ್ ಹೆಚ್ಚಳ: ಸೋಂಕು ನಿಯಂತ್ರಣಕ್ಕೆ ಎಲ್ಲಾ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ; 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡುವ ಬಗ್ಗೆ ಚರ್ಚೆ ಸಾಧ್ಯತೆ

ಆದರೆ ಇಂದು ಸಂಜೆಯ ಅತ್ಯಂತ ಮಹತ್ವದ ಸಭೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗೈರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

  • TV9 Web Team
  • Published On - 11:50 AM, 8 Apr 2021
ಕೊವಿಡ್ ಹೆಚ್ಚಳ: ಸೋಂಕು ನಿಯಂತ್ರಣಕ್ಕೆ ಎಲ್ಲಾ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ; 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡುವ ಬಗ್ಗೆ ಚರ್ಚೆ ಸಾಧ್ಯತೆ
ಸಿಎಂ ಬಿ.ಎಸ್​.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ

ದೆಹಲಿ: ದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 6.30ಕ್ಕೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಲಿದ್ದಾರೆ. ಕೊವಿಡ್-19 ಪ್ರಕರಣಗಳ ಹೆಚ್ಚಳ ಮತ್ತು ಕೆಲ ರಾಜ್ಯಗಳು ಕೊವಿಡ್ ಲಸಿಕೆ ಖಾಲಿಯಾಗಿವೆ, ಇನ್ನಷ್ಟು ಸರಬರಾಜು ಮಾಡಿ ಎಂದು ಕೇಂದ್ರ ಸರ್ಕಾರವನ್ನು ಕೋರಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸಭೆ ಮಹತ್ವ ಪಡೆದಿದೆ. ಆದರೆ ಇಂದು ಸಂಜೆಯ ಅತ್ಯಂತ ಮಹತ್ವದ ಸಭೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗೈರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇಂದಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಸೋಂಕು ಹೆಚ್ಚುತ್ತಿರುವ ರಾಜ್ಯಗಳಾದ ಮಹಾರಾಷ್ಟ್ರ, ‌ಕರ್ನಾಟಕ, ಕೇರಳ, ಚತ್ತೀಸ್​ಘಡ, ಪಂಜಾಬ್ ಸೇರಿ 11 ರಾಜ್ಯಗಳ ಸಿಎಂಗಳ ಜೊತೆ ಚರ್ಚೆಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ. ಎಲ್ಲರಿಗೂ‌ ವ್ಯಾಕ್ಸಿನ್ ನೀಡುವಂತೆ ಕೆಲ ರಾಜ್ಯಗಳು ಮನವಿ ಸಲ್ಲಿಸಲಿವೆ ಎಂದು ಹೇಳಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಕೊವಿಡ್-19 ಸೋಂಕು ನಿಯಂತ್ರಿಸಲು ದೇಶದ ಜನರ ಸಹಭಾಗಿತ್ವವನ್ನು ಪ್ರಧಾನಮಂತ್ರಿ ಕಾರ್ಯಾಲಯ ಕೇಳಿದೆ. ಸೋಂಕು ನಿಯಂತ್ರಣ ಸಾಧಿಸುವಲ್ಲಿ ಜನರೇ ಭಾಗಿಯಾಗಬೇಕು, ಮತ್ತು ಇದು ಜನರೇ ಮುನ್ನಡೆಸುವ ಆಂದೋಲನ ಆಗಬೇಕು ಎಂದು ಪ್ರಧಾನಮಂತ್ರಿ ಕಾರ್ಯಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ಭಿನ್ನವಿಸಲಾಗಿದೆ. ಇಂದು ನಡೆಯಲಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಿಂದ ಭಾಗವಹಿಸಲಿದ್ದಾರೆ ಸಿಎಂ ಯಡಿಯೂರಪ್ಪ
ಒಂದೊಂದು ರಾಜ್ಯದಲ್ಲಿ ಒಂದೊಂದು ಪರಿಸ್ಥಿತಿ ಇದೆ. ಎಲ್ಲ ರಾಜ್ಯಗಳಿಗೆ ಒಂದೇ ಗೈಡ್‌ಲೈನ್ಸ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ನೋಡಿಕೊಂಡು ಕ್ರಮ ಕೈಗೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರ ಜತೆ ಜೊತೆ ಸಮಾಲೋಚನೆ ನಡೆಸಿದ ನಂತರ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಪ್ರಧಾನಮಂತ್ರಿಗಳು ಎಲ್ಲಾ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ಮಾಡಲಿದ್ದಾರೆ. ಸಿಎಂ ಯಡಿಯೂರಪ್ಪ ಕೂಡ ರಾಜ್ಯದ ಸ್ಥಿತಿಗತಿ ಬಗ್ಗೆ ಪ್ರಧಾನಿಗೆ ತಿಳಿಸಲಿದ್ದಾರೆ. ಐವತ್ತು ಲಕ್ಷಕ್ಕೂ ಅಧಿಕ ಲಸಿಕೆ ವಿತರಣೆ ರಾಜ್ಯದಲ್ಲಿ ನಡೆಯಲಿದೆ. 13 ಜಿಲ್ಲೆಗಳ ಜಿಲ್ಲಾಡಳಿತ ಜೊತೆ ನಿನ್ನೆ ವಿಡಿಯೋ ಸಂವಾದ ಮಾಡಲಾಗಿದೆ. 13 ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಆ ಜಿಲ್ಲೆಗಳಿಗೆ ನಿರ್ದಿಷ್ಟ ಮಾರ್ಗಸೂಚಿ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ದೇಶದಲ್ಲಿ ಕೊರೊನಾ ಸ್ಥಿತಿಗತಿ
ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 1,26,789 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು, ಛತ್ತೀಸಗಡದಲ್ಲಿ ಇದೇ ಮೊದಲ ಬಾರಿ ಸೋಂಕಿತರ ಸಂಖ್ಯೆ 10,000 ಗಡಿದಾಟಿದೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ 1,29,28,574ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ. ಈ ಪೈಕಿ 8,43,473 ಸಕ್ರಿಯ ಪ್ರಕರಣಗಳಿದ್ದು 1,18,51,393 ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 1,66,862 ಮಂದಿ ಸಾವಿಗೀಡಾಗಿದ್ದಾರೆ. 9,01,98,673 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.  ಕಳೆದ 24 ಗಂಟೆಗಳಲ್ಲಿ 59,258 ಮಂದಿ ಚೇತರಿಸಿಕೊಂಡಿದ್ದು 685 ಮಂದಿ ಮೃತಪಟ್ಟಿದ್ದಾರೆ.

ನಾಲ್ಕು ದಿನಗಳ ಅವಧಿಯಲ್ಲಿ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ ಮೂರು ಬಾರಿ 1ಲಕ್ಷದ ಗಡಿದಾಟಿದೆ. ಫೆಬ್ರವರಿ 12ರಂದು ಅತೀ ಕಡಿಮೆ ಸಕ್ರಿಯ ಪ್ರಕರಣಗಳು ಅಂದರೆ 1,35,926ಪ್ರಕರಣಗಳು ವರದಿಯಾಗಿತ್ತು.

ಇದನ್ನೂ ಓದಿ: Coronavirus India Update: ಭಾರತದಲ್ಲಿ ಒಂದೇ ದಿನ 1.26 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ; ಮಹಾರಾಷ್ಟ್ರದಲ್ಲಿ ಗರಿಷ್ಠ

ಕೊರೊನಾ ಎರಡನೇ ಅಲೆ ಆತಂಕದ ಮಧ್ಯೆ.. ಭಾರತೀಯರ ಪ್ರವೇಶಕ್ಕೆ ನಿರ್ಬಂಧ ಹೇರಿದ ನ್ಯೂಜಿಲ್ಯಾಂಡ್

( PM Narendra Modi interacts with all state CM about covid 19 surge and vaccination)