ಇಂದು ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ; ವಿವಿಧ ಜಲವಿದ್ಯುತ್​ ಯೋಜನೆಗಳಿಗೆ ಶಂಕುಸ್ಥಾಪನೆ

ದೇಶದಲ್ಲಿ ಹೇರಳವಾಗಿ ಲಭ್ಯವಿದ್ದೂ, ಬಳಕೆಯಾಗದ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವತ್ತ ಪ್ರಧಾನಿ ನರೇಂದ್ರ ಮೋದಿ ನಿರಂತರವಾಗಿ ಗಮನಹರಿಸುತ್ತಿದ್ದಾರೆ. ಹೀಗೆ ಹಿಮಾಲಯದ ಪ್ರದೇಶಗಳಲ್ಲಿ ಜಲವಿದ್ಯುತ್​​ನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಅಂಥ ಯೋಜನೆಗಳಲ್ಲಿ ಒಂದು ಎಂದು ಪಿಎಂಒ ತಿಳಿಸಿದೆ.

ಇಂದು ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ; ವಿವಿಧ ಜಲವಿದ್ಯುತ್​ ಯೋಜನೆಗಳಿಗೆ ಶಂಕುಸ್ಥಾಪನೆ
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us
TV9 Web
| Updated By: Lakshmi Hegde

Updated on: Dec 27, 2021 | 7:38 AM

ದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಇಂದು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ 11 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಿಧ ಜಲವಿದ್ಯುತ್ ಯೋಜನೆಗೆ (Hydropower Projects) ಅವರು ಶಂಕುಸ್ಥಾಪನೆ ನೆರವೇರಿಸುವರು. ಈ ಕಾರ್ಯಕ್ರಮಕ್ಕೂ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಹಿಮಾಚಲ ಪ್ರದೇಶ ಜಾಗರಿಕ ಹೂಡಿಕೆದಾರರ ಸಭೆಯ ಎರಡನೇ ಶಿಲಾನ್ಯಾಸ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ. 28 ಸಾವಿರ ಕೋಟಿ ರೂಪಾಯಿ ಮೌಲ್ಯದ ಯೋಜನೆಯ ಪ್ರಾರಂಭದ ಮೂಲಕ ಈ ಪ್ರದೇಶದಲ್ಲಿ ಹೂಡಿಕೆಗೆ ಉತ್ತೇಜನ ಕೊಡುವ ಸಲುವಾಗಿ  ಸಭೆ ನಡೆಯಲಿದೆ ಎಂದು ಹೇಳಿದೆ. 

ದೇಶದಲ್ಲಿ ಹೇರಳವಾಗಿ ಲಭ್ಯವಿದ್ದೂ, ಬಳಕೆಯಾಗದ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವತ್ತ ಪ್ರಧಾನಿ ನರೇಂದ್ರ ಮೋದಿ ನಿರಂತರವಾಗಿ ಗಮನಹರಿಸುತ್ತಿದ್ದಾರೆ. ಹೀಗೆ ಹಿಮಾಲಯದ ಪ್ರದೇಶಗಳಲ್ಲಿ ಜಲವಿದ್ಯುತ್​​ನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಅಂಥ ಯೋಜನೆಗಳಲ್ಲಿ ಒಂದು. ಇಂದು ಸುಮಾರು 12 ಗಂಟೆ ಹೊತ್ತಿಗೆ ಯೋಜನೆಗೆ ಶಂಕುಸ್ಥಾಪನೆ ನೆರವೇರಲಿದೆ.  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೇಣುಕಾಜಿ ಅಣೆಕಟ್ಟು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಮೂರು ದಶಕಗಳಿಂದ ಬಾಕಿ ಉಳಿದಿದ್ದ ಯೋಜನೆ. ಈ ಯೋಜನೆಯ ಅನುಷ್ಠಾನಕ್ಕೆ ಆರು ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಹರ್ಯಾಣ, ರಾಜಸ್ಥಾನ, ಉತ್ತರಾಖಂಡ್​, ದೆಹಲಿ ರಾಜ್ಯಗಳನ್ನು ಕೇಂದ್ರ ಒಂದುಗೂಡಿಸಿದೆ. ಅದರ ಪರಿಣಾಮವಾಗಿ ಈಗ ಯೋಜನೆ ಕಾರ್ಯಸಾಧ್ಯವಾಗುತ್ತಿದೆ. ಅಂದಹಾಗೆ ಇದು 40 ಮೆಗಾ ವ್ಯಾಟ್​ ಸಾಮರ್ಥ್ಯದ ಯೋಜನೆಯಾಗಿದ್ದು, 7000 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಯೋಜನೆಯ ಪ್ರಮುಖ ಫಲಾನುಭವಿ ದೆಹಲಿಯಾಗಿದ್ದು, ಅಣೆಕಟ್ಟು ಯೋಜನೆ ಸಂಪೂರ್ಣವಾದರೆ ಒಂದು ವರ್ಷಕ್ಕೆ 500 ಮಿಲಿಯನ್ ಕ್ಯೂಬಿಕ್​ ಮೀಟರ್​ಗಳಷ್ಟು ನೀರನ್ನು ದೆಹಲಿ ಪಡೆಯಲಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ವಿವರಿಸಿದೆ.

ಇದನ್ನೂ ಹೊರತುಪಡಿಸಿದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಲುಹ್ರಿ ಸ್ಟೇಜ್​ 1 ಹೈಡ್ರೋ ಪವರ್​ ಪ್ರಾಜೆಕ್ಟ್​ಗೆ ಶಂಕು ಸ್ಥಾಪನೆ ನೆರವೇರಿಸುವರು. ಇದು 210 ಮೆಗಾ ವ್ಯಾಟ್​ ಸಾಮರ್ಥ್ಯದ 1800 ಕೋಟಿ ರೂಪಾಯಿ ವೆಚ್ಚದ ಯೋಜನೆ. ಇದು ವಾರ್ಷಿಕ 750 ಮಿಲಿಯನ್​ ಯೂನಿಟ್​ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯಾಗಿದೆ. ಅದನ್ನು ಹೊರತುಪಡಿಸಿದರೆ, ಪ್ರಧಾನಿ ಮೋದಿಯವರು ಧೌಲಸಿಧ್​ ಜಲವಿದ್ಯುತ್​ ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಹಮೀರ್​ಪುರ ಜಿಲ್ಲೆಯಲ್ಲಿ ನಿರ್ಮಾಣವಾಗಲಿರುವ ಜಲವಿದ್ಯುತ್​ ಸ್ಥಾವರ. ಸುಮಾರು 680 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಇದರ ಸಾಮರ್ಥ್ಯ 66 ಮೆಗಾವ್ಯಾಟ್​. ವರ್ಷಕ್ಕೆ 300 ಮಿಲಿಯನ್ ಯೂನಿಟ್​ ವಿದ್ಯುತ್​ ಉತ್ಪಾದನಾ ಸಾಮರ್ಥ್ಯವನ್ನು ಇಂದು ಹೊಂದಿದೆ. ಅದಾದ ಬಳಿಕ ಸವ್ರಾ-ಕುಡ್ಡು ಹೈಡ್ರೋ ಪವರ್​ ಯೋಜನೆ ಪ್ರಾರಂಭಕ್ಕೂ ಪ್ರಧಾನಿ ಮೋದಿ ಚಾಲನೆ ನೀಡುವರು. ಇದನ್ನು 2080 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 111 ಮೆಗಾ ವ್ಯಾಟ್​ ಸಾಮರ್ಥ್ಯದ್ದಾಗಿದೆ. ವಾರ್ಷಿಕವಾಗಿ 380 ಮಿಲಿಯನ್​ ಯೂನಿಟ್​ ವಿದ್ಯುತ್ ಉತ್ಪಾದನೆ ಮಾಡಲಿದೆ.

ಇದನ್ನೂ ಓದಿ: ಮತ್ತೆ ಹೆಚ್ಚಾದ ಕೊವಿಡ್​ 19, ಒಮಿಕ್ರಾನ್​ ಸೋಂಕು; ದೆಹಲಿಯಲ್ಲಿ ನಾಳೆಯಿಂದ ನೈಟ್​ ಕರ್ಫ್ಯೂ ಜಾರಿ