ಮೆಹುಲ್ ಚೋಕ್ಸಿನನ್ನು ವಿಮಾನದಲ್ಲಿ ಕರೆದೊಯ್ಯುವುದು ಅಪಾಯಕಾರಿ (flight risk). ಆತ ಡೊಮಿನಿಕಾದಿಂದ ಪರಾರಿಯಾಗುವ ಸಾಧ್ಯತೆಯಿದೆ ಎಂದು ದೇಶಭ್ರಷ್ಟನಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿಗೆ ಡೊಮಿನಿಕಾದ ಹೈ ಕೋರ್ಟ್ ಜಾಮೀನು ನಿರಾಕರಿಸಿದೆ. ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸಹಸ್ರಾರು ಕೋಟಿ ರೂಪಾಯಿ ವಂಚಿಸಿರುವ ಚೋಕ್ಸಿ, ಸದ್ಯ ಡೊಮಿನಿಕಾದ ಜೈಲಿನಲ್ಲಿದ್ದಾನೆ. ಆದರೆ ಮೆಹುಲ್ ಚೋಕ್ಸಿ ತನ್ನನ್ನು ಮತ್ತು ತನ್ನ ಪ್ರಿಯತಮೆಯನ್ನು ಭಾರತ ಮತ್ತು ಆಂಟಿಗೋವಾ ಪೊಲೀಸರು ಆಂಟಿಗುವಾದ ಜಾಲಿ ಬಂದರಿನಿಂದ ಮೇ 23ರಂದು ಅಪಹರಿಸಿದ್ದರು ಎಂದು ಹೊಸ ವರಾತ ತೆಗೆದಿದ್ದಾನೆ.
ಕೆರೆಬಿಯನ್ ಸಮುದಾಯದ ಪ್ರಜೆಯಾಗಿರುವ ತನ್ನ ಕಕ್ಷಿದಾರ ಮೆಹುಲ್ ಚೋಕ್ಸಿ ವಿರುದ್ಧವಿರುವುದು ಜಾಮೀನು ನೀಡಬಹುದಾದ ಆಪಾದನೆಯಷ್ಟೇ. ಐದು ಸಾವಿರ ರೂಪಾಯಿ ದಂಡ ಕಟ್ಟಿಸಿಕೊಂಡು ಆತನನ್ನು ಬಿಟ್ಟುಬಿಡಬಹುದು. ಆತ ವಿಮಾನದಲ್ಲಿ ಪರಾರಿಯಾಗುವ ಸಾಧ್ಯತೆಯೇನೂ ಇಲ್ಲ (not a flight risk). ಆತನ ಆರೋಗ್ಯವೂ ಸರಿಯಿಲ್ಲ. ಹಾಗಾಗಿ ಜಾಮೀನು ನೀಡಿ ಎಂದು ಚೋಕ್ಸಿ ವಕೀಲರು ಕೋರ್ಟ್ ಮೊರೆಹೋದರು. ಆದರೆ ಚೋಕ್ಸಿ ವಿಮಾನದಲ್ಲಿ ಪರಾರಿಯಾಗುವ ಸಾಧ್ಯತೆ (flight risk) ಮತ್ತು ಆತನ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಇದೆಯೆಂಬ ಪ್ರತಿ ವಾದವನ್ನು ಪುರಸ್ಕರಿಸಿದ ಡೊಮಿನಿಕಾ ಹೈಕೋರ್ಟ್ ಜಡ್ಜ್ ವೇಯ್ನೆಟ್ ಆಡ್ರೀನ್ ರಾಬರ್ಟ್ಸ್, ಜಾಮೀನು ನಿರಾಕರಿಸಿದರು.
ಮೆಹುಲ್ ಚೋಕ್ಸಿ ಡೊಮಿನಿಕಾ ರಾಷ್ಟ್ರದಲ್ಲಿ ಗುರುತರವಾದ ಅಪರಾಧವೆಸಗಿಲ್ಲ ಎಂಬ ಆತನ ವಕೀಲರ ವಾದವನ್ನು ಡೊಮಿನಿಕಾ ಹೈಕೋರ್ಟ್ ಜಡ್ಜ್ ವೇಯ್ನೆಟ್ ಆಡ್ರೀನ್ ರಾಬರ್ಟ್ಸ್ ಪಾರ್ಶ್ವವಾಗಿ ಒಪ್ಪಿಕೊಂಡರಾದರೂ, ಅದೇ ಆತನಿಗೆ ಮುಳುವಾಯಿತು. ಒಂದು ವೇಳೆ ಆತನಿಗೆ ಈ ಹಂತದಲ್ಲಿ ಜಾಮೀನು ನೀಡಿದರೆ ಆತ ದೇಶದಿಂದ ಪರಾರಿಯಾಗುವುದಿಲ್ಲ ಎಂಬ ಗ್ಯಾರೆಂಟಿ ಏನಿದೆ? ಎಂದು ಪ್ರಶ್ನಿಸಿದರು. ಮತ್ತು ಆತ (ವಿಮಾನದಲ್ಲಿ) ಪರಾರಿಯಾಗುವ ಸಾಧ್ಯತೆಯಿದೆ. ಅಂದರೆ flight risk ನಲ್ಲಿದ್ದಾನೆ. ಹಾಗಾಗಿ ಜಾಮೀನು ನೀಡಲು ಬರುವುದಿಲ್ಲ ಎಂದು ಸಾರಿದರು.
ಮೆಹುಲ್ ಚೋಕ್ಸಿ ಹೇಳುವಂತೆ ಆತ ತನ್ನ ಸಹೋದರನ ಜೊತೆ ಯಾವುದೋ ಹೋಟೆಲ್ನಲ್ಲಿ ವಾಸ್ತವ್ಯದಲ್ಲಿದ್ದಾನಂತೆ. ಕೋರ್ಟ್ ಮತ್ತು ಸ್ಥಳೀಯ ಪೊಲೀಸರಿಗೆ ಅದು ಖಚಿತ ವಿಳಾಸವೂ ಅಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆತನ ವಿಚಾರಣೆ ಇನ್ನೂ ಆರಂಭವಾಗಿಲ್ಲ ಎಂದೂ ಜಾಮೀನು ನಿರಾಕರಿಸಿದ ಕೋರ್ಟ್ ಸ್ಪಷ್ಟಪಡಿಸಿತು. ಕುತೂಹಲದ ಸಂಗತಿಯೆಂದರೆ ಈ ವಾದ-ಪ್ರತಿವಾದದ ಮಧ್ಯೆ ಮೆಹುಲ್ ಚೋಕ್ಸಿನನ್ನು ಭಾರತಕ್ಕೆ ತಕ್ಷಣಕ್ಕೆ ವಾಪಸ್ ಕಳಿಸುವ ಸಾಧ್ಯತೆ ಇಲ್ಲವಾಗಿದೆ!
ಇದೇ ವೇಳೆ ಭಾರತ ಸರ್ಕಾರವೂ ಸಹ ಮೆಹುಲ್ ಚೋಕ್ಸಿ ಭಾರತದ ಪ್ರಜೆ ಮತ್ತು ಆತ ತೀವ್ರತರವಾದ ಆರ್ಥಿಕ ಅಪರಾಧ ಎಸಗಿದ್ದಾನೆ ಎಂದು ತಿಳಿಸುತ್ತಾ ಎರಡು ಅಫಿಡವಿಟ್ಗಳನ್ನು (affidavit) ಕೋರ್ಟ್ಗೆ ಸಲ್ಲಿಸಿದೆ. ಪಂಜಾಬ್ ಬ್ಯಾಂಕ್ ವಂಚನೆ ಪ್ರಕರಣದ ತನಿಖೆಯ ಹೊಣೆಹೊತ್ತಿರುವ ಸಿಬಿಐನ ಉಪ ಪ್ರಧಾನ ನಿರೀಕ್ಷಕ ಶಾರದಾ ರಾವುತ್ ಮತ್ತು ಡೊಮೊನಿಕಾ ಕಾಮನ್ವೆಲ್ತ್ ರಾಷ್ಟ್ರದಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿ ಆಜಾದ್ ಸಿಂಗ್ ಅವರು ಜಂಟಿಯಾಗಿ ಪ್ರಕರಣದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಡೊಮೊನಿಕಾ ಹೈಕೋರ್ಟ್ನಲ್ಲಿ ಮೆಹುಲ್ ಚೋಕ್ಸಿ ಜಾಮೀನು ಅರ್ಜಿ ವಿಚಾರಣೆಗೆ ಬರುವ ಒಂದು ದಿನ ಮುನ್ನ ಇಬ್ಬರೂ ಅಧಿಕಾರಿಗಳು ತಲಾ ಒಂದು ಅಫಿಡವಿಟ್ ಸಲ್ಲಿಸಿದ್ದರು. ಅಸಲಿಗೆ ಮೆಹುಲ್ ಚೋಕ್ಸಿ ಭಾರತೀಯ ಪೌರತ್ವವವನ್ನು (Indian citizenship) ವಾಪಸ್ ಮಾಡಿರುವುದನ್ನು ಭಾರತ ಸರ್ಕಾರ ಅನುಮೋದಿಸಿಯೇ ಇಲ್ಲ. ಹಾಗಾಗಿ ಆತ ಇನ್ನೂ ಭಾರತದ ಪ್ರಜೆಯೇ ಆಗಿದ್ದಾನೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
(PNB fraudster Mehul Choksi also at flight risk so denied bail by Dominican high court)
ವಂಚಕ ಮೆಹೂಲ್ ಚೋಸ್ಕಿ ಆಂಟಿಗುವಾದಲ್ಲಿ ನಾಪತ್ತೆ? ವಾಹನ ಜಾಲಿ ಬಂದರು ಪ್ರದೇಶದಲ್ಲಿ ಪತ್ತೆ! ಆತಂಕದಲ್ಲಿ ಕುಟುಂಬಸ್ಥರು
Published On - 12:00 pm, Sat, 12 June 21