Prashant Kishor: ಕಾಂಗ್ರೆಸ್ ಪಕ್ಷ ಸೇರುವತ್ತ ಪ್ರಶಾಂತ್ ಕಿಶೋರ್ ಚಿತ್ತ! ಏನಿವರ ಪೊಲಿಟಿಕಲ್​ ಸ್ಟ್ರಾಟಜಿ?

Political Strategist Prashant Kishor: ಮುಂದಿನ ವರ್ಷ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಈ ರಾಷ್ಟ್ರಪತಿ ಚುನಾವಣೆಯಲ್ಲಿ ಎಲೆಕ್ಟೋರಲ್ ಕಾಲೇಜ್ ನ ವಿಧಾನಸಭಾ, ಪರಿಷತ್ ಸದಸ್ಯರು, ಲೋಕಸಭೆ, ರಾಜ್ಯಸಭೆ ಸದಸ್ಯರು ಮತ ಚಲಾಯಿಸುವ ಅಧಿಕಾರ, ಹಕ್ಕು ಹೊಂದಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಬಿಜೆಪಿಗೆ ಎಲೆಕ್ಟೋರಲ್ ಕಾಲೇಜ್ ನಲ್ಲಿ ಬಹುಮತವಿಲ್ಲ. ಆದರೆ, ವಿಪಕ್ಷಗಳು ಒರಿಸ್ಸಾದ ಸಿಎಂ ನವೀನ್ ಪಾಟ್ನಾಯಕ್ ಹಾಗೂ ಅವರ ಬಿಜೆಡಿ ಪಕ್ಷವನ್ನು ತಮ್ಮ ಕಡೆಗೆ ಸೆಳೆದುಕೊಂಡರೇ, ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷದ ಅಭ್ಯರ್ಥಿ ಗೆಲ್ಲುವಂತೆ ಮಾಡಬಹುದು ಎನ್ನುವುದು ಪ್ರಶಾಂತ್ ಕಿಶೋರ್ ಲೆಕ್ಕಾಚಾರ.

Prashant Kishor: ಕಾಂಗ್ರೆಸ್ ಪಕ್ಷ ಸೇರುವತ್ತ ಪ್ರಶಾಂತ್ ಕಿಶೋರ್ ಚಿತ್ತ! ಏನಿವರ ಪೊಲಿಟಿಕಲ್​ ಸ್ಟ್ರಾಟಜಿ?
Political strategist Prashanth Kishor: ಕಾಂಗ್ರೆಸ್ ಪಕ್ಷ ಸೇರುವತ್ತ ಪ್ರಶಾಂತ್ ಕಿಶೋರ್ ಚಿತ್ತ! ಏನಿವರ ಪೊಲಿಟಿಕಲ್​ ಸ್ಟ್ರಾಟಜಿ?
Follow us
S Chandramohan
| Updated By: Digi Tech Desk

Updated on:Jul 14, 2021 | 4:03 PM

ಭಾರತದ ಚುನಾವಣಾ ರಣತಂತ್ರ ನಿಪುಣ ಪ್ರಶಾಂತ್ ಕಿಶೋರ್ ಈಗ ಮತ್ತೆ ರಾಜಕೀಯ ಪಕ್ಷ ಸೇರುವ ತವಕದಲ್ಲಿದ್ದಾರೆ. ಈ ಹಿಂದೆ ಪ್ರಾದೇಶಿಕ ಪಕ್ಷವಾದ ಜೆಡಿಯು ಪಕ್ಷವನ್ನು ಸೇರಿ ಅದರಿಂದ ಹೊರ ಬಂದಿರುವ ಪ್ರಶಾಂತ್ ಕಿಶೋರ್ ಈ ಬಾರಿ ಸಕ್ರಿಯ ರಾಜಕೀಯ ಇನ್ನಿಂಗ್ಸ್ ಆರಂಭಿಸಲು ರಾಷ್ಟ್ರೀಯ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಶಾಂತ್ ಕಿಶೋರ್ ಟಿಎಂಸಿ, ಡಿಎಂಕೆ, ಕಾಂಗ್ರೆಸ್, ಬಿಜೆಪಿ, ಜೆಡಿಯು ಪಕ್ಷಗಳಿಗೆ ಗೆಲುವು ತಂದುಕೊಟ್ಟ ಹೆಗ್ಗಳಿಕೆ ಹೊಂದಿದ್ದಾರೆ. ಹಾಗಾದರೇ, ಈಗ ಪ್ರಶಾಂತ್ ಕಿಶೋರ್ ಯಾವ ಪಕ್ಷದತ್ತ ಮುಖ ಮಾಡಿದ್ದಾರೆ, ಪ್ರಶಾಂತ್ ಕಿಶೋರ್ ಮುಂದಿನ ರಾಜಕೀಯ ಹೆಜ್ಜೆಗಳೇನು ಎನ್ನುವುದರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.

ಕಾಂಗ್ರೆಸ್ ಪಕ್ಷ ಸೇರುವತ್ತ ಪ್ರಶಾಂತ್ ಕಿಶೋರ್ ಚಿತ್ತ! ಭಾರತದ ಚುನಾವಣಾ ರಾಜಕಾರಣಕ್ಕೂ ಸ್ಟ್ರಾಟಜಿಯ ಕನ್ಸಲ್ಟಿಂಗ್ ರೂಪ ಕೊಟ್ಟವರು ಪ್ರಶಾಂತ್ ಕಿಶೋರ್. ಭಾರತದಲ್ಲಿ ಚುನಾವಣಾ ರಾಜಕಾರಣದಲ್ಲಿ ಪಳಗಿದವರು ಸಾವಿರಾರು ಮಂದಿ ಇದ್ದಾರೆ. ಆದರೆ, ಚುನಾವಣಾ ಸ್ಟ್ರಾಟಜಿ ರೂಪಿಸುವುದಕ್ಕೂ ಕನ್ಸಲ್ಟಿಂಗ್ ರೂಪ ಕೊಟ್ಟ ಶ್ರೇಯ ಪ್ರಶಾಂತ್ ಕಿಶೋರ್ ಗೆ ಸಲ್ಲುತ್ತೆ. 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಚುನಾವಣಾ ಕಾರ್ಯತಂತ್ರ ರೂಪಿಸುವ ಕೆಲಸ ಮಾಡುವುದರೊಂದಿಗೆ ಆರಂಭವಾದ ಪ್ರಶಾಂತ್ ಕಿಶೋರ್ ಚುನಾವಣಾ ಸ್ಟ್ರಾಟಜಿಗೆ ಶೇ.90 ರಷ್ಟು ಯಶಸ್ಸು ಸಿಕ್ಕಿದೆ. ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗದ ಪ್ರಶಾಂತ್ ಕಿಶೋರ್ ವಿವಿಧ ರಾಜಕೀಯ ಪಕ್ಷಗಳಿಗೆ ಚುನಾವಣೆಗಳಲ್ಲಿ ಚುನಾವಣಾ ಕಾರ್ಯತಂತ್ರ ರೂಪಿಸಿ ಸಲಹೆ, ಮಾರ್ಗದರ್ಶನ ನೀಡಿದ್ದಾರೆ.

ಇಂಥ ಪ್ರಶಾಂತ್ ಕಿಶೋರ್ ಈಗ ರಾಷ್ಟ್ರೀಯ ಪಕ್ಷವೊಂದರ ಹೊಸ್ತಿಲಲ್ಲಿ ನಿಂತಿದ್ದಾರೆ. ನೇರವಾಗಿ ಸಕ್ರಿಯ ರಾಜಕಾರಣ ಮಾಡಲು ರಾಷ್ಟ್ರೀಯ ಪಕ್ಷ ಸೇರಲು ಪ್ರಶಾಂತ್ ಕಿಶೋರ್ ಗಂಭೀರ ಚಿಂತನೆ ನಡೆಸಿದ್ದಾರೆ. ಸದ್ಯದಲ್ಲೇ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷವನ್ನು ಸೇರುವ ಸಾಧ್ಯತೆ ಇದೆ ಎಂದು ದೆಹಲಿಯ ಕಾಂಗ್ರೆಸ್ ಪಕ್ಷದ ಮೂಲಗಳು ಹೇಳುತ್ತಿವೆ. ಈ ನಿಟ್ಟಿನಲ್ಲಿ ಪ್ರಶಾಂತ್ ಕಿಶೋರ್ ನಿನ್ನೆ (ಜುಲೈ 13) ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾಗಾಂಧಿರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಹಾಗಂತ ಪ್ರಶಾಂತ್ ಕಿಶೋರ್, ಸಕ್ರಿಯ ರಾಜಕಾರಣ ಪ್ರವೇಶ ಇದೇ ಮೊದಲೇನೂ ಅಲ್ಲ. ಈ ಹಿಂದೆ ಬಿಹಾರದ ಜೆಡಿಯು ಪಕ್ಷವನ್ನು ಅಧಿಕೃತವಾಗಿ ಪ್ರಶಾಂತ್ ಕಿಶೋರ್ ಸೇರಿದ್ದರು. ಜೆಡಿಯು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು ಆಗಿದ್ದರು. ಆದರೆ, ಸಿಎಎಗೆ ಜೆಡಿಯು ಹಾಗೂ ನೀತೀಶ್ ಕುಮಾರ್ ಬೆಂಬಲ ನೀಡಿದ್ದನ್ನು ಟೀಕಿಸಿದ ಬಳಿಕ ಜೆಡಿಯುನಿಂದ ಹೊರಬಿದ್ದಿದ್ದಾರೆ.

ಮೇ 2 ರಂದು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು ಸಿಕ್ಕ ಬಳಿಕ ತಾವು ಚುನಾವಣಾ ಸ್ಟ್ರಾಟಜಿ ಕನ್ಸಲ್ಟಿಂಗ್ ಕೆಲಸಕ್ಕೆ ಗುಡ್ ಬೈ ಹೇಳುವುದಾಗಿ ಪ್ರಶಾಂತ್ ಕಿಶೋರ್ ಘೋಷಿಸಿದ್ದರು. ಪ್ರಶಾಂತ್ ಕಿಶೋರ್ ಮುಂದಿನ ಹಾದಿ ಏನು ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಗುತ್ತಿದೆ. ಚುನಾವಣಾ ಸ್ಟ್ರಾಟಜಿ ಕನ್ಸಲ್ಟಿಂಗ್ ನಿಂದ ಪಕ್ಕಾ ವೃತ್ತಿಪರ ರಾಜಕಾರಣಿಯಾಗಿ ಅಖಾಡಕ್ಕಿಳಿಯಲು ಪ್ರಶಾಂತ್ ಕಿಶೋರ್ ರೆಡಿಯಾಗಿದ್ದಾರೆ. ಆದರೆ, ಇದಕ್ಕೆ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಇದೇ ಕಾಂಗ್ರೆಸ್ ಪಕ್ಷದ ಕಾರ್ಯಶೈಲಿಯನ್ನ ಪ್ರಶಾಂತ್ ಕಿಶೋರ್ ಟೀಕಿಸಿದ್ದು ಇದೆ.

ಕಾಂಗ್ರೆಸ್ ಪಕ್ಷವು ನೂರು ವರ್ಷಗಳ ಇತಿಹಾಸ ಇರುವ ರಾಜಕೀಯ ಪಕ್ಷ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಕಾರ್ಯನಿರ್ವಹಣೆಯ ಶೈಲಿ ಇದೆ. ಪ್ರಶಾಂತ್ ಕಿಶೋರ್ ಅಥವಾ ಬೇರೆಯವರು ಸಲಹೆ ನೀಡಿದ ರೀತಿಯಲ್ಲಿ ಕಾರ್ಯನಿರ್ವಹಿಸಲು ಕಾಂಗ್ರೆಸ್ ಮುಕ್ತವಾಗಿಲ್ಲ. ನನ್ನ ಕಾರ್ಯಶೈಲಿಯಂತೆ ಕೆಲಸ ಮಾಡಲು ಕಾಂಗ್ರೆಸ್ ಮುಕ್ತವಾಗಿಲ್ಲ. ಕಾಂಗ್ರೆಸ್ ನಾಯಕರಿಗೆ ಸಮಸ್ಯೆ ಇದೆ ಎನ್ನುವುದು ಮನವರಿಕೆ ಆಗಬೇಕು. ಆದಾದ ಬಳಿಕ ಬೇರೆ ಏನನ್ನಾದರೂ ಮಾಡಬಹುದು. ಕಾಂಗ್ರೆಸ್ ಪಕ್ಷಕ್ಕೆ ಎಲ್ಲಿ ತಪ್ಪಾಗುತ್ತಿದೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು.

2024ರ ಚುನಾವಣೆಗೆ ಕಾಂಗ್ರೆಸ್ ರಣತಂತ್ರ ರಚನೆ ದೇಶದಲ್ಲಿ 2024ರ ಲೋಕಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಸಮಯ ಇದೆ. ಈಗಿನಿಂದಲೇ ಕಾಂಗ್ರೆಸ್ ಪಕ್ಷವನ್ನು 2024ರ ಲೋಕಸಭಾ ಚುನಾವಣೆಗೆ ಸಿದ್ದಪಡಿಸುವ ಕೆಲಸವನ್ನು ಪ್ರಶಾಂತ್ ಕಿಶೋರ್ ನಿರ್ವಹಿಸಬಹುದು. ಕಾಂಗ್ರೆಸ್ ಪಕ್ಷದ ಸಂಘಟನೆ, ಕಾರ್ಯಶೈಲಿಯನ್ನು ಬದಲಾಯಿಸಿ, ತಳಮಟ್ಟದಿಂದ ಪಕ್ಷದ ಸ್ವರೂಪ ಬದಲಾಯಿಸಿ, ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಕಾರ್ಯತಂತ್ರ ರೂಪಿಸುವ ಕೆಲಸವನ್ನು ಪ್ರಶಾಂತ್ ಕಿಶೋರ್ ಮಾಡುವ ನಿರೀಕ್ಷೆ ಇದೆ.

ಕೇವಲ ಒಂದೆರೆಡು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಪ್ರಶಾಂತ್ ಕಿಶೋರ್ ಸೀಮಿತವಾಗಲ್ಲ. ದೊಡ್ಡ ಜವಾಬ್ದಾರಿ ಹೊರುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಆಪ್ತ ಮೂಲಗಳು ಹೇಳುತ್ತಿವೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಯ ಮಹತ್ವದ ಹೊಣೆಗಾರಿಕೆಯನ್ನು ಪ್ರಶಾಂತ್ ವಹಿಸಿಕೊಳ್ಳಬಹುದು. ಆದರೆ, ಈ ನಿಟ್ಟಿನಲ್ಲಿ ಮಾತುಕತೆಗಳು ಇನ್ನೂ ಪ್ರಾಥಮಿಕ ಹಂತದಲ್ಲಿವೆ.

ಇನ್ನೂ ಪ್ರಶಾಂತ್ ಕಿಶೋರ್ ಮುಂದಿನ ವರ್ಷ ನಡೆಯುವ ರಾಷ್ಟ್ರಪತಿ ಚುನಾವಣೆಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ವಿಪಕ್ಷಗಳ ಸಹಮತದ ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆ ಕಾಂಗ್ರೆಸ್ ಜೊತೆ ಚರ್ಚೆ ನಡೆಸುತ್ತಿದ್ದಾರೆ ಎಂಬ ಕೂಡ ಸುದ್ದಿ ಇದೆ. ಆದರೆ, ಇದನ್ನು ಪ್ರಶಾಂತ್ ನಿರಾಕರಿಸಿದ್ದಾರೆ. ಪ್ರಶಾಂತ್ ಕಿಶೋರ್ ಕಳೆದ ತಿಂಗಳು 3 ಬಾರಿ ಶರದ್ ಪವಾರ್ ಅವರನ್ನು ದೆಹಲಿ, ಮುಂಬೈನಲ್ಲಿ ಭೇಟಿಯಾಗಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಗೆ ಸುಮಾರು 400 ಲೋಕಸಭಾ ಕ್ಷೇತ್ರಗಳಲ್ಲಿ ವಿಪಕ್ಷಗಳ ಸಹಮತದ ಏಕೈಕ ಅಭ್ಯರ್ಥಿಯನ್ನು ಬಿಜೆಪಿ ವಿರುದ್ಧ ಕಣಕ್ಕಿಳಿಸಿದರೇ, ಬಿಜೆಪಿಯನ್ನು ಸೋಲಿಸಬಹುದು ಎಂಬ ರಾಜಕೀಯ ಲೆಕ್ಕಾಚಾರ ಹಾಕಿದ್ದಾರೆ. ಈ ಬಗ್ಗೆ ಶರದ್ ಪವಾರ್ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಶರದ್ ಪವಾರ್ ರನ್ನು ಪ್ರಶಾಂತ್ ಭೇಟಿಯಾದ ಬಳಿಕ ಶರದ್ ಪವಾರ್ ರಾಷ್ಟ್ರ ಮಂಚ್ ಹೆಸರಿನಲ್ಲಿ ವಿಪಕ್ಷಗಳ ನಾಯಕರ ಸಭೆಯನ್ನು ದೆಹಲಿಯ ತಮ್ಮ ನಿವಾಸದಲ್ಲಿ ನಡೆಸಿದ್ದರು.

ಈ ಸಭೆ ನಡೆದ ಬಳಿಕವೂ ಪ್ರಶಾಂತ್ ಕಿಶೋರ್-ಶರದ್ ಪವಾರ್ ಭೇಟಿ ನಡೆದಿದೆ. ಇದರಿಂದಾಗಿ ಶರದ್ ಪವಾರ್ ತೃತೀಯ ರಂಗ ಕಟ್ಟುತ್ತಾರಾ ಎಂಬ ಚರ್ಚೆ ನಡೆದಿತ್ತು. ಆದರೆ, ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ತೃತೀಯ ರಂಗ ಮತ್ತು ನಾಲ್ಕನೇ ರಂಗ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು.

ರಾಷ್ಟ್ರಪತಿ ಚುನಾವಣೆಗೆ ಪ್ರಶಾಂತ್ ಸ್ಟ್ರಾಟಜಿ

ಮುಂದಿನ ವರ್ಷ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಈ ರಾಷ್ಟ್ರಪತಿ ಚುನಾವಣೆಯಲ್ಲಿ ಎಲೆಕ್ಟೋರಲ್ ಕಾಲೇಜ್ ನ ವಿಧಾನಸಭಾ, ಪರಿಷತ್ ಸದಸ್ಯರು, ಲೋಕಸಭೆ, ರಾಜ್ಯಸಭೆ ಸದಸ್ಯರು ಮತ ಚಲಾಯಿಸುವ ಅಧಿಕಾರ, ಹಕ್ಕು ಹೊಂದಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಬಿಜೆಪಿಗೆ ಎಲೆಕ್ಟೋರಲ್ ಕಾಲೇಜ್ ನಲ್ಲಿ ಬಹುಮತವಿಲ್ಲ. ಆದರೆ, ವಿಪಕ್ಷಗಳು ಒರಿಸ್ಸಾದ ಸಿಎಂ ನವೀನ್ ಪಾಟ್ನಾಯಕ್ ಹಾಗೂ ಅವರ ಬಿಜೆಡಿ ಪಕ್ಷವನ್ನು ತಮ್ಮ ಕಡೆಗೆ ಸೆಳೆದುಕೊಂಡರೇ, ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷದ ಅಭ್ಯರ್ಥಿ ಗೆಲ್ಲುವಂತೆ ಮಾಡಬಹುದು ಎನ್ನುವುದು ಪ್ರಶಾಂತ್ ಕಿಶೋರ್ ಲೆಕ್ಕಾಚಾರ.

ಈ ಎಲ್ಲ ಲೆಕ್ಕಾಚಾರವನ್ನು ಪ್ರಶಾಂತ್ ಕಿಶೋರ್ ನೆನ್ನೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್, ಪ್ರಿಯಾಂಕಾ ಗಾಂಧಿಗೆ ವಿವರಿಸಿದ್ದಾರೆ. ಪ್ರಶಾಂತ್ ಕಿಶೋರ್ ಸಭೆಯಲ್ಲಿ ಭಾಗವಹಿಸಲೆಂದು ಪ್ರಿಯಾಂಕಾ ಗಾಂಧಿ ನೆನ್ನೆ(ಜುಲೈ 13) ತಮ್ಮ ಲಕ್ನೋ ಭೇಟಿಯನ್ನು ಮುಂದೂಡಿದ್ದರು. ಕಾಂಗ್ರೆಸ್ ನಾಯಕರುಗಳಿಗೆ ತಮ್ಮ ಪ್ಲ್ಯಾನ್ ಬಗ್ಗೆ ಪ್ರಶಾಂತ್ ಕಿಶೋರ್ ಪ್ರಸಂಟೇಷನ್ ನೀಡಿದ್ದಾರೆ. ಈ ಸಭೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಸೋನಿಯಾಗಾಂಧಿ ಕೂಡ ಭಾಗವಹಿಸಿದ್ದರು. ಪ್ರಸಂಟೇಷನ್ ವೇಳೆ, ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ, ವೈಫಲ್ಯದ ಸಾಧ್ಯಾಸಾಧ್ಯತೆಯ ಬಗ್ಗೆಯೂ ವಿವರಿಸಿದ್ದಾರೆ.

ಪ್ರಶಾಂತ್ ಗೆಲುವಿನ ಹಾದಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ದಕ್ಕಿದ್ದರ ಹಿಂದೆಯೂ ಪ್ರಶಾಂತ್ ಕಿಶೋರ್ ಅಳಿಲು ಸೇವೆ, ಸಲಹೆಯೂ ಇದೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಹಿಂದೆಯೂ ಪ್ರಶಾಂತ್ ಕಿಶೋರ್ ಚುನಾವಣಾ ಕಾರ್ಯತಂತ್ರ, ಸಲಹೆ ಕೆಲಸ ಮಾಡಿದೆ. ಈ ವರ್ಷದ ಏಪ್ರಿಲ್ -ಮೇ ತಿಂಗಳಿನಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ವಿಧಾನಸಭಾ ಚುನಾವಣೆಯಲ್ಲಿನ ಗೆಲುವು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷದ ಗೆಲುವಿನ ಹಿಂದೆಯೂ ಪ್ರಶಾಂತ್ ಚುನಾವಣಾ ಕಾರ್ಯತಂತ್ರಗಳ ಪಾತ್ರ ಇದೆ.

2015ರಲ್ಲಿ ಬಿಹಾರದಲ್ಲಿ ಜೆಡಿಯು ಪಕ್ಷದ ಚುನಾವಣಾ ಕಾರ್ಯತಂತ್ರ ರೂಪಿಸಿದ್ದು ಕೂಡ ಇದೇ ಪ್ರಶಾಂತ್ ಕಿಶೋರ್. ಆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ಜೆಡಿಯು-ಆರ್‌.ಜೆ.ಡಿ. ಮೈತ್ರಿಕೂಟ ಅಧಿಕಾರಕ್ಕೆ ಬಂದಿತ್ತು. ಚುನಾವಣಾ ಫಲಿತಾಂಶದ ದಿನ ಜೆಡಿಯು-ಆರ್‌.ಜೆ.ಡಿ. ಮೈತ್ರಿಕೂಟಕ್ಕೆ ಬಹುಮತ ಸಿಕ್ಕ ಬಳಿಕ ನೀತೀಶ್ ಕುಮಾರ್ ತಮ್ಮ ಮನೆಯ ಆವರಣದಲ್ಲಿ ಪ್ರಶಾಂತ್ ಕಿಶೋರ್ ಹೆಗಲ ಮೇಲೆ ಕೈ ಹಾಕಿ ಓಡಾಡಿದ್ದು ಎಲ್ಲರ ಕಣ್ಣಿಗೆ ಕಟ್ಟಿದಂತಿದೆ. ಆದರೆ, 2017ರಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ಕಾರ್ಯತಂತ್ರ ರೂಪಿಸುವ ಹೊಣೆಯನ್ನು ಪ್ರಶಾಂತ್ ಹೊತ್ತಿದ್ದರು.

ಆದರೆ, ಆ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದವರನ್ನು ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದರು. ಇದರಿಂದಾಗಿ ಶೀಲಾ ದೀಕ್ಷಿತ್ ರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಆದರೆ, ಬಳಿಕ ಕಾಂಗ್ರೆಸ್-ಎಸ್ಪಿ ಮೈತ್ರಿಯಾಗಿದ್ದರಿಂದ ಶೀಲಾ ದೀಕ್ಷಿತ್ ಹಿಂದೆ ಸರಿದರು. ಆದರೇ, ಇದಕ್ಕೂ ಮೊದಲು ಪ್ರಿಯಾಂಕಾ ಗಾಂಧಿ ಅವರನ್ನೇ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಪ್ರಶಾಂತ್ ಸಲಹೆ ನೀಡಿದ್ದರು.

ಈ ಸಲಹೆ ಕಾರ್ಯರೂಪಕ್ಕೆ ತರಲು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಇಬ್ಬರೂ ಒಪ್ಪಿರಲಿಲ್ಲ. ಯುಪಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಈ ಚುನಾವಣೆ ಹೊರತುಪಡಿಸಿ ಉಳಿದೆಲ್ಲಾ ಚುನಾವಣೆ ಕಾರ್ಯತಂತ್ರ ರೂಪಿಸುವ ಹೊಣೆಗಾರಿಕೆಯಲ್ಲಿ ಪ್ರಶಾಂತ್ ಕಿಶೋರ್ ಗೆ ಯಶಸ್ಸು ಸಿಕ್ಕಿದೆ. ಆಂಧ್ರದಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ಇದೇ ಪ್ರಶಾಂತ್ ರೂಪಿಸಿದ್ದರು. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಗೂ ಪ್ರಶಾಂತ್ ಚುನಾವಣಾ ಕಾರ್ಯತಂತ್ರ ರೂಪಿಸಿಕೊಟ್ಟಿದ್ದಾರೆ.

ಸದ್ಯ ಪ್ರಶಾಂತ್ ಕಿಶೋರ್ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಸಲಹೆಗಾರರೂ ಆಗಿದ್ದಾರೆ. ಮುಂದಿನ ವರ್ಷ ನಡೆಯುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಕಾರ್ಯತಂತ್ರ ರೂಪಿಸುವ ಹೊಣೆಯನ್ನು ಮತ್ತೆ ಪ್ರಶಾಂತ್ ಕಿಶೋರ್‌ಗೆ ನೀಡಬಹುದು.

(ಲೇಖನ: ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9 ಕನ್ನಡ)

(Political strategist Prashant Kishor may join congress whats his Political strategist)

Published On - 3:50 pm, Wed, 14 July 21