ಆರ್‌ಎಸ್‌ಎಸ್ ನಿಷೇಧಿಸ್ತೀವಿ ಎಂದ ಪ್ರಿಯಾಂಕ್ ಖರ್ಗೆ; ಸ್ವಯಂಸೇವಕ ಸಂಘ ಈ ಹಿಂದೆ ಎಷ್ಟು ಬಾರಿ ಬ್ಯಾನ್ ಆಗಿದೆ?
ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ವಿರುದ್ಧ ನೀಡಿದ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಹಾಗಾದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಈ ಹಿಂದೆ ಎಷ್ಟು ಬಾರಿ ನಿಷೇಧಿಸಲಾಗಿತ್ತು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಗಳೂರು, ಜುಲೈ 1: ನಾವು ಈ ಹಿಂದೆ ಆರ್‌ಎಸ್‌ಎಸ್ (RSS) ಅನ್ನು 2 ಬಾರಿ ಬ್ಯಾನ್ ಮಾಡಿದ್ದೆವು. ನಂತರ ನಮ್ಮ ಕೈಕಾಲು ಹಿಡಿದು ನಿಷೇಧವನ್ನು ವಾಪಾಸ್ ಪಡೆಯಿರಿ ಎಂದು ಬಂದಿದ್ದರು. ಆಗ ನಿಷೇಧವನ್ನು ತೆಗೆದಿದ್ದೇ ತಪ್ಪಾಯ್ತು. ಮುಂದೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಆರ್‌ಎಸ್‌ಎಸ್ (RSS) ಬ್ಯಾನ್ ಮಾಡುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಆರ್‌ಎಸ್‌ಎಸ್ ಸಿದ್ದಾಂತವನ್ನು ನಾವು ಮೊದಲಿನಿಂದಲೂ ವಿರೋಧ ಮಾಡ್ತಿದ್ದೇವೆ. ಈಗಲೂ ಮಾಡುತ್ತೇವೆ ಎಂದು ಕರ್ನಾಟಕದ ತಂತ್ರಜ್ಞಾನ ಹಾಗೂ ಮಾಹಿತಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಆರ್‌ಎಸ್‌ಎಸ್ ಈ ಹಿಂದೆ ಕೂಡ ಭಾರತ ಸರ್ಕಾರದಿಂದ ಹಲವು ಬಾರಿ ನಿಷೇಧವನ್ನು ಎದುರಿಸಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಜಗತ್ತಿನಾದ್ಯಂತ 30ಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ವಯಂಸೇವಕರು ನಿರ್ವಹಿಸುತ್ತಿರುವುದರಿಂದ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಸ್ಥೆಯಾಗಿದೆ. ಕೇವಲ 15-20 ಯುವಕರ ಜೊತೆ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ 1925ರಲ್ಲಿ ವಿಜಯದಶಮಿಯಂದು ಆರ್‌ಎಸ್‌ಎಸ್ ಅನ್ನು ಸ್ಥಾಪಿಸಿದರು. ಕಳೆದ 97 ವರ್ಷಗಳಲ್ಲಿ ಆರ್‌ಎಸ್‌ಎಸ್ ಅನ್ನು 3 ಬಾರಿ ನಿಷೇಧಿಸಲಾಗಿದೆ. 1948, 1975 ಮತ್ತು 1992ರಲ್ಲಿ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಲಾಗಿತ್ತು. ಮಹಾತ್ಮ ಗಾಂಧಿಯವರ ಹತ್ಯೆಯ ನಂತರ 1948ರಲ್ಲಿ, 1975ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಮತ್ತು 1992ರಲ್ಲಿ ಅಯೋಧ್ಯೆಯಲ್ಲಿ ಅಕ್ರಮ ಬಾಬರಿ ರಚನೆಯ ಧ್ವಂಸದ ನಂತರ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಲಾಯಿತು. 16 ತಿಂಗಳ ಅವಧಿಯ ನಂತರ ಜುಲೈ 12, 1949ರಂದು ಆರ್‌ಎಸ್‌ಎಸ್ ಮೇಲಿನ ಮೊದಲ ನಿಷೇಧವನ್ನು ತೆಗೆದುಹಾಕಲಾಯಿತು.
ಇದನ್ನೂ ಓದಿ: ವಿನಾ ಕಾರಣ ಆರ್‌ಎಸ್‌ಎಸ್ ಮುಖಂಡ, ಹಿಂದೂಗಳ ಮನೆಗೆ ಮಧ್ಯರಾತ್ರಿ ರೇಡ್: ದಕ್ಷಿಣ ಕನ್ನಡ ಎಸ್ಪಿಗೆ ಬಿಸಿ ತುಪ್ಪವಾದ ಪ್ರಕರಣ
ಫೆಬ್ರವರಿ 1948ರಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ನಾಥೂರಾಮ್ ಗೋಡ್ಸೆ ಕೊಲೆ ಮಾಡಿದ ನಂತರ ಜುಲೈ 1949ರವರೆಗೆ ಆರ್‌ಎಸ್‌ಎಸ್ ಅನ್ನು ಮೊದಲ ಬಾರಿಗೆ ನಿಷೇಧಿಸಲಾಯಿತು. ಜನವರಿ 30, 1948ರಂದು ಗಾಂಧೀಜಿ ಮೇಲೆ ನಾಥೂರಾಮ್ ಗೋಡ್ಸೆ ಗುಂಡು ಹಾರಿಸಿದರು. ಗೋಡ್ಸೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಜೊತೆ ಸಂಬಂಧ ಹೊಂದಿದ್ದರು. ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್‌ನ ಆಗಿನ ಮುಖ್ಯಸ್ಥ ಎಂಎಸ್ ಗೋಲ್ವಾಲ್ಕರ್ ಅವರನ್ನು ಜೈಲಿಗೆ ಹಾಕಲಾಯಿತು ಮತ್ತು ಫೆಬ್ರವರಿ 4, 1948ರಂದು ಆರ್‌ಎಸ್‌ಎಸ್ ಅನ್ನು ಕಾನೂನುಬಾಹಿರವೆಂದು ಘೋಷಿಸಲಾಯಿತು.
ಆರ್‌ಎಸ್‌ಎಸ್ ಸದಸ್ಯರು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ, ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಇತರರನ್ನು ಹಿಂಸಾಚಾರಕ್ಕೆ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿ ಕೇಂದ್ರ ಸರ್ಕಾರವು ಆರ್‌ಎಸ್‌ಎಸ್ ಅನ್ನು ಕಾನೂನುಬಾಹಿರವೆಂದು ಘೋಷಿಸಿತು. ದೇಶಾದ್ಯಂತ ವ್ಯಾಪಕವಾದ ಶೋಧ ಮತ್ತು ತನಿಖೆಗಳ ನಂತರವೂ ಆರ್‌ಎಸ್‌ಎಸ್ ತಪ್ಪಿತಸ್ಥರೆಂದು ಯಾವುದೇ ಪುರಾವೆಗಳು ಸಿಗದ ಕಾರಣ, ಆರೋಪಗಳು ಮತ್ತು ನಿಷೇಧವನ್ನು ಹಿಂಪಡೆಯುವಂತೆ ಗೋಲ್ವಾಲ್ಕರ್ ಸೆಪ್ಟೆಂಬರ್ 24, 1948ರಂದು ಪಟೇಲ್ ಮತ್ತು ನೆಹರೂ ಅವರಿಗೆ ಪತ್ರ ಬರೆದರು. ಸರ್ಕಾರವು ಆರ್‌ಎಸ್‌ಎಸ್ ವಿರುದ್ಧ ಯಾವುದೇ ಬಲವಾದ ಪುರಾವೆಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ಜುಲೈ 12, 1949ರಂದು ಸರ್ಕಾರವು ಆರ್‌ಎಸ್‌ಎಸ್ ಮೇಲಿನ ನಿಷೇಧವನ್ನು ರದ್ದುಗೊಳಿಸಲು ನಿರ್ಧರಿಸಿತು. ಇದಲ್ಲದೆ, ನಿಷೇಧವನ್ನು ಬೇಷರತ್ತಾಗಿ ತೆಗೆದುಹಾಕಲಾಯಿತು.
ಇದನ್ನೂ ಓದಿ: ತುರ್ತು ಪರಿಸ್ಥಿತಿ ವೇಳೆ ಜೈಲುಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಚಿತ್ರಹಿಂಸೆ, ಕನಿಷ್ಠ 100 ಸಾವು; ಸುನಿಲ್ ಅಂಬೇಕರ್
ತುರ್ತು ಪರಿಸ್ಥಿತಿಯ ಸಮಯದಲ್ಲಿ (1975-77), ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಎರಡನೇ ಬಾರಿಗೆ ನಿಷೇಧಿಸಲಾಯಿತು. ಜೂನ್ 25, 1975ರ ರಾತ್ರಿ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ, ರಾಷ್ಟ್ರೀಯ ಸ್ವಯಂಸೇವಕ ಸಂಘವು ನಿಷೇಧಿಸಲ್ಪಟ್ಟ ಮೊದಲ ಸಂಸ್ಥೆಗಳಲ್ಲಿ ಒಂದಾಗಿತ್ತು. ಜುಲೈ 4, 1975ರಂದು, ಕೇಂದ್ರ ಸರ್ಕಾರವು RSS ಅನ್ನು ನಿಷೇಧಿಸಿತು. RSS ಸರ್ಸಂಘಚಾಲಕ್ ಬಾಲಾಸಾಹೇಬ್ ದಿಯೋರಸ್ ಅವರನ್ನು ಜೂನ್ 30, 1975ರಂದು ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಯಿತು. ದಿಯೋರಸ್ ಅವರನ್ನು ಪುಣೆ ಬಳಿಯ ಯೆರವಾಡ ಜೈಲಿನಲ್ಲಿ ಬಂಧಿಸಲಾಯಿತು. ಹಲವಾರು ಪ್ರಮುಖ RSS ಅಧಿಕಾರಿಗಳು ಮತ್ತು ಸಾವಿರಾರು ಸ್ವಯಂಸೇವಕರನ್ನು ಸಹ ಬಂಧಿಸಲಾಯಿತು. ಜೈಲಿನಲ್ಲಿದ್ದಾಗಲೂ ದಿಯೋರಸ್ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಎರಡು ಬಾರಿ ಪತ್ರ ಬರೆದರು. ಇಂದಿರಾ ಗಾಂಧಿಯವರ ನಿರ್ದೇಶನದ ಮೇರೆಗೆ ಆರ್‌ಎಸ್‌ಎಸ್ ವಿರುದ್ಧ ಆರಂಭಿಸಲಾದ ಮಾನನಷ್ಟ ಮೊಕದ್ದಮೆ ಪ್ರಯತ್ನಕ್ಕೆ ಅವರು ಎರಡೂ ಪತ್ರಗಳಲ್ಲಿ ತಮ್ಮ ಬಲವಾದ ವಿರೋಧವನ್ನು ವ್ಯಕ್ತಪಡಿಸಿದರು. ಇದಾದ ನಂತರ ಇಂದಿರಾ ಗಾಂಧಿಯವರು ಆರ್‌ಎಸ್‌ಎಸ್ ಮೇಲಿನ ನಿಷೇಧವನ್ನು ತೆಗೆದುಹಾಕುವಂತೆ ಸೂಚಿಸಿದರು. 1977ರಲ್ಲಿ ತುರ್ತು ಪರಿಸ್ಥಿತಿ ಕೊನೆಗೊಂಡಿತು ಎಂದು ಘೋಷಿಸಲಾಯಿತು. ಅದಾದ ನಂತರ ಆರ್‌ಎಸ್‌ಎಸ್ ಮೇಲಿನ ನಿಷೇಧವನ್ನು ಕೂಡ ತೆಗೆಯಲಾಯಿತು.
ಡಿಸೆಂಬರ್ 6, 1992ರಂದು ಅಯೋಧ್ಯೆಯಲ್ಲಿ ವಿವಾದಿತ ಬಾಬರಿ ಕಟ್ಟಡದ ಧ್ವಂಸದ ನಂತರ ಆರ್‌ಎಸ್‌ಎಸ್ ಅನ್ನು ಮೂರನೇ ಬಾರಿಗೆ ನಿಷೇಧಿಸಲಾಯಿತು. 6 ತಿಂಗಳೊಳಗೆ ಈ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು. ಸರ್ಕಾರವು ಹೊರಿಸಿದ್ದ ಎಲ್ಲಾ ವಂಚನೆಯ ಆರೋಪಗಳಿಂದ ಆರ್‌ಎಸ್‌ಎಸ್ ಅನ್ನು ಮುಕ್ತಗೊಳಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ