ವ್ಯಕ್ತಿ-ವ್ಯಕ್ತಿತ್ವ: ಬಡತನದಲ್ಲಿ ನೊಂದಿದ್ದ ಮಮತಾ ಬ್ಯಾನರ್ಜಿಗೆ ಹೋರಾಟದ ರಾಜಕೀಯ ರಕ್ತಗತ, ಇಲ್ಲಿದೆ ಮಮತಾ ದೀದಿ ಬದುಕು ಸಾಗಿ ಬಂದ ಹಾದಿ

Mamata Banerjee: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಸಿಎಂ ಮಮತಾ ಬ್ಯಾನರ್ಜಿಗೆ ಮಾಡು ಇಲ್ಲವೇ ಮಡಿ ಹೋರಾಟದ ಸ್ಥಿತಿ. ಈ ಚುನಾವಣೆಯಲ್ಲಿ ಟಿಎಂಸಿ ಬಹುಮತದಿಂದ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ದೇಶದ ಗಮನ ಸೆಳೆಯುವ ಮಟ್ಟಕ್ಕೆ ಬೆಳೆದುನಿಂತ ನಾಯಕಿಯ ವ್ಯಕ್ತಿತ್ವ ಕಟ್ಟಿಕೊಡುವ ಬರಹವಿದು.

ವ್ಯಕ್ತಿ-ವ್ಯಕ್ತಿತ್ವ: ಬಡತನದಲ್ಲಿ ನೊಂದಿದ್ದ ಮಮತಾ ಬ್ಯಾನರ್ಜಿಗೆ ಹೋರಾಟದ ರಾಜಕೀಯ ರಕ್ತಗತ, ಇಲ್ಲಿದೆ ಮಮತಾ ದೀದಿ ಬದುಕು ಸಾಗಿ ಬಂದ ಹಾದಿ
ಮಮತಾ ಬ್ಯಾನರ್ಜಿ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ಆಯೇಷಾ ಬಾನು

Updated on: Apr 02, 2021 | 6:41 AM

ಪಶ್ಚಿಮ ಬಂಗಾಳ ಚುನಾವಣೆ ಈ ಬಾರಿ ಇಡೀ ದೇಶದ ಗಮನ ಸೆಳೆದಿದೆ. ಅಧಿಕಾರ ಉಳಿಸಿಕೊಳ್ಳುವ ಹೋರಾಟದಲ್ಲಿ ಮಮತಾ ಬ್ಯಾನರ್ಜಿ ಮತ್ತು ಅಧಿಕಾರ ಗಳಿಸುವ ತಂತ್ರಗಾರಿಕೆಯಲ್ಲಿ ಒಂದನ್ನೊಂದು ಮೀರಲು ಯತ್ನಿಸುತ್ತಿವೆ. ಬಿಜೆಪಿಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಘಟಾನುಘಟಿ ನಾಯಕರೇ ಖುದ್ದು ಅಖಾಡಕ್ಕಿಳಿದಿದ್ದಾರೆ. ಆದರೂ ಸಮೀಕ್ಷೆಗಳು ಟಿಎಂಸಿಯ ಪರ ಜನರ ಒಲವು ಇರುವನ್ನು ಎತ್ತಿತೋರಿಸಿವೆ. ಬಿಜೆಪಿಗೆ ಈ ಮಟ್ಟದಲ್ಲಿ ಸ್ಪರ್ಧೆ ಒಡ್ಡಿರುವ ಮಮತಾ ಬ್ಯಾನರ್ಜಿ ಬದುಕು ಸಾಗಿಬಂದ ಹಾದಿಯನ್ನು ಈ ಬರಹದಲ್ಲಿ ಟಿವಿ9 ಸುದ್ದಿವಾಹಿನಿಯ ನ್ಯಾಷನಲ್ ಕರೆಸ್ಪಾಂಡೆಂಟ್ ಎಸ್.ಚಂದ್ರಮೋಹನ್ ಕಟ್ಟಿಕೊಟ್ಟಿದ್ದಾರೆ.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಸಿಎಂ ಮಮತಾ ಬ್ಯಾನರ್ಜಿಗೆ ಮಾಡು ಇಲ್ಲವೇ ಮಡಿ ಹೋರಾಟದ ಸ್ಥಿತಿ. ಈ ಚುನಾವಣೆಯಲ್ಲಿ ಟಿಎಂಸಿ ಬಹುಮತದಿಂದ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಆಡಳಿತ ವಿರೋಧಿ ಅಲೆ ಹಾಗೂ ಬಿಜೆಪಿಯ ಹೋರಾಟವನ್ನು ಮೆಟ್ಟಿ ನಿಂತು, ಸತತ ಮೂರನೇ ಬಾರಿಗೆ ಟಿಎಂಸಿ ಅಧಿಕಾರಕ್ಕೆ ಬಂದಂತಾಗುತ್ತೆ. ಟಿಎಂಸಿ ಸೋತರೆ ಕಳೆದ 2016ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 3 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದ್ದ ಬಿಜೆಪಿಗೆ ರಾಜ್ಯದ ಅಧಿಕಾರದ ಪಟ್ಟ ಸಿಕ್ಕು ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಬಾರಿ ತಾವು ಪಶ್ಚಿಮ ಬಂಗಾಳಕ್ಕೆ ತಾವೇ ನಿಜವಾದ ಮಗಳು, ಬಂಗಾಳಕ್ಕೆ ಬಂಗಾಳದ ಮಗಳು ಬೇಕು ಎನ್ನುವುದನ್ನು ಸಾಬೀತುಪಡಿಸಬೇಕು ಎಂದು ಪಣತೊಟ್ಟಿದ್ದಾರೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ: ಟಿವಿ9 ವಿಶೇಷ: ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆ 2021; ಬಂಗಾಳ ಗದ್ದುಗೆ ಯಾರಿಗೆ?

Mamata-Banerjee

ಹೋರಾಟಗಳಿಗೆ ಮಮತಾ ಎಂದೂ ಹಿಂಜರಿದವರಲ್ಲ

ಸ್ಟ್ರೀಟ್ ಫೈಟರ್ ಮಮತಾ ದೀದಿ ಹಾಗೆ ನೋಡಿದರೇ ಸಿಎಂ ಮಮತಾ ಬ್ಯಾನರ್ಜಿಗೆ ಹೋರಾಟಗಳು ಹೊಸತಲ್ಲ. ‘ಸ್ಟ್ರೀಟ್ ಫೈಟರ್’ ಎಂದೇ ಮಮತಾ ಖ್ಯಾತರಾದವರು. ಹಳ್ಳಿಯೇ ಇರಲಿ, ಕೋಲ್ಕತ್ತಾದ ಬೀದಿಯೇ ಇರಲಿ, ದಿಲ್ಲಿಯೇ ಇರಲಿ, ಮಮತಾ ಬೀದಿಗಿಳಿದು ಹೋರಾಟ ಮಾಡಲು ಹಿಂಜರಿದವರಲ್ಲ. 34 ವರ್ಷಗಳ ಕಾಲ ನಿರಂತರವಾಗಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿದ್ದ ಎಡಪಕ್ಷವನ್ನು ಸೋಲಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು 2011ರಲ್ಲಿ ಅಧಿಕಾರಕ್ಕೆ ತಂದವರು ಮಮತಾ ಬ್ಯಾನರ್ಜಿ. ಹೋರಾಟಗಳನ್ನೇ ಚುನಾವಣಾ ತಂತ್ರವಾಗಿ ಬಳಸಿ ಗೆದ್ದವರು ಮಮತಾ.

ನಂದಿಗ್ರಾಮ, ಸಿಂಗೂರ್ ಕ್ಷೇತ್ರಗಳಲ್ಲಿ ಭೂಸ್ವಾಧೀನ ವಿರೋಧಿ ಹೋರಾಟಗಳು ಎಡಪಕ್ಷದ ಸುದೀರ್ಘ ಆಳ್ವಿಕೆಯ ಸರ್ಕಾರದ ಪತನಕ್ಕೆ ಟಿಎಂಸಿ ಬಲವರ್ಧನೆಗೆ ಕಾರಣವಾದವು. ಆದರೆ ಈಗ ಸಿಕ್ಕಿರುವ ಅಧಿಕಾರವನ್ನು ಉಳಿಸಿಕೊಳ್ಳಲು ಈ ವಿಧಾನಸಭಾ ಚುನಾವಣೆಯನ್ನು ಗೆಲ್ಲುವ ಅನಿವಾರ್ಯತೆ ಮಮತಾ ಬ್ಯಾನರ್ಜಿಗೆ ಎದುರಾಗಿದೆ. ಮಮತಾರಿಂದ ಅಧಿಕಾರ ಕಳೆದುಕೊಂಡ ಟಿಎಂಸಿಯ ಹಳೆಯ ಎದುರಾಳಿ ಎಡಪಕ್ಷ ಈಗ ಪಶ್ಚಿಮ ಬಂಗಾಳದಲ್ಲಿ ದುರ್ಬಲವಾಗಿದೆ. ದುರ್ಬಲ ಎಡಪಕ್ಷ ಈಗ ಕಾಂಗ್ರೆಸ್ ಜೊತೆ ಎರಡನೇ ಬಾರಿಗೂ ಮೈತ್ರಿ ಮಾಡಿಕೊಂಡು ಚುನಾವಣಾ ಅಖಾಡಕ್ಕಿಳಿದಿದೆ.

ಇದನ್ನೂ ಓದಿ: ವ್ಯಕ್ತಿ-ವ್ಯಕ್ತಿತ್ವ: ಟಿಎಂಸಿಯಲ್ಲಿ ಬೆಳೆದ ಸುವೇಂದು ಅಧಿಕಾರಿ ಈಗ ಬಿಜೆಪಿಯ ದೊಡ್ಡ ಅಸ್ತ್ರ

Mamata-Banerjee

1984ರಲ್ಲಿ ಮೊದಲ ಬಾರಿಗೆ ಸಂಸದೆಯಾದಾಗ ಮಮತಾ ಬ್ಯಾನರ್ಜಿ

ಬಂಗಾಳದಲ್ಲಿ ಪ್ರಬಲವಾಗುತ್ತಿರುವ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷ ಹಾಗೂ ಕಾಂಗ್ರೆಸ್ ದುರ್ಬಲವಾದಷ್ಟು ಬಿಜೆಪಿ ಪ್ರಬಲವಾಗುತ್ತಿದೆ. ಇದು ಪ್ರತಿಯೊಂದು ಚುನಾವಣೆಯಲ್ಲೂ ಸಾಬೀತಾಗುತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 2 ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ, 2019ರ ಲೋಕಸಭಾ ಚುನಾವಣೆಯಲ್ಲಿ 18 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 18 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಬಹುಮತ ಸಿಕ್ಕಿರುವ ವಿಧಾನಸಭಾ ಕ್ಷೇತ್ರಗಳನ್ನು ಗಣನೆಗೆ ತೆಗೆದುಕೊಂಡರೆ ಬಿಜೆಪಿಗೆ ಮ್ಯಾಜಿಕ್ ನಂಬರ್ ಆದ 148ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ.

ಆದರೆ ಜನರು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಪಕ್ಷಕ್ಕೆ ವಿಧಾನಸಭಾ ಚುನಾವಣೆಯಲ್ಲಿಯೂ ಮತ ಚಲಾಯಿಸುತ್ತಾರೆ ಎಂದು ಹೇಳಲು ಆಗುವುದಿಲ್ಲ. ಜನರು ಲೋಕಸಭಾ ಚುನಾವಣೆಗೆ ಒಂದು ನಿಲುವು, ವಿಧಾನಸಭಾ ಚುನಾವಣೆಗೆ ಮತ್ತೊಂದು ನಿಲುವು ತೆಗೆದುಕೊಳ್ತಾರೆ ಎನ್ನುವುದಕ್ಕೆ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಸಾಕ್ಷಿ. 2019ರಲ್ಲಿ ದೇಶಕ್ಕೆ ಪ್ರಧಾನಿಯಾಗಿ ಮೋದಿ ಇರಲಿ ಎಂದು ಬಿಜೆಪಿ ಬೆಂಬಲಿಸಿದವರು, 2020ರಲ್ಲಿ ದೆಹಲಿಗೆ ಸಿಎಂ ಆಗಿ ಕೇಜ್ರಿವಾಲ್ ಇರಲಿ ಎಂದು ಆಮ್ ಆದ್ಮಿ ಪಕ್ಷವನ್ನು (ಆಪ್) ಪಕ್ಷ ಬೆಂಬಲಿಸಿದ್ದರು. ಹೀಗಾಗಿ ಈ ಬಾರಿ ಪಶ್ಚಿಮ ಬಂಗಾಳದ ಮತದಾರನ ಒಲವು ಯಾರತ್ತ ಎನ್ನುವುದು ಕೋಟಿ ರೂಪಾಯಿಯ ಪ್ರಶ್ನೆಯಾಗಿದೆ.

ಮಮತಾ ಬ್ಯಾನರ್ಜಿ ಈಗ ಪಶ್ಚಿಮ ಬಂಗಾಳ ಮಾತ್ರವಲ್ಲದೇ, ಇಡೀ ದೇಶದಲ್ಲಿ ಮಮತಾ ದೀದಿ ಎಂದೇ ಕರೆಸಿಕೊಳ್ತಾರೆ. ದೀದಿ ಅಂದರೇ ಸೋದರಿ ಎಂದರ್ಥ. ಮಮತಾ ಬ್ಯಾನರ್ಜಿ ಧೀಡೀರನೇ ಒಂದೆರೆಡು ಹೋರಾಟದಿಂದ ನಾಯಕಿಯಾಗಿ ಹೊರಹೊಮ್ಮಿದವರಲ್ಲ. 40-45 ವರ್ಷಗಳ ಕಾಲ ಸುದೀರ್ಘ ಹೋರಾಟ ನಡೆಸಿದ್ದಾರೆ. 1975ರಲ್ಲಿ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಕಾರಿನಲ್ಲಿ ಪ್ರತಿಭಟನಾರ್ಥ ಡಾನ್ಸ್ ಮಾಡುವ ಮೂಲಕ ಜನರು, ಮಾಧ್ಯಮಗಳ ಗಮನ ಸೆಳೆದು ಪತ್ರಿಕೆಗಳಲ್ಲಿ ಹೆಡ್ಲೈನ್ ಆದವರು. ಕೋಲ್ಕತ್ತಾ ಮಾತ್ರವಲ್ಲದೇ, ಲೋಕಸಭೆಯಲ್ಲೂ ಕುರ್ಚಿ ಮೇಲೆ ಹತ್ತಿ ಪ್ರತಿಭಟನೆ ನಡೆಸುತ್ತಿದ್ದರು ಎಂದು ನಮ್ಮ ಕರ್ನಾಟಕದ ಹಿರಿಯ ಸಂಸದರು ಈಗಲೂ ನೆನೆಪಿಸಿಕೊಳ್ಳುತ್ತಾರೆ. ದೆಹಲಿಯಲ್ಲಿ ಸಂಸತ್ ಭವನದ ಒಳಗೆ, ಹೊರಗೆ ಹೋರಾಟ, ಪ್ರತಿಭಟನೆ ನಡೆಸುವುದರಲ್ಲಿ ಮಮತಾ ದೀದಿ ಸದಾ ಮುಂದಿರುತ್ತಿದ್ದರು. ಅಂದಿನಿಂದ ಇಂದಿನವರೆಗೂ ಮಮತಾ ಹೋರಾಟದ ಸ್ಪಿರಿಟ್ ಕಡಿಮೆಯಾಗಿಲ್ಲ. ಮಮತಾ ಬ್ಯಾನರ್ಜಿ ಈಗ ದೇಶದ ದೀದಿ.

ಪಶ್ಚಿಮ ಬಂಗಾಳದಲ್ಲಿ 2011ರಿಂದ ನಿರಂತರವಾಗಿ ಎರಡು ಅವಧಿಗೆ ಸಿಎಂ ಆಗಿರುವ ಮಮತಾ ಬ್ಯಾನರ್ಜಿಗೆ 2021ರ ಈ ವಿಧಾನಸಭಾ ಚುನಾವಣೆ ಗೆಲ್ಲುವುದು ಸುಲಭವಲ್ಲ. ಮಮತಾ ಬ್ಯಾನರ್ಜಿ ತಮ್ಮ ಆಡಳಿತವನ್ನ ಮೂರು ‘ಮಾ’ಗಳ ಆಧಾರದ ಮೇಲೆ ನಡೆಸಿದವರು. ಮಾ, ಮಾತಿ, ಮನುಷ್ಯ ಅವರ ರಾಜಕಾರಣದ ಸೂತ್ರ. ಇದನ್ನು ಕನ್ನಡದಲ್ಲಿ ಹೇಳುವುದಾದರೆ ತಾಯಿ, ಭೂಮಿ ಮತ್ತು ಜನರಿಗೆ ಆದ್ಯತೆ ನೀಡುವುದು ಎಂದಾಗುತ್ತದೆ. ಮೊನ್ನೆ ಕೂಡ ದೇವಾಲಯದಲ್ಲಿ ಅರ್ಚಕರು ತಮ್ಮ ಗೋತ್ರ ಯಾವುದು ಎಂದು ಕೇಳಿದಾಗ, ಮಾ, ಮಾತಿ, ಮನುಷ್ಯ ಎಂದು ಹೇಳಿದೆ ಎಂದು ಮಮತಾ ದೀದಿ ಹೇಳಿದ್ದರು.

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ಪಶ್ಚಿಮ ಬಂಗಾಳದಲ್ಲಿ ಹಾಲಿ ಸಂಸದರು, ಅರ್ಥಶಾಸ್ತ್ರಜ್ಞ, ಸಿನಿಮಾ ತಾರೆಯರನ್ನು ಕಣಕ್ಕಿಳಿಸಿದ ಬಿಜೆಪಿ

Mamata-Banerjee

1991ರ ಚುನಾವಣಾ ಪ್ರಚಾರದಲ್ಲಿ ಮಮತಾ ಬ್ಯಾನರ್ಜಿ

ಮಮತಾ ದೀದಿಗೆ ಹೊಸ ಸವಾಲು ಈ ಭಾರಿ ಬಂಗಾಳದ ಚುನಾವಣೆಯಲ್ಲಿ ಮೂರು ‘ಎಂ’ ವಿಚಾರಗಳಿವೆ. ಪಶ್ಚಿಮ ಬಂಗಾಳ ರಾಜಕೀಯ ಭವಿಷ್ಯವನ್ನೂ ಈ ಮೂರು ‘ಎಂ’ಗಳೇ ನಿರ್ಧರಿಸುತ್ತವೆ. ಆ ಮೂರು ವಿಚಾರಗಳೆಂದರೆ ಮಮತಾ, ಮೋದಿ ಮತ್ತು ಮುಸ್ಲಿಂ. ಮಮತಾ ಬ್ಯಾನರ್ಜಿಗೆ ಒಂದೆಡೆ ಬಂಗಾಳದಲ್ಲಿ ಮೋದಿಯ ಜನಪ್ರಿಯತೆಯನ್ನು ಕೌಂಟರ್ ಮಾಡಬೇಕು. ಮತ್ತೊಂದೆಡೆ ತಮ್ಮ ಪಕ್ಷದ ಆಧಾರವಾಗಿರುವ ಮುಸ್ಲಿಂ ವೋಟ್ ಬ್ಯಾಂಕ್ ಈ ಬಾರಿ ಕಾಂಗ್ರೆಸ್-ಎಡಪಕ್ಷ-ಇಂಡಿಯನ್ ಸೆಕ್ಯೂಲರ್ ಫ್ರಂಟ್ನತ್ತ ಹೋಗದಂತೆ ನೋಡಿಕೊಳ್ಳಬೇಕು ಎಂಬ ಸವಾಲುಗಳಿವೆ. ಪಶ್ಚಿಮ ಬಂಗಾಳದಲ್ಲಿ ಶೇ 27 ರಿಂದ ಶೇ 30ರಷ್ಟು ಮುಸ್ಲಿಂ ಸಮುದಾಯದ ಮತಗಳಿವೆ. ಈ ಮತಗಳೇ ಟಿಎಂಸಿಯ ಪ್ರಮುಖ ವೋಟ್ ಬ್ಯಾಂಕ್.

ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಪಶ್ಚಿಮ ಬಂಗಾಳದಲ್ಲಿ ತಮ್ಮ ಎಂಐಎಂ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದ್ದಾರೆ. ಜೊತೆಗೆ ಇಂಡಿಯನ್ ಸೆಕ್ಯೂಲರ್ ಫ್ರಂಟ್ ಕೂಡ ಮುಸ್ಲಿಂ ಸಮುದಾಯದಲ್ಲಿ ಜನಪ್ರಿಯತೆ ಹೊಂದಿದೆ. ಈ ಎರಡು ಪಕ್ಷಗಳು ಮುಸ್ಲಿಂ ಮತ ಪಡೆದಷ್ಟು ಟಿಎಂಸಿ ಮತಗಳೇ ಇಬ್ಬಾಗ ಆಗಲಿವೆ. ಬಿಜೆಪಿಗೆ ಭರ್ಜರಿ ಲಾಭವಾಗಲಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟದ ಮತಗಳನ್ನ ಇಬ್ಬಾಗ ಮಾಡಿದ್ದೇ ಅಸಾದುದ್ದೀನ್ ಓವೈಸಿ ಅವರ ಎಂಐಎಂ ಪಕ್ಷ ಎನ್ನುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಬಿಹಾರದಲ್ಲಿ ಮುಸ್ಲಿಂ ಮತಗಳು ಇಬ್ಭಾಗವಾದಂತೆ ಪಶ್ಚಿಮ ಬಂಗಾಳದಲ್ಲೂ ಆದರೆ ಮಮತಾಗೆ ಸಂಕಷ್ಟ ತಪ್ಪಿದ್ದಲ್ಲ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದೆ. ಹಿಂದುತ್ವದ ಆಧಾರದ ಮೇಲೆ ಮತ ಕ್ರೋಡೀಕರಣವಾದರೆ ಮಮತಾ ದೀದಿ ಸಿಎಂ ಹುದ್ದೆಯಿಂದ ಕೆಳಗಿಳಿಯಬೇಕಾಗುತ್ತೆ. ಹೀಗಾಗಿಯೇ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ಭಾಷಣದಲ್ಲಿ ತಾವು ಕೂಡ ಬ್ರಾಹ್ಮಣ ಹೆಣ್ಣು ಮಗಳು ಎಂದು ಹೇಳಿಕೊಂಡಿದ್ದಾರೆ. ಪ್ರಚಾರ ಸಭೆಯಲ್ಲಿ ಚಂಡೀ ಮಂತ್ರಗಳನ್ನು ಪಠಣ ಮಾಡಿದ್ದಾರೆ. ತಾವು ಶ್ಯಾಂಡಿಲ್ಯಾ ಗೋತ್ರದವರು ಎಂದಿದ್ದಾರೆ. ಶ್ಯಾಂಡಿಲ್ಯಾ ಗೋತ್ರಾ ಶ್ರೇಷ್ಠ ಎಂಟು ಗೋತ್ರಗಳಲ್ಲಿ ಒಂದು. ಈ ಮೂಲಕ ಮೇಲ್ವರ್ಗದ ಹಿಂದೂ ಮತಗಳನ್ನು ಸೆಳೆಯಲು ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ಲೇಷಣೆ | ಪಶ್ಚಿಮ ಬಂಗಾಳ ಕದನ ಕಣ; ಮೊದಲ ಹಂತದಲ್ಲಿ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ

Mamata-Banerjee

ಮಮತಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ಹೀಗೆ. ಕಾಟನ್ ಸೀರೆ, ನೀಲಿ ಬ್ಯಾಗ್.

ಮಮತಾ ಬದುಕು ಸಾಗಿ ಬಂದ ಹಾದಿ ಟಿಎಂಸಿ ಪಕ್ಷದ ಅಧಿನಾಯಕಿಯಾಗಿರುವ ಮಮತಾ ಬ್ಯಾನರ್ಜಿ ರಾಜಕೀಯ ಜೀವನ ಆರಂಭಿಸಿದ್ದು ಕಾಂಗ್ರೆಸ್ ಪಕ್ಷದಿಂದ. 1970ರಲ್ಲಿ ಮಮತಾ ಬ್ಯಾನರ್ಜಿ ಬಂಗಾಳದ ಯುವ ಕಾಂಗ್ರೆಸ್ ನಾಯಕಿಯಾಗಿದ್ದರು. ಬಂಗಾಳದ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಳಿಕ ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದರು. 1984ರಲ್ಲಿ 8ನೇ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಕಿರಿಯ ವಯಸ್ಸಿಗೆ ಲೋಕಸಭಾ ಸದಸ್ಯೆಯಾದರು. 1984ರ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಪ್ರಣವ್ ಮುಖರ್ಜಿ ವಿರೋಧಿಸಿದ್ದರು. ಆದರೂ, ಮಮತಾ ಬ್ಯಾನರ್ಜಿಗೆ ಆಗ ಟಿಕೆಟ್ ನೀಡಲಾಗಿತ್ತು.

ತಮಗೆ ಲೋಕಸಭಾ ಟಿಕೆಟ್ ನೀಡಿಕೆಗೆ ವಿರೋಧಿಸಿದ್ದ ಬಂಗಾಳದವರೇ ಆದ ಪ್ರಣವ್ ಮುಖರ್ಜಿ ಮುಂದಿನ ದಿನಗಳಲ್ಲಿ ಯುಪಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದರು. ಆಗ ಪ್ರಣವ್ ದಾದಾ ಅಭ್ಯರ್ಥಿಯಾಗುವುದುನ್ನು ವಿರೋಧಿಸಿ ಮಮತಾ ಮತ ಚಲಾಯಿಸಿದ್ದರು. ಪಶ್ಚಿಮ ಬಂಗಾಳದ ಪ್ರಣವ್ ಮುಖರ್ಜಿ ದೇಶದ ರಾಷ್ಟ್ರಪತಿ ಆಗೋದು ಬಂಗಾಳಕ್ಕೆ ಹೆಮ್ಮೆಯ ವಿಷಯ ಎಂದು ಮಮತಾ ಹೇಳಬಹುದಿತ್ತು. ಆದರೇ, ಹಾಗೆ ಮಮತಾ ಹೇಳಲಿಲ್ಲ. 1984ರಲ್ಲಿ ತಮ್ಮ ರಾಜಕೀಯ ಮೆಟ್ಟಿಲು ಹತ್ತುವಾಗ ಪ್ರಣವ್ ವಿರೋಧಿಸಿದ್ದನ್ನು ಮಮತಾ ಮರೆತಿರಲಿಲ್ಲ.

ಕಾಂಗ್ರೆಸ್ ಪಕ್ಷದೊಂದಿಗಿನ ಭಿನ್ನಾಭಿಪ್ರಾಯ, ನಾಯಕತ್ವದ ಗೊಂದಲದಿಂದಾಗಿ ಮಮತಾ ಬ್ಯಾನರ್ಜಿ 1997ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದರು. ಮಮತಾ ಬ್ಯಾನರ್ಜಿ ಮೂವರು ಪ್ರಧಾನಮಂತ್ರಿಗಳ ಜೊತೆಗೆ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳೆರೆಡರಲ್ಲೂ ಮಮತಾ ಬ್ಯಾನರ್ಜಿ ಕ್ಯಾಬಿನೆಟ್ ಸಚಿವೆಯಾಗಿ ಕೆಲಸ ಮಾಡಿದ್ದಾರೆ. ಕೇಂದ್ರದಲ್ಲಿ ಮಾನವ ಸಂಪನ್ಮೂಲ, ಯುವಜನಸೇವಾ ಖಾತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಗಣಿ, ರೈಲ್ವೆ ಖಾತೆಯಂಥ ಪ್ರಮುಖ ಖಾತೆಗಳನ್ನು ಮಮತಾ ಬ್ಯಾನರ್ಜಿ ನಿರ್ವಹಿಸಿದ್ದಾರೆ. ಭಾರತದಲ್ಲಿ ರೈಲ್ವೆ ಇಲಾಖೆ ಸಚಿವರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಮಮತಾ ದೀದಿಗೆ ಸಲ್ಲುತ್ತೆ. 2012ರಲ್ಲಿ ಟೈಮ್ಸ್ ಮ್ಯಾಗಜೀನ್ ಮಾಡಿದ್ದ ವಿಶ್ವದ ನೂರು ಪ್ರಭಾವಿ ವ್ಯಕ್ತಿಗಳಲ್ಲಿ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿ ಅವರ ಹೆಸರೂ ಸೇರಿತ್ತು.

ಇದನ್ನೂ ಓದಿ: Fact Check: ಪಶ್ಚಿಮ ಬಂಗಾಳದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಜನರನ್ನು ಆಕರ್ಷಿಸಲು ಖಾಲಿ ಕುರ್ಚಿಯಲ್ಲಿ ಊಟದ ಪೊಟ್ಟಣ, ವೈರಲ್ ಆಗಿದ್ದು ಹಳೇ ಫೋಟೊ

Mamata-Banerjee

ಬಿಜೆಪಿ ನಾಯಕ, ದಿವಂಗತ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರೊಂದಿಗೆ ಮಮತಾಗೆ ಸೌಹಾರ್ದ ಸಂಬಂಧವಿತ್ತು. ಆದರೆ ಇಂದು ಬಿಜೆಪಿಗೆ ಮಮತಾ ಅತಿದೊಡ್ಡ ರಾಜಕೀಯ ಎದುರಾಳಿ.

ಮಮತಾ ಜೀವನದ ಕಲ್ಲುಮುಳ್ಳಿನ ಹಾದಿ ಮಮತಾ ಬ್ಯಾನರ್ಜಿ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ. ಕಲ್ಲುಮುಳ್ಳಿನ ಹಾದಿಯಲ್ಲಿ ನಡೆದು ಬಂದಿದ್ದಾರೆ. ಕೋಲ್ಕತ್ತಾದ ಕೆಳ ಮಧ್ಯಮ ವರ್ಗದಲ್ಲಿ ಹುಟ್ಟಿದವರು ಮಮತಾ ಬ್ಯಾನರ್ಜಿ. ತಂದೆ ಬಡತನದ ಕೂಪಕ್ಕೆ ಸಿಲುಕಿ ನಲುಗಿ ಹೋಗಿದ್ದರು. ಬಡತನದಿಂದ ಹೊರಬರಲು ಹಾಲು ಮಾರುತ್ತಿದ್ದರು. ಮಮತಾ ಬ್ಯಾನರ್ಜಿ 17 ವರ್ಷದವರಿದ್ದಾಗ ಅವರ ತಂದೆ ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದರು. ಆದರೆ, ಮಮತಾ ಬ್ಯಾನರ್ಜಿಯ ಅಂತರಾಳದಲ್ಲಿ ಹೋರಾಟದ ಮನೋಭಾವ ಇದ್ದೇ ಇತ್ತು. ತಮ್ಮ ಶಿಕ್ಷಣ ಮುಂದುವರೆಸಿದ ಮಮತಾ ಬ್ಯಾನರ್ಜಿ ಪದವಿ ಪಡೆದರು. ಬಳಿಕ ಇಸ್ಲಾಮಿಕ್ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಜೊತೆಗೆ ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲೂ ಪದವಿ ಪೂರೈಸಿದ್ದರು. ರಾಜಕೀಯ ಪ್ರವೇಶಿಸುವ ಮೊದಲು ಮಮತಾ ಬ್ಯಾನರ್ಜಿ ಜೀವನ ನಿರ್ವಹಣೆಗಾಗಿ ಸ್ಟೆನೋಗ್ರಾಫರ್ ಆಗಿದ್ದರು. ಹಣ ಸಂಪಾದನೆಗಾಗಿ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದರು.

ಮಮತಾ ಬ್ಯಾನರ್ಜಿ ಅವಿವಾಹಿತೆ. ಅವರ ಲೈಫ್ ಸ್ಟೈಲ್ ಇಡೀ ದೇಶದ ಜನರ ಗಮನ ಸೆಳೆದಿದೆ. ಯಾವಾಗಲೂ ಬಿಳಿ ಕಾಟನ್ ಸೀರೆ ಮತ್ತು ಚಪ್ಪಲಿ ಧರಿಸುತ್ತಾರೆ. ಇದು ಮಮತಾ ದೀದಿಯ ಸ್ಟೈಲ್​ನ ಬ್ರಾಂಡ್. ಮಮತಾ ಬ್ಯಾನರ್ಜಿ ಸರಳತೆಗೆ ಒತ್ತು ಕೊಡ್ತಾರೆ. ಅದ್ದೂರಿ, ಅಡಂಬರದ ಜೀವನ ಶೈಲಿಗೆ ಮೊರೆ ಹೋಗಿಲ್ಲ. ಕಳೆದ ಹತ್ತು ವರ್ಷಗಳಿಂದ ಪಶ್ಚಿಮ ಬಂಗಾಳದಂಥ ದೊಡ್ಡ ರಾಜ್ಯದ ಸಿಎಂ ಆಗಿದ್ದಾರೆ. ಕೋಲ್ಕತ್ತಾದ ಐಷಾರಾಮಿ ಬಡಾವಣೆಯ ಐಷಾರಾಮಿ ಬಂಗಲೆಯಲ್ಲಿ ಮಮತಾ ವಾಸಿಸಬಹುದಿತ್ತು. ಐಷಾರಾಮಿತನಕ್ಕೆ ಗುಡ್ ಬೈ ಹೇಳಿರುವ ಮಮತಾ, ತಮ್ಮ ಪೂರ್ವಜರ ಹಳೆಯ ಹೆಂಚಿನ ಮನೆಯಲ್ಲೇ ಇಂದಿಗೂ ವಾಸ ಇದ್ದಾರೆ.

ಕೋಲ್ಕತ್ತಾದ ಹರೀಶ್ ಚಟರ್ಜಿ ರಸ್ತೆಯು ನಮ್ಮ ಬೆಂಗಳೂರಿನ ಸ್ಲಂನಂಥ ಏರಿಯಾ. ಅಂಥ ಏರಿಯಾದಲ್ಲೇ ಈಗಲೂ ಅವರ ಜೀವನ ನಡೆಯುತ್ತಿದೆ. ಚಿತ್ರಗಳನ್ನು ಬರೆಯುವ ಮಮತಾ ಸ್ವತಃ ಕವಯತ್ರಿ, ಬರಹಗಾರ್ತಿಯೂ ಹೌದು. ನೂರಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. ಮಮತಾ ದೀದಿ ಕಾಲಕ್ಕೆ ತಕ್ಕಂತೆ ಟೆಕ್ಸ್ಯಾವಿ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿರುತ್ತಾರೆ. ದೀದಿ, ಹತ್ತಾರು ಕಿಲೋಮೀಟರ್ ವಾಕಿಂಗ್ ಮಾಡಲು ಕೂಡ ರೆಡಿ. ಮನೆಯಲ್ಲಿ ಟ್ರೆಡ್ ಮಿಲ್ ನಲ್ಲಿ ನಿತ್ಯ ಐದಾರು ಕಿಲೋಮೀಟರ್​ಗಳಷ್ಟು ನಡೆಯುತ್ತಾರೆ. ಮಮತಾ ಬ್ಯಾನರ್ಜಿಗೆ ಸಂಜೆ ಹೊತ್ತು ಸ್ನಾಕ್ಸ್ ಗೆ ಟೀ, ಆಲೂಗೆಡ್ಡೆ ಅಂದರೆ ಇಷ್ಟವಂತೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಕದನ ಕಣ: ಮೊದಲ ಹಂತದ ಚುನಾವಣೆಯಲ್ಲಿ ಈ 5 ಕ್ಷೇತ್ರಗಳೇ ನಿರ್ಣಾಯಕ

Mamata-Banerjee

1991ರಲ್ಲಿ ಸಿಪಿಐ ಗೂಂಡಾಗಳಿಂದ ಮಮತಾ ಮೇಲೆ ಹಲ್ಲೆ.

ಮೇ 2ಕ್ಕೆ ಫಲಿತಾಶ ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಎರಡು ಹಂತಗಳ ಮತದಾನ ಮುಗಿದಿದೆ. ಏಪ್ರಿಲ್ 6ಕ್ಕೆ 3ನೇ ಹಂತದ ಮತದಾನ ನಡೆಯಲಿದೆ. ಏಪ್ರಿಲ್ 29ಕ್ಕೆ ಆಂತಿಮ ಅಂದರೆ 8ನೇ ಹಂತದ ಮತದಾನ ನಡೆಯಲಿದೆ. 294 ಸದಸ್ಯಬಲದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಫಲಿತಾಂಶ ಮೇ 2ಕ್ಕೆ ಘೋಷಣೆಯಾಗಲಿದೆ. ಅಧಿಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 148. ಟಿಎಂಸಿ ಗೆದ್ದರೆ ಮಮತಾ ಬ್ಯಾನರ್ಜಿ 3ನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಾರೆ. ಈ ಮೂಲಕ ರಾಷ್ಟ್ರ ರಾಜಕಾರಣದಲ್ಲಿಯೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತಾರೆ. ಒಂದು ವೇಳೆ ಬಿಜೆಪಿ ಗೆದ್ದರೆ ಅದು ಎಷ್ಟು ಮತಗಳ ಅಂತರದಿಂದ ಎನ್ನುವುದರ ಮೇಲೆ ಫಲಿತಾಂಶದ ವಿಶ್ಲೇಷಣೆಗಳು ಗರಿಗೆದರುತ್ತವೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೇಲುಗೈ ಸಾಧಿಸಿತು. ಮಮತಾರ ಓಟಕ್ಕೆ ಕಡಿವಾಣ ಹಾಕಲು ಎಡಪಕ್ಷಗಳು ತಮ್ಮ ಮತವನ್ನು ಬಿಜೆಪಿಗೆ ವರ್ಗಾಯಿಸಿದ್ದೇ ಕಾರಣ ಎಂಬ ಮಾತುಗಳು ಕೇಳಬಂದಿದ್ದವು. ಆದರೆ ಈ ಬಾರಿ ಹಾಗಾಗದು ಎಂಬ ಮಾತುಗಳಿವೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಈ ಬಾರಿ ಕಂಡು ಬಂದಿರುವ ಮತ್ತೊಂದು ಮುಖ್ಯ ಬೆಳವಣಿಗೆಯೆಂದರೆ ಬಿಜೆಪಿಯು ರಾಷ್ಟ್ರೀಯ ಭದ್ರತೆ, ಗಡಿಯಲ್ಲಿ ಆತಂಕ, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ ಸೇರಿದಂತೆ ಈ ಹಿಂದಿನ ಚುನಾವಣೆಗಳಲ್ಲಿ ಬಳಸಿದ್ದ ಯಾವುದೇ ಅಂಶಗಳನ್ನು ಪ್ರಧಾನವಾಗಿ ಪ್ರಸ್ತಾಪಿಸುತ್ತಿಲ್ಲ. ಅಷ್ಟರಮಟ್ಟಿಗೆ ಬಿಜೆಪಿಯ ತಂತ್ರಗಾರಿಕೆಯೂ ಬದಲಾಗಿದೆ. ಇದಕ್ಕೂ ಸ್ಥಳೀಯ ಮಟ್ಟದಲ್ಲಿ ಮಮತಾ ಹೊಂದಿರುವ ಪ್ರಭಾವವೇ ಕಾರಣವಲ್ಲವೇ?

Profile of Mamata Banerjee Mass Leader of Trinamool Congress Popular in West Bengal Politics

ಇದನ್ನೂ ಓದಿ: ಬಾಂಗ್ಲಾದೇಶಕ್ಕೆ ಪ್ರಧಾನಿ ಮೋದಿ ಭೇಟಿ; ಪಶ್ಚಿಮ ಬಂಗಾಳ ಮತದಾರರ ಮೇಲೆ ಪ್ರಭಾವ ಸಾಧ್ಯತೆ

ಇದನ್ನೂ ಓದಿ: ಪಶ್ಚಿಮ ಬಂಗಾಳ ಬಿಜೆಪಿ ಚುನಾವಣಾ ಪ್ರಣಾಳಿಕೆ; ಸೋನಾರ್ ಬಾಂಗ್ಲಾ ಕನಸು ಪುನರುಚ್ಚರಿಸಿದ ಅಮಿತ್ ಶಾ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ