Rahul gandhi: ರಾಹುಲ್ ಗಾಂಧಿ ದಿಢೀರನೇ ರಾಜಕೀಯವಾಗಿ ಸಕ್ರಿಯ; ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಹೋರಾಡಲು ಸನ್ನದ್ಧ

Rahul gandhi: ರಾಹುಲ್ ಗಾಂಧಿ ದಿಢೀರನೇ ರಾಜಕೀಯವಾಗಿ ಸಕ್ರಿಯ; ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಹೋರಾಡಲು ಸನ್ನದ್ಧ
ರಾಹುಲ್ ಗಾಂಧಿ ದಿಢೀರನೇ ರಾಜಕೀಯವಾಗಿ ಸಕ್ರಿಯ; ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಹೋರಾಡಲು ಸನ್ನದ್ಧ

ರಾಹುಲ್ ಗಾಂಧಿ, ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಅಧಿವೇಶನದಲ್ಲಿ ಭಾಗಿಯಾಗಲ್ಲ. ಸದ್ದಿಲ್ಲದೇ ವಿದೇಶ ಪ್ರವಾಸ ಹೋಗಿಬಿಡ್ತಾರೆ. ರಾಹುಲ್ ಗಾಂಧಿ ಸೀರಿಯಸ್ಸ್ ರಾಜಕಾರಣಿಯೇ ಅಲ್ಲ. ಮೋದಿ ಸರ್ಕಾರದ ವಿರುದ್ಧ ಹೋರಾಡುವ ಸಂದರ್ಭದಲ್ಲಿ ನಾಪತ್ತೆಯಾಗಿಬಿಡ್ತಾರೆ ಎಂಬೆಲ್ಲಾ ಟೀಕೆಗಳಿದ್ದವು. ಆದರೇ, ಈಗ ಮೋದಿ ಸರ್ಕಾರದ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುವ ಸೂಚನೆಯನ್ನು ರಾಹುಲ್ ಗಾಂಧಿ ನೀಡುತ್ತಿದ್ದಾರೆ.

S Chandramohan

| Edited By: sadhu srinath

Aug 03, 2021 | 2:35 PM

ದೇಶದ ರಾಜಕಾರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇಷ್ಟವಿಲ್ಲದ, ಮನಸ್ಸಿಲ್ಲದ ನಾಯಕ ಅಂತಾನೇ ಕರೆಯಲಾಗುತ್ತೆ. ಇಂಥ ರಾಹುಲ್ ಗಾಂಧಿ ಹೀಗೆ ಒಂದು ವಾರದಿಂದ ರಾಜಕಾರಣದಲ್ಲಿ ಬಾರಿ ಸಕ್ರಿಯರಾಗಿದ್ದಾರೆ. ಸಂಸತ್‌ ಒಳಗೆ, ಹೊರಗೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟದ ಅಖಾಡಕ್ಕಿಳಿದಿದ್ದಾರೆ. ರಾಹುಲ್ ಗಾಂಧಿ ಈಗ ಹೊಸ ಅವತಾರದೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಇದರಿಂದಾಗಿ ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರಾ? ಎಂಬ ಚರ್ಚೆಯೂ ನಡೆಯುತ್ತಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧಿಡೀರನೇ ರಾಜಕೀಯವಾಗಿ ಸಕ್ರಿಯವಾಗಿದ್ದಾರೆ. ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ರಾಹುಲ್ ಗಾಂಧಿ ತಮ್ಮ ಕಾಂಗ್ರೆಸ್ ಪಕ್ಷದ ಸಂಸದರೊಂದಿಗೆ ಮಾತ್ರ ಸೇರಿ ಚರ್ಚೆ, ಸಭೆ ನಡೆಸುತ್ತಿದ್ದರು. ಆದರೆ, ಈ ಬಾರಿಯ ಮಾನ್ಸೂನ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ‘ಹೊಸ ಅವತಾರ’ ದೊಂದಿಗೆ ಪ್ರತ್ಯಕ್ಷವಾಗಿದ್ದಾರೆ.

ಈ ಬಾರಿ ಕೇವಲ ಕಾಂಗ್ರೆಸ್ ಸಂಸದರು ಮಾತ್ರವಲ್ಲ, ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸುತ್ತಿದ್ದಾರೆ. ಕಳೆದ ವಾರ ಸಂಸತ್ ಭವನದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ನಡೆದ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದರು. ವಿರೋಧ ಪಕ್ಷಗಳ ಅಭಿಪ್ರಾಯವನ್ನು ಕೇಳಿದ್ದು ಖುಷಿಕೊಟ್ಟಿದೆ ಎಂದು ಸಭೆಯ ಬಳಿಕ ರಾಹುಲ್ ಹೇಳಿದ್ದರು.

ಇನ್ನೂ ಇವತ್ತು ರಾಹುಲ್ ಗಾಂಧಿ ದೆಹಲಿಯ ಪಾರ್ಲಿಮೆಂಟ್ ಸಮೀಪವೇ ಇರುವ ಕಾನ್ಸ್ ಟಿಟ್ಯೂಷನ್ ಕ್ಲಬ್ ನಲ್ಲಿ ಬೆಳಿಗ್ಗೆ ವಿರೋಧ ಪಕ್ಷಗಳ ಸಂಸದರೊಂದಿಗೆ ಬ್ರೇಕ್ ಫಾಸ್ಟ್ ಸಭೆ ನಡೆಸಿದ್ದಾರೆ. ಈ ಸಭೆ ಕರೆದಿದ್ದು ರಾಹುಲ್ ಗಾಂಧಿ. ಬಿಎಸ್ಪಿ ಹಾಗೂ ಆಪ್ ಪಕ್ಷ ಹೊರತುಪಡಿಸಿ ಉಳಿದೆಲ್ಲಾ ವಿರೋಧ ಪಕ್ಷಗಳ ಸಂಸದರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಪೆಗಾಸಸ್ ಸ್ಪೈವೇರ್ ಗೂಢಚಾರಿಕೆ, ಬೆಲೆ ಏರಿಕೆ, ಇಂಧನ ದರ ಏರಿಕೆ, ಲಸಿಕೆಯ ಕೊರತೆ, ಕೊರೊನಾದ 2ನೇ ಅಲೆ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ಧ ಸಂಸತ್ ಒಳಗೆ ಹೋರಾಟ ನಡೆಸುವ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಗಿದೆ.

ಎನ್‌ಸಿಪಿ ಪಕ್ಷದ ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್, ಎಸ್ಪಿ ಪಕ್ಷದ ರಾಮ ಗೋಪಾಲ್ ಯಾದವ್, ಆರ್‌ಜೆಡಿ ನಾಯಕರು, ಡಿಎಂಕೆ, ಟಿಎಂಸಿ ಪಕ್ಷದ ಸಂಸದರು ಸೇರಿದಂತೆ ವಿರೋಧ ಪಕ್ಷದ ಸಂಸದರು ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲೇ ರಾಹುಲ್ ಗಾಂಧಿ, ದೇಶದಲ್ಲಿ ಇಂಧನ ದರ ಏರಿಕೆಯಾಗುತ್ತಿದೆ. ಇದರ ವಿರುದ್ಧ ವಿರೋಧ ಪಕ್ಷಗಳು ಒಗ್ಗಟ್ಟಿನ ಹೋರಾಟ ನಡೆಸಬೇಕು. ಇದಕ್ಕಾಗಿ ನಾವು ಈ ಸಭೆಯ ಬಳಿಕ ಕಾನ್ಸ್ ಟಿಟ್ಯೂಷನ್ ಕ್ಲಬ್ ನಿಂದ ಪಾರ್ಲಿಮೆಂಟ್ ವರೆಗೂ ಸೈಕಲ್ ಱಲಿ ನಡೆಸೋಣ ಎಂದು ಹೇಳಿದ್ದಾರೆ. ಹೀಗಾಗಿ ಸಭೆಯ ಬಳಿಕ ವಿರೋಧ ಪಕ್ಷಗಳ ನಾಯಕರೆಲ್ಲಾ ಸೈಕಲ್ ಱಲಿಯಲ್ಲಿ ಪಾರ್ಲಿಮೆಂಟ್ ಗೆ ಬಂದಿದ್ದಾರೆ. ರಾಹುಲ್ ಗಾಂಧಿ ಈಗ ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಕಾಂಗ್ರೆಸ್ ಹೊರತುಪಡಿಸಿ ಉಳಿದ ವಿರೋಧ ಪಕ್ಷಗಳ ನಾಯಕರೊಂದಿಗೆ ಬೆರೆಯುತ್ತಿದ್ದಾರೆ. ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಅವರ ಸಲಹೆ, ಅಭಿಪ್ರಾಯ ಕೇಳುತ್ತಿದ್ದಾರೆ.

ವಿರೋಧ ಪಕ್ಷಗಳನ್ನೆಲ್ಲಾ ಒಗ್ಗೂಡಿಸಿ ಹೋರಾಟ ನಡೆಸುವ ಸುಳಿವು ನೀಡುತ್ತಿದ್ದಾರೆ. ಬದಲಾದ ದೇಶದ ರಾಜಕೀಯ ಪರಿಸ್ಥಿತಿಯು ರಾಹುಲ್ ಗಾಂಧಿಯ ಈ ಧೋರಣೆ, ವರ್ತನೆಗೆ ಕಾರಣವಾಗಿದೆ ಎಂದು ಕೂಡ ವಿಶ್ಲೇಷಿಸಲಾಗುತ್ತಿದೆ. ಕಳೆದ ತಿಂಗಳು ಎನ್‌ಸಿಪಿ ಪಕ್ಷದ ಶರದ್ ಪವಾರ್, ಕಾಂಗ್ರೆಸ್ ನಾಯಕರನ್ನು ಹೊರಗಿಟ್ಟು ರಾಷ್ಟ್ರ ಮಂಚ್ ಹೆಸರಿನಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ನಡೆಸಿದ್ದರು. ಇದಾದ ಬಳಿಕ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೂಡ ದೆಹಲಿಗೆ ಬಂದು ವಿರೋಧ ಪಕ್ಷಗಳ ನಾಯಕರ ಜೊತೆಗೆ ಪ್ರತೇಕವಾಗಿ ಸರಣಿ ಸಭೆ ನಡೆಸಿದ್ದಾರೆ.

ಇದರಿಂದಾಗಿ ಬಿಜೆಪಿ ಹಾಗೂ ಮೋದಿ ವಿರೋಧಿ ಬಣದ ನಾಯಕ ಸ್ಥಾನ ತುಂಬಲು ಶರದ್ ಪವಾರ್, ಮಮತಾಬ್ಯಾನರ್ಜಿ, ರಾಹುಲ್ ಗಾಂಧಿ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಹಾಗೂ ನರೇಂದ್ರ ಮೋದಿ ವಿರೋಧಿ ಕ್ಯಾಂಪಿನ ನಾಯಕರಾಗಲು ಈಗ ರಾಹುಲ್ ಗಾಂಧಿ ಕೂಡ ಅಖಾಡಕ್ಕಿಳಿದಿದ್ದಾರೆ. ತಾವು ಈಗ ಸಕ್ರಿಯರಾಗದೇ ದೂರ ಉಳಿದರೇ, ಶರದ್ ಪವಾರ್, ಮಮತಾ ಬ್ಯಾನರ್ಜಿ ಮೋದಿ ವಿರೋಧಿ ಕ್ಯಾಂಪ್ ನಾಯಕರಾಗಬಹುದು ಎಂಬ ಭಾವನೆಯೇ ರಾಹುಲ್ ಧೀಡೀರ್ ಸಕ್ರಿಯವಾಗಲು ಕಾರಣವೂ ಇರಬಹುದು.

2013 ರಲ್ಲಿ ರಾಜಸ್ಥಾನದ ಜೈಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಹುಲ್ ಗಾಂಧಿ, ಅಧಿಕಾರ ವಿಷ ಇದ್ದಂತೆ ಎಂದಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಯುಪಿಎ ಗೆ ಬಹುಮತ ಸಿಕ್ಕಿದ್ದರೇ, ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುತ್ತಿದ್ದರು. ಈ ಮಾತುನ್ನು 2014ರ ಲೋಕಸಭಾ ಚುನಾವಣೆಗೂ ಮುನ್ನ ಮಲ್ಲಿಕಾರ್ಜುನ ಖರ್ಗೆ 2013ರಲ್ಲಿ ಜೈಪುರದಲ್ಲಿ ಕನ್ನಡ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದರು. ಆದರೆ, 2014 ರಲ್ಲಿ ಕಾಂಗ್ರೆಸ್ 44 ಲೋಕಸಭಾ ಸ್ಥಾನಗಳಿಗೆ ಕುಸಿಯಿತು. ಬಳಿಕ ರಾಹುಲ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರೂ, 2019ರ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಸಿಗಲಿಲ್ಲ.

ರಾಹುಲ್ ಗಾಂಧಿ, ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಅಧಿವೇಶನದಲ್ಲಿ ಭಾಗಿಯಾಗಲ್ಲ. ಸದ್ದಿಲ್ಲದೇ ವಿದೇಶ ಪ್ರವಾಸ ಹೋಗಿಬಿಡ್ತಾರೆ. ರಾಹುಲ್ ಗಾಂಧಿ ಸೀರಿಯಸ್ಸ್ ರಾಜಕಾರಣಿಯೇ ಅಲ್ಲ. ಮೋದಿ ಸರ್ಕಾರದ ವಿರುದ್ಧ ಹೋರಾಡುವ ಸಂದರ್ಭದಲ್ಲಿ ನಾಪತ್ತೆಯಾಗಿಬಿಡ್ತಾರೆ ಎಂಬೆಲ್ಲಾ ಟೀಕೆಗಳಿದ್ದವು. ಆದರೇ, ಈಗ ಮೋದಿ ಸರ್ಕಾರದ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುವ ಸೂಚನೆಯನ್ನು ರಾಹುಲ್ ಗಾಂಧಿ ನೀಡುತ್ತಿದ್ದಾರೆ.

ಇದರಿಂದಾಗಿ ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರಾ ಎಂಬ ಚರ್ಚೆಯೂ ನಡೆಯುತ್ತಿದೆ. ರಾಹುಲ್ ಬೆಂಬಲಿಗ ಯುವ ಕಾಂಗ್ರೆಸ್ಸಿಗರ ಪಡೆಯು ರಾಹುಲ್ ಮತ್ತೆ ಅಧ್ಯಕ್ಷರಾಗಬೇಕೆಂದು ಆಗ್ರಹಿಸುತ್ತಿದೆ. ಆದರೆ ಸದ್ಯಕ್ಕೆ ಸೋನಿಯಾಗಾಂಧಿ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆದು, ಅವರಿಗೆ ಸಹಾಯಕವಾಗಲೆಂದು ಮೂರು ನಾಲ್ಕು ಮಂದಿಯನ್ನು ಕಾರ್ಯಾಧ್ಯಕ್ಷರಾಗಿ ನೇಮಿಸುವ ಆಲೋಚನೆ ಕಾಂಗ್ರೆಸ್ ಪಕ್ಷದಲ್ಲಿದೆ. ಮತ್ತೆ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವ ಆಲೋಚನೆ ಇಲ್ಲ.

(Rahul gandhi gets ready to take on pm modi government during monsoon session)

Follow us on

Related Stories

Most Read Stories

Click on your DTH Provider to Add TV9 Kannada