ರಾಮ ಲಲ್ಲಾನೇ ಕಕ್ಷಿದಾರ! ಅಲಹಾಬಾದ್ ಹೈಕೋರ್ಟ್​​ನಲ್ಲಿ ಕನ್ನಡಿಗ ವಕೀಲ ಕೆಎನ್​ ಭಟ್ ಮಂಡಿಸಿದ್ದ ವಾದ ಹೀಗಿತ್ತು

ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ, ರಾಮ ಲಲ್ಲಾನ ಪರ ಹಿಂದೆ ಅಲಹಾಬಾದ್ ಹೈಕೋರ್ಟ್​​ನಲ್ಲಿ ವಾದ ಮಂಡನೆ ಮಾಡಿದ್ದ ಕನ್ನಡಿಗ, ಸುಪ್ರೀಂ ಕೋರ್ಟ್​ ಹಿರಿಯ ವಕೀಲ, ಕೇಂದ್ರ ಸರ್ಕಾರದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎನ್ ಭಟ್ ‘ಟಿವಿ9 ಕನ್ನಡ ಡಿಜಿಟಲ್’ ಜತೆ ಮಾತನಾಡಿದ್ದಾರೆ. ದೇವರ ಪರ ವಾದ ಮಂಡನೆ ಮಾಡಿದ ಆ ದಿನಗಳ ಬಗ್ಗೆ ಮೆಲುಕು ಹಾಕಿದ್ದು, ವಿವರ ಇಲ್ಲಿದೆ.

ರಾಮ ಲಲ್ಲಾನೇ ಕಕ್ಷಿದಾರ! ಅಲಹಾಬಾದ್ ಹೈಕೋರ್ಟ್​​ನಲ್ಲಿ ಕನ್ನಡಿಗ ವಕೀಲ ಕೆಎನ್​ ಭಟ್ ಮಂಡಿಸಿದ್ದ ವಾದ ಹೀಗಿತ್ತು
ಅಯೋಧ್ಯೆಯ ರಾಮ ಮಂದಿರ & ಕೇಂದ್ರ ಸರ್ಕಾರದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎನ್​ ಭಟ್
Follow us
Ganapathi Sharma
|

Updated on: Jan 18, 2024 | 12:50 PM

ನ್ಯಾಯಾಲಯದ ದಾವೆಗಳಲ್ಲಿ ವ್ಯಕ್ತಿ, ಸಂಸ್ಥೆ, ಸಂಘಟನೆಗಳು ಕಕ್ಷಿಗಾರರಾಗಿರುವುದು ಸಹಜ. ವ್ಯಕ್ತಿ, ಸಂಘಟನೆ, ಸಂಸ್ಥೆಯ ಪರ ವಕೀಲರು ವಾದ ಮಂಡನೆ ಮಾಡುವುದೂ ವಿಶೇಷವಲ್ಲ. ಆದರೆ, ಅಯೋಧ್ಯೆಯ ರಾಮ ಜನ್ಮಭೂಮಿ ವಿವಾದಿತ ಪ್ರದೇಶದ ವಿಚಾರದಲ್ಲಿ ನಡೆದ ಕಾನೂನು ಸಮರದಲ್ಲಿ (Ram Janmabhoomi Case) ಒಂದು ವಿಶೇಷವಿದೆ. ಈ ಪ್ರಕರಣದಲ್ಲಿ ರಾಮ ಲಲ್ಲಾ ಕೂಡ ಒಬ್ಬ ಕಕ್ಷಿದಾರ. ರಾಮ ಲಲ್ಲಾನ ಪರ ಅಲಹಾಬಾದ್ ಹೈಕೋರ್ಟ್​ನಲ್ಲಿ (Allahabad High Court) ವಾದ ಮಂಡನೆ ಮಾಡಿದ್ದು ಕನ್ನಡಿಗ, ಸುಪ್ರೀಂ ಕೋರ್ಟ್​ ಹಿರಿಯ ವಕೀಲ, ಕೇಂದ್ರ ಸರ್ಕಾರದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎನ್ ಭಟ್ (Former Additional Solicitor General K N Bhat). ಇವರು 2004ರಲ್ಲಿ ರಾಮ ಲಲ್ಲಾ ಪರ ಅಧಿಕೃತ ವಕೀಲರಾಗಿ ಅಲಹಾಬಾದ್ ಹೈಕೋರ್ಟ್​​​ನಲ್ಲಿ ವಾದ ಮಂಡನೆ ಆರಂಭಿಸಿದರು.

ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಕೆಎನ್ ಭಟ್ ಅವರು ‘ಟಿವಿ9 ಕನ್ನಡ ಡಿಜಿಟಲ್’ ಜತೆ ಮಾತನಾಡಿದ್ದು, ದೇವರ ಪರ ಅಲಹಾಬಾದ್​ ಹೈಕೋರ್ಟ್​ನಲ್ಲಿ ವಾದ ಮಂಡನೆ ಮಾಡಿದ ಆ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ.

ಉತ್ಖನನಕ್ಕೆ ಆರಂಭದಲ್ಲಿ ವ್ಯಕ್ತವಾಗಿತ್ತು ವಿರೋಧ

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಗೆ ಸಂಬಂಧಿಸಿದ ವ್ಯಾಜ್ಯವು ಶತಮಾನಗಳ ಹಿಂದಿನದು. ಆದರೆ, 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ನಂತರ ದೇಶದಲ್ಲಿ ಸಂಚಲನ ಮೂಡಿಸಿತು. ಮಸೀದಿ ಧ್ವಂಸದ ನಂತರ ಕೇಂದ್ರ ಸರ್ಕಾರವು ಅಯೋಧ್ಯೆಯ ವಿವಾದಿತ ಸ್ಥಳವನ್ನು ಸುಪರ್ದಿಗೆ ತೆಗೆದುಕೊಂಡಿತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​​ನಲ್ಲಿ ಸಲ್ಲಿಕೆಯಾದ ಅರ್ಜಿ ತಿರಸ್ಕೃತಗೊಂಡಿತು. ಕೇಂದ್ರ ಸರ್ಕಾರದ ಕ್ರಮ ಸರಿ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತು. ಬಳಿಕ 2002ರ ಏಪ್ರಿಲ್​ನಲ್ಲಿ ಅಲಹಾಬಾದ್ ಹೈಕೋರ್ಟ್​​ನಲ್ಲಿ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿ ವಿಚಾರಣೆ ಆರಂಭವಾಯಿತು. ಈ ಸಂದರ್ಭ, ವಿವಾದಿತ ಪ್ರದೇಶದಲ್ಲಿ ಉತ್ಖನನ ನಡೆಸಲು ಹೈಕೋರ್ಟ್ ಆದೇಶಿಸಿತು. ಆದರೆ, ಉತ್ಖನನದ ವೇಳೆ ಅಲ್ಲಿ ಪರವಾದ ಅಂಶಗಳು ದೊರೆಯದೆ ಸಮಸ್ಯೆಯಾದರೆ ಎಂಬ ಆತಂಕ ರಾಮ ಲಲ್ಲಾ ಪರ ಇದ್ದ ವಿಶ್ವ ಹಿಂದೂ ಪರಿಷತ್ ಹಾಗೂ ಅದರ ಪ್ರಮುಖರಲ್ಲಿ ಉಂಟಾಯಿತು. ಉತ್ಖನನಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸುವಂತೆ ವಿಹೆಚ್​ಪಿ ಮುಖಂಡರು ಕೋರಿದರು. ಆದರೆ, ಉತ್ಖನನವೇ ಸರಿಯಾದ ಮಾರ್ಗ. ಏನಿದೆಯೋ ಅದು ನಿರೂಪಣೆಯಾಗಲಿ ಎಂದು ಸಲಹೆ ನೀಡಿದೆ ಎಂಬುದಾಗಿ ಕೆಎನ್ ಭಟ್ ತಿಳಿಸಿದ್ದಾರೆ.

ನ್ಯಾ. ರಾಮಾ ಜೋಯಿಸ್ ಸಲಹೆಯ ಮೇರೆಗೆ ವಿಹೆಚ್​ಪಿ ಅಧ್ಯಕ್ಷರಾದ ಅಶೋಕ್ ಸಿಂಘಲ್ ರಾಮ ಲಲ್ಲಾ ಪರ ವಾದ ಮಂಡಿಸಬೇಕು ಎಂದು ಮನವಿ ಮಾಡಿದರು. ಅದನ್ನೊಪ್ಪಿ 2004ರಲ್ಲಿ ಅಧಿಕೃತವಾಗಿ ರಾಮ ಲಲ್ಲಾನ ಪರ ಅಲಹಾಬಾದ್ ಹೈಕೋರ್ಟ್​ನಲ್ಲಿ ವಾದ ಮಂಡನೆ ಆರಂಭಿಸಿದೆ. ಅಧಿಕೃತವಾಗಿ ರಾಮ ಲಲ್ಲಾನ ವಕೀಲನಾಗಿ ಕಾರ್ಯಾರಂಭ ಮಾಡಿದೆ ಎಂದು ಕೆಎನ್ ಭಟ್ ಮಾಹಿತಿ ನೀಡಿದ್ದಾರೆ.

ಹೇಗಿತ್ತು ರಾಮ ಲಲ್ಲಾ ಪರ ವಾದ ಮಂಡನೆ?

ವ್ಯಕ್ತಿಯ ಪರ ವಾದ ಮಂಡನೆ ಮಾಡಿದಂತೆ ದೇವರ ಪರ ಮಾಡಲಾಗದು. ಇದು ಪೂರ್ತಿಯಾಗಿ ನಂಬಿಕೆಯ ಆಧಾರದಲ್ಲೇ ಸಾಗಬೇಕು. ನಂಬಿಕೆಗೆ ಸಾಕ್ಷಿ ನೀಡುವುದೂ ಕಷ್ಟ. ಈ ಆರಂಭಿಕ ಸವಾಲುಗಳೊಂದಿಗೆ ವಾದ ಮಂಡನೆ ಆರಂಭಿಸಿದ್ದೆ ಎಂದು ಕೆಎನ್ ಭಟ್ ಮೆಲುಕು ಹಾಕಿದರು.

ಭಗವಾನ್ ರಾಮನ ಮೇಲಿನ ಜನರ ನಂಬಿಕೆಗಳು, ಅವುಗಳಿಗೆ ಸಂಬಂಧಿಸಿದ ಆಧಾರಗಳು, ಅಯೋಧ್ಯೆಯ ವಿವಾದಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ವಿವಿಧ ಲೇಖಕರ ಬರಹಗಳು, ಅವುಗಳಲ್ಲಿ ಉಲ್ಲೇಖವಾಗಿದ್ದ ಅಂಶಗಳ ಬಗ್ಗೆ ಆಳವಾದ ಅಧ್ಯಯನ ಮಾಡಬೇಕಾಗಿ ಬಂತು. ಹೀಗೆ ಸಂಗ್ರಹಿಸಿದ ದಾಖಲೆಗಳ ಆಧಾರದಲ್ಲಿ ನ್ಯಾಯಾಲಯದಲ್ಲಿ ರಾಮ ಲಲ್ಲಾ ಪರ ವಾದ ಮಂಡನೆ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ.

ನೆರವಾಯಿತು ಉತ್ಖನನ ವರದಿ

ಈ ಮಧ್ಯೆ, ಅಲಹಾಬಾದ್ ಹೈಕೋರ್ಟ್ ಸೂಚನೆಯ ಮೇರೆಗೆ ಭಾರತೀಯ ಪ್ರಾಚ್ಯವಸ್ತು ಇಲಾಖೆ ಅಯೋಧ್ಯೆಯ ಬಾಬ್ರಿ ಮಸೀದಿಯ ಹೊರ ಆವರಣದಲ್ಲಿ ಉತ್ಖನನ ಮಾಡಿತ್ತು. ಉತ್ಖನನದ ಸಂದರ್ಭದಲ್ಲಿ ಹಿಂದೂ ದೇವಾಲಯ ಇತ್ತೆಂಬುದಕ್ಕೆ ಸಂಬಂಧಿಸಿದಂಥ ಕುರುಹುಗಳು ಸಿಕ್ಕಿರುವುದಾಗಿ ವರದಿ ಸಲ್ಲಿಸಿತು. ವಿವಿಧ ಮುಸ್ಲಿಂ ಸಂಘಟನೆಗಳು ಪ್ರಾಚ್ಯವಸ್ತು ಇಲಾಖೆಯ ಉತ್ಖನನ ವರದಿಯನ್ನು ತಳ್ಳಿಹಾಕಿದವು. ಆದರೆ, ಅಂತಿಮವಾಗಿ ಇದೂ ಸಹ ರಾಮ ಲಲ್ಲಾ ಪರ ಮಂಡಿಸಿದ ವಾದಕ್ಕೆ ಪೂರಕವಾಗಿ ಪರಿಣಮಿಸಿತು ಎಂದು ಕೆಎನ್ ಭಟ್ ಮಾಹಿತಿ ನೀಡಿದ್ದಾರೆ.

ಅಲಹಾಬಾದ್ ಹೈಕೋರ್ಟ್​ ತೀರ್ಪಿನಲ್ಲೇನಿದೆ?

ಅಯೋಧ್ಯೆಯ ವಿವಾದಕ್ಕೆ ಸಂಬಂಧಿಸಿ 2010ರ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್​ ತೀರ್ಪು ಪ್ರಕಟಿಸಿತು. ವಿವಾದಿತ ಪ್ರದೇಶವನ್ನು ಮೂರು ಭಾಗಳಾಗಿ ವಿಂಗಡಿಸಿ ಒಂದು ಭಾಗವನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡುವಂತೆ ಕೋರ್ಟ್ ಆದೇಶಿಸಿತು. ಮತ್ತೊಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ಹಾಗೂ ಇನ್ನೊಂದು ಭಾಗವನ್ನು ರಾಮ ಲಲ್ಲಾನಿಗೆ ನೀಡಬೇಕು ಎಂದೂ ಕೋರ್ಟ್ ಆದೇಶದಲ್ಲಿ ತಿಳಿಸಿತು.

ಇದನ್ನೂ ಓದಿ: ಅಯೋಧ್ಯೆ, 1992-ಡಿಸೆಂಬರ್ 6ರಂದು ಆಗಿದ್ದೇನು: ಕರಸೇವಕನ ನೆನಪಿನ ಪುಟದಿಂದ

ಸುಪ್ರೀಂ ಕೋರ್ಟ್​​ ಮೆಟ್ಟಿಲೇರಿದ ವಿವಾದ

ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ವಾದಿ, ಪ್ರತಿವಾದಿಗಳು ಸುಪ್ರೀಂ ಕೋರ್ಟ್​​ನಲ್ಲಿ ದಾವೆ ಹೂಡಿದರು. ಪರಿಣಾಮವಾಗಿ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ 2011ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. 2017ರಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ಅಯೋಧ್ಯೆ ಪ್ರಕರಣದ ವಿಚಾರಣೆ ಆರಂಭವಾಯಿತು. 2019ರಲ್ಲಿ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ವಿವಾದಿತ 2.77 ಎಕರೆ ಭೂಮಿಯನ್ನು ರಾಮ ಲಲ್ಲಾನಿಗೆ ನೀಡುವಂತೆ ಆದೇಶ ನೀಡಿತು. ಜತೆಗೆ, ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯ ಇತರೆಡೆಯಲ್ಲಿ 5 ಎಕರೆ ಭೂಮಿ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡಿತು. ಅಯೋಧ್ಯೆಯ ವಿವಾದಿತ ಪ್ರದೇಶವನ್ನು ರಾಮ ಲಲ್ಲಾನಿಗೆ ನೀಡುವಲ್ಲಿ ಅಲಹಾಬಾದ್​ ಹೈಕೋರ್ಟ್​ನಲ್ಲಿ ಕೆಎನ್ ಭಟ್ ಮಂಡಿಸಿದ್ದ ವಾದದ ಅಂಶಗಳೂ ಪೂರಕವಾಗಿ ಪರಿಣಮಿಸಿದ್ದವು ಎಂಬುದು ಗಮನಾರ್ಹ.

ಇದನ್ನೂ ಓದಿ: 1992ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದ ಅಯೋಧ್ಯೆ ರಾಮಮಂದಿರ ನಿರ್ಮಾಣದವರೆಗೆ; ಟೈಮ್​ಲೈನ್

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ