ಕೇಂದ್ರ ಸಚಿವ ಸಂಪುಟ ಪುನಾರಚನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಿಂದ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರನ್ನು ಕೈ ಬಿಟ್ಟಿದ್ದು, ನೂತನ ಶಿಕ್ಷಣ ಸಚಿವರಾಗಿ ಧರ್ಮೇಂದ್ರ ಪ್ರಧಾನ್ ಅಧಿಕಾರ ಸ್ವೀಕರಿಸಿದ್ದಾರೆ. 2014 ರಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಮೂರನೇ ಶಿಕ್ಷಣ ಸಚಿವರಾಗಿದ್ದಾರೆ ಪೋಖ್ರಿಯಾಲ್. ಸ್ಮೃತಿ ಇರಾನಿ ಅವರು 2014 ರಿಂದ 2016 ರ ಮಧ್ಯದವರೆಗೆ ಅಧಿಕಾರದಲ್ಲಿದ್ದು, 2016 ರಿಂದ 2019 ರವರೆಗೆ ಪ್ರಕಾಶ್ ಜಾವಡೇಕರ್ ಶಿಕ್ಷಣ ಸಚಿವರಾಗಿದ್ದರು. ನಂತರ ಬಂದವರೇ ಪೋಖ್ರಿಯಾಲ್.
ಶಿಕ್ಷಣ ಸಚಿವರಾಗಿ ನೇಮಕಗೊಳ್ಳುವ ಮೊದಲು ಅವರು ಯಾವುದೇ ಕ್ಯಾಬಿನೆಟ್ ಹುದ್ದೆಯನ್ನು ಅಲಂಕರಿಸದ ಕಾರಣ 2019 ರಲ್ಲಿ ಪೋಖ್ರಿಯಲ್ ಅವರ ಆಯ್ಕೆ ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿತು. ಗರ್ವಾಲ್‌ನ ಹೇಮವತಿ ನಂದನ್ ಬಹುಗುಣ ವಿಶ್ವವಿದ್ಯಾಲಯದಿಂದ ಹಿಂದಿಯಲ್ಲಿ ಪಿಎಚ್‌ಡಿ ಮಾಡಿದ ಅವರು 2009 ರಿಂದ 2011 ರವರೆಗೆ ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದರು. ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಾಗ ಅವರು 24 ಹೊಸ ಮುಖಗಳಲ್ಲಿ ಒಬ್ಬರಾಗಿದ್ದರು.
ಪೌರಿ ಜಿಲ್ಲೆಯ ಪಿನಾನಿ ಗ್ರಾಮದಿಂದ ಬಂದ ಪೋಖ್ರಿಯಾಲ್ ಅವರನ್ನು ಹಿಂದಿ ಬರಹಗಾರರೂ ಕೂಡಾ ಹೌದು. ಅವರ ಸಾಹಿತ್ಯ ಕೃತಿಗಳಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು ಮತ್ತು ಪ್ರವಾಸ ಕಥೆಗಳು ಸೇರಿವೆ. ಅವರ ಅನೇಕ ಹಿಂದಿ ಪುಸ್ತಕಗಳನ್ನು ಇತರ ಭಾಷೆಗಳಿಗೂ ಅನುವಾದಿಸಲಾಗಿದೆ.
ಪೋಖ್ರಿಯಾಲ್ ಅಧಿಕಾರ ಅವಧಿ
ಪೋಖ್ರಿಯಲ್ ಅವರು ಶಿಕ್ಷಣ ಸಚಿವರಾಗಿ ಎರಡು ವರ್ಷಗಳ ಕಾಲ ಅಧಿಕಾರದಲ್ಲಿದ್ದರು. 2015 ರ ಆರಂಭದಿಂದಲೂ ಕಾರ್ಯರೂಪಕ್ಕೆ ಬಂದಿದ್ದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನವೇ ಅವರ ಪಾಲಿನ ಸಾಧನೆಯಾಗಿದೆ. 2020 ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಿಡುಗಡೆಯಾದ ನಂತರ, ಆಯ್ದ ಯೋಜನೆಗಳನ್ನು ಹಂತ ಹಂತವಾಗಿ ರೂಪಿಸುವುದರೊಂದಿಗೆ ಅನುಷ್ಠಾನ ಪ್ರಾರಂಭವಾಯಿತು .
ವಿವಾದ ಮುಕ್ತ
2019 ರ ಅಂತ್ಯದ ವೇಳೆಗೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಶುಲ್ಕ ಹೆಚ್ಚಳವನ್ನು ಹೊರತುಪಡಿಸಿ, ಪೋಖ್ರಿಯಾಲ್ ಅವಧಿಯಲ್ಲಿ ಹೆಚ್ಚಿನ ವಿವಾದಗಳು ಇರಲಿಲ್ಲ. ಕೇಂದ್ರ ಸರ್ಕಾರ ನಡೆಸುವ ಸುವ ಜೆಎನ್‌ಯು ಹಾಸ್ಟೆಲ್ ಶುಲ್ಕವನ್ನು ಹಲವು ಪಟ್ಟು ಹೆಚ್ಚಿಸುವ ನಿರ್ಧಾರ ಪ್ರಕಟಿಸಿದಾಗ, ವಿದ್ಯಾರ್ಥಿ ಸಮುದಾಯದಿಂದ ಭಾರಿ ವಿರೋಧವುಂಟಾಯಿತು. ಜೆಎನ್‌ಯು ವಿದ್ಯಾರ್ಥಿಗಳು ಶುಲ್ಕ ಹೆಚ್ಚಳವನ್ನು ಸುಮಾರು ಎರಡು ತಿಂಗಳ ಕಾಲ ಪ್ರತಿಭಟಿಸಿದರು, ನಂತರ ಹೆಚ್ಚಳವನ್ನು ಭಾಗಶಃ ಹಿಂದಕ್ಕೆ ತೆಗೆದುಕೊಳ್ಳಲಾಯಿತು. ಈ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಲಾಯಿತು. ಆದಾಗ್ಯೂ, ಪೋಖ್ರಿಯಾಲ್ ಕುಂದುಕೊರತೆಗಳನ್ನು ಆಲಿಸಲು ವಿದ್ಯಾರ್ಥಿಗಳನ್ನು ಭೇಟಿಯಾಗದಿರುವ ಟೀಕೆಗಳನ್ನು ಎದುರಿಸಬೇಕಾಯಿತು.
ಮಾರ್ಚ್ 2020 ರಲ್ಲಿ ಕೊವಿಡ್ ಸಾಂಕ್ರಾಮಿಕ ರೋಗ ಬಂದಾಗ, ಅವರು ಟ್ವಿಟರ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ನಿಯಮಿತವಾಗಿ ಸಂವಾದ ನಡೆಸಿದರು. ಶಾಲೆಗಳ ಮುಚ್ಚುವಿಕೆ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳು ಮತ್ತು ಸಿಬಿಎಸ್‌ಇ ಮಂಡಳಿಯ ಪರೀಕ್ಷೆಗಳ ಬಗ್ಗೆ ಅವರ ಆತಂಕಗಳನ್ನು ಪರಿಹರಿಸಲು ಪ್ರಯತ್ನಿಸಿದರು. ಕಳೆದ ವರ್ಷ, ಅವರು ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಪ್ರತ್ಯೇಕ ಸಂವಾದ ನಡೆಸಿದ್ದು ಮಾತ್ರವಲ್ಲದೆ ಲೈವ್ ಚಾಟ್ ಮೂಲಕ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ವರ್ಷ ಏಪ್ರಿಲ್ ತಿಂಗಳಲ್ಲಿ ಪೋಖ್ರಿಯಾಲ್ ಕೊವಿಡ್ -19 ಬಾಧಿಸಿ ಆಸ್ಪತ್ರೆಗೆ ದಾಖಲಾದ ನಂತರ ಸಂವಹನಗಳು ಗಣನೀಯವಾಗಿ ಕಡಿಮೆಯಾದವು. ಎಂಜಿನಿಯರಿಂಗ್‌ಗಾಗಿ ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ) ಮೂರನೇ ಮತ್ತು ನಾಲ್ಕನೇ ಹಂತದ ದಿನಾಂಕಗಳನ್ನು ಅವರು ಘೋಷಿಸಿರುವುದೇ ಅವರ ಇತ್ತೀಚಿಗಿನ ಸಂವಾದ.ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ಅಥವಾ ಜೆಇಇ ಮತ್ತು ನೀಟ್ ಪರೀಕ್ಷೆ ಇರಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಪ್ರಕಟಣೆಗಳನ್ನು ಮಾಡಿದ್ದಾರೆ ಪೋಖ್ರಿಯಾಲ್. ಈ ಮೊದಲು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಂತಹ ಆಯಾ ಸಂಸ್ಥೆಗಳು ಈ ಪ್ರಕಟಣೆಗಳನ್ನು ಮಾಡಿದ್ದವು. ಪರೀಕ್ಷೆಯ ದಿನಾಂಕಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಬಂದಾಗ ಅವರು ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದ್ದೂ ಉಂಟು.
ಆದಾಗ್ಯೂ, ಈ ವರ್ಷ ಸಿಬಿಎಸ್‌ಇ ಮಂಡಳಿ ಪರೀಕ್ಷೆಗಳನ್ನು ನಡೆಸುವ ವಿಷಯ ಬಂದಾಗ ಪ್ರಧಾನಮಂತ್ರಿಯೊಂದಿಗೆ ಪೋಖ್ರಿಯಾಲ್ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ಪೋಖ್ರಿಯಲ್ ಅವರ ಕೆಲಸದಲ್ಲಿ ಮೋದಿ ತೃಪ್ತರಾಗಿಲ್ಲ ಎಂಬ ಊಹಾಪೋಹಗಳು ಇದ್ದವು.
‘ಆಲಿಸುವ’ ವ್ಯಕ್ತಿಯಾಗಿದ್ದರವರು
ಶಿಕ್ಷಣ ಸಚಿವಾಲಯದ ಸಿಬ್ಬಂದಿಗಳ ಪ್ರಕಾರ ಪೋಖ್ರಿಯಾಲ್ ಯಾವಾಗಲೂ “ಆಲಿಸುವ” ಮತ್ತು “ಆಲೋಚನೆಗಳಿಗೆ ತೆರೆದುಕೊಳ್ಳುವ” ವ್ಯಕ್ತಿಯಾಗಿದ್ದರು. ಪೋಖ್ರಿಯಾಲ್ ಅಧಿಕಾರ ವಹಿಸಿಕೊಂಡ ನಂತರ ಸಚಿವಾಲಯದಲ್ಲಿ ಆದ ಪ್ರಮುಖ ಬದಲಾವಣೆ ಎಂದರೆ ಹಿಂದಿಯಲ್ಲೇ ವ್ಯವಹರಿಸುವುದು.ಹಿಂದಿಯಲ್ಲಿ ಡಾಕ್ಟರೇಟ್ ಪಡೆದ ಸಚಿವರು ತಮ್ಮ ಸಿಬ್ಬಂದಿ ಮತ್ತು ಅಧಿಕಾರಿಗಳೊಂದಿಗೆ ಹಿಂದಿಯಲ್ಲಿ ಸಂವಹನ ನಡೆಸುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಹಿಂದಿ ಭಾಷೆಯಲ್ಲಿ ಸಂಬೋಧಿಸಿದರು. ವಿದೇಶಿ ಪ್ರತಿನಿಧಿಗಳೊಂದಿಗಿನ ಸಂವಾದದ ಸಮಯದಲ್ಲಿ ಸಹ ಪೋಖ್ರಿಯಾಲ್ ಹಿಂದಿ ಬಳಸುತ್ತಿದ್ದರಿಂದ ಅವರು ಸಂವಹನ ನಡೆಸಲು ಅನುವಾದಕನನ್ನು ಬಳಸುತ್ತಿದ್ದರು. ನನ್ನ ಆದ್ಯತೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಬಳಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
ಅನುಭವಿ ರಾಜಕಾರಣಿ ಧರ್ಮೇಂದ್ರ ಪ್ರಧಾನ್
ಇದೀಗ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಧರ್ಮೇಂದ್ರ ಪ್ರಧಾನ್ ಅನುಭವಿ ರಾಜಕಾರಣಿ. ಬಿಜೆಪಿಯ ಹಿರಿಯ ನಾಯಕರು ಮತ್ತು ಸರ್ಕಾರದ ಉನ್ನತ ನಾಯಕತ್ವಕ್ಕೆ ಆಪ್ತರಾದವರು. ಈ ಹಿಂದೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಮತ್ತು ಕೇಂದ್ರ ಸರ್ಕಾರದಲ್ಲಿ ಸ್ಟೀಲ್ ಖಾತೆ ಸಚಿವರಾಗಿದ್ದರು. ಶಿಕ್ಷಣ ಸಚಿವಾಲಯದ ಜತೆ ಪ್ರಧಾನ್ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಸಚಿವಾಲಯ (ಎಂಎಸ್‌ಡಿಇ) ಎರಡರ ಉಸ್ತುವಾರಿ ವಹಿಸಲಿದ್ದಾರೆ. ಎನ್‌ಡಿಎ ಸರ್ಕಾರದ ಹಿಂದಿನ ಅಧಿಕಾರಾವಧಿಯಲ್ಲಿ (2014-19) ಪ್ರಧಾನ್ ಕೆಲವು ವರ್ಷಗಳ ಕಾಲ ಎಂಎಸ್‌ಡಿಇ ಸಚಿವರಾಗಿದ್ದರು.
ಇದನ್ನೂ ಓದಿ: ರವಿಶಂಕರ್ ಪ್ರಸಾದ್ ಔಟ್, ಅಶ್ವಿನಿ ವೈಷ್ಣವ್ ಇನ್; ವಿವಾದಗಳು ಸುತ್ತಿಕೊಂಡಿರುವ ಐಟಿ ಸಚಿವಾಲಯದ ಮುಂದಿದೆ ಹೊಸ ಸವಾಲು
(Ramesh Pokhriyal Nishank and his new National Education Policy Was PM Modi was not happy with his work)