ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಹಣಕಾಸು ನೀತಿ ದರ ಬುಧವಾರ ಘೋಷಣೆ ಮಾಡಲಾಗಿದ್ದು, ರೆಪೋ ದರವನ್ನು ಯಥಾಸ್ಥಿತಿ ಕಾಯ್ದುಕೊಂಡು, ಶೇ 4ರಲ್ಲೇ ಮುಂದುವರಿಸಲು ಸರ್ವಸಮ್ಮತವಾಗಿ ಒಪ್ಪಿಗೆ ಸೂಚಿಸಲಾಗಿದೆ. ರಿವರ್ಸ್ ರೆಪೋ ದರ ಕೂಡ ಶೇಕಡಾ 3.5ರಲ್ಲೇ ಮುಂದುವರಿಸುವುದಕ್ಕೆ ತೀರ್ಮಾನಿಸಲಾಗಿದೆ. ಬ್ಯಾಂಕ್ ದರವನ್ನು ಶೇ 4.25ರಲ್ಲೇ ಉಳಿಸಿಕೊಳ್ಳಲಾಗಿದೆ. ಕೋವಿಡ್- 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಥಾ ಸ್ಥಿತಿ ಮುಂದುವರಿಸಬಹುದು ಎಂದು ಹಲವು ತಜ್ಞರು ಅಭಿಪ್ರಾಯ ಪಟ್ಟಿದ್ದರು. ಪ್ರತಿ ಎರಡು ತಿಂಗಳಿಗೆ ಒಮ್ಮೆ ಹಣಕಾಸು ನೀತಿಯನ್ನು ಪ್ರಕಟಿಸುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸತತ ಐದನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.
ಹಣಕಾಸು ನೀತಿ ಘೋಷಣೆ ವೇಳೆಯಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತದಾಸ್ ಪ್ರಸ್ತಾವ ಮಾಡಿದ ಪ್ರಮುಖಾಂಶಗಳು ಹೀಗಿವೆ:
– ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪರೋಕ್ಷವಾಗಿ ನಗದು ಲಭ್ಯತೆ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರವು 22 ಲಕ್ಷ ಕೋಟಿ ರೂಪಾಯಿ ಪಡೆದುಕೊಂಡಿರುವುದನ್ನು ನಗದು ನಿರ್ವಹಣೆ ಖಾತ್ರಿ ಪಡಿಸಿದೆ. – ದಾಸ್
– ಸೆಕೆಂಡರಿ ಮಾರುಕಟ್ಟೆಯಿಂದ ಸರ್ಕಾರಿ ಸೆಕ್ಯೂರಿಟೀಸ್ಗಳನ್ನು ರೂ. 1 ಲಕ್ಷ ಕೋಟಿಗೆ ಖರೀದಿ.
– ನಬಾರ್ಡ್, ಎನ್ಎಚ್ಬಿ ಹಾಗೂ ಎಸ್ಐಡಿಬಿಐಗೆ 50,000 ಕೋಟಿ ರೂಪಾಯಿ ನಗದು ಬೆಂಬಲ.
– TLTRO ಯೋಜನೆ ಯೋಜನೆ ಇನ್ನೂ 6 ತಿಂಗಳು, ಸೆಪ್ಟೆಂಬರ್ 30, 2021ರ ತನಕ ವಿಸ್ತರಣೆ.
– ಅಸೆಟ್ ರೀಕನ್ಸ್ಟ್ರಕ್ಷನ್ ಕಂಪೆನಿಗಳ ಕಾರ್ಯ ನಿರ್ವಹಣೆ ಪರಿಶೀಲನೆಗೆ ಸಮಿತಿ ರಚನೆ.
– ಆದ್ಯತಾ ವಲಯದ ಅಡಿಯಲ್ಲಿ ಕೃಷಿ ವಲಯಕ್ಕೆ ನೀಡುವ ಸಾಲ ಮಿತಿ 50 ಲಕ್ಷ ರೂಪಾಯಿಯಿಂದ 60 ಲಕ್ಷ ರೂ.ಗೆ ಏರಿಕೆ.
– ಕೇಂದ್ರೀಯ ಪಾವತಿ ವ್ಯವಸ್ಥೆಗಳಾದ NEFT, RTGS ಬ್ಯಾಂಕ್ಗಳ ಆಚೆಗೂ ವಿಸ್ತರಣೆ. ಪೂರ್ಣ ಪ್ರಮಾಣದಲ್ಲಿ ಕೆವೈಸಿ- ಪಿಪಿಐ ಕಡ್ಡಾಯ ಮಾಡಲಾಗಿದೆ. ಬ್ಯಾಂಕೇತರ ಬಳಕೆದಾರರಾಗಿದ್ದು, ಪೂರ್ಣ ಪ್ರಮಾಣದಲ್ಲಿ ಕೆವೈಸಿ ಪಿಪಿಐಗೆ ನಗದು ವಿಥ್ಡ್ರಾಗೆ ಅವಕಾಶ ಇದೆ.
– ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಚಿಲ್ಲರೆ ಹಣದುಬ್ಬರ ದರದ ಅಂದಾಜು ಶೇ 5.2 ಎಂದುಕೊಳ್ಳಲಾಗಿದೆ. ಇನ್ನು ಮಾರ್ಚ್ ತ್ರೈಮಾಸಿಕದ ಅಂತ್ಯಕ್ಕೆ ಶೇಕಡಾ 5 ಎಂದುಕೊಳ್ಳಲಾಗಿದೆ.
– ಇನ್ನು ಮುಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬ್ಯಾಂಕೇತರ ಪೇಮೆಂಟ್ ವ್ಯವಸ್ಥೆ ಆಪರೇಟರ್ಗಳ ಮೂಲಕ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿಗೆ ಅವಕಾಶ ನೀಡುತ್ತದೆ. ಇದರಿಂದ ಪೇಟಿಎಂ, ಫೋನ್ಪೇ ಮತ್ತಿತರ ಪೇಮೆಂಟ್ ವ್ಯಾಲೆಟ್ಗಳ ಬಳಕೆದಾರರಿಗೆ ಅನುಕೂಲ ಆಗುತ್ತದೆ. ಇದರ ಜತೆಗೆ ಆರ್ಬಿಐನಿಂದ ಪ್ರೀಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ ಖಾತೆ ಮಿತಿಯನ್ನು ವೈಯಕ್ತಿಕವಾಗಿ ಈ ಹಿಂದೆ ಇದ್ದ 1 ಲಕ್ಷ ರೂಪಾಯಿ ಮಿತಿಯಿಂದ 2 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಇದರಿಂದ ತೀರುವಳಿ ಅಪಾಯವು ಕಡಿಮೆ ಆಗುತ್ತದೆ ಹಾಗೂ ಡಿಜಿಟಲ್ ಹಣಕಾಸು ಸೇವೆ ಎಲ್ಲ ಬಳಕೆದಾರರಿಗೆ ತಲುಪಲು ಸಾಧ್ಯವಾಗುತ್ತದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
– ಹಣಕಾಸು ವರ್ಷ 2021- 22ಕ್ಕೆ ರಿಯಲ್ ಜಿಡಿಪಿ ಬೆಳವಣಿಗೆ ದರವನ್ನು ಶೇ 10.5ರಲ್ಲೇ ಮತ್ತೆ ಅಂದಾಜಿಸಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ವಾಣಿಜ್ಯ ಬ್ಯಾಂಕ್ಗಳಿಗೆ ನೀಡುವ ಸಾಲಕ್ಕೆ ಪಡೆಯುವ ಬಡ್ಡಿ ದರವನ್ನು ರೆಪೋ ದರ ಎನ್ನಲಾಗುತ್ತದೆ. ಇನ್ನು ವಾಣಿಜ್ಯ ಬ್ಯಾಂಕ್ಗಳು ಆರ್ಬಿಐ ಬಳಿ ಇಡುವ ಹಣಕ್ಕೆ ನೀಡುವ ಬಡ್ಡಿ ದರವನ್ನು ರಿವರ್ಸ್ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡಿಮೆ ಇದ್ದರೆ ವಾಣಿಜ್ಯ ಬ್ಯಾಂಕ್ಗಳಿಂದ ಕಡಿಮೆ ಬಡ್ಡಿಯಲ್ಲಿ ಸಾಲ ದೊರೆಯುತ್ತದೆ. ಅದೇ ವೇಳೆ ಠೇವಣಿ ಮೇಲಿನ ಬಡ್ಡಿ ದರ ಕೂಡ ಕಡಿಮೆ ಇರುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಸಾಲದ ಮೇಲೆ ಬಡ್ಡಿ ದರ ಕಡಿಮೆ ಇದೆ. ಅದೇ ವೇಳೆ ಠೇವಣಿ ಮೇಲೆ ಸಿಗುವ ಬಡ್ಡಿ ಸಹ ಕಡಿಮೆ ಆಗಿದೆ.
ಇದನ್ನೂ ಓದಿ: SBI home loan: ಗೃಹ ಸಾಲ ಬಡ್ಡಿ ದರ ಹೆಚ್ಚಿಸಿದ ಎಸ್ಬಿಐನಿಂದ ಪ್ರೊಸೆಸಿಂಗ್ ಶುಲ್ಕ ಮನ್ನಾ ಕೂಡ ಇಲ್ಲ
(Reserve Bank Of India continues repo rate with 4% and reverse repo with 3.5% on April 2021 MPC meeting. Here are the key highlight points of RBI governor Shaktikanta Das’s announcements.)
Published On - 12:21 pm, Wed, 7 April 21