ರಷ್ಯಾದ ಕೊವಿಡ್ ಲಸಿಕೆ ಸ್ಫುಟ್ನಿಕ್ ವಿ ಜೂನ್ ಎರಡನೇ ವಾರದಿಂದ ಭಾರತದಲ್ಲಿ ಲಭ್ಯವಾಗಲಿದೆ
ಲಸಿಕೆ ಪೂರೈಕೆಗಾಗಿ ಕರ್ನಾಟಕ ಕರೆದಿದ್ದ ಜಾಗತಿಕ ಟೆಂಡರ್ಗೆ ಎರಡು ಸಂಸ್ಥೆಗಳು ಸ್ಫುಟ್ನಿಕ್ ವಿ ಲಸಿಕೆ ಸರಬರಾಜು ಮಾಡಲು ಮುಂದೆ ಬಂದಿವೆ. ಹಾಗೆಯೇ ಇದೇ ಲಸಿಕೆಯನ್ನು ಮುಂಬೈ ಮಹಾನಗರ ಪಾಲಿಕೆಗೆ ಪೂರೈಸಲು ಎಂಟು ಸಂಸ್ಥೆಗಳು ಈಗಾಗಲೇ ಬಿಡ್ ಮಾಡಿವೆ.
ನವದೆಹಲಿ: ಭಾರತದಲ್ಲಿ ಬಳಸಲು ಅನುಮೋದನೆ ಪಡೆದುಕೊಂಡಿರುವ ಮೂರನೇ ಕೋವಿಡ್ ಲಸಿಕೆ ರಷ್ಯಾದ ಸ್ಫುಟ್ನಿಕ್ ವಿ ಜೂನ್ ತಿಂಗಳ ಎರಡನೇ ವಾರದಿಂದ ಅಪೊಲೋ ಆಸ್ಪತ್ರೆಗಳ ಮೂಲಕ ಲಭ್ಯವಾಗಲಿದೆ ಎಂದು ಈ ಅಸ್ಪತ್ರೆಗಳ ಗುಂಪಿನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿರುವ ಶೋಭನಾ ಕಮ್ಮನೇನಿ ಗುರುವಾರದಂದು ಮಾಧ್ಯಮಗಳಿಗೆ ತಿಳಿಸಿದರು. ಸ್ಫುಟ್ನಿಕ್ ಸಂಸ್ಥೆಯವರು ದೆಹಲಿಗೂ ಲಸಿಕೆಗಳನ್ನು ಸರಬರಾಜು ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಬುಧವಾರದಂದು ಹೇಳಿದ್ದರು. ಎಷ್ಟು ಪ್ರಮಾಣ ಲಸಿಕೆಗಳನ್ನು ಸಂಸ್ಥೆ ಪೂರೈಸಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
‘ಸಂಸ್ಥೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆದಿದೆ. ಕಂಪನಿಯ ಜನ ಮಂಗಳವಾರದಂದು ನಮ್ಮ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಎಷ್ಟು ಪ್ರಮಾಣ ಲಸಿಕೆಗಳನ್ನು ಅವರು ಕಳಿಸಲಿದ್ದಾರೆನ್ನುವುದು ಇನ್ನೂ ಖಚಿತಪಟ್ಟಿಲ್ಲ,’ ಎಂದು ಕೇಜ್ರಿವಾಲ ಹೇಳಿದ್ದರು.
ಲಸಿಕೆ ಪೂರೈಕೆಗಾಗಿ ಕರ್ನಾಟಕ ಕರೆದಿದ್ದ ಜಾಗತಿಕ ಟೆಂಡರ್ಗೆ ಎರಡು ಸಂಸ್ಥೆಗಳು ಸ್ಫುಟ್ನಿಕ್ ವಿ ಲಸಿಕೆ ಸರಬರಾಜು ಮಾಡಲು ಮುಂದೆ ಬಂದಿವೆ. ಹಾಗೆಯೇ ಇದೇ ಲಸಿಕೆಯನ್ನು ಮುಂಬೈ ಮಹಾನಗರ ಪಾಲಿಕೆಗೆ ಪೂರೈಸಲು ಎಂಟು ಸಂಸ್ಥೆಗಳು ಈಗಾಗಲೇ ಬಿಡ್ ಮಾಡಿವೆ.
ಕೆಲ ದಿನ ಮೊದಲು ರಷ್ಯಾಗೆ ಬಾರತದ ರಾಯಭಾರಿ ಡಿ ಬಾಲ ವೆಂಕಟೇಶ ವರ್ಮ ಅವರು, ರಷ್ಯ ಸ್ಫುಟ್ನಿಕ್ ವಿ ಲಸಿಕೆಯ 850 ದಶಲಕ್ಷ ಡೋಸುಗಳನ್ನು ಭಾರತದಲ್ಲಿ ಮೂರು ಹಂತಗಳಲ್ಲಿ ಉತ್ಪಾದಿಸುವ ಉದ್ದೇಶ ಹೊಂದಿದೆ ಎಂದು ಹೇಳಿದ್ದರು. ಮೇ ತಿಂಗಳ ಅಂತ್ಯದವರೆಗೆ 1,50,000 ಮತ್ತು 60,000 ಡೋಸುಗಳು ಭಾರತಕ್ಕೆ ಸರಬರಾಜು ಆಗಲಿವೆ, ಮತ್ತು ಬಲ್ಕ್ನಲ್ಲಿ 30 ಲಕ್ಷ ಡೋಸುಗಳು ಭಾರತಕ್ಕೆ ಸಿಗಲಿವೆ ಎಂದು ವರ್ಮ ಹೇಳಿದ್ದರು.
ಜೂನ್ನಲ್ಲಿ ಸ್ಫುಟ್ನಿಕ್ ವಿ ಲಸಿಕೆಯ ಸರಬರಾಜು 50 ಲಕ್ಷ ಡೋಸು ತಲುಪಲಿದೆ ಮತ್ತ್ತು ಭಾರತದಲ್ಲಿ ಅದರ ಉತ್ಪಾದನೆ ಆಗಸ್ಟ್ನಲ್ಲಿ ಆರಂಭವಾಗಲಿದೆ ಎಂದು ವರ್ಮ ಹೇಳಿದ್ದರು. ಭಾರತ ಮತ್ತು ರಷ್ಯ ಪ್ರತಿ ತಿಂಗಳು 35ರಿಂದ 40 ದಕ್ಷಲಕ್ಷ ಡೋಸುಗಳು ತಯಾರಿಸಲು ಯೋಜನೆ ಹಾಕಿಕೊಂಡಿವೆ.
ಸ್ಫುಟ್ನಿಕ್ ವಿ ಲಸಿಕೆಯ ಪರಿಣಾಮಕತ್ವ ಶಕ್ತಿ ಶೇಕಡಾ 97.6 ಆಗಿರುವುದರಿಂದ ಭಾರತದ ಬೃಹತ್ ಲಸಿಕಾ ಅಭಿಯಾನದಲ್ಲಿ ಅದು ದೊಡ್ಡ ಪಾತ್ರ ನಿರ್ವಹಿಸಲಿದೆ. ರಷ್ಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ನೀಡಿರುವ ಹೇಳಿಕೆಯ ಪ್ರಕಾರ ಸ್ಫುಟ್ನಿಕ್ ಲಸಿಕೆಯ ಪರಿಣಾಮಕತ್ವ ಶಕ್ತಿಯನ್ನು ರಷ್ಯದಲ್ಲಿ ಡಿಸೆಂಬರ್ 5, 2020 ರಿಂದ ಮಾರ್ಚ್ 31,2021 ರವರೆಗೆ ಲಸಿಕೆಯ ಎರಡು ಡೋಸುಗಳನ್ನು ಪಡೆದವರ ಮೇಲೆ ಅದು ಬೀರಿದ ಪರಿಣಾಮ ಆಧಾರದ ಮೇಲೆ ನಿರ್ಧರಿಸಲಾಗಿದೆ.
ಭಾರತದ ಬೃಹತ್ ಲಸಿಕಾ ಆಭಿಯಾನದಲ್ಲಿ ಮೂರು ಲಸಿಕಗಳನ್ನು ಬಳಸಲಾಗುತ್ತಿದೆ. ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್, ಹೈದರಾಬಾದ್ ಭಾರತ ಬಯೋಟೆಕ್ನ ಕೊವ್ಯಾಕ್ಸಿನ್ ಮತ್ತು ರಷ್ಯಾದ ಸ್ಫುಟ್ನಿಕ್ ವಿ.
ಏತನ್ಮಧ್ಯೆ, ಭಾರತದಲ್ಲಿ ಹರಡಿರುವ ನಾವೆಲ್ ಕೊರೊನಾ ವೈರಸ್ನ ರೂಪಾಂತರಿ ಮತ್ತು ಭಾರತೀಯರು ಹಾಗೂ ಭಾರತೀಯ ಮೂಲದ ಜನರ ವಿರುದ್ಧ ತಾನು ತಯಾರಿಸಿರುವ ಕೋವಿಡ್-19 ವ್ಯಾಕ್ಸಿನ್ ಭಾರೀ ಪರಿಣಾಮಕಾರಿಯಾಗಿದೆ ಎಂದು ಹೇಳಿರುವ ಅಮೇರಿಕದ ಬೃಹತ್ ಫಾರ್ಮಾಸ್ಯೂಟಿಕಲ್ ಕಂಪನಿ ಫೈಜರ್, ಭಾರತದಲ್ಲಿ ಅದರ ಫಾಸ್ಟ್-ಟ್ರ್ಯಾಕ್ ಅನುಮೋದನೆಯನ್ನು ಕೋರಿದೆ. ಈ ಲಸಿಕೆ 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಪ್ರಾಯದವರಿಗೂ ಸೂಕ್ತವಾಗಿದೆ ಮತ್ತು ಅದನ್ನು 2-8 ಡಿಗ್ರೀ ಸೆಲ್ಸಿಯಸ್ ಉಷ್ಣಾಂಶದಲ್ಲಿ ಒಂದು ತಿಂಗಳವರೆಗೆ ಸ್ಟೋರ್ ಮಾಡಬಹುದು ಎಂದು ಫೈಜರ್ ಸಂಸ್ಥೆ ಬುಧವಾರ ಹೇಳಿದೆ.