ಸಂಜಯ್ ಗಾಂಧಿ ಕಟ್ಟಾ ಬೆಂಬಲಿಗ, ಸೈಬರಾಬಾದ್ ಖ್ಯಾತಿಯ ಚಂದ್ರಬಾಬು ನಾಯ್ಡು ಕೈಗೆ ಮತ್ತೆ ಆಂಧ್ರ ಚುಕ್ಕಾಣಿ

ಕಳೆದ ಸೆಪ್ಟೆಂಬರ್‌ನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರವು ಚಂದ್ರಬಾಬುರನ್ನು ಬಂಧಿಸಿದಾಗ ನಾಯ್ಡು ಅವರ ರಾಜಕೀಯ ಜೀವನ ಪಾತಾಳ ಕಚ್ಚಿತ್ತು. ನಾಯ್ಡು ಕಾರಾಗೃಹದಲ್ಲಿ 2 ತಿಂಗಳು ಕಳೆದರು. ಅದರ ಫಲವೋ ಎಂಬಂತೆ ಕೇವಲ 8 ತಿಂಗಳಲ್ಲಿಯೇ ಚಂದ್ರಬಾಬು ನಾಯ್ಡು ಅವರಿಗೆ ದೊಡ್ಡ ಮಟ್ಟದ ಗೆಲುವು ದಕ್ಕಿದೆ. ಆಂಧ್ರದಲ್ಲಿ ಮತ್ತೆ ಅವರ ಹವಾ ಜೋರಾಗಿ ಬೀಸುತ್ತಿದೆ.

ಸಂಜಯ್ ಗಾಂಧಿ ಕಟ್ಟಾ ಬೆಂಬಲಿಗ, ಸೈಬರಾಬಾದ್ ಖ್ಯಾತಿಯ ಚಂದ್ರಬಾಬು ನಾಯ್ಡು ಕೈಗೆ ಮತ್ತೆ ಆಂಧ್ರ ಚುಕ್ಕಾಣಿ
ಸಂಜಯ್ ಗಾಂಧಿ ಕಟ್ಟಾ ಬೆಂಬಲಿಗ ಚಂದ್ರಬಾಬು ಕೈಗೆ ಮತ್ತೆ ಆಂಧ್ರ ಚುಕ್ಕಾಣಿ
Follow us
|

Updated on: Jun 06, 2024 | 2:41 PM

ಮುತ್ತಿನ ನಗರಿ ಹೈದರಾಬಾದ್ ಅನ್ನು ಖುಲಿ ಕುತುಬ್ ಷಾ ನಿರ್ಮಿಸಿದ ಮತ್ತು ನಾನು ಹೈದರಾಬಾದ್ ಸುತ್ತಲೂ ಸೈಬರಾಬಾದ್ ಕೋಟೆಯನ್ನು ನಿರ್ಮಿಸಿದೆ” ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವ ಛಾತಿಯಿರುವ 74ರ ಹರೆಯದ ನಾರಾ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ತಮ್ಮ ಕಾರ್ಯವೈಖರಿ ಬಗ್ಗೆ ಹೀಗೆ ಹೇಳಿಕೊಳ್ಳಬಲ್ಲ ಅಪರೂಪದ ರಾಜಕೀಯ ನಾಯಕ. ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧಿನಾಯಕ ಆಂಧ್ರಪ್ರದೇಶದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ರಾಷ್ಟ್ರೀಯವಾಗಿ ಕಿಂಗ್‌ಮೇಕರ್ ಆಗಿ ಹೊರಹೊಮ್ಮುತ್ತಿದ್ದಾರೆ – ಇದು ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ನೀಲಿಗಣ್ಣಿನ ನಾಯಕನ ಜೀವನದಲ್ಲಿ ಮತ್ತೊಂದು ಅಧ್ಯಾಯವನ್ನು ಬರೆಯುವಂತಾಗಿದೆ. 1995 ರಿಂದ 2004 ರವರೆಗೆ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ನಾಯ್ಡು ಅವರಿಗೆ ಹೈದರಾಬಾದ್ ಮಹಾನಗರವನ್ನು ತಂತ್ರಜ್ಞಾನದ ಕೇಂದ್ರವನ್ನಾಗಿ ಮಾಡಿದ ಕೀರ್ತಿ ಸಲ್ಲುತ್ತದೆ. ಅವರು 2014 ರಲ್ಲಿ ವಿಭಜನೆಯ ನಂತರ ಆಂಧ್ರ ಪ್ರದೇಶದ ಮೊದಲ ಮುಖ್ಯಮಂತ್ರಿಯಾದವರು. ಅವರು 2019 ರಲ್ಲಿ YSR ಕಾಂಗ್ರೆಸ್ ಪಕ್ಷದಿಂದ (YSRCP) ಸೋಲಿಸಲ್ಪಟ್ಟರು. ಆದರೆ ಐದು ವರ್ಷಗಳ ನಂತರ TDP ನೇತೃತ್ವದ ಮೈತ್ರಿ (ಭಾರತೀಯ ಜನತಾ ಪಕ್ಷ ಮತ್ತು ಜನಸೇನಾ ಪಕ್ಷ) ರಾಜ್ಯ ವಿಧಾನಸಭೆಯ 175 ಸ್ಥಾನಗಳ ಪೈಕಿ 165ರಲ್ಲಿ ಭಾರೀ ಪ್ರಮಾಣದಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯದ 25 ಲೋಕಸಭಾ ಸ್ಥಾನಗಳ ಪೈಕಿ 16ರಲ್ಲಿ ಟಿಡಿಪಿ ಮುನ್ನಡೆ ಸಾಧಿಸಿದ್ದು, ರಾಷ್ಟ್ರೀಯವಾಗಿ ಪ್ರಮುಖ ಶಕ್ತಿಯಾಗಿದೆ (ಬಿಜೆಪಿ ಮೂರು ಸ್ಥಾನಗಳಲ್ಲಿ ಮತ್ತು ಜನಸೇನೆ ಎರಡರಲ್ಲಿ ಮುಂದಿದೆ).

2023 ರ ಸೆಪ್ಟೆಂಬರ್‌ನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರವು ಅವರನ್ನು ಬಂಧಿಸಿದಾಗ ನಾಯ್ಡು ಅವರ ರಾಜಕೀಯ ಜೀವನ ಪಾತಾಳ ಕಚ್ಚಿತ್ತು. ನಾಯ್ಡು ಅವರು ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಸುಮಾರು ಎರಡು ತಿಂಗಳುಗಳನ್ನು ಕಳೆದರು. ಅದರ ಫಲವೋ ಎಂಬಂತೆ ಕೇವಲ ಎಂಟು ತಿಂಗಳಲ್ಲಿಯೇ ಚಂದ್ರಬಾಬು ನಾಯ್ಡು ಅವರಿಗೆ ಗೆಲುವು ದಕ್ಕಿದೆ.

1990 ರ ದಶಕದ ಅಂತ್ಯದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಜೊತೆಗಿನ ನಾಯ್ಡು ಭೇಟಿಯನ್ನು ಇಂದಿಗೂ ನೆನಪಿಸಿಕೊಳ್ಳುವ ಅವರ ಬೆಂಬಲಿಗರು ಉದ್ಯಮ ರಂಗದ ಪ್ರಗತಿಗೆ ಸಿಎಂ ನಾಯ್ಡು ಎಷ್ಟು ಕಟಿಬದ್ಧರಾಗಿದ್ದರು ಎಂಬುದನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತಾರೆ. ಗೇಟ್ಸ್ ಅವರು ಮುಖ್ಯಮಂತ್ರಿಯಾಗಿದ್ದ ನಾಯ್ಡು ಅವರನ್ನು 10 ನಿಮಿಷಗಳ ಕಾಲ ಭೇಟಿಯಾಗಬೇಕಿತ್ತು. ಆದರೆ ಅಪ್ಪಟ ರಾಜಕಾರಣಿ ಚಂದ್ರಬಾಬು ದೃಷ್ಟಿಕೋನದಿಂದ ಪ್ರಭಾವಿತರಾದ ಅವರು ಅದನ್ನು 45 ನಿಮಿಷಗಳವರೆಗೆ ವಿಸ್ತರಿಸಿದರು ಎಂಬುದು ಗಮನಾರ್ಹ. ಆ ಪರಿಣಾಮಕಾರಿ ಸಭೆಯ ಬಳಿಕ ಮೈಕ್ರೋಸಾಫ್ಟ್ ಭಾರತದಲ್ಲಿ ತನ್ನ ಅಭಿವೃದ್ಧಿ ಕೇಂದ್ರವನ್ನು ಆಂಧ್ರಪ್ರದೇಶದಲ್ಲಿ ಸ್ಥಾಪಿಸಲು ನಿರ್ಧರಿಸಿತು ಎಂಬುದು ಬಾಬು ಬುದ್ಧಿಮತ್ತೆಗೆ ಹಿಡಿದ ಸಾಣೆಯಾಗಿದೆ.

Also Read: Amaravati as Andhra Capital – ಆಂಧ್ರದಲ್ಲಿನ್ನು ಬಾಬು ಆಡಳಿತ -ಚಂದ್ರಬಾಬು ಕನಸಿನ ಅಮರಾವತಿ ಮತ್ತೆ ರಾಜಧಾನಿಯಾಗಲಿದೆಯೇ?

ಹೈದರಾಬಾದ್‌ನಲ್ಲಿ ತಮ್ಮ ಕೇಂದ್ರಗಳನ್ನು ಸ್ಥಾಪಿಸುವಂತೆ ಅಮೆರಿಕ ಮತ್ತು ಇತರ ದೇಶಗಳ ಕಾರ್ಪೊರೇಟ್​​ ಕಂಪನಿಗಳ ಮೊರೆ ಹೋಗಿದ್ದೆ. ಅದಕ್ಕಾಗಿ ತಾನು ಕಾಲ್ನಡಿಗೆಯಲ್ಲಿ ಆ ಐಟಿ ಕಂಪನಿಗಳಿಗೆ ಎಡತಾಕಿದ್ದೆ ಎಂದು ಅವರು ಒಮ್ಮೆ ಹೇಳಿದರು. ಗೇಟ್ಸ್ ಮತ್ತು ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಸತ್ಯ ನಾಡೆಲ್ಲಾ ಅವರಂತಹ ಜಾಗತಿಕ ಉದ್ಯಮದ ನಾಯಕರನ್ನು ಮನವೊಲಿಸುವ ನಾಯ್ಡು ಅವರ ಸಾಮರ್ಥ್ಯವು ಆಂಧ್ರಪ್ರದೇಶಕ್ಕೆ ಈಗ ಅಗತ್ಯವಾಗಿದೆ.

ಏಪ್ರಿಲ್ 20, 1950 ರಂದು ಚಿತ್ತೂರಿನ ನಾರಾವರಿ ಪಲ್ಲಿಯಲ್ಲಿ ಜನಿಸಿದ ನಾಯ್ಡು ಅವರು ತಮ್ಮ ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಭಾರೀ ಏರಿಳಿತಗಳನ್ನು ಕಂಡಿದ್ದಾರೆ. ಅವರು 1970 ರ ದಶಕದಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿದೆಸೆಯಲ್ಲಿಯೇ ರಾಜಕಾರಣಿಯಾದವರು. ಮೊದಲು ಅವರು ಕಾಂಗ್ರೆಸ್‌ನಲ್ಲಿದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಜಯ್ ಗಾಂಧಿಯವರ ಕಟ್ಟಾ ಬೆಂಬಲಿಗರಾಗಿದ್ದರು. ತರುವಾಯ ಅವರ ದಿವಂಗತ ಮಾವ ಮತ್ತು ತೆಲುಗು ಚಲನಚಿತ್ರ ಸೂಪರ್‌ಸ್ಟಾರ್ ಎನ್‌ಟಿ ರಾಮರಾವ್ ಅವರು ಸ್ಥಾಪಿಸಿದ ಟಿಡಿಪಿ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡವರು.

ಆದರೆ 1995ರ ಸೆಪ್ಟೆಂಬರ್‌ನಲ್ಲಿ ಅದೇ ಟಿಡಿಪಿ ಸಂಸ್ಥಾಪಕನ ವಿರುದ್ಧವೇ ದಂಗೆಯೆದ್ದರು. ನಂತರ ನಾಯ್ಡು ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ನಾಯ್ಡು ಅವರು ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಇದೇ ಮೊದಲಲ್ಲ. ಅವರು 1990 ರ ದಶಕದ ಅಂತ್ಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ಬಾಹ್ಯ ಬೆಂಬಲವನ್ನು ನೀಡಿದ್ದರು.

Also Read: ಆಂಧ್ರದ ನೂತನ ಸಿಎಂ ಬಾಬು ಈ 5 ಮೂಲಸೌಕರ್ಯ ಯೋಜನೆಗಳ ಕಡೆ ತಕ್ಷಣ ಗಮನಹರಿಸಲಿ

ಐಟಿ ಉದ್ಯಮ ಮತ್ತು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ವಿಷಯದಲ್ಲಿ ಅವರು ಅಗಾಧವಾದುದನ್ನು ಸಾಧಿಸಿದ್ದರು. ಅದರ ಆಧಾರದ ಮೇಲೆ ನಾಯ್ಡು 1999 ರ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳಿದರು. ಐದು ವರ್ಷಗಳ ನಂತರ ಆಂಧ್ರ ಪ್ರದೇಶವನ್ನು ವಿಭಜಿಸಲಾಯಿತು. ಅವರು ಅದರ ಮೊದಲ ಮುಖ್ಯಮಂತ್ರಿಯಾದರು. ಈ ಸಮಯದಲ್ಲಿ, ಅವರು “ಸ್ಮಾರ್ಟ್ ವಿಲೇಜ್, ಸ್ಮಾರ್ಟ್ ವಾರ್ಡ್” ಯೋಜನೆ ಮೂಲಕ ಗ್ರಾಮೀಣ ಆಂಧ್ರ ಪ್ರದೇಶವನ್ನು ಪರಿವರ್ತಿಸಲು ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಅವರು ಅಮರಾವತಿಯನ್ನು ರಾಜ್ಯದ ಹೊಸ ರಾಜಧಾನಿಯನ್ನಾಗಿ ಮಾಡಲು ಬಯಸಿದ್ದರು. ಆದರೆ 2019 ರಲ್ಲಿ ಜಗನ್​ ಮೋಹನ್​​ ಅವರ ವೈಎಸ್‌ಆರ್‌ಸಿಪಿ ಅಧಿಕಾರಕ್ಕೆ ಬಂದಾಗ ಯೋಜನೆ ಸ್ಥಗಿತಗೊಂಡಿತು.

2024 ರ ಚುನಾವಣೆಗಾಗಿ ಟಿಡಿಪಿ ಪಕ್ಷದ ಪ್ರಣಾಳಿಕೆಯಲ್ಲಿ, ನಾಯ್ಡು ಮತದಾರರಿಗೆ ಹಲವಾರು ಉಚಿತ ಭರವಸೆಗಳನ್ನು ನೀಡಿದ್ದರು. ಇವುಗಳಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ವಾರ್ಷಿಕ ಮೂರು ಉಚಿತ ಗ್ಯಾಸ್ ಸಿಲಿಂಡರ್‌ಗಳು ಮತ್ತು ರೈತರಿಗೆ ವಾರ್ಷಿಕ 20,000 ರೂ. ಒಳಗೊಂಡಿದೆ. 20 ಲಕ್ಷ ಉದ್ಯೋಗ ಸೃಷ್ಟಿ, ಮಾಸಿಕ 3,000 ರೂ. ನಿರುದ್ಯೋಗ ಭತ್ಯೆ, ಶಾಲಾ ವಿದ್ಯಾರ್ಥಿಗಳಿಗೆ ವರ್ಷಕ್ಕೆ 15,000 ಮತ್ತು 19-59 ವರ್ಷದೊಳಗಿನ ಮಹಿಳೆಯರಿಗೆ ಮಾಸಿಕ 1,500 ರೂ. ನೀಡುವ ಭರವಸೆಯನ್ನೂ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ