ಯೂನಿಯನ್ ಕಾರ್ಬೈಡ್ ತ್ಯಾಜ್ಯದ ವಿರುದ್ಧ ಭುಗಿಲೆದ್ದ ಪ್ರತಿಭಟನೆ; ಮಧ್ಯಪ್ರದೇಶದ ಪಿತಾಂಪುರದಲ್ಲಿ ಸೆಕ್ಷನ್ 163 ಜಾರಿ

|

Updated on: Jan 03, 2025 | 10:17 PM

ಮಧ್ಯಪ್ರದೇಶದಲ್ಲಿ ಸೆಕ್ಷನ್ 163ರ ಜಾರಿಯಾಗಿದೆ. ಇದರ ಅಡಿಯಲ್ಲಿ ದೊಡ್ಡ ಸಭೆಗಳು, ಮೆರವಣಿಗೆಗಳು ಮುಂತಾದವುಗಳ ಮೇಲೆ ನಿಷೇಧ ಸೇರಿದಂತೆ ಹಲವಾರು ನಿಬಂಧನೆಗಳನ್ನು ವಿಧಿಸಲಾಗಿದೆ. ಯೂನಿಯನ್ ಕಾರ್ಬೈಡ್‌ನಿಂದ 337 ಟನ್ ಅಪಾಯಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡಲು ಯೋಜಿಸಿರುವುದನ್ನು ವಿರೋಧಿಸಿ ಮಧ್ಯಪ್ರದೇಶದ ಪಿತಾಂಪುರದಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಯೂನಿಯನ್ ಕಾರ್ಬೈಡ್ ತ್ಯಾಜ್ಯದ ವಿರುದ್ಧ ಭುಗಿಲೆದ್ದ ಪ್ರತಿಭಟನೆ; ಮಧ್ಯಪ್ರದೇಶದ ಪಿತಾಂಪುರದಲ್ಲಿ ಸೆಕ್ಷನ್ 163 ಜಾರಿ
Pithampur Protests
Follow us on

ಪಿತಾಂಪುರ: ಯೂನಿಯನ್ ಕಾರ್ಬೈಡ್‌ನಿಂದ 337 ಟನ್ ಅಪಾಯಕಾರಿ ತ್ಯಾಜ್ಯ ವಿಲೇವಾರಿ ವಿರೋಧಿಸಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸೆಕ್ಷನ್ 163 (ಹಿಂದಿನ ಸೆಕ್ಷನ್ 144) ವಿಧಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ನಿರ್ಬಂಧಗಳು ತಕ್ಷಣವೇ ಜಾರಿಗೆ ಬರುತ್ತವೆ. ಈ ಬಗ್ಗೆ ಮಾಹಿತಿ ನೀಡಿರುವ ಧಾರ್ ಕಲೆಕ್ಟರ್ ಪ್ರಿಯಾಂಕ್ ಮಿಶ್ರಾ, ಸಿಎಂ ನಿರ್ದೇಶನದ ಮೇರೆಗೆ ಸಾರ್ವಜನಿಕರೊಂದಿಗೆ ಸಂವಹನ ನಡೆಸುವುದು ನಮ್ಮ ಆದ್ಯತೆಯಾಗಿದೆ. ನಾವು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾರದರ್ಶಕತೆಯಿಂದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದಿದ್ದಾರೆ.

ಇಂದು ಈ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ವಿರೋಧಿಸಿ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆಗೆ ಯತ್ನಿಸಿದರು. ಆದರೆ, ಅವರನ್ನು ಸ್ಥಳೀಯ ಆಸ್ಪತ್ರೆಯಿಂದ ಇಂದೋರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅವರು ಸದ್ಯಕ್ಕೆ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಜಲಕ್ಷಾಮದ ಮಧ್ಯೆ ಕಲುಷಿತ ನೀರಿನ ಸಂಕಷ್ಟ; ಮಣ್ಣು, ತ್ಯಾಜ್ಯಮಿಶ್ರಿತ ನೀರಿನಿಂದ ಶಾಂತಿಲಾಲ್ ಲೇಔಟ್ ಜನರು ಹೈರಾಣು

ಇಂದೋರ್‌ನಿಂದ ಸುಮಾರು 30 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಟೌನ್‌ಶಿಪ್‌ಗೆ ಅಪಾಯಕಾರಿ ವಸ್ತುಗಳನ್ನು ಸ್ಥಳಾಂತರಿಸುವುದರಿಂದ ಪರಿಸರದ ಪರಿಣಾಮಗಳ ಬಗ್ಗೆ ಜನರ ಕಳವಳದಿಂದ ಪ್ರತಿಭಟನೆಗಳು ಪ್ರಾರಂಭವಾದವು. ಪಿತಾಂಪುರ ಬಚಾವೋ ಸಮಿತಿ ಬಂದ್‌ಗೆ ಕರೆ ನೀಡಿದೆ.

ಪಿತಾಮ್‌ಪುರ ಬಚಾವೋ ಸಮಿತಿ ನೀಡಿದ ಬಂದ್‌ ಕರೆ ನಡುವೆಯೇ ಪಟ್ಟಣದ ಹಲವು ಭಾಗಗಳಲ್ಲಿ ದಿನವಿಡೀ ಪ್ರತಿಭಟನೆ ಮುಂದುವರಿದಿದ್ದು, ತ್ಯಾಜ್ಯ ದಹನ ಮಾಡಲು ಉದ್ದೇಶಿಸಿರುವ ಕೈಗಾರಿಕಾ ಘಟಕಕ್ಕೆ ಗುಂಪೊಂದು ಮೆರವಣಿಗೆ ನಡೆಸಿತು. ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಪ್ರತಿಭಟನೆಯ ಸಮಯದಲ್ಲಿ, ಐಷರ್ ಮೋಟಾರ್ಸ್ ಬಳಿ ಒಂದು ಗುಂಪು ರಸ್ತೆಯನ್ನು ನಿರ್ಬಂಧಿಸಿತು. ಆದರೆ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

500-600 ಜನರ ಗುಂಪು ರಾಮ್ಕಿ ಗ್ರೂಪ್‌ನ ಕೈಗಾರಿಕಾ ತ್ಯಾಜ್ಯ ನಿರ್ವಹಣಾ ಪ್ರೈವೇಟ್ ಲಿಮಿಟೆಡ್ ಆವರಣಕ್ಕೆ ಮೆರವಣಿಗೆ ನಡೆಸಿತು. ಅಲ್ಲಿ ಕೈಗಾರಿಕಾ ತ್ಯಾಜ್ಯವನ್ನು ಸುಡಲಾಗುತ್ತದೆ.

ಇದನ್ನೂ ಓದಿ: Bhopal Gas Tragedy: ಭೋಪಾಲ್ ಅನಿಲ ದುರಂತದ ಪರಿಹಾರದ ಬಗ್ಗೆ 30 ವರ್ಷದ ನಂತರ ಮರುಪರಿಶೀಲನೆ ಅಸಾಧ್ಯ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಪ್ರತಿಭಟನೆಗೆ ಕಾರಣ:

ಭೋಪಾಲ್ ಅನಿಲ ದುರಂತ ನಡೆದ 4 ದಶಕಗಳ ನಂತರ, ಮಧ್ಯಪ್ರದೇಶದಲ್ಲಿ ನಿಷ್ಕ್ರಿಯಗೊಂಡ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯ ವಿಷಕಾರಿ ತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿಗಾಗಿ ಪಿತಾಂಪುರಕ್ಕೆ ಸ್ಥಳಾಂತರಿಸಲಾಯಿತು. ಈ ಅಪಾಯಕಾರಿ ತ್ಯಾಜ್ಯದ 12 ಕಂಟೈನರ್‌ಗಳು ಇಲ್ಲಿಗೆ ಬಂದವು. 40 ವರ್ಷಗಳ ಹಿಂದೆ ಸಂಭವಿಸಿದ ಯೂನಿಯನ್ ಕಾರ್ಬೈಡ್ ದುರಂತದ ಅವಶೇಷಗಳು ಇನ್ನೂ ಇದ್ದು, ಭೋಪಾಲ್‌ನಲ್ಲಿ ಕನಿಷ್ಠ 5,479 ಜನರು ಸಾವನ್ನಪ್ಪಿ ಸಾವಿರಾರು ಜನರು ಗಂಭೀರ ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ತ್ಯಾಜ್ಯವನ್ನು ಪಿತಾಂಪುರಕ್ಕೆ ಸ್ಥಳಾಂತರಿಸಿದ್ದರಿಂದ ಜನರು ಪ್ರತಿಭಟನೆ ಆರಂಭಿಸಿ ಪಟ್ಟಣದಲ್ಲಿ ಕಾರ್ಬೈಡ್ ತ್ಯಾಜ್ಯವನ್ನು ಸುಡುವುದರಿಂದ ಸ್ಥಳೀಯ ಜನರ ಆರೋಗ್ಯ ಹಾಗೂ ಪರಿಸರಕ್ಕೆ ಹಾನಿಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ