Shadow Killings: ಪಾಕಿಸ್ತಾನದ ಜನರ ದಾರಿ ತಪ್ಪಿಸಲು ಕಾಶ್ಮೀರದಲ್ಲಿ ಹಿಂದೂಗಳ ಕೊಲೆ; ಗುಪ್ತಚರ ವರದಿಯಲ್ಲಿ ಮಾಹಿತಿ

ಪಾಕಿಸ್ತಾನದಲ್ಲಿ ಶಾಂತಿ ಕಾಪಾಡಲು ಅಲ್ಲಿನ ಸರ್ಕಾರ ಕಾಶ್ಮೀರದಲ್ಲಿ ಹಿಂಸಾಚಾರಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಗುಪ್ತಚರ ಮೂಲಗಳು ವರದಿ ಮಾಡಿವೆ.

Shadow Killings: ಪಾಕಿಸ್ತಾನದ ಜನರ ದಾರಿ ತಪ್ಪಿಸಲು ಕಾಶ್ಮೀರದಲ್ಲಿ ಹಿಂದೂಗಳ ಕೊಲೆ; ಗುಪ್ತಚರ ವರದಿಯಲ್ಲಿ ಮಾಹಿತಿ
ಕಾಶ್ಮೀರದಲ್ಲಿ ಹತ್ಯೆ ಖಂಡಿಸಿ ಪಂಡಿತರ ಪ್ರತಿಭಟನೆ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jun 04, 2022 | 10:13 AM

ದೆಹಲಿ: ಕಾಶ್ಮೀರದಲ್ಲಿ (Jammu Kashmir) ಇತ್ತೀಚಿನ ದಿನಗಳಲ್ಲಿ ಹಿಂದೂಗಳು ಮತ್ತು ವಲಸೆ ಕಾರ್ಮಿಕರನ್ನು ಪ್ರತ್ಯೇಕಿಸಿ, ಬೆನ್ನಟ್ಟಿ ಹತ್ಯೆ ಮಾಡುವ (Shadow Killings) ಪ್ರಕರಣಗಳಿಗೂ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿಗೂ ಸಂಬಂಧವಿದೆ ಎಂದು ಭಾರತದ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆ ಹಾಗೂ ನ್ಯೂಸ್ 18 ಸುದ್ದಿತಾಣಗಳು ವರದಿ ಮಾಡಿವೆ. ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ಬದಲಾಗುತ್ತಿದೆ. ಭಾರತದ ವಿರುದ್ಧ ದ್ವೇಷ ಮತ್ತು ಕಾಶ್ಮೀರದ ವಿಚಾರದಲ್ಲಿ ಸ್ಥಳೀಯರ ಭಾವನೆಗಳನ್ನು ಬಡಿದೆಬ್ಬಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಆತಂಕದಿಂದ ಅಲ್ಲಿನ ಸರ್ಕಾರ ಕಾಶ್ಮೀರದಲ್ಲಿ ಹಿಂಸಾಚಾರ ಆರಂಭಿಸಲು ಉಗ್ರಗಾಮಿ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಕೊಲ್ಲಬೇಕಿರುವ 200 ಮಂದಿಯ ಪಟ್ಟಿ ಸಿದ್ಧಪಡಿಸಿದ್ದು, ಆರು ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು ಎಂದು ವರದಿಗಳು ಹೇಳಿವೆ.

ಇತ್ತೀಚೆಗೆ ಪದಚ್ಯುತರಾದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವಧಿಪೂರ್ವ ಚುನಾವಣೆಗಳಿಗೆ ಒತ್ತಾಯಿಸುತ್ತಿದ್ದು, ದೇಶಾದ್ಯಂತ ಪ್ರತಿಭಟನೆಗಳಿಗೆ ಕರೆ ನೀಡಿದ್ದಾರೆ. ಇಮ್ರಾನ್​ ಖಾನ್​ರ ತೆಹ್ರಿಕ್-ಎ-ಇನ್ಸಾಫ್ ಪಕ್ಷವು ಆಯೋಜಿಸುತ್ತಿರುವ ಪ್ರತಿಭಟನಾ ಮೆರವಣಿಗೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದು, ದೇಶದ ಹಲವೆಡೆ ಹಿಂಸಾಚಾರಗಳು ನಿರಂತರವಾಗಿ ವರದಿಯಾಗುತ್ತಿವೆ. ಈ ನಡುವೆ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದೊಂದಿಗೂ ಪಾಕಿಸ್ತಾನದ ಸಂಬಂಧ ಹಳಸಿದ್ದು, ಅಫ್ಘಾನ್ ಗಡಿಯಲ್ಲಿ ಪಾಕ್ ಯೋಧರ ಹತ್ಯೆಗಳು ದಿನನಿತ್ಯ ಎಂಬಂತೆ ವರದಿಯಾಗುತ್ತಿವೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಪಾಕಿಸ್ತಾನದಲ್ಲಿ ಆಹಾರ ಸಾಮಗ್ರಿಗಳು ಮತ್ತು ಇಂಧನ ಬೆಲೆಏರಿಕೆಯಿಂದ ಜನಜೀವನ ತತ್ತರಿಸಿದೆ. ರಾಜಕೀಯ ವಿದ್ಯಮಾನಗಳಿಂದ ಅಂತರ ಕಾಪಾಡಿಕೊಂಡಿರುವ ಸೇನೆ, ಮೇಲ್ನೋಟಕ್ಕೆ ತಟಸ್ಥ ನೀತಿಗೆ ಮೊರೆ ಹೋಗಿದೆ.

ಇಮ್ರಾನ್ ಖಾನ್ ಅವರು ತಮ್ಮ ಪದಚ್ಯುತಿಗೆ ಅಂತರರಾಷ್ಟ್ರೀಯ ಸಂಚು ಕಾರಣ ಎಂದು ಹೇಳಿಕೆ ನೀಡಿದ ನಂತರ ಅಮೆರಿಕ ಸಹ ಮೊದಲಿನಂತೆ ಪಾಕಿಸ್ತಾನಕ್ಕೆ ನೆರವು ಒದಗಿಸುತ್ತಿಲ್ಲ. ಅಫ್ಘಾನಿಸ್ತಾನದಿಂದ ನ್ಯಾಟೊ ಪಡೆಗಳು ಹಿಂದಿರುಗಿದ ನಂತರ ಪಾಕಿಸ್ತಾನದ ಪ್ರಾಮುಖ್ಯತೆಯೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕಡಿಮೆಯಾಗಿದೆ. ಪಾಕಿಸ್ತಾನದ ನೆಚ್ಚಿನ ಸ್ನೇಹಿತ ರಾಷ್ಟ್ರ ಚೀನಾ ಸಹ ಆರ್ಥಿಕ ಇಳಿತದ ಹಾದಿಯಲ್ಲಿದೆ. ಜೊತೆಗೆ ಬಾಕಿ ಉಳಿಸಿಕೊಂಡಿರುವ ಕೋಟ್ಯಂತರ ಡಾಲರ್ ಮೊತ್ತದ ವಿದ್ಯುತ್ ಬಿಲ್ ಪಾವತಿಸುವಂತೆ ಪಾಕಿಸ್ತಾನಕ್ಕೆ ತಾಕೀತು ಮಾಡುತ್ತಿದೆ. ಹೀಗೆ ಏಕಕಾಲಕ್ಕೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿರುವ ಪಾಕಿಸ್ತಾನವು ಅಲ್ಲಿನ ಜನರ ಭಾವನೆಗಳನ್ನು ಬಡಿದೆಬ್ಬಿಸುವ ಮೂಲಕ ಅವರ ಗಮನವನ್ನು ಬೇರೆಡೆ ಹರಿಸುವ ತಂತ್ರಕ್ಕೆ ಮೊರೆ ಹೋಗಿದೆ. ಕಾಶ್ಮೀರದಲ್ಲಿ ಇತ್ತೀಚೆಗೆ ವರದಿಯಾದ ಹಲವು ಹಿಂಸಾಚಾರಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಚಿತಾವಣೆ ಕೆಲಸ ಮಾಡಿದೆ ಎಂದು ಭಾರತದ ಗುಪ್ತಚರ ಮೂಲಗಳು ಬೊಟ್ಟು ಮಾಡಿವೆ.

‘ಭಾರತ ದ್ವೇಷ ಮತ್ತು ಕಾಶ್ಮೀರದ ಅಜೆಂಡಾಗಳಿಂದ ದೂರ ಉಳಿಯುವುದು ಪಾಕಿಸ್ತಾನದ ಮಟ್ಟಿಗೆ ದೊಡ್ಡ ರಾಜಕೀಯ ಇಚ್ಛಾಶಕ್ತಿ ಬೇಡುವ ನಿರ್ಧಾರವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಅಸಾಧ್ಯ. ಪಾಕಿಸ್ತಾನದ ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿನ ಜನಸಾಮಾನ್ಯರನ್ನು ತಣ್ಣಗಾಗಿಸಲು ಮತ್ತು ಸರ್ಕಾರದ ವಿರುದ್ಧದ ಅವರ ಆಕ್ರೋಶ ತಣಿಸಲು ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಹೆಚ್ಚಾಗಬೇಕಿದೆ’ ಎಂದು ಪಾಕಿಸ್ತಾನದ ಉನ್ನತ ವಲಯದಲ್ಲಿ ನಡೆದ ಚರ್ಚೆಯನ್ನು ಮಾಧ್ಯಮಗಳು ವರದಿ ಮಾಡಿವೆ.

‘ಜಪಾನ್ ರಾಜಧಾನಿ ಟೋಕಿಯೊದಲ್ಲಿ ಇತ್ತೀಚೆಗೆ ನಡೆದ ಕ್ವಾಡ್ ಸಮಾವೇಶದಲ್ಲಿ ಭಾರತಕ್ಕೆ ಸಿಕ್ಕ ಮನ್ನಣೆಯು ಚೀನಾ-ಪಾಕಿಸ್ತಾನಗಳ ಕಣ್ಣು ಕೆಂಪಾಗಿಸಿವೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ತಗ್ಗಿಸುವ ಕಾರ್ಯತಂತ್ರಗಳನ್ನು ಎರಡೂ ದೇಶಗಳು ರೂಪಿಸುತ್ತಿದ್ದು, ಭಾರತಕ್ಕೆ ಆಂತರಿಕ ಭದ್ರತೆಯ ಸಮಸ್ಯೆ ಒಡ್ಡುವುದನ್ನೂ ಒಂದು ಮಾರ್ಗವಾಗಿ ಬಳಸುವ ಬಗ್ಗೆ ಪಾಕಿಸ್ತಾನಕ್ಕೆ ಯಾವುದೇ ಹಿಂಜರಿಕೆ ಇರಬಾರದು’ ಎಂಬ ಮಾತುಗಳು ಪಾಕಿಸ್ತಾನದ ಚಿಂತಕರ ಚಾವಡಿಯಲ್ಲಿ ಕೇಳಿಬರುತ್ತಿವೆ.

‘ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯ ನಿಯೋಗ ಇತ್ತೀಚೆಗೆ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿತ್ತು. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವೂ ಹಲವು ಮಾನವೀಯ ನೆರವನ್ನು ಭಾರತ ಸರ್ಕಾರದಿಂದ ಕೋರಿದೆ. ಭಾರತ ಮತ್ತು ಅಫ್ಘಾನಿಸ್ತಾನಗಳು ಎಂದಿಗೂ ಹತ್ತಿರವಾಗಬಾರದು ಎನ್ನುವುದು ಪಾಕಿಸ್ತಾನದ ವಿದೇಶಾಂಗ ನೀತಿಯ ಮುಖ್ಯ ಗುರಿ. ಒಂದು ವೇಳೆ ಇದು ಸಾಧ್ಯವಾದರೆ ಮುಂದೊಂದು ದಿನ ಅಫ್ಘಾನಿಸ್ತಾನದಲ್ಲಿ ನಡೆಸುತ್ತಿರುವ ಮಾನವೀಯ ನೆರವಿನ ಚಟುವಟಿಕೆಗಳಿಗೆ ಪಾಕಿಸ್ತಾನದ ಬದಲು ಭಾರತವನ್ನೇ ವಿಶ್ವಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಆಶ್ರಯಿಸಬಹುದು ಎನ್ನುವುದು ಪಾಕಿಸ್ತಾನದ ಆತಂಕ. ಹೀಗಾಗಿಯೇ ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಸುವ ಮೂಲಕ ಭಾರತದ ಆದ್ಯತೆ ಬದಲಿಸಲು ಪಾಕಿಸ್ತಾನವು ಯತ್ನಿಸುತ್ತಿದೆ’ ಎಂಬ ಮಾತುಗಳು ಕೇಳಿ ಬರುತ್ತಿವೆ.

‘ಕಾಶ್ಮೀರದ ವಿಚಾರದಲ್ಲಿ ಭಾರತ ಈವರೆಗೆ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಒಪ್ಪುತ್ತಿಲ್ಲ. ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಮಧ್ಯಸ್ಥಿತಿಕೆ ವಹಿಸಿ, ಕಾಶ್ಮೀರ ವಿವಾದ ಶಮನ ಮಾಡುತ್ತೇನೆ ಎಂದು ಮುಂದೆ ಬಂದಾಗಲೂ ಭಾರತ ಒಪ್ಪಿರಲಿಲ್ಲ. ಆದರೆ ಇದೀಗ ಅರಬ್ ಸಂಯುಕ್ತ ಸಂಸ್ಥಾನದ ಮಧ್ಯಸ್ಥಿಕೆ ಪ್ರಸ್ತಾವಕ್ಕೆ ಭಾರತ ಪೂರಕವಾಗಿ ಸ್ಪಂದಿಸಿರುವುದು ಪಾಕಿಸ್ತಾನದ ಕಣ್ಣು ಕೆಂಪಾಗಿಸಿದೆ. ಈ ಸಾಧ್ಯತೆ ಇಲ್ಲವಾಗಿಸಬೇಕು ಎನ್ನುವ ಕಾರಣಕ್ಕೆ ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಿಸಲು ಪಾಕಿಸ್ತಾನವು ಉಗ್ರರನ್ನು ಬಳಸಿಕೊಳ್ಳುತ್ತಿದೆ’ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥರು ಗಡಿ ನಿಯಂತ್ರಣ ರೇಖೆಗೆ ಹಲವು ಬಾರಿ ಭೇಟಿ ನೀಡಿದ್ದಾರೆ. ಅಲ್ಲಿನ ಸ್ಥಳೀಯರು ಮತ್ತು ಕಮಾಂಡರ್​ಗಳ ಜೊತೆಗೆ ಹಲವು ಸಭೆಗಳನ್ನು ನಡೆಸಿದ್ದಾರೆ. ಪಾಕ್ ರಾಜಕಾರಣ ಮತ್ತು ವಿದೇಶಾಂಗ ನೀತಿಯಲ್ಲಿ ಗಮನಾರ್ಹ ಪಾತ್ರ ನಿರ್ವಹಿಸುವ ಅಲ್ಲಿನ ಸೇನೆಯ ಪಾತ್ರವನ್ನು ಈಗ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದೊಂದಿಗೆ ತಳಕು ಹಾಕಿ ವಿಮರ್ಶಿಸಲಾಗುತ್ತಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:13 am, Sat, 4 June 22