ದೆಹಲಿ ವಿಧಾನಸಭೆ ಚುನಾವಣೆಗೆ ಹೈವೋಲ್ಟೇಜ್, ದಕ್ಷಿಣದ 300 ಕೇಸರಿ ಕಲಿಗಳಿಂದ ಕ್ಯಾಂಪೇನ್!

  • TV9 Web Team
  • Published On - 6:53 AM, 5 Feb 2020
ದೆಹಲಿ ವಿಧಾನಸಭೆ ಚುನಾವಣೆಗೆ ಹೈವೋಲ್ಟೇಜ್, ದಕ್ಷಿಣದ 300 ಕೇಸರಿ ಕಲಿಗಳಿಂದ ಕ್ಯಾಂಪೇನ್!

ದೆಹಲಿ: ಎಲೆಕ್ಷನ್​ಗೆ ಕೌಂಟ್​ಡೌನ್ ಶುರುವಾಗಿದೆ. ರಾಷ್ಟ್ರದ ಚಿತ್ತವನ್ನೇ ತನ್ನತ್ತ ಸೆಳೆದಿರೋ ದೆಹಲಿ ಚುನಾವಣೆಗೆ ಇನ್ನು ಮೂರೇ ದಿನ ಬಾಕಿ ಉಳಿದಿದೆ. ಮತದಾರನ್ನ ಸೆಳೆಯಲು ಬಿರುಸಿನ ಪ್ರಚಾರ ನಡೆದಿದ್ದು, ದಕ್ಷಿಣ ಭಾರತೀಯರ ಮತಬೇಟೆಗೆ ಬಿಜೆಪಿ ರಣತಂತ್ರವನ್ನೇ ರೂಪಿಸಿದೆ.

ರಾಷ್ಟ್ರ ರಾಜಧಾನಿಯ ಪಟ್ಟ. ದೆಹಲಿಯ ಗದ್ದುಗೆ. ದೇಶದ ಹೃದಯಭಾಗವಾಗಿರೋ ದಿಲ್ಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರೂ ರಾಜಕೀಯ ಪಕ್ಷಗಳು ನಾ ಮುಂದು ತಾ ಮುಂದು ಅಂತಾ ತುದಿಗಾಲಲ್ಲಿ ನಿಂತಿವೆ. ರಾಷ್ಟ್ರೀಯ ಪಕ್ಷಗಳ ವಿರುದ್ಧವೇ ತಿರುಗಿ ಬಿದ್ದಿರೋ ಆಮ್ ಆದ್ಮಿ ಪಾರ್ಟಿ, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿ ನಿಂತಿದೆ. ಹೀಗಾಗಿ, ದೆಹಲಿಯಲ್ಲಿ ನಡೆಯಲಿರೋ ಎಲೆಕ್ಷನ್ ಯುದ್ಧಭೂಮಿಯಾಗಿ ಪರಿವರ್ತನೆಯಾಗಿದೆ.

ದಕ್ಷಿಣ ಭಾರತೀಯರ ಮತಗಳ ಮೇಲೆ ಬಿಜೆಪಿ ಕಣ್ಣು!
ದೆಹಲಿಯಲ್ಲಿ ಶತಾಯಗತಾಯ ಪಟ್ಟಕ್ಕೇರಲೇಬೇಕು. ಆಡಳಿತದಲ್ಲಿರುವ ಕೇಜ್ರಿವಾಲ್​ರ ಪೊರಕೆಯನ್ನೆ ಮೂಲೆಗುಂಪು ಮಾಡಲೇಬೇಕು ಅಂತಾ ಬಿಜೆಪಿ ಪಣತೊಟ್ಟಿದೆ. ಹೀಗಾಗಿ, ಪ್ರತಿಷ್ಠೆಯ ಚುನಾವಣೆ ಗೆಲ್ಲಲು ನಾನಾ ಕಸರತ್ತು ನಡೆಸ್ತಿದೆ. ಏಟಿಗೆ ಎದಿರೇಟು ಕೊಟ್ಟು ಗೆಲ್ಲಲು ಮಾಸ್ಟರ್​ಪ್ಲ್ಯಾನ್ ಮಾಡಿದ್ದು, ದಕ್ಷಿಣ ಭಾರತೀಯರ ವೋಟ್​ ಮೇಲೆ ಬಿಜೆಪಿ ಕಣ್ಣಿಟ್ಟಿದೆ.

ಯಾಕಂದ್ರೆ, ದೆಹಲಿಯಲ್ಲಿ ಶೇ.60 ರಷ್ಟು ಜನರು ಹೊರ ಭಾಗದಿಂದಲೇ ಬಂದು ನೆಲೆಸಿದ್ದಾರೆ. ಹೀಗಾಗಿ, ಇವರ ಮತಗಳನ್ನ ಸೆಳೆಯಲು ದಕ್ಷಿಣ ಕೇಸರಿ ಕಲಿಗಳನ್ನ ಕರೆಸಿ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶದ ತೆಲಂಗಾಣ ಹಾಗೂ ಮಹಾರಾಷ್ಟ್ರದ ಮೂಲದ ಜನರು ದೆಹಲಿಯಲ್ಲಿರುವ ಪ್ರದೇಶಗಳಲ್ಲಿ ಮತಬೇಟೆ ನಡೆಸಲಿದ್ದಾರೆ.

ದಿಲ್ಲಿ ದಿಲ್ ಗೆಲ್ಲಲು ಪ್ಲ್ಯಾನ್:
240 ಸಂಸದರು, ಕೇಂದ್ರ ಸಚಿವರು ಸೇರಿ ಸುಮಾರು 300 ಮಂದಿ ಬಿಜೆಪಿ ಕಾರ್ಯಕರ್ತರು ಎಬಿವಿಪಿ, ಆರ್‌ಎಸ್‌ಎಸ್‌ನ ಸ್ವಯಂ ಸೇವಕರು ಚುನಾವಣಾ ಕಣದಲ್ಲಿ ಪ್ರಚಾರ ನಡೆಸಿದ್ದಾರೆ. ಒಟ್ಟು 70 ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳನ್ನ ಗುರುತಿಸಿದ್ದು ಪ್ರತಿ ಕ್ಷೇತ್ರಕ್ಕೆ 5-6 ಮಂದಿಯ ತಂಡ ರಚಿಸಲಾಗಿದೆ. ಈ ಗುಂಪುಗಳು ಮನೆ ಮನೆ ಸಂಪರ್ಕ ಮಾಡುವ ಮೂಲಕ ಮತಗಳನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ದೆಹಲಿ ಕನ್ನಡಿಗರಿಗಾಗಿ ಕೇಂದ್ರ ಸಚಿವರ ಟ್ರಂಪ್ ಕಾರ್ಡ್:
ಕರ್ನಾಟಕದಿಂದ 35 ಮಂದಿ ಕಾರ್ಯಕರ್ತರು ದೆಹಲಿಯಲ್ಲಿ ಪ್ರಚಾರ ನಡೆಸಿದ್ದು, ಕರ್ನಾಟಕದ ಮತಗಳನ್ನು ಸೆಳೆಯುತ್ತಿದ್ದಾರೆ‌. ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಶಿ ಕೆಲ ಸಂಸದರ ಮೂಲಕ ದೆಹಲಿ ಕನ್ನಡಿಗರ ಮತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಇಬ್ಬರು ಕೇಂದ್ರ ಸಚಿವರು ದೆಹಲಿಯ ಕನ್ನಡಿಗರು ಸೇರಿ ಇತರೆ ರಾಜ್ಯದ ಕೆಲ ಸಂಘ ಸಂಸ್ಥೆಗಳ ಮುಖಂಡರ ಸಭೆ ನಡೆಸಿ ಬಿಜೆಪಿ‌ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ದೆಹಲಿ ಕನ್ನಡಿಗರ ಮನೆ ಮನೆಗೆ ತೆರಳಿ ಸಂಸದೆ ಶೋಭಾ ಕರಂದ್ಲಾಜೆ, ನಟಿ ತಾರಾ ಪ್ರಚಾರ ನಡೆಸಿದ್ದಾರೆ. ಇದರ ಜೊತೆಗೆ ಇಂದು ದೆಹಲಿ ಕರ್ನಾಟಕ ಸಂಘದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜ್ಯ ಬಿಜೆಪಿ ನಾಯಕರು ದೆಹಲಿ ಕನ್ನಡಿಗರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡಲಿದ್ದಾರೆ.