ಮಿಜೋರಾಂನಲ್ಲಿ ಕಲ್ಲು ಕ್ವಾರಿ ಕುಸಿತ ಪ್ರಕರಣ; ಎಂಟು ಮಂದಿ ಸಾವು, ಮುಂದುವರಿದ ನಾಲ್ವರ ಶೋಧ ಕಾರ್ಯ
ಮಿಜೋರಾಂನಲ್ಲಿ ಕಲ್ಲು ಕ್ವಾರಿ ಕುಸಿದು ಎಂಟು ಮಂದಿ ಸಾವನ್ನಪ್ಪಿದ್ದು, ಅವಶೇಷಗಳಡಿ ಸಿಲುಕಿದ ಉಳಿದ ನಾಲ್ವರ ಶೋಧ ಕಾರ್ಯ ಮುಂದುವರಿದಿದೆ.

ಗುವಾಹಟಿ: ಮಿಜೋರಾಂ (Mizoram)ನ ಹ್ನಾಥಿಯಲ್ ಜಿಲ್ಲೆಯಲ್ಲಿ ಸೋಮವಾರ ಕಲ್ಲು ಕ್ವಾರಿಯೊಂದು ಕುಸಿದು (stone quarry collapse) ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ನಾಲ್ವರು ಇನ್ನೂ ನಾಪತ್ತೆಯಾಗಿದ್ದು, ಅವರನ್ನು ರಕ್ಷಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಕ್ವಾರಿ ಸೈಟ್ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಅವಶೇಷಗಳಡಿ ಸಿಲುಕಿದ್ದ 12 ಜನರ ಪೈಕಿ ಮಂಗಳವಾರ ಬೆಳಗ್ಗೆ 7 ರವರೆಗೆ ಎಂಟು ಮಂದಿಯ ಶವಗಳನ್ನು ಹೊರತೆಗೆಯಲಾಗಿದೆ. ನಾಪತ್ತೆಯಾಗಿರುವ ಉಳಿದ ವ್ಯಕ್ತಿಗಳ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹ್ನಥಿಯಾಲ್ ಜಿಲ್ಲಾ ಉಪ ಆಯುಕ್ತ ಆರ್.ಲಾಲರೇಮಸಂಗ ಹೇಳಿದರು.
ಮಂಗಳವಾರ ಬೆಳಗ್ಗೆ 2 ಅಧಿಕಾರಿಗಳು ಮತ್ತು 13 ಸಿಬ್ಬಂದಿಯನ್ನು ಒಳಗೊಂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡವು ಸ್ಥಳಕ್ಕೆ ಆಗಮಿಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಲಾಲರೇಮಸಂಗ ತಿಳಿಸಿದ್ದಾರೆ. “ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಗುರುತಿಸಲಾಗುವುದು. ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಮತ್ತು ಕಾಣೆಯಾದವರೆಲ್ಲರೂ ಪತ್ತೆಯಾಗುವವರೆಗೂ ಮುಂದುವರೆಸಲಾಗುವುದು” ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಮೂಲಗಳ ಪ್ರಕಾರ ಮೌದರ್ಹ್ ಹ್ನಥಿಯಾಲ್ ಜಿಲ್ಲೆಯ ಖಾಸಗಿ ಕಂಪನಿಯ ಕಾರ್ಮಿಕರು ತಮ್ಮ ಊಟದ ವಿರಾಮದಿಂದ ಆಗಷ್ಟೇ ಹಿಂದಿರುಗುತ್ತಿದ್ದಾಗ ಕಲ್ಲು ಕ್ವಾರಿ ಕುಸಿದಿದೆ. ಐದು ಹಿಟಾಚಿ ಉತ್ಖನನ ಯಂತ್ರಗಳು ಮತ್ತು ಇತರ ಡ್ರಿಲ್ಲಿಂಗ್ ಯಂತ್ರಗಳು ಸಹಿತ ಕಾರ್ಮಿಕರು ಅವಶೇಷಗಳಡಿ ಹೂತುಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಲೀಟೆ ಗ್ರಾಮ ಮತ್ತು ಹ್ನಥಿಯಾಲ್ ಪಟ್ಟಣದ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಗಾಗಿ ದಾವಿಸಿದರು. ಇದೇ ವೇಳೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ, ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್ ಬಂದಿವೆ. ಈ ಕಲ್ಲು ಕ್ವಾರಿ ಎರಡೂವರೆ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.
ಮತ್ತಷ್ಟು ದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:30 am, Tue, 15 November 22