ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ (Farm Laws)ಗಳ ವಿರುದ್ಧ ಕಳೆದ 11 ತಿಂಗಳುಗಳಿಂದಲೂ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಸುಪ್ರೀಂಕೋರ್ಟ್ (Supreme Court) ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರತಿಭಟನಾಕಾರ ರೈತರು ಇಡೀ ದೆಹಲಿಯ ಕತ್ತು ಹಿಸುಕುತ್ತಿದ್ದಾರೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ದೆಹಲಿಯ ಜಂತರ್ ಮಂತರ್ನಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸಲು ಅನುಮತಿ ನೀಡಬೇಕು ಎಂದು ರೈತ ಸಂಘಟನೆ ಕಿಸಾನ್ ಮಹಾಪಂಚಾಯತ್ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿತ್ತು. ಅದನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಖಾನ್ವಿಲ್ಕರ್ ನೇತೃತ್ವದ ಪೀಠ, ‘ಅತ್ತ ದೆಹಲಿಯ ಗಡಿ ಭಾಗಗಳಲ್ಲಿ ಪ್ರತಿಭಟನೆ ನೆಪದಲ್ಲಿ ಹೆದ್ದಾರಿಗಳನ್ನೆಲ್ಲ ಬಂದ್ ಮಾಡುವ ಮೂಲಕ ಇಡೀ ನಗರದ ಕತ್ತು ಹಿಸುಕಿ, ಉಸಿರುಗಟ್ಟಿಸಿದ್ದೀರಿ..ಈಗ ನಗರದ ಒಳಗೂ ಬರಲು ಬಯಸುತ್ತಿದ್ದೀರಾ?’ ಎಂದು ಕಟುವಾಗಿ ಪ್ರಶ್ನಿಸಿದೆ.
ಜಂತರ್ ಮಂತರ್ನಲ್ಲಿ ಸತ್ಯಾಗ್ರಹ ನಡೆಸಲು ಅನುಮೋತಿ ಕೋರಿ ಸಲ್ಲಿಸಿದ ಅರ್ಜಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ನ್ಯಾ.ಸಿ.ಟಿ.ರವಿ ಕುಮಾರ್ ಮತ್ತು ಖಾನ್ವಿಲ್ಕರ್ರನ್ನೊಳಗೊಂಡ ಪೀಠ, ಒಂದು ಕಡೆ ಪ್ರತಿಭಟನೆ ನಡೆಸುತ್ತ, ಮತ್ತೆ ಅನುಮತಿ ಕೇಳಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೇಕೆ ಎಂದೂ ಪ್ರಶ್ನಿಸಿದೆ. ಹಾಗೇ, ವ್ಯವಸ್ಥೆಯಲ್ಲಿ ನಂಬಿಕೆಯಿಡಿ ಎಂದೂ ಹೇಳಿದೆ. ‘ನೀವು ಪ್ರತಿಭಟನೆ ನಡೆಸುತ್ತಿರುವ ಜಾಗದ ಸುತ್ತಲಿನ ಜನರು ನಿಮ್ಮ ಪ್ರತಿಭಟನೆಯಿಂದಾಗಿ ಖುಷಿಯಾಗಿದ್ದಾರೆಯೇ?, ನೀವು ಹೆದ್ದಾರಿ, ಸ್ಥಳೀಯ ರಸ್ತೆಗಳನ್ನು ಬಂದ್ ಮಾಡುವುದರಿಂದ ಜನರ ಓಡಾಟಕ್ಕೆ ಹಿಂಸೆಯಾಗುತ್ತಿದೆ. ನಿಮಗೆ ಹೇಗೆ ಪ್ರತಿಭಟನೆ ಮಾಡುವ ಹಕ್ಕಿದೆಯೋ, ಹಾಗೇ ಜನರಿಗೆ ಸಾರ್ವಜನಿಕರ ರಸ್ತೆಗಳಲ್ಲಿ ಸ್ವತಂತ್ರವಾಗಿ ಓಡಾಡುವ ಹಕ್ಕು ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ನ್ಯಾ.ಖಾನ್ವಿಲ್ಕರ್ ಹೇಳಿದ್ದಾರೆ.
ಪ್ರತಿಭಟನಾಕಾರರು ಭದ್ರತೆ ಮತ್ತು ರಕ್ಷಣಾ ಸಿಬ್ಬಂದಿ ಕೆಲಸಕ್ಕೂ ಅಡ್ಡಿ ಪಡಿಸುತ್ತಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎನ್ನುತ್ತೀರಿ, ನಂತರ ರೈಲುಹಳಿಗಳನ್ನೂ ಬ್ಲಾಕ್ ಮಾಡಿ, ರೈಲು ಸಂಚಾರಕ್ಕೆ ಅಡ್ಡಿ ಮಾಡುತ್ತೀರಿ. ಇದೆಲ್ಲ ಕೊನೆಯಾಗಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅದಕ್ಕೆ ಪ್ರತಿಕ್ರಿಯೆ ನೀಡಿದ ಕಿಸಾನ್ ಮಹಾಪಂಚಾಯತ್ ವಕೀಲ ಅಜಯ್ ಚೌಧರಿ, ಕಿಸಾನ್ ಮಹಾಪಂಚಾಯತ್ ರೈತ ಸಂಘಟನೆ ಹೆದ್ದಾರಿ, ರಸ್ತೆಗಳನ್ನು ಬಂದ್ ಮಾಡುವ ಪ್ರತಿಭಟನೆಯಲ್ಲಿ ತೊಡಗಿಕೊಂಡಿಲ್ಲ. ಆದರೆ ಬಂದ್ ಮಾಡಿದ ರಸ್ತೆಗಳಲ್ಲಿ ಪೊಲೀಸರು ಈ ರೈತ ಸಂಘಟನೆಯ ರೈತರನ್ನು ಬಂಧಿಸಿದರು ಎಂದು ಹೇಳಿದ್ದಾರೆ. ಹಾಗೇ, ನಾವು ಶಾಂತಿಯುತವಾಗಿಯೇ ಸತ್ಯಾಗ್ರಹ ನಡೆಸುತ್ತೇವೆ, ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಬೇಕು ಎಂಬ ರೈತರ ಮನವಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿದರು.
ಅಷ್ಟಾದರೂ ಸುಪ್ರಿಂಕೋರ್ಟ್ ಸದ್ಯದ ಮಟ್ಟಿಗೆ ಯಾವುದೇ ತೀರ್ಪು ನೀಡಲಿಲ್ಲ. ಕಿಸಾನ್ ಮಹಾಪಂಚಾಯತ್ ಹೆದ್ದಾರಿಗಳನ್ನು ಬಂದ್ ಮಾಡುವ ಪ್ರತಿಭಟನೆಯಲ್ಲಿ ತೊಡಗಿಕೊಂಡಿಲ್ಲ ಎಂದರೆ, ಅದರ ಉಲ್ಲೇಖ ಮಾಡಿ, ಎಲ್ಲವನ್ನೂ ವಿವರಿಸಿದಂಥ ಅಫಿಡವಿಟ್ನ್ನು ಕೋರ್ಟ್ಗೆ ಸಲ್ಲಿಸಬೇಕು. ಅದಾದ ಬಳಿಕವಷ್ಟೇ ಮತ್ತೆ ಅರ್ಜಿ ವಿಚಾಚರಣೆ ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದೆ.
ಇದನ್ನೂ ಓದಿ: Death Note: ಯಾರಿಂದಲೂ ಸಹಾಯ ದೊರೆಯಲಿಲ್ಲ; ಇಂತ ಕೆಟ್ಟ ಪ್ರಪಂಚದಲ್ಲಿ ಬದುಕೋದು ಹೇಗೆ ಎಂಬ ಪ್ರಶ್ನೆಗೆ ನಮ್ಮ ಸಾವೇ ಉತ್ತರ!
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿಗೆ ಕಂಟಕ; ಕಾನೂನು ಹೋರಾಟಕ್ಕೆ ಟಿಎಪಿಸಿಎಂಎಸ್ ನಿರ್ಧಾರ
Published On - 9:46 am, Sat, 2 October 21