ಶಸ್ತ್ರಚಿಕಿತ್ಸೆ ನಡೆಸಲು ಆಯುರ್ವೇದ ವೈದ್ಯರಿಗೆ ಅನುಮತಿ ವಿಚಾರ: ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ಆಯುರ್ವೇದ ರೆಗ್ಯುಲೇಷನ್ಸ್ 2020 ಆಕ್ಷೇಪಿಸಿ IMA ಸಲ್ಲಿಸಿದ್ದ ಅರ್ಜಿ ವಿಚಾರವಾಗಿ, ಸುಪ್ರೀಂ ಕೋರ್ಟ್ ಸೋಮವಾರ (ಮಾ.15) ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.
ದೆಹಲಿ: ಆಯುರ್ವೇದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಧುನಿಕ ಶಸ್ತ್ರಚಿಕಿತ್ಸೆಗಳನ್ನು ನಡೆಸುವಂತೆ, ಪಠ್ಯದಲ್ಲಿ ತರಲಾಗಿರುವ ಬದಲಾವಣೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (Indian Medical Association- IMA) ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿ ಕುರಿತಾಗಿ ಕೋರ್ಟ್ ಕ್ರಮ ಕೈಗೊಂಡಿದೆ. ಆಯುರ್ವೇದ ರೆಗ್ಯುಲೇಷನ್ಸ್ 2020 ಆಕ್ಷೇಪಿಸಿ IMA ಸಲ್ಲಿಸಿದ್ದ ಅರ್ಜಿ ವಿಚಾರವಾಗಿ, ಸುಪ್ರೀಂ ಕೋರ್ಟ್ ಸೋಮವಾರ (ಮಾ.15) ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.
ಕೇಂದ್ರ ಸರ್ಕಾರವು ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ಅಲೋಪಥಿ ವೈದ್ಯರು ವಿರೋಧಿಸಿದ್ದರು. ಡಿಸೆಂಬರ್ 11ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹೊರರೋಗಿ ವಿಭಾಗದ (OPD) ಸೇವೆ ನೀಡದೆ ಮುಷ್ಕರ ನಡೆಸಿದ್ದರು.
ಕೇಂದ್ರ ಸರ್ಕಾರವು ಆಯುರ್ವೇದ ವೈದ್ಯರಿಗೆ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಕಳೆದ ನವೆಂಬರ್ನಲ್ಲಿ ಅನುಮತಿ ನೀಡಿತ್ತು. ಈ ಸಂಬಂಧ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಅಧಿಸೂಚನೆ ಹೊರಡಿಸಿತ್ತು. ತರಬೇತಿ ಪಡೆದ ಸ್ನಾತಕೋತ್ತರ ಪದವೀಧರ ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದಾಗಿದೆ ಎಂದು ತಿಳಿಸಲಾಗಿತ್ತು.
ಈ ನಿರ್ಧಾರವನ್ನು ವಿರೋಧಿಸಿರುವ IMA, ಕೇಂದ್ರವು ಆಯುರ್ವೇದ ವೈದ್ಯರಿಗೆ ನೀಡಿರುವ ಅನುಮತಿಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿತ್ತು. IMA ಕರೆ ನೀಡಿರುವ ಮುಷ್ಕರಕ್ಕೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ಬೆಂಬಲ ಸೂಚಿಸಿದ್ದವು.
ಅಲೋಪಥಿ ವೈದ್ಯರ ವಿರೋಧ ಯಾಕೆ? ವಿವಾದಕ್ಕೆ ಸಂಬಂಧಿಸಿ ಟಿವಿ9 ಕನ್ನಡ ಡಿಜಿಟಲ್ ತಂಡ IMA ರಾಜ್ಯ ಪ್ರಧಾನ ಕಾರ್ಯದರ್ಶಿ, ಡಾ. ಎಸ್.ಎಂ. ಪ್ರಸಾದ್ ಅವರನ್ನು ಸಂದರ್ಶಿಸಿತ್ತು. ಅಲೋಪಥಿ ವೈದ್ಯರ ವಿರೋಧ ಯಾಕೆ ಎಂಬುದನ್ನು ಅವರು ತಿಳಿಸಿದ್ದರು.
ಕೇಂದ್ರದ ಅನುಮತಿಯಂತೆ ಆಯುರ್ವೇದ ವೈದ್ಯರು ಇನ್ನು ಮೂರು ವರ್ಷಗಳಲ್ಲಿ ಪದವಿ ಪಡೆದು ಶಸ್ತ್ರಚಿಕಿತ್ಸೆ ನಡೆಸಲು ಅರ್ಹರಾಗುತ್ತಾರೆ. ಆಯುರ್ವೇದ ವೈದ್ಯಕೀಯ ಪದ್ದತಿಯಲ್ಲಿ ಆಂಟಿಬಯೋಟಿಕ್ಸ್ ಔಷಧ ಸೇವೆ ಲಭ್ಯವಿಲ್ಲ. ಹಾಗಾಗಿ ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬಹುದೇ ವಿನಃ ಅದರಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ಆಯುರ್ವೇದದ ಮೂಲಕ ಪರಿಹರಿಸಲಾಗುವುದಿಲ್ಲ. ಅದಕ್ಕಾಗಿ ಮತ್ತೆ ಅಲೋಪಥಿಯನ್ನು ಅವಲಂಬಿಸಬೇಕಾಗುತ್ತದೆ. ಅನಸ್ತೇಷಿಯಾ ಕೂಡ ಆಯುರ್ವೇದದಲ್ಲಿ ಇಲ್ಲ. ಆಗ ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದ್ದರು.
ಆಯುರ್ವೇದ ಪದ್ಧತಿಯನ್ನು ಅಭ್ಯಸಿಸಿದವರು ತಮ್ಮ ವಿಧಾನದಲ್ಲಿ ಚಿಕಿತ್ಸ ನೀಡಲಿ. ವೈದ್ಯಕೀಯ ಪದ್ಧತಿಗಳ ಮಿಶ್ರಣ ಸರಿಯಲ್ಲ. ಆರೋಗ್ಯ ಮತ್ತು ಬದುಕುವ ಹಕ್ಕು ಎಲ್ಲರಿಗೂ ಇದೆ. ಎಲ್ಲರಿಗೂ ಸರಿಯಾದ ಚಿಕಿತ್ಸೆ ಲಭ್ಯವಾಗಬೇಕು ಎಂದು ಡಾ. ಪ್ರಸಾದ್ ಹೇಳಿದ್ದರು.
ಆಯುರ್ವೇದ ವೈದ್ಯರು ತಾವು ಶಸ್ತ್ರಚಿಕಿತ್ಸೆಯ ಬಗ್ಗೆ ಸ್ನಾತಕೋತ್ತರ ಪದವಿ ಪಡೆದು ಹಳ್ಳಿಗಳಲ್ಲಿ ಚಿಕಿತ್ಸೆ ನೀಡುತ್ತೇವೆ ಎಂಬ ವಾದವನ್ನು ಮುಂದಿಡುತ್ತಿದ್ದಾರೆ. ಹಳ್ಳಿ ಜನರಿಗೆ ಆಯುರ್ವೇದ ಶಸ್ತ್ರಚಿಕಿತ್ಸೆಯ ಪ್ರಯೋಗ ಏಕೆ? ಹೀಗಾದಾಗ ವೈದ್ಯಕೀಯ ವೃತ್ತಿಯು ಭ್ರಷ್ಟವಾಗುತ್ತದೆ. ಹಳ್ಳಿಗಳಲ್ಲಿ ಸ್ವಯಂಘೋಷಿತ ವೈದ್ಯರು ಹುಟ್ಟಿಕೊಳ್ಳುವ ಅಪಾಯ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಸರ್ಕಾರ, ವೈದ್ಯಕೀಯ ಸಲಹಾ ಮಂಡಳಿಯ ಸದಸ್ಯರು ಮತ್ತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಮುಷ್ಕರದ ಆಶಯವನ್ನು ಮನವರಿಕೆ ಮಾಡಿಕೊಳ್ಳಬೇಕು. ಹಳ್ಳಿಗಳಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ವೈದ್ಯರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಆಡಳಿತ ಮಾಡಬೇಕು ಎಂದು ಕೇಳಿಕೊಂಡಿದ್ದರು.
ಇದನ್ನೂ ಓದಿ: ಶಸ್ತ್ರಚಿಕಿತ್ಸೆ ನಡೆಸಲು ಆಯುರ್ವೇದ ವೈದ್ಯರಿಗೆ ಅನುಮತಿ; ಅಲೋಪಥಿ ವೈದ್ಯರ ಮುಷ್ಕರ ಅಂತ್ಯ
ಗಾಬರಿ ಬೇಡ.. ಆಯುರ್ವೇದ ಚಿಕಿತ್ಸೆಯಲ್ಲಿ ಈ 58 ಸರ್ಜರಿಗಳಿಗೆ ಮಾತ್ರವೇ ಅವಕಾಶ
Published On - 6:37 pm, Tue, 16 March 21