Tamil Nadu Politics: ರಾಜಕೀಯ ವಿಶ್ಲೇಷಣೆ | ಶಶಿಕಲಾ ಆಡೋದು ಗೆಲ್ಲುವ ಆಟವೋ? ಒಡೆಯುವ ಆಟವೋ?
ಯಾವುದೇ ಚುನಾವಣೆಯಲ್ಲಿ ಸ್ಫರ್ಧಿಸದ, ಸಾರ್ವಜನಿಕವಾಗಿ ಭಾಷಣ ಮಾಡಿರದ ಶಶಿಕಲಾ ಒಂದು ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲರೇ ಎನ್ನುವುದೇ ಈ ಕ್ಷಣದ ಕೋಟಿ ರೂಪಾಯಿ ಪ್ರಶ್ನೆಯಾಗಿದೆ.
ಜಯಲಲಿತಾ ಅವರ ನೆಚ್ಚಿನ ಹಸಿರು ಸೀರೆಯನ್ನುಟ್ಟು ಸೋಮವಾರ (ಫೆ.8) ಬೆಂಗಳೂರಿನಿಂದ ಹೊರಟು ಚೆನೈ ನಗರದಲ್ಲಿ ಕಾಲಿಟ್ಟ ಕೂಡಲೇ ‘ನಾನು ಸಕ್ರಿಯ ರಾಜಕೀಯಕ್ಕೆ ವಾಪಸಾಗುತ್ತೇನೆ,’ ಅಂತ ಶಶಿಕಲಾ ನಟರಾಜನ್ ಹೇಳಿರುವುದು ಕೇವಲ ಅಧಿಕಾರರೂಢ ಎಡಪ್ಪಾಡಿ ಪಳನಿಸ್ವಾಮಿ ಮಾತ್ರವಲ್ಲ ತಮಿಳುನಾಡಿನ ಇತರ ರಾಜಕೀಯ ಪಕ್ಷಗಳೂ ತಲ್ಲಣಿಸುವಂತೆ ಮಾಡಿದೆ. ನಿಮಗೆ ಗೊತ್ತಿರಬಹುದು, ತಮಿಳುನಾಡು ರಾಜ್ಯದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣವೊಂದರಲ್ಲಿ 4 ವರ್ಷಗಳ ಸೆರೆವಾಸವನ್ನು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಅನುಭವಿಸಿದ ನಂತರ ಶಶಿಕಲಾ ನಟರಾಜನ್ ಈ ಅತಿಮುಖ್ಯ ಸಮಯದಲ್ಲಿ ತಮಿಳುನಾಡಿಗೆ ಹಿಂದಿರುಗಿದ್ದಾರೆ.
ಆಗಸ್ಟ್ 2017ರಲ್ಲಿ ಶಶಿಕಲಾರನ್ನು ಪಕ್ಷದಿಂದ ಉಚ್ಚಾಟಿಸಿದ ಪಳನಿಸ್ವಾಮಿ ನೇತೃತ್ವದ ಆಲ್ ಇಂಡಿಯ ಅಣ್ಣಾ ದ್ರಾವಿಡ ಮನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷ, ರಾಜಕೀಯಕ್ಕೆ ವಾಪಸ್ಸಾಗುವ ಅವರ ಘೋಷಣೆಯಿಂದ ಹೆಚ್ಚು ಆತಂಕಕ್ಕೊಳಗಾಗಿರುವುದು ಸತ್ಯ. ಆಕೆಯ ಘೋಷಣೆ ಪಳನಿಸ್ವಾಮಿಗೆ ನೇರವಾಗಿ ನೀಡಿರುವ ಪಂಥಾಹ್ವಾನ ಎಂದು ತಮಿಳುನಾಡಿನ ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಯಾಕೆಂದರೆ ಮುಖ್ಯಮಂತ್ರಿಯಾದಾಗಿನಿಂದ ಪಳನಿಸ್ವಾಮಿ ತಾವು ದಿವಂಗತ ಜಯಲಲಿತಾ ಅವರ ನಿಜವಾದ ಉತ್ತರಾಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.
‘ನನ್ನ ಉದ್ದೇಶ ಸ್ಪಷ್ಟವಾಗಿದೆ. ಅದೇನೆಂದರೆ ನಾವೆಲ್ಲ ಒಂದಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಮ್ಮೆಲ್ಲರ ಸಮಾನ ವೈರಿಯಾಗಿರುವರು ಅಧಿಕಾರದ ಗದ್ದುಗೆಯನ್ನು ಏರದಂತೆ ತಡೆಯಬೇಕು’ ಎಂದು ಶಶಿಕಲಾ ತಮಗೆ ಅದ್ದೂರಿ ಸ್ವಾಗತ ಸಿಕ್ಕ ನಂತರ ಹೇಳಿದ್ದು ಪಳನಿಸ್ವಾಮಿ ಮತ್ತು ಒ ಪನ್ನೀರ್ಸೆಲ್ವಂ ಅವರನ್ನು ಬೆವರುವಂತೆ ಮಾಡಿರಲಿಕ್ಕೂ ಸಾಕು.
ಇದನ್ನೂ ಓದಿ: ಜಯಲಲಿತಾ ಸಮಾಧಿಯೆದುರು ಮಾಡಿದ್ದ ಶಪಥದಂತೆ ನಡೆಯುತ್ತಾರಾ ಶಶಿಕಲಾ?
ಬದಲಾಗಿದೆ ರಾಜಕೀಯ ಸಮೀಕರಣ ತಮ್ಮ ಹೇಳಿಕೆಗಳಿಂದ ತಮಿಳಿನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಶಿಕಲಾ ಒಂದು ವಿಶಿಷ್ಟ ಆಯಾಮ ಕಲ್ಪಿಸಿದ್ದಾರೆ. ಚುನಾವಣೆಯನ್ನು ಮತ್ತಷ್ಟು ಆಸಕ್ತಿದಾಯಕವನ್ನಾಗಿಯೂ ಮಾಡಿದ್ದಾರೆ. ಶಶಿಕಲಾ ಚುನಾವಣೆಯಲ್ಲಿ ಸೋಲುತ್ತಾರೋ ಅಥವಾ ಗೆಲ್ಲುತ್ತಾರೋ ಎನ್ನುವುದು ಬೇರೆ ವಿಷಯ; ಅದರೆ, ಆಕೆಯ ಉಪಸ್ಥಿತಿ ರಾಜ್ಯದ ರಾಜಕೀಯ ಸಮೀಕರಣಗಳನ್ನು ಬದಲಾಯಿಸಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ‘ಶಶಿಕಲಾ ಸೋಮವಾರದ ರೋಡ್ ಶೋನಲ್ಲಿ ಜಯಲಲಿತಾ ಅವರನ್ನು ಅನುಕರಿಸಿದ್ದು, ಅಧಿಕಾರವನ್ನು ಪಡೆದೇ ತೀರಬೇಕೆನ್ನುವ ಛಲದ ದ್ಯೋತಕವಾಗಿದೆ’ ಎಂದು ಚೆನೈನ ಖ್ಯಾತ ರಾಜಕೀಯ ವಿಶ್ಲೇಷಕ ಸುಮಂತ ರಾಮನ್ ಹೇಳುತ್ತಾರೆ.
‘ಆಕೆ ಪ್ರಯಾಣಿಸಿದ್ದು ಜಯಾ ಬಳಸುತ್ತಿದ್ದ ಕಾರಿನಲ್ಲಿ. ಬೆಂಗಳೂರಿನಿಂದ ಚೆನೈ ತಲುಪುವವರೆಗೆ ಆಕೆ ಹಲವಾರು ಕಡೆಗಳಲ್ಲಿ ತನ್ನ ಪ್ರಯಾಣವನ್ನು ನಿಲ್ಲಿಸಿ, ಬೆಂಬಲಿಗರಿಗೆ ಕೈ ಬೀಸಿ ಹಾರೈಸಿದರು. ಅವರಿಂದ ಹಾರ ಮತ್ತು ಹೂಗುಚ್ಛಗಳನ್ನು ಸ್ವೀಕರಿಸಿದರು. ಚೆನೈಯಲ್ಲಿ ಕಾಲಿಟ್ಟ ನಂತರ ಆಕೆ ತಾನು ಸಕ್ರಿಯ ರಾಜಕಾರಣಕ್ಕೆ ಹಿಂತಿರುಗುವ ಘೋಷಣೆಯನ್ನು ಸಹ ಮಾಡಿದರು. ಎಐಡಿಎಂಕೆಯನ್ನು ಪುನಃ ತನ್ನದಾಗಿಸಿಕೊಳ್ಳುವ ಮಹತ್ವಾಕಾಂಕ್ಷೆ ಆಕೆಯಲ್ಲಿದೆ’ ಎಂದು ರಾಮನ್ ವಿಶ್ಲೇಷಿಸುತ್ತಾರೆ.
ಸುಮಾರು ಮೂವತ್ತು ವರ್ಷಗಳ ಕಾಲ ಜಯಲಲಿತಾ ಅವರೊಂದಿಗಿದ್ದ ಶಶಿಕಲಾ ರಾಜಕೀಯ ಚದುರಂಗದಾಟವನ್ನು ಚೆನ್ನಾಗಿ ಅರಿತಿದ್ದಾರೆ. 66 ಕೋಟಿ ರೂಪಾಯಿಗಳ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 2017 ಫೆಬ್ರುವರಿ ತಿಂಗಳಲ್ಲಿ ಶಶಿಕಲಾ ಅವರಿಗೆ 4 ವರ್ಷಗಳ ಜೈಲುಶಿಕ್ಷೆಯ ತೀರ್ಪು ಪ್ರಕಟವಾಗಿತ್ತು. ಅಲ್ಲದೆ ಮುಂದಿನ 6 ವರ್ಷಗಳ ಕಾಲ ಆಕೆ ಯಾವುದೇ ಚುನಾವಣೆಯಲ್ಲಿ ಸ್ಫರ್ದಿಸುವಂತಿಲ್ಲ ಮತ್ತು ರಾಜಕೀಯ ಪಕ್ಷವೊಂದರಲ್ಲಿ ಯಾವುದೇ ಹುದ್ದೆಯನ್ನು ಅಲಂಕರಿಸಿವಂತಿಲ್ಲ. ಆದರೆ, ಈ ಎಲ್ಲ ಅಡಚಣೆಗಳ ಹೊರತಾಗಿಯೂ ಆಕೆ ಎಐಎಡಿಎಂಕೆ ಪಕ್ಷದ ಚುಕ್ಕಾಣಿಯನ್ನು ತನ್ನ ಕೈಗೆತ್ತಿಕೊಂಡು ಇಲ್ಲವೇ ಕಸಿದುಕೊಂಡು ಮಹಾರಾಣಿಯಂತೆ ಸಾಮ್ರಾಜ್ಯ ನಡೆಸಬಲ್ಲರು.
ಇದನ್ನೂ ಓದಿ: ಮುಖ್ಯಮಂತ್ರಿ ಗಾದಿ ಸನಿಹದಲ್ಲಿದ್ದಾಗ ಸೆರೆಮನೆಗೆ ಬಂದ ಶಶಿಕಲಾ ಸವೆಸಿದ ಹಾದಿ ಕಲ್ಲುಮುಳ್ಳಿನದು
ಜೈಲಿನಲ್ಲಿದ್ದೇ ಪಕ್ಷ ಸ್ಥಾಪಿಸಿದ್ದ ಶಶಿಕಲಾ ಓದುಗರಿಗೆ ನೆನಪಿರಬಹುದು, ಜಯಾ ಅವರ ಸಾವಿನ ನಂತರ ಎಐಎಡಿಎಂಕೆ ಪಕ್ಷ ಹೋಳಾಗಿ ಒಂದು ಬಣಕ್ಕೆ ಪನ್ನೀರ್ಸೆಲ್ವಂ ನಾಯಕರಾದರೆ ಮತ್ತೊಂದಕ್ಕೆ ಪಳನಿಸ್ವಾಮಿ ನಾಯಕರಾದರು. ನಂತರ ನಡೆದ ಮಹತ್ತರ ಬೆಳವಣಿಗೆಯೊಂದರಲ್ಲಿ ಎರಡೂ ಬಣಗಳು ಒಂದುಗೂಡಿದವು. ಸೆಪ್ಟಂಬರ್ 2017ರಲ್ಲಿ ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಇದರಿಂದ ಕೆರಳಿದ ಸಿಂಹಿಣಿಯಂತಾದ ಶಶಿಕಲಾ ಜೈಲಿನಲ್ಲಿದ್ದುಕೊಂಡೇ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪಕ್ಷವನ್ನು ಸ್ಥಾಪಿಸಿ ಅದರೆ ಸಾರಥ್ಯವನ್ನು ತನ್ನಣ್ಣನ ಮಗ ಟಿಟಿವಿ ದಿನಕರನ್ಗೆ ವಹಿಸಿದರು. ಈ ಪಕ್ಷವು ಚೆನೈನ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದೂ ಅಲ್ಲದೆ 2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 6ರಷ್ಟು ಮತಗಳನ್ನು ಬಾಚಿಕೊಂಡು ಎಲ್ಲರನ್ನು ಚಕಿತಗೊಳಿಸಿತು.
ಸೋಮವಾರದಂದು ಶಶಿಕಲಾರೊಂದಿಗಿದ್ದ ದಿನಕರನ್, ಎಐಎಡಿಎಂಕೆ ಪಕ್ಷದ ಹಲವಾರು ಪದಾಧಿಕಾರಿಗಳು ಶಶಿಕಲಾ ಅವರ ಸ್ವಾಗತ ಸಮಾರಂಭದಲ್ಲಿ ಭಾಗಿಯಾಗಿದ್ದರು ಮತ್ತು ಆಕೆಯ ಉಚ್ಚಾಟನೆಗೆ ಸಂಬಂಧಿಸಿದಂತೆ ಪ್ರಕರಣವಿನ್ನೂ ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳುವುದು ಬಾಕಿಯಿರುವುದರಿಂದ ಆಕೆ ಎಐಎಡಿಎಂಕೆ ಪಕ್ಷದ ಕಾರ್ಯದರ್ಶಿಯಾಗಿ ಮುಂದುವರಿಯುತ್ತಾರೆ ಎಂದು ಮಾಧ್ಯಮದವರಿಗೆ ಹೇಳಿದರು.
ಚೆನೈ ನಗರದಲ್ಲಿ ದಿವಂಗತ ಜಯಲಲಿತಾ ಅವರ ಹೊಸ ಸ್ಮಾರಕದ ಉದ್ಘಾಟನೆಗೆ ಆಹ್ವಾನಿಸಲು ಮುಖ್ಯಮಂತ್ರಿ ಪಳನಿಸ್ವಾಮಿ ಜನೆವರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು. ಮೂಲಗಳ ಪ್ರಕಾರ ಈ ಭೇಟಿಯ ಸಂದರ್ಭದಲ್ಲಿ ಶಶಿಕಲಾ ಅವರ ಬಿಡುಗಡೆಯ ಬಗ್ಗೆಯೂ ಚರ್ಚಿಸಲಾಗಿತ್ತು.
ಆಕೆ ಪಕ್ಷಕ್ಕೆ ವಾಪಸ್ಸಾಗುವ ಬಗ್ಗೆ ಪದಾಧಿಕಾರಿಗಳಲ್ಲಿ ಮತ್ತು ಕಾರ್ಯಕರ್ತರಲ್ಲಿ ಒಮ್ಮತವಿಲ್ಲ. ಕೆಲವರು ಆಕೆಯನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತಿದ್ದರೆ, ಮೀನುಗಾರಿಕೆ ಸಚಿವ ಡಿ ಜಯಕುಮಾರ ಸೇರಿದಂತೆ ಹಲವರು ಆಕೆಯನ್ನು ಪಕ್ಷದಿಂದ ಹೊರಗಿಡುವುದೇ ಒಳಿತು ಅಂತ ಹೇಳಿದ್ದಾರೆ. ಪಕ್ಷದ ವ್ಯವಹಾರದಲ್ಲಿ ಅಕೆಯ ಹಸ್ತಕ್ಷೇಪವಿರಕೂಡದು ಅಂತ ಈ ಬಣ ಪ್ರತಿಪಾದಿಸುತ್ತಿದೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಹೊಸ ಪಕ್ಷ ಕಟ್ಟುವ ನಿರ್ಧಾರ ಘೋಷಿಸಿದ ವೈ.ಎಸ್.ಶರ್ಮಿಳಾ; ಟಿಆರ್ಎಸ್ ನಾಯಕರಲ್ಲಿ ಆತಂಕ
ಬಿಜೆಪಿ ಲೆಕ್ಕಾಚಾರ ಜನೆವರಿ 9ರಂದು ನಡೆದ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಪಳನಿಸ್ವಾಮಿಯವರನ್ನೇ ಮುಖ್ಯಮಂತ್ರಿ ಆಭ್ಯರ್ಥಿ ಎಂದು ಘೋಷಿಸಲಾಯಿತು. ಎಐಎಡಿಎಂಕೆಯ ಮಿತ್ರಪಕ್ಷವಾಗಿರುವ ಬಿಜೆಪಿ ಪಳನಿಸ್ವಾಮಿ ಅವರನ್ನು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಈವರೆಗೆ ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಬಿಜೆಪಿ ಮೂಲಗಳ ಪ್ರಕಾರ, ಶಶಿಕಲಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದೇ ಉತ್ತಮ ಆಯ್ಕೆ.
ಇದಕ್ಕೆ ಅವರು ಕೊಡುವ ಕಾರಣ ಹೀಗಿದೆ. ಆಕೆ ಎಎಂಎಂಕೆ ಪಕ್ಷದಿಂದ ಕಣಕ್ಕಳಿದರೆ ವೋಟುಗಳು ಒಡೆದು ಅದು ಶತ್ರು ಪಕ್ಷವಾದ ಡಿಎಂಕೆಗೆ ನೆರವಾಗುತ್ತದೆ. ಎಐಎಡಿಎಂಕೆಯೊಂದಿಗೆ ಕೈಜೋಡಿಸುವಂತೆ ದಿನಕರನ್ ಅವರ ಮನವೊಲಿಸುವ ಪ್ರಯತ್ನವನ್ನು ಬಿಜೆಪಿ ಹಿಂಬಾಗಿಲಿನಿಂದ ಮಾಡುತ್ತಿದೆ ಎಂಬ ವಿಚಾರ ಚೆನ್ನೈನ ರಾಜಕೀಯ ಆಸಕ್ತರ ನಡುವೆ ಚರ್ಚೆಯಾಗುತ್ತಿದೆ.
ಶಶಿಕಲಾ ಆಯ್ಕೆಗಳು ರಾಜಕೀಯ ತಜ್ಞರ ಪ್ರಕಾರ ಶಶಿಕಲಾ ಎದುರು ಹಲವಾರು ಆಯ್ಕೆಗಳಿವೆ. ಪಳನಿಸ್ವಾಮಿ ಮತ್ತು ಪನ್ನೀರ್ಸೆಲ್ವಂ ಜೊತೆ ಡೀಲ್ ಕುದುರಿಸಿ ಎಐಎಡಿಎಂಕೆಗೆ ಮರು ಎಂಟ್ರಿ ಪಡೆಯಬಹುದು. ಮತ್ತೊಂದು ಆದ್ಯತೆಯೆಂದರೆ, ಎಎಂಎಂಕೆ ಪಕ್ಷವನ್ನು ಎಐಎಡಿಎಂಕೆಯೊಂದಿಗೆ ವಿಲೀನಗೊಳಿಸುವುದು. ಇಲ್ಲವೇ ಎಎಂಎಂಕೆ ನೇತೃತ್ವದಲ್ಲಿ ತೃತೀಯ ರಂಗ ರೂಪಿಸಿ ಚುನಾವಣೆಯಲ್ಲಿ ಎಐಎಡಿಎಂಕೆಯನ್ನು ಸೋಲಿಸುವುದು.
ಆದರೆ, ಯಾವತ್ತೂ ಒಂದು ಹುದ್ದೆಯಲ್ಲಿರದ, ಯಾವುದೇ ಚುನಾವಣೆಯಲ್ಲಿ ಸ್ಫರ್ಧಿಸದ ಮತ್ತು ಎಂದೂ ಸಾರ್ವಜನಿಕವಾಗಿ ಭಾಷಣ ಮಾಡಿರದ ಶಶಿಕಲಾ ಯಾವುದೇ ಒಂದು ಪಕ್ಷವನ್ನು ಮುನ್ನಡೆಸಬಲ್ಲರೇ ಎನ್ನುವುದೇ ಈ ಕ್ಷಣದ ಕೋಟಿ ರೂಪಾಯಿ ಪ್ರಶ್ನೆಯಾಗಿದೆ.
Published On - 2:58 pm, Wed, 10 February 21