ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಗೆ ಗೈರು; ಅಮಿತ್ ಶಾ ಕರೆದ ಸಭೆಯಲ್ಲಿ ಭಾಗಿ; ಬಿಜೆಪಿಗೆ ನಿಕಟವಾಗುತ್ತಿದೆಯೇ ಬಿಆರ್‌ಎಸ್?
ನವದೆಹಲಿಯ ಪಾರ್ಲಿಮೆಂಟ್ ಲೈಬ್ರರಿ ಕಟ್ಟಡದಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಣಿಪುರದ ಹಿಂಸಾಚಾರದ ಕುರಿತು ಸರ್ವಪಕ್ಷ ಸಭೆಯ ಅಧ್ಯಕ್ಷತೆಯನ್ನು ಅಮಿತ್ ಶಾ ವಹಿಸಿದ್ದರು. ಸಭೆಗೆ ಹಾಜರಾಗಲು ಹಿರಿಯ ನಾಯಕ ಮತ್ತು ಮಾಜಿ ಸಂಸದ ಬಿ ವಿನೋದ್ ಅವರನ್ನು ಕೆಸಿಆರ್ ಕಳುಹಿಸಿದ್ದಾರೆ
ದೆಹಲಿ: ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೆಚ್ಚುತ್ತಿದೆ ಎಂಬ ಊಹಾಪೋಹಗಳ ನಡುವೆ, ಭಾರತ್ ರಾಷ್ಟ್ರ ಸಮಿತಿ (Bharat Rashtra Samithi), ಮಣಿಪುರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರದ ಕರೆದಿದ್ದ ಸರ್ವಪಕ್ಷಗಳ ಸಭೆಗೆ ಪ್ರತಿನಿಧಿಯನ್ನು ಕಳುಹಿಸಿದೆ. ಬಿಜೆಪಿ (BJP) ವಿರುದ್ಧ ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದ್ದ ತೆಲಂಗಾಣ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ (K Chandrasekhar Rao) ಪ್ರತಿಪಕ್ಷಗಳ ಒಗ್ಗಟ್ಟಿನ ಸಭೆ ಕೈಬಿಟ್ಟು ಇದೀಗ ತಮ್ಮ ‘ತೆಲಂಗಾಣ ಅಭಿವೃದ್ಧಿ ಮಾದರಿ’ಯನ್ನು ಪ್ರಸ್ತುತಪಡಿಸುವತ್ತ ಗಮನಹರಿಸುತ್ತಿದ್ದಾರೆ. ನಿನ್ನೆ ಪಾಟ್ನಾದಲ್ಲಿ ನಡೆದ 16 ಪಕ್ಷಗಳ ವಿರೋಧ ಪಕ್ಷದ ಸಭೆಗೂ ಅವರ ಪಕ್ಷ ಗೈರಾಗಿತ್ತು.
ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಕೆಸಿಆರ್ ಗುಜರಾತ್ ಮಾಡೆಲ್ ಬಗ್ಗೆಯೂ ಟೀಕಿಸಿದ್ದು, ಚುನಾವಣೆಗಳನ್ನು ಆಧರಿಸಿ ಮೋದಿ ಬಟ್ಟೆಗಳನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದರು. ಏತನ್ಮಧ್ಯೆ, ಜೂನ್ 15 ರಂದು ನಾಗ್ಪುರದಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿಯನ್ನು “ಒಳ್ಳೆಯ ಸ್ನೇಹಿತ” ಎಂದು ಕರೆದಿದ್ದರು. ಶುಕ್ರವಾರ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಸಭೆ ನಡೆಯುತ್ತಿರುವಾಗ, ರಾವ್ ಅವರ ಪುತ್ರ ಮತ್ತು ತೆಲಂಗಾಣ ಸಚಿವ ಕೆ ಟಿ ರಾಮರಾವ್ ಅವರು ನವದೆಹಲಿಗೆ ಎರಡು ದಿನಗಳ ಭೇಟಿಯನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.
ನವದೆಹಲಿಯ ಪಾರ್ಲಿಮೆಂಟ್ ಲೈಬ್ರರಿ ಕಟ್ಟಡದಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಣಿಪುರದ ಹಿಂಸಾಚಾರದ ಕುರಿತು ಸರ್ವಪಕ್ಷ ಸಭೆಯ ಅಧ್ಯಕ್ಷತೆಯನ್ನು ಅಮಿತ್ ಶಾ ವಹಿಸಿದ್ದರು. ಸಭೆಗೆ ಹಾಜರಾಗಲು ಹಿರಿಯ ನಾಯಕ ಮತ್ತು ಮಾಜಿ ಸಂಸದ ಬಿ ವಿನೋದ್ ಅವರನ್ನು ಕೆಸಿಆರ್ ಕಳುಹಿಸಿದ್ದಾರೆ. ನವೆಂಬರ್ 2020 ರಿಂದ ಕೇಂದ್ರ ಸರ್ಕಾರ ಕರೆದಿರುವ ಸಭೆಗಳಲ್ಲಿ ಬಿಆರ್ ಎಸ್ ಭಾಗವಹಿಸಿದ ಮೊದಲ ಸಭೆ ಇದಾಗಿದೆ.
ಮೂಲಗಳ ಪ್ರಕಾರ ದೆಹಲಿಯ ಮದ್ಯ ನೀತಿ ಹಗರಣದಲ್ಲಿ ಕೆಸಿಆರ್ ಅವರ ಪುತ್ರಿ ಕೆ.ಕವಿತಾ ಅವರ ಹೆಸರು ಕೇಳಿಬಂದಿರುವುದರಿಂದ ಕೆಸಿಆರ್ ಬಿಜೆಪಿಯತ್ತ ವಾಲುತ್ತಿದೆ ಎಂದು ಹೇಳಲಾಗುತ್ತದೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಎರಡು ಬಾರಿ ವಿಚಾರಣೆಗೊಳಪಡಿಸಿ ಎರಡು ಆರೋಪಪಟ್ಟಿಗಳಲ್ಲಿ ಹೆಸರಿಸಿದೆ. ಬಂಧನ ಸಾಧ್ಯತೆಯ ವರದಿಗಳೂ ಬಂದಿದ್ದವು. ಆದಾಗ್ಯೂ, ಏಪ್ರಿಲ್‌ನಲ್ಲಿ ಸಲ್ಲಿಸಲಾದ ಮೂರನೇ ಆರೋಪಪಟ್ಟಿಯಲ್ಲಿ ಆಕೆಯ ಹೆಸರನ್ನು ಕೈಬಿಡಲಾಗಿತ್ತು.
ವರ್ಷಾಂತ್ಯದಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಆರ್‌ಎಸ್ ಜೊತೆಗಿನ ನಿಕಟತೆಯೂ ಬಿಜೆಪಿಗೆ ತೊಂದರೆ ಉಂಟುಮಾಡುತ್ತಿದೆ. ಇತ್ತೀಚೆಗಷ್ಟೇ ತೆಲಂಗಾಣ ಬಿಜೆಪಿಗೆ ಸೇರ್ಪಡೆಯಾಗಿರುವ ಪಕ್ಷದ ನಾಯಕರಾದ ಕೋಮಟಿರೆಡ್ಡಿ ರಾಜ್‌ಗೋಪಾಲ್ ರೆಡ್ಡಿ ಮತ್ತು ಈಟಾಲ ರಾಜೇಂದರ್ ಅವರು ಕಾಂಗ್ರೆಸ್‌ಗೆ ತೆರಳಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಬಗ್ಗೆ ಬಿಆರ್‌ಎಸ್‌ನ ನಿಲುವು ಬದಲಾಗುತ್ತಿರುವುದನ್ನು ಮತದಾರರು ಗಮನಿಸಿದರೆ, ಅದು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಹಾಯ ಮಾಡಬಹುದು ಎಂದು ಮೂಲಗಳು ತಿಳಿಸಿವೆ. 2014ರಲ್ಲಿ ರಚನೆಯಾದಾಗಿನಿಂದ ತೆಲಂಗಾಣದಲ್ಲಿ ಬಿಆರ್‌ಎಸ್ ಅಧಿಕಾರದಲ್ಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:15 pm, Sat, 24 June 23