Sign In

By signing in or creating an account, you agree with Associated Broadcasting Company's Terms & Conditions and Privacy Policy.

Bipin Rawat: ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣವೇನು? ತಜ್ಞರು ಏನಂತಾರೆ?; ಇಲ್ಲಿದೆ ಮಾಹಿತಿ

Tamil Nadu: ತಮಿಳುನಾಡಿನ ಕೂನೂರಿನಲ್ಲಿ ಸಿಡಿಎಸ್ ಬಿಪಿನ್ ರಾವತ್‌ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದರ ಬಗ್ಗೆ ಅನೇಕ ಅನುಮಾನಗಳಿವೆ. ವಿವಿಐಪಿಗಳ ಹೆಲಿಕಾಪ್ಟರ್ ಸಂಚಾರದ ವೇಳೆ ಪಾಲಿಸಬೇಕಾದ ಪ್ರೊಟೋಕಾಲ್ ಅನ್ನು ಭಾರತೀಯ ವಾಯುಪಡೆ ಪಾಲಿಸಲಿಲ್ಲವೇ ಎಂಬ ಅನುಮಾನ ಈಗ ಉದ್ಭವವಾಗಿದೆ. ಸೂಲೂರು ಮತ್ತು ವೆಲ್ಲಿಂಗ್ಟನ್ ಏರ್ ಬೇಸ್ ಗಳು ಎರಡು ವಿಭಿನ್ನ ಹೇಳಿಕೆ ನೀಡಿರುವುದು ಈಗ ಗೊಂದಲ, ಅನುಮಾನಗಳಿಗೆ ಕಾರಣವಾಗಿದೆ.

Bipin Rawat: ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣವೇನು? ತಜ್ಞರು ಏನಂತಾರೆ?; ಇಲ್ಲಿದೆ ಮಾಹಿತಿ
ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್
Follow us
S Chandramohan
| Updated By: shivaprasad.hs

Updated on: Dec 11, 2021 | 5:15 PM

ತಮಿಳುನಾಡಿನ ಕೂನೂರಿನಲ್ಲಿ ಸಿಡಿಎಸ್ ಬಿಪಿನ್ ರಾವತ್ (Bipin Rawat) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದರಿಂದ ಇಡೀ ದೇಶವೇ ದಿಗ್ಭ್ರಮೆಯಲ್ಲಿದೆ. ಇಡೀ ದೇಶವೇ ಸಿಡಿಎಸ್ ಬಿಪಿನ್ ರಾವತ್ ನಿಧನಕ್ಕೆ ಕಂಬನಿ ಮಿಡಿದಿದೆ. ಆದರೇ, ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೆ ವಾಯುಪಡೆ ತೋರಿದ ನಿರ್ಲಕ್ಷ್ಯವೂ ಕಾರಣವಾಯಿತೇ ಎಂಬ ಪ್ರಶ್ನೆಯೂ ಉದ್ಭವವಾಗಿದೆ. ವಿವಿಐಪಿಗಳ ಹೆಲಿಕಾಪ್ಟರ್ ಹಾರಾಟದ ವೇಳೆ ಪಾಲಿಸಬೇಕಾದ ಪ್ರೋಟೋಕಾಲ್ ನಿಯಮಗಳನ್ನು ಪಾಲನೇ ಮಾಡದೇ ನಿರ್ಲಕ್ಷ್ಯ ವಹಿಸಲಾಯಿತೇ ಎಂಬ ಪ್ರಶ್ನೆಗಳು ಉದ್ಭವವಾಗಿವೆ. ತಮಿಳುನಾಡಿನ ಸೂಲೂರು ಹಾಗೂ ವೆಲ್ಲಿಂಗ್ಟನ್ ಏರ್ ಬೇಸ್ ಗಳು ನೀಡಿರುವ ವಿಭಿನ್ನ ಹೇಳಿಕೆಗಳು ಈಗ ಗೊಂದಲ, ಅನುಮಾನಕ್ಕೆ ಕಾರಣವಾಗಿವೆ.

ಸಾಮಾನ್ಯವಾಗಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಗಳಲ್ಲಿ ವಿವಿಐಪಿಗಳು ಪ್ರಯಾಣ ಮಾಡುವಾಗ ಆ ಉದ್ದೇಶಿತ ಮಾರ್ಗದಲ್ಲಿ ಮುಂಚಿತವಾಗಿ ಒಂದು ಹೆಲಿಕಾಪ್ಟರ್ ಹಾರಾಟ ನಡೆಸಿ, ಆ ಮಾರ್ಗದ ಹವಾಮಾನ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ. ಆ ಮಾರ್ಗದಲ್ಲಿ ವಿವಿಐಪಿ ಹೆಲಿಕಾಪ್ಟರ್ ಹಾರಾಟ ನಡೆಸಲು ಅನುಕೂಲವಾದ ವಾತಾವರಣ ಪರಿಸ್ಥಿತಿ ಇದೆಯೇ, ಪ್ರತಿಕೂಲ ಹವಾಮಾನ ಪರಿಸ್ಥಿತಿ ಇದೆಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಅದಾದ ಬಳಿಕ ವಾಪಸ್ ಬಂದು, ವಿವಿಐಪಿ ಹೆಲಿಕಾಪ್ಟರ್ ಹಾರಾಟ ನಡೆಸಬಹುದೇ ಇಲ್ಲವೇ ಎಂಬ ಬಗ್ಗೆ ಫೀಡ್ ಬ್ಯಾಕ್ ನೀಡಲಾಗುತ್ತದೆ. ಇದರ ಆಧಾರದ ಮೇಲೆಯೇ ವಿವಿಐಪಿ ಹೆಲಿಕಾಪ್ಟರ್ ಹಾರಾಟ ನಡೆಸಬೇಕೇ ಬೇಡವೇ ಎಂದು ನಿರ್ಧರಿಸಲಾಗುತ್ತದೆ.

ಆದರೆ, ಕಳೆದ ಬುಧವಾರ ಸಿಡಿಎಸ್ ಬಿಪಿನ್ ರಾವತ್ ಸೂಲೂರು ಏರ್ ಬೇಸ್ ಗೆ ಭೇಟಿ ನೀಡುವ ಮುನ್ನ, ಸೂಲೂರು ಏರ್ ಬೇಸ್ ನಿಂದ ಎರಡು ಲಘು ಹೆಲಿಕಾಪ್ಟರ್ ಗಳು ವೆಲ್ಲಿಂಗ್ಟನ್ ಮಾರ್ಗವಾಗಿ ಹಾರಾಟ ನಡೆಸಿ, ಹವಾಮಾನ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದವು. ಹವಾಮಾನ ಪರಿಸ್ಥಿತಿಯ ಸರ್ವೇ ನಡೆಸಿದ್ದವು ಎಂದು ಸೂಲೂರು ಏರ್ ಬೇಸ್ ಅಧಿಕಾರಿಗಳು ಹೇಳಿದ್ದಾರೆ. ಆದರೇ, ಇದನ್ನು ಸಿಡಿಎಸ್ ಬಿಪಿನ್ ರಾವತ್ ತಲುಪಬೇಕಾಗಿದ್ದ ವೆಲ್ಲಿಂಗ್ಟನ್ ಏರ್ ಬೇಸ್ ಅಧಿಕಾರಿಗಳು ದೃಢಪಡಿಸಿಲ್ಲ. ಕಳೆದ ಬುಧವಾರ ಸಿಡಿಎಸ್ ರಾವತ್ ಹೆಲಿಕಾಪ್ಟರ್ ಹಾರಾಟಕ್ಕೂ ಮುನ್ನ ಯಾವುದೇ ಹೆಲಿಕಾಪ್ಟರ್ ಗಳು ಹಾರಾಟ ನಡೆಸಿರಲಿಲ್ಲ. ವೆಲ್ಲಿಂಗ್ಟನ್ ಏರ್ ಬೇಸ್ ಗೆ ಯಾವುದೇ ಹೆಲಿಕಾಪ್ಟರ್ ಗಳು ಸೂಲೂರಿನಿಂದ ಬಂದಿರಲಿಲ್ಲ ಎಂದು ವೆಲ್ಲಿಂಗ್ಟನ್ ಏರ್ ಬೇಸ್ ಅಧಿಕಾರಿಗಳು ಹೇಳಿದ್ದಾರೆ. ಎಂಐ-17ವಿ5 ಹೆಲಿಕಾಪ್ಟರ್ ಗಳು ಅತ್ಯುತ್ತಮ ಹೆಲಿಕಾಪ್ಟರ್ ಗಳಾಗಿದ್ದರಿಂದ ಯಾವುದೇ ಹೆಲಿಕಾಪ್ಟರ್ ಗಳು ಟ್ರಯಲ್ ರನ್ ನಡೆಸಿರಲಿಲ್ಲ ಎಂದು ವೆಲ್ಲಿಂಗ್ಟನ್ ಏರ್ ಬೇಸ್ ಅಧಿಕಾರಿಗಳು ಹೇಳಿದ್ದಾರೆ.

ಕೂನೂರು ಹಾಗೂ ಹೆಲಿಕಾಪ್ಟರ್ ಅಪಘಾತಕ್ಕೀಡಾದ ನಂಜಪ್ಪಛತ್ರಂ ಬಳಿಯ ಜನರು ಕೂಡ ಸಿಡಿಎಸ್ ರಾವತ್ ಹೆಲಿಕಾಪ್ಟರ್ ಗೂ ಮುನ್ನ ಬೇರೆ ಹೆಲಿಕಾಪ್ಟರ್ ಹಾರಾಟ ನಡೆಸಿದ್ದನ್ನು ನೋಡಿಲ್ಲ, ಅದರ ಶಬ್ದವೂ ಕೇಳಿಸಿಲ್ಲ ಎಂದಿದ್ದಾರೆ. ಇನ್ನೂ ಇಂಡಿಯನ್ ಏರ್ ಪೋರ್ಸ್ ನಿವೃತ್ತ ಅಧಿಕಾರಿ ರಮೇಶ್ ಕುಮಾರ್ ಪ್ರಕಾರ, ರಾಷ್ಟ್ರಪತಿ, ಪ್ರಧಾನಿ ಹೆಲಿಕಾಪ್ಟರ್ ಗಳಲ್ಲಿ ಹಾರಾಟ ನಡೆಸುವಾಗ, ಗಣ್ಯರ ಹೆಲಿಕಾಪ್ಟರ್ ಜೊತೆಗೆ ಇನ್ನೂ ನಾಲ್ಕು ಹೆಲಿಕಾಪ್ಟರ್ ಗಳು ಹಾರಾಟ ನಡೆಸುತ್ತಾವೆ. ಸಿಡಿಎಸ್ ಬಿಪಿನ್ ರಾವತ್ ಕಾಪ್ಟರ್ ಗೂ ಮುನ್ನ ಹೆಲಿಕಾಪ್ಟರ್ ಗಳು ಆ ಮಾರ್ಗದಲ್ಲಿ ಹಾರಾಟ ನಡೆಸಿದ್ದವೆೇ ಇಲ್ಲವೇ ಎಂಬುದು ಗೊತ್ತಿಲ್ಲ ಎಂದಿದ್ದಾರೆ. ಜೊತೆಗೆ ಎಂಐ -17 ಹೆಲಿಕಾಪ್ಟರ್ ತಾಂತ್ರಿಕವಾಗಿ ಅಡ್ವಾನ್ಸ್ ಆಗಿರುವ ಹೆಲಿಕಾಪ್ಟರ್. ಪೈಲಟ್ ಕೂಡ ಅನುಭವಿ ಪೈಲಟ್. ಆದರೆ, ಮೋಡ, ಮಂಜು ಆವರಿಸಿದ್ದಾಗ, ಪೈಲಟ್ ಬಹಳ ಬೇಗನೇ ಕೆಲವೇ ಸೆಕೆಂಡ್ ಗಳಲ್ಲಿ ತೀರ್ಮಾನ ಕೈಗೊಳ್ಳಬೇಕಾಗುತ್ತೆ. ಆ ಸಂದರ್ಭದಲ್ಲಿ ಅವಘಡ ಸಂಭವಿಸಿರಬಹುದು ಎಂದು ಏರ್ ಪೋರ್ಸ್ ನಿವೃತ್ತ ಅಧಿಕಾರಿ ರಮೇಶ್ ಕುಮಾರ್ ಹೇಳಿದ್ದಾರೆ.

ಹೆಲಿಕಾಪ್ಟರ್ ಅಪಘಾತಕ್ಕೀಡಾಗುವಾಗ ಪ್ರವಾಸಿಗರು ರೆಕಾರ್ಡ್ ಮಾಡಿರುವ ವಿಡಿಯೋ ನೋಡಿದರೇ ಆಗ ಮಂಜು ಆವರಿಸಿತ್ತು. ಹೆಲಿಕಾಪ್ಟರ್ ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತಿತ್ತು. ಪ್ರತಿಕೂಲ ಹವಾಮಾನ ಪರಿಸ್ಥಿತಿಯೇ ಕಾಪ್ಟರ್ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಏವಿಯೇಷನ್ ಸೆಕ್ಯೂರಿಟಿ ಕನ್ಸಲ್ಟೆಂಟ್ ಮೋಹನ್ ರಂಗನಾಥನ್ ಹೇಳಿದ್ದಾರೆ.

ಇನ್ನು, ತಮಿಳುನಾಡಿನ ನೀಲಗಿರಿ, ಉತ್ತರಾಖಂಡ್, ಹಿಮಾಚಲ ಪ್ರದೇಶ ಹಾಗೂ ಜಮ್ಮು ಕಾಶ್ಮೀರದಂಥ ರಾಜ್ಯಗಳಲ್ಲಿ ಹವಾಮಾನ ಪರಿಸ್ಥಿತಿ ಕೇವಲ ಐದೇ ನಿಮಿಷಕ್ಕೆ ಬದಲಾಗುತ್ತೆ. ಹೀಗಾಗಿ ಕಾಪ್ಟರ್ ನಲ್ಲಿ ಮುಂಚಿತವಾಗಿಯೇ ಹವಾಮಾನ ಪರಿಸ್ಥಿತಿಯ ಸರ್ವೇ ನಡೆಸಿ ಬಂದರೂ, ಕೂಡ ವಿಐಪಿ ಕಾಪ್ಟರ್ ನಡೆಸುವಾಗ ಮೋಡ ಕವಿದು, ಮಂಜು ಆವರಿಸುತ್ತೆ ಎಂದು ನಿವೃತ್ತ ಮಿಲಿಟರಿ ಅಧಿಕಾರಿ ಕರ್ನಲ್ ದಿನೇಶ್ ಮುದ್ರಿ ಟಿವಿ9ಗೆ ತಿಳಿಸಿದ್ದಾರೆ.

ಆದರೆ, ಎಂಐ-17 ವಿ5 ಹೆಲಿಕಾಪ್ಟರ್ ನಲ್ಲಿ ಹವಾಮಾನ ರಾಡಾರ್ ಸೌಲಭ್ಯ ಕೂಡ ಇತ್ತು. ಇದನ್ನು ಬಳಸಿಕೊಂಡು ಪ್ರತಿಕೂಲ ಹವಾಮಾನ ಪರಿಸ್ಥಿತಿಯು ಗಮನಕ್ಕೆ ಬರುತ್ತಿದ್ದಂತೆ, ಪೈಲಟ್ ಗೆ ಕಾಪ್ಟರ್ ಅನ್ನು ವಾಪಸ್ ಸೂಲೂರು ಏರ್ ಬೇಸ್ ಗೆ ತೆಗೆದುಕೊಂಡು ಹೋಗುವ ಅವಕಾಶ ಕೂಡ ಇತ್ತು. ಬಹುಶಃ ಮೋಡ ಕವಿದ ವಾತಾವರಣ, ಮಂಜು ಹೊದ್ದ ವಾತಾವರಣ ಗಮನಕ್ಕೆ ಬರುತ್ತಿದ್ದಂತೆ, ಪೈಲಟ್ ವಿಷ್ಣು ಸಿಂಗ್ ಸಿಡಿಎಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅನ್ನು ವಾಪಸ್ ಸೂಲೂರು ಏರ್ ಬೇಸ್ ಗೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸಿರಬಹುದು. ಆ ವೇಳೆಯಲ್ಲೇ ಆಚಾತುರ್ಯವಾಗಿ ಅವಘಡ ಸಂಭವಿಸಿಬಹುದು ನಿವೃತ್ತ ಮಾರ್ಷಲ್ ಚೆಂಗಪ್ಪ ಟಿವಿ9 ಗೆ ತಿಳಿಸಿದ್ದಾರೆ.

ಹೆಲಿಕಾಪ್ಟರ್ ಮಂಜಿನಲ್ಲಿ ನೋಡ ನೋಡುತ್ತಿದ್ದಂತೆ ಮರೆಯಾಗಿರುವುದನ್ನು ಸ್ಥಳೀಯ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಇದನ್ನು ನೋಡಿದರೇ, ಪ್ರತಿಕೂಲ ಹವಾಮಾನ ಪರಿಸ್ಥಿತಿಯೇ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ. ಹೀಗಾಗಿ ಕಾಪ್ಟರ್ ಅಪಘಾತಕ್ಕೆ ಮೆಕ್ಯಾನಿಕಲ್ ದೋಷ, ತಾಂತ್ರಿಕ ದೋಷ ಕಾರಣವಾಗರಲಿಕ್ಕಿಲ್ಲ. ಪ್ರತಿಕೂಲ ಹವಾಮಾನ ಪರಿಸ್ಥಿತಿಯೇ ಕಾರಣ ಎಂಬ ಅಭಿಪ್ರಾಯವನ್ನು ಏರ್ ಪೋರ್ಸ್ ನ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಇಂಡಿಯನ್ ಏರ್ ಪೋರ್ಸ್ ಇಂದು ಬೆಳಿಗ್ಗೆ ಹೇಳಿಕೆ ನೀಡಿದ್ದು, ಹೆಲಿಕಾಪ್ಟರ್ ಅಪಘಾತದ ಬಗ್ಗೆ ಮೂರುಸೇನೆಗಳ ತಂಡ ರಚಿಸಿ ತನಿಖೆಗೆ ಆದೇಶ ನೀಡಲಾಗಿದೆ. ತ್ವರಿತ ಗತಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸಲಾಗುತ್ತದೆ . ಸತ್ಯಾಂಶವನ್ನು ಹೊರತರಲಾಗುತ್ತದೆ. ಅಲ್ಲಿಯವರೆಗೂ ಮೃತರ ಘನತೆಯನ್ನು ಗೌರವಿಸಬೇಕು. ಸರಿಯಾದ ಮಾಹಿತಿ ಇಲ್ಲದೇ, ಊಹಾಪೋಹ ಮಾಡುವುದು ಬೇಡ ಎಂದು ಇಂಡಿಯನ್ ಏರ್ ಪೋರ್ಸ್ ಟ್ವೀಟರ್ ನಲ್ಲಿ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದೆ.

ವರದಿ: ಚಂದ್ರಮೋಹನ್, ಟಿವಿ9

ಇದನ್ನೂ ಓದಿ:

ಬಿಪಿನ್ ರಾವತ್ ಮೃತಪಟ್ಟಿದ್ದಕ್ಕೆ ಸಂಭ್ರಮಾಚರಣೆ ವಿಚಾರ; ಮಂಗಳೂರಿನಲ್ಲಿ ಪ್ರಕರಣ ದಾಖಲು

ಮಿಲಿಟರಿ ಗೌರವಗಳೊಂದಿಗೆ ನೆರವೇರಿತು ಭಾರತದ ಮೊದಲ ಸಿಡಿಎಸ್ ಅಧಿಕಾರಿ ಬಿಪಿನ್​ ರಾವತ್​ ಅಂತ್ಯಕ್ರಿಯೆ; ಫೋಟೋಗಳು ಇಲ್ಲಿವೆ