EPF account: ಇಪಿಎಫ್ ಖಾತೆ ವರ್ಗಾವಣೆ, ವಿಥ್​ಡ್ರಾ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿಗಳಿವು

|

Updated on: Apr 14, 2021 | 3:09 PM

ಇಪಿಎಫ್ ಖಾತೆಯ ಹಣ ವಿಥ್​ಡ್ರಾ, ಒಂದು ಸಂಸ್ಥೆಯಿಂದ ಮತ್ತೊಂದಕ್ಕೆ ವರ್ಗಾವಣೆ, ತೆರಿಗೆ ಲೆಕ್ಕಾಚಾರ ಮತ್ತಿತರ ಮಾಹಿತಿ ಇಲ್ಲಿ ನಿಮ್ಮೆದುರು ಇದೆ. ಹೇಗಿದ್ದರೂ ಇಪಿಎಫ್​ ಖಾತೆಯಲ್ಲಿ ಹಣ ಇದ್ದರೆ ಬಡ್ಡಿ ಬರುತ್ತದೆ ಎಂಬ ನಿರ್ಲಕ್ಷ್ಯ ಮಾಡದಿರಿ.

EPF account: ಇಪಿಎಫ್ ಖಾತೆ ವರ್ಗಾವಣೆ, ವಿಥ್​ಡ್ರಾ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿಗಳಿವು
ಪ್ರಾತಿನಿಧಿಕ ಚಿತ್ರ
Follow us on

ಉದ್ಯೋಗವನ್ನು ಬದಲಿಸಿದ ಮೇಲೆ ಹಲವರು ತಮ್ಮ ಇಪಿಎಫ್ ಖಾತೆಯನ್ನು ಹೊಸ ಉದ್ಯೋಗದಾತರಿಗೆ ಬದಲಿಸಿಕೊಳ್ಳುವುದನ್ನು ಮರೆತುಬಿಡುತ್ತಾರೆ. ಇಪಿಎಫ್ ಬಾಕಿ ಮೊತ್ತಕ್ಕೆ ತಮ್ಮ 58ನೇ ವರ್ಷದ ತನಕ ತೆರಿಗೆರಹಿತವಾದ ಬಡ್ಡಿ ಪಡೆಯಬಹುದು ಎಂದುಕೊಂಡಿರುತ್ತಾರೆ. ಆ ಕಾರಣಕ್ಕೆ ಇಪಿಎಫ್ ಖಾತೆಯಲ್ಲಿ ಇರುವ ಮೊತ್ತವನ್ನು ವಿಥ್​ಡ್ರಾ ಮಾಡದೆ, ವರ್ಗಾವಣೆ ಕೂಡ ಮಾಡದೆ ಹಾಗೇ ಬಿಟ್ಟಿರುತ್ತಾರೆ. ಇನ್ನೂ ಕೆಲವರು 58 ವರ್ಷ ತುಂಬುವ ಮುಂಚೆಯೇ ಕೆಲಸ ಬಿಟ್ಟು, ತಮ್ಮದೇ ಸ್ವಂತ ಉದ್ಯಮ ಆರಂಭಿಸಿ, ಉದ್ಯಮಿಯೇ ಆಗಿಬಿಟ್ಟಿರುತ್ತಾರೆ. ಇಂಥವರು ತಮ್ಮ ಇಪಿಎಫ್ ಖಾತೆಯ ಹಣ ಏನಾಯಿತು ಎಂದು ತಿಳಿದುಕೊಳ್ಳುವುದಕ್ಕೆ ಬಯಸುತ್ತಾರೆ. ಜತೆಗೆ ತೆರಿಗೆ ರಹಿತವಾದ ಬಡ್ಡಿ ಗಳಿಕೆ ಮುಂದುವರಿಯುತ್ತದಾ ಎಂಬ ಪ್ರಶ್ನೆಯೂ ಇರುತ್ತದೆ.

ಇಲ್ಲಿ ತಿಳಿದುಕೊಳ್ಳಬೇಕಾದ ಸಂಗತಿ ಏನೆಂದರೆ, ಉದ್ಯೋಗದ ನಂತರವೂ 58ನೇ ವರ್ಷದ ತನಕ ಬಡ್ಡಿ ಬರುತ್ತದೆ. ಹೊಸದಾಗಿ ಹಣ ಜಮೆ ಮಾಡಬೇಕು ಅಂತೇನೂ ಇಲ್ಲ. ಆದರೆ ನಿವೃತ್ತಿ ತನಕದ ಬಾಕಿ ಮೊತ್ತಕ್ಕೆ ಅಥವಾ ಉದ್ಯೋಗದ ಕೊನೆ ತನಕ ಯಾವುದೇ ತೆರಿಗೆ ಇರುವುದಿಲ್ಲ. ಉದ್ಯೋಗಕ್ಕೆ ರಾಜೀನಾಮೆ ನೀಡಿದ ನಂತರ, ನಿವೃತ್ತಿ ನಂತರ ಅಥವಾ ಉದ್ಯೋಗ ಕೊನೆಯಾದಲ್ಲಿ ಅದಾದ ಮೇಲೆ ಗಳಿಸಿದ ಭವಿಷ್ಯ ನಿಧಿ ಮೇಲಿನ ಯಾವುದೇ ಬಡ್ಡಿಗೆ ಕಾನೂನು ಪ್ರಕಾರ ತೆರಿಗೆ ಬೀಳುತ್ತದೆ.

58 ವರ್ಷಕ್ಕೆ ಮುಂಚಿತವಾಗಿ, ಉದ್ಯೋಗಕ್ಕೆ ರಾಜೀನಾಮೆ ನೀಡಿದ ನಂತರ, ವಿಥ್​ಡ್ರಾಗೆ ಅರ್ಜಿ ಹಾಕಿಕೊಳ್ಳಲು ಅರ್ಹರಾದ 36 ತಿಂಗಳೊಳಗೆ ಹಾಗೆ ಮಾಡದಿದ್ದಲ್ಲಿ ಇಪಿಎಫ್ ಖಾತೆಯು ಕಾರ್ಯ ನಿರ್ವಹಿಸುವುದಿಲ್ಲ. ಉದ್ಯೋಗ ತೊರೆದ ಮೇಲೆ ಬೇರೆಲ್ಲೂ ಕೆಲಸಕ್ಕೆ ಸೇರದಿದ್ದಲ್ಲಿ ಎರಡು ತಿಂಗಳ ನಂತರ ಪೂರ್ತಿ ಮೊತ್ತವನ್ನು ವಿಥ್ ಡ್ರಾ ಮಾಡಲು ಉದ್ಯೋಗಿ ಅರ್ಹರಾಗುತ್ತಾರೆ. ಒಂದು ಸಲ ಇಪಿಎಫ್ ಖಾತೆ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದರೆ ಬಡ್ಡಿ ಕೂಡ ಗಳಿಕೆ ಆಗುವುದಿಲ್ಲ.

ಇಪಿಎಫ್​ಇ ನಿಯಮಾವಳಿ ಪ್ರಕಾರ ಈ ನಾಲ್ಕು ಸನ್ನಿವೇಶದಲ್ಲಿ ಇಪಿಎಫ್ ಖಾತೆ ಕಾರ್ಯ ನಿರ್ವಹಣೆ ನಿಲ್ಲುತ್ತದೆ:
1. ಉದ್ಯೋಗಿಯು 55 ವರ್ಷದ ನಂತರ ನಿವೃತ್ತರಾದಾಗ
2. ಒಂದು ವೇಳೆ ಚಂದಾದಾರರು ಶಾಶ್ವತವಾಗಿ ವಿದೇಶಕ್ಕೆ ವಲಸೆ ಹೋದಾಗ
3. ಚಂದಾದಾರರು ನಿಧನರಾದಾಗ
4. ಸಿಬ್ಬಂದಿ ಉದ್ಯೋಗ ತೊರೆದ 36 ತಿಂಗಳ ಒಳಗೆ ಇಪಿಎಫ್ ವಿಥ್​ಡ್ರಾಗೆ ಅರ್ಜಿ ಹಾಕದಿದ್ದಾಗ ಕಾರ್ಯ ನಿರ್ವಹಣೆ ನಿಲ್ಲಿಸುತ್ತದೆ

ಆದಾಯ ತೆರಿಗೆ ನಿಯಮದ ಅನುಸಾರ, ನಿರಂತರವಾಗಿ 5 ವರ್ಷ ಸೇವೆ ಪೂರೈಸದೆ ವಿಥ್​ಡ್ರಾ ಮಾಡಿದಲ್ಲಿ ಇಪಿಎಫ್ ಬಾಕಿ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ಬೀಳುತ್ತದೆ. ಐದು ವರ್ಷದ ಆರಂಭದ ಅವಧಿಯಲ್ಲಿ ಚಂದಾದಾರರು ಒಂದಕ್ಕಿಂತ ಹೆಚ್ಚಿನ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸಿದಲ್ಲಿ, ಈ ಹಿಂದಿನ ಸಂಸ್ಥೆಯಿಂದ ಹೊಸದಕ್ಕೆ ಬಾಕಿಯನ್ನು ವರ್ಗಾವಣೆ ಮಾಡಿದಾಗ ಅದನ್ನು ನಿರಂತರ ಐದು ವರ್ಷದ ಸೇವೆ ಎಂದು ಪರಿಗಣಿಸಲಾಗುತ್ತದೆ. ಇಂಥ ಸನ್ನಿವೇಶದಲ್ಲಿ. ಉದ್ಯೋಗಿಯ ನಿರಂತರ ಐದು ವರ್ಷ ಸೇವೆ ಸಲ್ಲಿಸಿದ್ದಾರೆ ಎಂದು ತೆರಿಗೆ ಲೆಕ್ಕಾಚಾರಕ್ಕೆ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಈ ಮೇಲ್ಕಂಡ ಅಂಶಗಳನ್ನೆಲ್ಲ ಪರಿಗಣಿಸಿ ಹೇಳುವುದಾದರೆ, ಹೊಸ ಸಂಸ್ಥೆಗೆ ಉದ್ಯೋಗ ಬದಲಾವಣೆ ಮಾಡಿಕೊಂಡ ತಕ್ಷಣ ಇಪಿಎಫ್ ಖಾತೆ ಕೂಡ ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ಒಂದು ವೇಳೆ ಅವಧಿಗೂ ಮುಂಚೆಯೇ ನಿವೃತ್ತರಾದಲ್ಲಿ, ಕೆಲಸ ಬಿಟ್ಟ 36 ತಿಂಗಳಲ್ಲಿ ವಿಥ್​ಡ್ರಾ ಮಾಡಬೇಕು.

ಇದನ್ನೂ ಓದಿ: Want to retire rich? ನಿವೃತ್ತಿ ನಂತರ ಆರ್ಥಿಕವಾಗಿ ನೆಮ್ಮದಿಯಾಗಿರಲು ಇಲ್ಲಿವೆ 10 ನಿಯಮಗಳು

( Here is the information you must know about EPF account transfer, withdrawal, and tax calculation.)