ದೇಶದೆಲ್ಲೆಡೆ ಟೂಲ್ಕಿಟ್ ವಿವಾದ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ. ಕೃಷಿ ಕಾಯ್ದೆ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ರೈತ ಚಳವಳಿಗೂ, ಟೂಲ್ಕಿಟ್ಗೂ ಸಂಬಂಧ ಇದೆ ಎನ್ನಲಾಗುತ್ತಿದ್ದು, ಬೆಂಗಳೂರಿನ ಯುವತಿ ದಿಶಾ ರವಿ ಬಂಧನವಾದ ನಂತರ ಪ್ರಕರಣ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ದೆಹಲಿ ಪೊಲೀಸರು ಏಕಾಏಕಿ ಬೆಂಗಳೂರಿಗೆ ಬಂದು ಯುವತಿಯನ್ನು ಬಂಧಿಸಿರುವುದು ನ್ಯಾಯಸಮ್ಮತವೇ? ಇದು ನಿಜಕ್ಕೂ ದೇಶದ ವಿರುದ್ಧ ಪಿತೂರಿ ನಡೆದಿದೆ ಎಂಬ ಕಾರಣಕ್ಕಾಗಿಯೇ ಆಗಿರುವ ಬಂಧನವೋ? ಅಥವಾ ಆಡಳಿತ ವ್ಯವಸ್ಥೆಯ ದೌರ್ಜನ್ಯವೋ? ಎಂಬ ಜಿಜ್ಞಾಸೆ ಮೂಡಿದೆ. ಇಷ್ಟಕ್ಕೂ ಟೂಲ್ಕಿಟ್ ಪ್ರಕರಣದ ಹಿನ್ನೆಲೆ ಏನು? ಇದನ್ನು ನಾವು ಯಾವ ರೀತಿಯಲ್ಲಿ ಪರಾಮರ್ಶಿಸಬಹುದು? ಚಿಂತಕರು, ವಕೀಲರು ಇದನ್ನು ಹೇಗೆ ಪರಿಗಣಿಸುತ್ತಾರೆ ಎನ್ನುವ ಕುರಿತು ಟಿವಿ9 ಕನ್ನಡ ಡಿಜಿಟಲ್ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ, ಹಿರಿಯ ವಕೀಲ ವಿವೇಕ್ ರೆಡ್ಡಿ ಅವರೊಂದಿಗೆ ನಡೆಸಲಾದ ಚರ್ಚೆಯಲ್ಲಿ ಟಿವಿ9 ಹಿರಿಯ ಪ್ರತಿನಿಧಿ ಚಂದ್ರಮೋಹನ್ ಪಾಲ್ಗೊಂಡಿದ್ದು, ನಿರೂಪಕಿ ಸೌಮ್ಯ ಹೆಗಡೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಟೂಲ್ ಕಿಟ್ ವಿವಾದದ ಹಿನ್ನೆಲೆ ಏನು?
ದೆಹಲಿ ಪೊಲೀಸರು ಶನಿವಾರ ಬೆಂಗಳೂರಿನ ಸೋಲದೇವನಹಳ್ಳಿಗೆ ಬಂದು ದಿಶಾ ರವಿಯನ್ನು ಬಂಧಿಸಿರುವುದು ರಾತ್ರೋರಾತ್ರಿ ನಡೆದ ಬೆಳವಣಿಗೆಯಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ, ಇದಕ್ಕೂ ಮುನ್ನ ಕೆಲ ದಿನಗಳಿಂದ ಈ ಕುರಿತಾದ ತನಿಖೆಯಲ್ಲಿ ನಿರತರಾಗಿದ್ದ ದೆಹಲಿ ಪೊಲೀಸರು, ಟೂಲ್ಕಿಟ್ ಸೃಷ್ಟಿ ಮಾಡಿದ ಅನಾಮಧೇಯ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆ ಬಗ್ಗೆ FIR ದಾಖಲಿಸಿಕೊಂಡು ಗೂಗಲ್ಗೆ ಪತ್ರ ಬರೆದು ಮಾಹಿತಿಯನ್ನೂ ಕೋರಿದ್ದರು. ಅದಕ್ಕೆ ಪ್ರತ್ಯುತ್ತರಿಸಿದ ಗೂಗಲ್ ಸಂಸ್ಥೆ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ, ಮುಂಬೈನಲ್ಲಿ ವಕೀಲೆಯಾಗಿರುವ ನಿಖಿತಾ ಜೇಕಬ್ ಮತ್ತು ಪ್ರಾಜೆಕ್ಟ್ ಇಂಜಿನಿಯರ್ ಆಗಿರುವ ಶಂತನು ಎಂಬ ಮೂವರ ಹೆಸರನ್ನು ಪ್ರಸ್ತಾಪಿಸಿದೆ.
ಇದರ ಬೆನ್ನಲ್ಲೇ ದೆಹಲಿ ಕೋರ್ಟ್ ಈ ಮೂವರ ವಿರುದ್ಧ ಜಾಮೀನು ರಹಿತ ವಾರೆಂಟ್ ಸಹ ಹೊರಡಿಸಿದೆ. ಕೋರ್ಟ್ ಆದೇಶದ ಪ್ರತಿಯನ್ನು ಹಿಡಿದು ಬಂದ ಪೊಲೀಸರು ಬೆಂಗಳೂರಿಗೆ ಬಂದು ದಿಶಾ ರವಿಯನ್ನು ಬಂಧಿಸಿದ್ದಾರೆ. ದೆಹಲಿ ಪೊಲೀಸರ ಪ್ರಕಾರ ಈ ಪ್ರಕ್ರಿಯೆ ಸಂಪೂರ್ಣ ಕಾನೂನುಬದ್ಧವಾಗಿದ್ದು, ಬೆಂಗಳೂರಿನ ಸ್ಥಳೀಯ ಪೊಲೀಸರ ಉಪಸ್ಥಿತಿಯೊಂದಿಗೆ ದಿಶಾ ರವಿ ಇದ್ದಲ್ಲಿಗೆ ಆಗಮಿಸಿ, ಬಂಧನ ಆದೇಶ ಪತ್ರಕ್ಕೆ ಆಕೆಯ ತಾಯಿ ಮಂಜುಳಾರಿಂದ ಸಹಿಯನ್ನೂ ಪಡೆದು ಬಂಧಿಸಲಾಗಿದೆ. ಜೊತೆಗೆ ಆಕೆಯನ್ನು ದೆಹಲಿಯ ಪಟಿಯಾಲ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆಕೆಯ ಪರವಾಗಿ ವಕೀಲರನ್ನು ನೀಡಲಾಗಿದ್ದು, ಕಾನೂನು ನೆರವನ್ನೂ ಕಲ್ಪಿಸಲಾಗಿದೆ. ಈ ಮಧ್ಯೆ ದಿಶಾ ರವಿಯನ್ನು 8 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದ್ದ ಪೊಲೀಸರಿಗೆ ನ್ಯಾಯಾಲಯ ಕೇವಲ 5 ದಿನಗಳವರೆಗೆ ವಶದಲ್ಲಿಟ್ಟುಕೊಳ್ಳಲು ಅನುಮತಿ ನೀಡಿದೆ.
ಟೂಲ್ ಕಿಟ್ ಏನು? ಈ ಟೂಲ್ ಕಿಟ್ನಲ್ಲಿ ಏನಿತ್ತು?
ಟೂಲ್ ಕಿಟ್ ಎನ್ನುವುದು ಮುಖ್ಯವಾಗಿ ಒಂದಷ್ಟು ಮಾಹಿತಿಗಳನ್ನು ಒಳಗೊಂಡ ದಾಖಲೆ. ಸದ್ಯ ಈ ವಿವಾದಕ್ಕೆ ಕಾರಣವಾಗಿರುವ ಟೂಲ್ ಕಿಟ್ನಲ್ಲಿ ಕೃಷಿ ಕಾಯ್ದೆಯ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದ ಕೆಲ ಮಾಹಿತಿಗಳಿರುವುದು ಕಂಡುಬಂದಿದೆ. ಈ ಪ್ರತಿಭಟನೆಗೆ ಕಾರಣವೇನು, ರೈತರು ಹೇಗೆ ಪ್ರತಿಭಟಿಸುತ್ತಿದ್ದಾರೆ, ಅವರ ಬೇಡಿಕೆಗಳೇನು, ಸಮಸ್ಯೆಗಳೇನು, ದೇಶದಲ್ಲಿನ ಜನ ಹೇಗೆ ಪ್ರತಿಕ್ರಿಯಿಸಬೇಕು, ವಿದೇಶಿಗರು ಹೇಗೆ ಬೆಂಬಲಿಸಬೇಕು ಎಂಬಲ್ಲಿಂದ ಹಿಡಿದು ದೆಹಲಿ ಪೊಲೀಸರು ಏನಾದರೂ ದೌರ್ಜನ್ಯ ಎಸಗುತ್ತಿದ್ದಾರಾ? ಕೇಂದ್ರ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿದೆಯಾ? ಎಂಬಲ್ಲಿಯ ತನಕ ಮಾಹಿತಿಯನ್ನೊಳಗೊಂಡಿತ್ತು.
ದೇಶದ್ರೋಹ ಹೇಗೆ?
ನಿಖಿತಾ ಜೇಕಬ್ ಹೇಳುವ ಪ್ರಕಾರ ಈ ಟೂಲ್ ಕಿಟ್ನಲ್ಲಿ ಪ್ರತಿಭಟನೆಯ ಬಗ್ಗೆ ಮಾಹಿತಿ ದಾಖಲಿಸಲಾಗಿದೆಯೇ ಹೊರತು ಪ್ರತಿಭಟನೆಗೆ ಪ್ರಚೋದನೆ ನೀಡುವ ಅಂಶಗಳಾಗಲೀ, ಹಿಂಸೆಯನ್ನು ಪ್ರತಿಪಾದಿಸುವ ವಿಚಾರಗಳಾಗಲೀ ಇಲ್ಲ. ವಿಷಯ ಹೀಗಿರುವಾಗ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಕಾರಣವೇನು? ಹಿಂಸೆಗೆ ಪ್ರಚೋದನೆ ನೀಡುವ ಅಂಶಗಳಿಲ್ಲ ಎನ್ನುವುದಾದರೆ ಈ ರೀತಿಯ ಕ್ರಮ ಕೈಗೊಂಡಿರುವ ಉದ್ದೇಶವೇನು? ಎನ್ನುವುದು ಬಹುತೇಕರು ಕೇಳುತ್ತಿರುವ ಪ್ರಶ್ನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ, ಈ ಬಂಧನ ನನಗೆ ಯಾವ ಬಗೆಯ ಅಚ್ಚರಿಯನ್ನೂ ತಂದುಕೊಟ್ಟಿಲ್ಲ. ಸರ್ಕಾರ ಕೃಷಿ ಕಾಯ್ದೆ ಚಳವಳಿ ಮಾಡುತ್ತಿರುವ ರೈತರ ಮೇಲೆ ಹೊರಿಸುತ್ತಿರುವ ಆರೋಪದ ಮುಂದುವರಿದ ರೂಪವಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚರ್ಚಾಸ್ಪದವಾಗಿರುವ ಮೂರು ಕೃಷಿಕಾಯ್ದೆಗಳು ಸಂಸತ್ತಿನಲ್ಲಿ ಅಂಗೀಕಾರವಾದ ಮೂರೇ ದಿನಕ್ಕೆ ಪಂಜಾಬ್ ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ನಂತರ ನವೆಂಬರ್ 26ಕ್ಕೆ ಅದು ದೆಹಲಿ ಗಡಿಗೆ ಬಂದು ತಲುಪುವ ಮೂಲಕ ದೊಡ್ಡ ರೂಪ ಪಡೆದುಕೊಂಡಿತು. ಆದರೆ, ಈ ಬೆಳವಣಿಗೆ ಕುರಿತು ಸರ್ಕಾರದ ಪರವಾಗಿರುವವರು ಮಾಡಿದ ಆರೋಪ ಅತೀ ಗಂಭೀರವಾಗಿರುವಂಥದ್ದು. ದೇಶದ್ರೋಹಿಗಳು, ಖಾಲಿಸ್ತಾನಿಗಳು ಎಂದೆಲ್ಲಾ ಆರೋಪ ಹೊರಿಸಲಾರಂಭಿಸುವ ಮೂಲಕ ಈ ಪ್ರತಿಭಟನೆಗೆ ಮತ್ತೊಂದು ರೂಪ ಕೊಡಲು ಪ್ರಯತ್ನಪಟ್ಟಿದ್ದಾರೆ. ಈಗ ದಿಶಾ ಬಂಧನವಾಗಿರುವುದು ಕೂಡಾ ಇದರ ಮುಂದುವರಿದ ಭಾಗ ಹಾಗೂ ಇದು ಇಲ್ಲಿಗೇ ನಿಲ್ಲುವುದಿಲ್ಲ ಎನ್ನುವುದೂ ಸತ್ಯ. ತಾಂತ್ರಿಕವಾಗಿ ದಿಶಾಳನ್ನು ಬಂಧಿಸಿರುವುದು ಸರಿಯಾಗಿರಬಹುದು. ಆದರೆ, ಬಂಧನದ ಹಿಂದಿರುವ ಕೆಲ ಉದ್ದೇಶಗಳು ಸಂಪೂರ್ಣ ಸರಿ ಎಂದು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ದಿಶಾ ರವಿ ಬಂಧನ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ; ಪೊಲೀಸರಿಗೆ ಗಂಭೀರ ಪತ್ರ ಬರೆದ ಮಹಿಳಾ ಆಯೋಗ
ಈ ವಿಚಾರದಲ್ಲಿ ಗ್ರೇಟಾ ಥನ್ಬರ್ಗ್ಗೆ ಸಂಪರ್ಕ ಇದೆ ಎಂಬ ಕಾರಣಕ್ಕೆ ಬೇರೆ ಆಯಾಮ ಕೊಡಲು ಹೊರಟಿರುವುದು ಸರಿಯಲ್ಲ. ಉದಾಹರಣೆಗೆ ಸಿಖ್ಖರನ್ನೇ ತೆಗೆದುಕೊಂಡರೂ ಅವರು ವಿಶ್ವದ ಬಹುತೇಕ ಕಡೆಗಳಲ್ಲಿ ನೆಲೆಸಿದ್ದಾರೆ. ಹೀಗಾಗಿ ಪಂಜಾಬಿನಲ್ಲಿ ಪ್ರತಿಭಟನೆ ಶುರುವಾದ ತಕ್ಷಣ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದಾಗುತ್ತದೆ. ಅಂತೆಯೇ, ಒಂದೇ ಆಲೋಚನೆಯುಳ್ಳವರೂ ವಿಶ್ವದ ಬೇರೆಬೇರೆ ಕಡೆ ಇದ್ದಾಗ ಸಹಜವಾಗಿ ಸಂಪರ್ಕಕ್ಕೆ ಬರುತ್ತಾರೆ. ಈ ಪ್ರಕರಣದಲ್ಲಿ ದಿಶಾ ರವಿ ಪರಿಸರ ಕಾಳಜಿ ಕಾರಣಕ್ಕಾಗಿ ಗ್ರೇಟಾ ಥನ್ಬರ್ಗ್ ಜೊತೆ ಸಂಪರ್ಕಕ್ಕೆ ಬಂದಿರಬಹುದು ಮತ್ತು ಆಕೆಯ ಅಜ್ಜ ರೈತನಾಗಿದ್ದ ಕಾರಣಕ್ಕೆ ಈಕೆ ರೈತರ ಪರ ದನಿ ಎತ್ತಿರಬಹುದು. ನಾವು ಇದನ್ನು ದೇಶದ್ರೋಹ ಎಂದು ಉಲ್ಲೇಖಿಸಲಾಗದು. ಇದೇನಿದ್ದರೂ ಸರ್ಕಾರದ ನಿಲುವಿಗೆ ವಿರುದ್ಧವಾಗಿರುವುದಷ್ಟೇ. ಟೂಲ್ಕಿಟ್ನಲ್ಲಿ ರೈತ ಹೋರಾಟವನ್ನು ಹೇಗೆ ಸಂಘಟಿಸಬೇಕು, ಎತ್ತ ಕೊಂಡೊಯ್ಯಬೇಕು ಎಂದು ದಾಖಲಿಸಿದ್ದನ್ನು ದೇಶ ವಿರೋಧ ಎನ್ನುವುದು ಸರಿಯಲ್ಲ ಎಂದು ತಿಳಿಸಿದರು.
ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ವಿವೇಕ್ ರೆಡ್ಡಿ, ಇಲ್ಲಿಯ ತನಕ ಆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ದಿಶಾ ಖಾಲಿಸ್ತಾನಿ ಪರವಾದ ಗುಂಪಿನೊಂದಿಗೆ ನಂಟು ಹೊಂದಿರುವುದು ಕಂಡುಬಂದಿದೆ. ಪಂಜಾಬ್ ರಾಜ್ಯವನ್ನು ಭಾರತದಿಂದ ಬೇರ್ಪಡಿಸಬೇಕು ಎಂಬ ಉದ್ದೇಶ ಹೊಂದಿರುವ ಇಂತಹ ದೇಶದ್ರೋಹಿ ಶಕ್ತಿಗಳನ್ನು ಸುಮ್ಮನೆ ಬಿಡಲಾಗುತ್ತದೆಯೇ? ಸ್ವತಃ ದಿಶಾ ರವಿಯೇ ತನ್ನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ದೂರು ದಾಖಲಾಗಬಹುದೆಂಬ ಕಾರಣಕ್ಕೆ ಕೆಲ ವಾಟ್ಸಾಪ್ ಮೆಸೇಜ್ ಅಳಿಸಿ ಹಾಕಿದ್ದಾಳೆ. ಆಕೆಯನ್ನು ನಾವು ಸಮರ್ಥಿಸಿಕೊಳ್ಳುವುದರಲ್ಲಿ ಅರ್ಥವಿದೆಯೇ? ಭಾರತದ ಮೇಲೆ ತಿರಸ್ಕಾರದ ಭಾವನೆ ಹುಟ್ಟುಹಾಕುವ ಪ್ರಯತ್ನ ಮಾಡುವಾಕೆಗೆ 21 ವರ್ಷದ ಯುವತಿ, ಮುಗ್ಧೆ ಎಂಬ ಸಬೂಬು ನೀಡಿ ರಕ್ಷಣೆ ನೀಡುವ ಅವಶ್ಯಕತೆ ಇದೆಯೇ? ಎಂದು ಪ್ರಶ್ನಿಸಿದರು.
ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದಾದರೆ ಅವರು ತಪ್ಪು ಮಾಡಿದ್ದರು ಎಂದೇ ಅರ್ಥ. ಹೀಗಾಗಿ, ದಿಶಾಳನ್ನು ಸಮರ್ಥಿಸಿಕೊಳ್ಳಬೇಕೆಂಬ ಕಾರಣಕ್ಕೆ ಆಕೆಯ ವಿರುದ್ಧ ಸಿಕ್ಕಿರುವ ಪುರಾವೆ, ಜೂಮ್ ಮೀಟಿಂಗ್ ಲಿಂಕ್, ವಾಟ್ಸಪ್ ಚಾಟ್, UAPA ಪ್ರಸ್ತಾಪಗಳನ್ನು ಕೆಲವರು ಮುಚ್ಚಿಡುತ್ತಿದ್ದಾರೆ. ಈ ವಿಚಾರದಲ್ಲಿ ಆಕೆಯ ಬಗ್ಗೆ ಕನಿಕರ ತೋರುವ ಅಗತ್ಯವಿಲ್ಲ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಹೇಳಿದರು.
ಆದರೆ, ಇದನ್ನೊಪ್ಪಿಕೊಳ್ಳದ ಪುರುಷೋತ್ತಮ ಬಿಳಿಮಲೆ ಅವರು ದಿಶಾಳ ಮೇಲೆ ದೇಶದ್ರೋಹ ಆರೋಪ ಹೊರಿಸಿರುವುದು ಖಂಡಿತಾ ಸರಿಯಲ್ಲ. ಏಕೆಂದರೆ, ಈಕೆ ಮಾಡಿದ ಕಾರ್ಯದಿಂದ ಎಲ್ಲಿಯಾದರೂ ಹಿಂಸೆ ಸಂಭವಿಸಿದ್ದಾಗಲೀ, ಹಿಂಸೆಗೆ ಪ್ರಚೋದನೆ ನೀಡಿದ್ದಾಗಲೀ ಕಂಡುಬಂದಿಲ್ಲ. ಹೀಗಾಗಿ ಅವರು ಮಾಡಿರುವುದನ್ನು ತಪ್ಪು ಎನ್ನಬಹುದೇ ವಿನಃ ದೇಶದ್ರೋಹ ಎನ್ನಲಾಗುವುದಿಲ್ಲ ಎಂದರು.
ಇದನ್ನೂ ಓದಿ: ಟೂಲ್ಕಿಟ್ ತಯಾರಿಸಿದ ಆರೋಪ; ಶಂತನು ಮುಲುಕ್ಗೆ 10 ದಿನಗಳ ನಿರೀಕ್ಷಣಾ ಜಾಮೀನು ಮಂಜೂರು
ಸದ್ಯದ ಪರಿಸ್ಥಿತಿಯಲ್ಲಿ ನಾವು ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಹೆದರುವಂತಾಗಿದೆ. ನಾವು ಏನಾದರೂ ಬರೆದರೆ ಅದು ಹೇಗೆ ತಿರುವು ಪಡೆಯುತ್ತದೆ ಎಂದೇ ಹೇಳಲಿಕ್ಕಾಗುವುದಿಲ್ಲ. 2016ರಿಂದ ಈಚೆಗೆ ಈ ಸರ್ಕಾರದವರು ದೇಶದ್ರೋಹಕ್ಕೆ ಸಂಬಂಧಿಸಿದಂತೆ ಹಾಕಿದ ಬಹುತೇಕ ಪ್ರಕರಣಗಳು ಬಿದ್ದುಹೋಗಿವೆ. ಆದರೂ, ಸರ್ಕಾರದ ವಿರುದ್ಧ ಮಾತನಾಡುವವರಿಗೆ ದೇಶದ್ರೋಹದ ಕೇಸ್ ಹಾಕುತ್ತೇವೆ ಎಂಬ ಭಯವನ್ನು ಈಗಾಗಲೇ ಯಶಸ್ವಿಯಾಗಿ ಹುಟ್ಟಿಸಿಬಿಟ್ಟಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಕಾಲದಲ್ಲಿ ನಾವು ಬೇರೆಬೇರೆ ಕಾರಣಗಳಿಗಾಗಿ ಹಲವರೊಂದಿಗೆ ಸಂಪರ್ಕ ಹೊಂದುತ್ತಲೇ ಇರುತ್ತೇವೆ. ಯಾವುದೋ ಒಂದು ವಿಚಾರಕ್ಕೆ ಸಂವಹನ ನಡೆಸುವಾಗ ನಾವು ಆ ವ್ಯಕ್ತಿಯ ವೈಯಕ್ತಿಕ ಸಿದ್ಧಾಂತವೇನು? ರಾಜಕೀಯ ನಿಲುವೇನು? ಅವರು ಸಮಾಜದ ಬಗ್ಗೆ ಯಾವ ರೀತಿಯ ಭಾವನೆ ಹೊಂದಿದ್ದಾರೆ ಎಂದೆಲ್ಲಾ ಕೆದಕುವುದಿಲ್ಲ. ಅದೇ ರೀತಿ ಸೆಲ್ಫಿ ತೆಗೆಸಿಕೊಳ್ಳುವ ಹೊತ್ತಲ್ಲಾಗಲೀ, ಆನ್ಲೈನ್ ಮೀಟಿಂಗ್ ನಡೆಸುವ ಸಮಯದಲ್ಲಾಗಲೀ ನಮಗೆ ಅವರ ಇನ್ನೊಂದು ಮುಖ ಗೊತ್ತಿರುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ನಮ್ಮೊಟ್ಟಿಗೆ ಫೋಟೋ ತೆಗೆಸಿಕೊಂಡವರು ಖಾಲಿಸ್ತಾನಿ ಬೆಂಬಲಿಗರೆಂಬ ಕಾರಣಕ್ಕೆ ನಮ್ಮ ಮೇಲೆ ಕೇಸು ದಾಖಲಿಸುವುದನ್ನು ಹೇಗೆ ಒಪ್ಪಿಕೊಳ್ಳಬೇಕು ಎಂದು ಕಳವಳ ಹೊರಹಾಕಿದರು.
ಮುಂದುವರೆದು ಮಾತನಾಡುತ್ತಾ, ನಿಜಕ್ಕೂ ದೇಶ ಒಡೆಯುವ ಶಕ್ತಿಗಳು ನಮ್ಮ ನಡುವೆಯೇ ಇದ್ದಾರೆ, ರಾಜಕಾರಣದ ಭಾಷಣಗಳಲ್ಲಿ ನಿರಂತರವಾಗಿ ಈ ಕೆಲಸ ಮಾಡುತ್ತಲೇ ಇದ್ದಾರೆ, ವಿಪರ್ಯಾಸವೆಂದರೆ ಅವರೆಲ್ಲರೂ ಆರಾಮವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ನಿಜಕ್ಕೂ ದೇಶ ಗಟ್ಟಿಯಾಗಬೇಕು ಎಂದರೆ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು, ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಅದರ ಹೊರತಾಗಿ ಸರ್ಕಾರದ ವಿರುದ್ಧ ದನಿ ಎತ್ತಿದವರನ್ನು ಹತ್ತಿಕ್ಕಿ ತಮಗೆ ಬೇಕಾದಂತೆ ಅಭಿಪ್ರಾಯ ರೂಪಿಸುವುದಲ್ಲ. ನಮ್ಮ ವಿರುದ್ಧ ಮಾತನಾಡಿದರೆ ಜೈಲಿಗಟ್ಟುತ್ತೇವೆ ಎಂದು ಬೆದರಿಸುವುದಲ್ಲ. ಬರಹಗಾರರು, ಸಾಹಿತಿಗಳು ಸೇರಿದಂತೆ ಸುಲಭವಾಗಿ ಸಿಗುವವರನ್ನು ಟಾರ್ಗೆಟ್ ಮಾಡಿ ಹೆದರಿಸುವುದು ಕೆಟ್ಟ ಬೆಳವಣಿಗೆ ಎಂದರು.
ಇದಕ್ಕೆ ಉತ್ತರಿಸಿದ ವಿವೇಕ್ ರೆಡ್ಡಿ, ಸುಲಭವಾಗಿ ಸಿಗುವವರ ಧ್ವನಿ ಹತ್ತಿಕ್ಕಲಾಗುತ್ತಿದೆ, ಸುಖಾಸುಮ್ಮನೆ ದೇಶದ್ರೋಹಿ ಕಾಯ್ದೆ ಹೇರಲಾಗುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಲಕ್ಷಾಂತರ ಜನರು ಪ್ರತಿಭಟನೆಗೆ ಇಳಿದಿದ್ದಾರೆ ಇಂದಿಗೂ ಪ್ರತಿಭಟಿಸುತ್ತಿದ್ದಾರೆ. ಹಾಗಂತ ಅವರೆಲ್ಲರ ಮೇಲೆ ದೇಶದ್ರೋಹಿ ಕಾಯ್ದೆ ಪ್ರಯೋಗಿಸಲಾಗುವುದಿಲ್ಲ. ಸರ್ಕಾರ ಅದನ್ನು ಮಾಡಿಯೂ ಇಲ್ಲ. ಆದರೆ, ಇಲ್ಲಿ ಯಾರು ತಪ್ಪು ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಇದೆಯೋ ಅವರನ್ನು ಬಂಧಿಸಲಾಗುತ್ತಿದೆ. ಬೇರೆ ಬೇರೆ ಪ್ರಕರಣಗಳನ್ನೆಲ್ಲಾ ತಂದು ಇಲ್ಲಿ ತಳುಕು ಹಾಕುವುದು ಸರಿಯಲ್ಲ ಎಂದು ಸಮರ್ಥಿಸಿಕೊಂಡರು. ದೇಶದ ಕಾನೂನು ಉಲ್ಲಂಘಿಸಿದವರನ್ನು ಹಿಡಿದು ತರುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರಭುತ್ವದ ಮೇಲೆ ಹಗೆ ಸಾಧಿಸಿ ದೇಶ ಒಡೆಯಲು ಪ್ರಯತ್ನಿಸುವುದೂ ತಪ್ಪು ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪುರೋಷತ್ತಮ ಬಿಳಿಮಲೆ, ಸರ್ಕಾರದ ಮೇಲಿನ ವಿರೋಧವನ್ನು ದೇಶವಿರೋಧಿ ಎನ್ನುವ ಬೆಳವಣಿಗೆ ಆತಂಕಕಾರಿ. ಪ್ರತಿಭಟಿಸುವವರು ದೇಶದ್ರೋಹಿಗಳು, ಅವರ ಹೊರತಾಗಿದ್ದು ಮಾತ್ರ ದೇಶಪ್ರೇಮ ಹಾಗೂ ದೇಶ ಎನ್ನುವುದನ್ನು ಖಡಾಖಂಡಿತವಾಗಿ ಒಪ್ಪಿಕೊಳ್ಳಲಾಗುವುದಿಲ್ಲ. ಈ ಹಟವನ್ನು ಬಿಟ್ಟು ರೈತರು ಮತ್ತು ಸರ್ಕಾರದ ನಡುವಿನ ಜಿದ್ದಾಟಕ್ಕೆ ಒಂದು ಸುಖಾಂತ್ಯ ಕಾಣಿಸಿಲ್ಲವೆಂದರೆ ಅದು ತಾರಕಕ್ಕೆ ಹೋಗಬಹುದು ಮತ್ತು ಆಗ ದೇಶದ ಭದ್ರತೆಗೆ ನಿಜವಾಗಿಯೂ ಅಪಾಯ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಒಟ್ಟಾರೆ, ಕೃಷಿಕಾಯ್ದೆಯ ವಿಚಾರವಾಗಿ ಶುರುವಾದ ಪ್ರತಿಭಟನೆ ಬೇರೆಬೇರೆ ತಿರುವುಗಳನ್ನು ಪಡೆಯುತ್ತಾ, ಆಯಾಮಗಳನ್ನು ಹೊಂದುತ್ತಾ ಈ ಮಟ್ಟಕ್ಕೆ ಬಂದು ನಿಂತಿದೆ. ಇದನ್ನು ಸರ್ಕಾರ ಹೇಗೆ ನಿಭಾಯಿಸಲಿದೆ? ಪ್ರಜಾಪ್ರಭುತ್ವಕ್ಕೆ ಕಂಟಕ ಎಂಬ ಆರೋಪವನ್ನು ಹೇಗೆ ಸ್ವೀಕರಿಸಲಿದೆ ಎನ್ನುವುದು ಮಾತ್ರ ಸದ್ಯಕ್ಕೆ ಕುತೂಹಲಕಾರಿ.
ಇದನ್ನೂ ಓದಿ: ದಬ್ಬಾಳಿಕೆಯಿಂದ ಬಂಧಿಸದಿರುವಂತೆ ತಡೆಯಾಜ್ಞೆ ನೀಡಿ; ಬಾಂಬೆ ಹೈಕೋರ್ಟ್ ಮೊರೆ ಹೋದ ವಕೀಲೆ ನಿಖಿತಾ ಜಾಕೋಬ್
Published On - 9:51 pm, Tue, 16 February 21