Rahul Gandhi: ಸತ್ಯವೇ ನನ್ನ ದೇವರು, ಅಹಿಂಸೆಯೇ ಅದನ್ನು ಪಡೆಯುವ ಸಾಧನ: ಮಹಾತ್ಮ ಗಾಂಧಿ ಹೇಳಿಕೆ ಟ್ವೀಟ್ ಮಾಡಿದ ರಾಹುಲ್ ಗಾಂಧಿ
ಗುರುವಾರ ತೀರ್ಪು ಪ್ರಕಟವಾದಾಗ ರಾಹುಲ್ ಗಾಂಧಿ ಕೋರ್ಟ್‌ಗೆ ಹಾಜರಾಗಿದ್ದು ನಾನು ಉದ್ದೇಶಪೂರ್ವಕವಾಗಿ ಹಾಗೆ ಹೇಳಿಲ್ಲ ಎಂದಿದ್ದಾರೆ.
2019 ರ ಹಿಂದಿನ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯವು (Surat Court) ದೋಷಿ ಎಂದು ಘೋಷಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi) ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಮಹಾತ್ಮ ಗಾಂಧಿಯವರ ಹೇಳಿಕೆ ಟ್ವೀಟ್ ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಎಲ್ಲ ಕಳ್ಳರ ಸರ್ನೇಮ್ ಮೋದಿ(Modi Surname) ಹೇಗೆ? ಎಂದಿದ್ದರು. ರಾಹುಲ್ ಅವರ ಈ ಹೇಳಿಕೆಗಾಗಿ ಸೂರತ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ತೀರ್ಪು ನಂತರ ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯ ಮೇಲೆ ಆಧಾರಿತವಾಗಿದೆ, ಸತ್ಯವೇ ನನ್ನ ದೇವರು, ಅಹಿಂಸೆಯೇ ಅದನ್ನು ಪಡೆಯುವ ಸಾಧನ ಎಂದು ಮಹಾತ್ಮಾ ಗಾಂಧಿಯವರ ಹೇಳಿಕೆಯನ್ನು ರಾಹುಲ್ ಟ್ವೀಟ್ ಮಾಡಿದ್ದಾರೆ.
ಯುನೈಟೆಡ್ ಕಿಂಗ್‌ಡಂನಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿರುವ ಬಿಜೆಪಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದೆ. ರಾಹುಲ್ ಗಾಂಧಿ ಏನು ಹೇಳಿದರೂ ಅದು ಪಕ್ಷಕ್ಕೆ ಮತ್ತು ದೇಶಕ್ಕೆ ಅಪಾಯಕಾರಿ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
मेरा धर्म सत्य और अहिंसा पर आधारित है। सत्य मेरा भगवान है, अहिंसा उसे पाने का साधन।
– महात्मा गांधी
— Rahul Gandhi (@RahulGandhi) March 23, 2023
ಗುರುವಾರ ತೀರ್ಪು ಪ್ರಕಟವಾದಾಗ ರಾಹುಲ್ ಗಾಂಧಿ ಕೋರ್ಟ್‌ಗೆ ಹಾಜರಾಗಿದ್ದು ನಾನು ಉದ್ದೇಶಪೂರ್ವಕವಾಗಿ ಹಾಗೆ ಹೇಳಿಲ್ಲ ಎಂದಿದ್ದಾರೆ. ಯಾವುದೇ ಚುನಾಯಿತ ಪ್ರತಿನಿಧಿಯು ಯಾವುದೇ ಅಪರಾಧಕ್ಕಾಗಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆಗೆ ಒಳಗಾದರೆ ಆ ವ್ಯಕ್ತಿಗ ಜನಪ್ರತಿನಿಧಿ ಕಾಯಿದೆ, 1951 ರ ಅಡಿಯಲ್ಲಿ ತಕ್ಷಣದ ಅನರ್ಹತೆಯನ್ನು ಎದುರಿಸಬೇಕಾಗುತ್ತದೆ. ಅನರ್ಹತೆಯಿಂದ ಮೂರು ತಿಂಗಳ ರಕ್ಷಣೆಯನ್ನು ನೀಡುವ ಕಾಯಿದೆಯ ಒಂದು ನಿಬಂಧನೆಯನ್ನು 2013 ರಲ್ಲಿ ಲಿಲಿ ಥಾಮಸ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ “ಅಲ್ಟ್ರಾ ವೈರ್ಸ್ ” ಎಂದು ರದ್ದುಗೊಳಿಸಿತ್ತು.
ಆದಾಗ್ಯೂ, ರಾಹುಲ್ ಗಾಂಧಿ ದೋಷಿ ಎಂದು ಘೋಷಿಸಿದ ಸೂರತ್ ನ್ಯಾಯಾಲಯವು ಅವರ ಕಾನೂನು ತಂಡದ ಮನವಿಯ ಮೇಲಿನ ತನ್ನ ನಿರ್ಧಾರವನ್ನು ಪ್ರಶ್ನಿಸಲು ಅವಕಾಶವನ್ನು ನೀಡುವ ಸಲುವಾಗಿ ಅವರ ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಿದೆ. ಅಂದರೆ ಸೆಷನ್ಸ್ ನ್ಯಾಯಾಲಯದಿಂದ ಅಪರಾಧದ ಮೇಲೆ (ಮತ್ತು ಶಿಕ್ಷೆಯಷ್ಟೇ ಅಲ್ಲ) ತಡೆಯನ್ನು ಪಡೆಯಲು ಸಾಧ್ಯವಾಗದೇ ಇದ್ದರೆ ಮಾತ್ರ ರಾಹುಲ್ ಗಾಂಧಿ ಅನರ್ಹರಾಗುತ್ತಾರೆ.
ಕ್ರಿಮಿನಲ್ ಮೊಕದ್ದಮೆಯಲ್ಲಿ ಶಿಕ್ಷೆಯಾಗಿರುವ ಕಾರಣ ರಾಹುಲ್ ಗಾಂಧಿ ನೇರವಾಗಿ ಸುಪ್ರೀಂಕೋರ್ಟ್ ಅನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಆದಾಗ್ಯೂ, ಸೂರತ್ ನ್ಯಾಯಾಲಯದ ತೀರ್ಪಿನ ಕಾರ್ಯವಿಧಾನ ಮತ್ತು ಪ್ರಕ್ರಿಯೆ ದೊಡ್ಡ ಸಾರ್ವಜನಿಕ ಹಿತಾಸಕ್ತಿಗಳನ್ನು ಘಾಸಿಗೊಳಿಸುತ್ತದೆ ಎಂಬ ಆಧಾರದ ಮೇಲೆ ಮೂರನೇ ವ್ಯಕ್ತಿ ಉನ್ನತ ನ್ಯಾಯಾಂಗವನ್ನು ಮಧ್ಯಪ್ರವೇಶಿಸುವಂತೆ ಕೋರಬಹುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:51 pm, Thu, 23 March 23