ಲಸಿಕೆ ಪಡೆದಿದ್ದರೂ ಸೋಂಕು ಬಂತು; ದೊಡ್ಡ ಚರ್ಚೆ ಹುಟ್ಟುಹಾಕಿತು ವೈದ್ಯರು ಹೇಳಿದ ಧೈರ್ಯದ ಮಾತು
Corona Vaccine: ಈ ಟ್ವೀಟ್ಗೆ ಬಂದಿರುವ ಕಾಮೆಂಟ್ಗಳು ಕುತೂಹಲಕಾರಿಯಾಗಿವೆ. ಹಲವರು ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ. ಕೆಲವರಂತೂ ಲಸಿಕೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದ್ದಾರೆ.
ದೆಹಲಿ: ಕೊರೊನಾ ಸುರಕ್ಷಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸುತ್ತಿರುವ ಖ್ಯಾತ ವೈದ್ಯ ಡಾ.ಅರವಿಂದರ್ ಸಿಂಗ್ ಸೊಯ್ನ್ ಅವರಿಗೆ ಮತ್ತೆ ಕೋವಿಡ್-19 ಪಾಸಿಟಿವ್ ಬಂದಿದೆ. ಅದಾಗಲೇ ಲಸಿಕೆ ಪಡೆದುಕೊಂಡಿದ್ದ ಅವರು, ತಮಗೆ ಮತ್ತೊಮ್ಮೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಧೃತಿಗೆಟ್ಟಿಲ್ಲ. ಬದಲಿಗೆ ತಮ್ಮ ದೇಹದಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗಲು ಲಸಿಕೆಯೇ ಕಾರಣ ಎಂದು ಹೇಳಿಕೊಂಡಿದ್ದಾರೆ.
ಸೋಂಕಿನ ಅವರ ಮಾಡಿರುವ ಟ್ವೀಟ್ನ ಕನ್ನಡಾನುವಾದ ಇದು.. ‘ಕೋವಿಡ್-19 ಲಸಿಕೆಯನ್ನು ತಿಂಗಳುಗಳ ಹಿಂದೆಯೇ ತಗೊಂಡಿದ್ದೆ. ತಿಂಗಳ ಹಿಂದೆ ಲಸಿಕೆಯ 2ನೇ ಡೋಸ್ ಸಹ ತೆಗೆದುಕೊಂಡೆ. ಆದರೂ ನನಗೆ ಮತ್ತೆ ಕೊರೊನಾ ಪಾಸಿಟಿವ್ ಬಂದಿದೆ! ನನ್ನ ದೇಹದಲ್ಲಿ ಸೋಂಕು ಲಕ್ಷಣಗಳು ಅಷ್ಟೇನೂ ತೀವ್ರವಾಗಿಲ್ಲ (ಲಸಿಕೆಯ ಪರಿಣಾಮ). ಇದು ನಿರೀಕ್ಷಿತ. ಆನ್ಲೈನ್ನಲ್ಲಿ ರೋಗಿಗಳ ತಪಾಸಣೆ ಮುಂದುವರಿಸುತ್ತೇನೆ. ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ಸುರಕ್ಷಿತವಾಗಿರಿ, ಮನೆಯಲ್ಲಿರಿ’
ಅರವಿಂದರ್ ಅವರ ಟ್ವೀಟ್ ಅವನ್ನು 5800ಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದಾರೆ. 33,800 ಮಂದಿ ಲೈಕ್ ಮಾಡಿದ್ದಾರೆ. ಈ ಟ್ವೀಟ್ಗೆ ಸುಮಾರು 657 ಮಂದಿ ಕಾಮೆಂಟ್ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಅಭಿಪ್ರಾಯಗಳನ್ನೂ ಹಂಚಿಕೊಂಡಿದ್ದಾರೆ. ಕೆಲವರ ಅಭಿಪ್ರಾಯಗಳು ಲಸಿಕೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದ್ದರೆ, ಹಲವರು ಲಸಿಕೆ ಹಾಕಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ.
Got COVID 9 months ago, received the 2nd vaccine dose a month ago. Now am COVID positive again!
Not unexpectedly, my symptoms are quite mild (vaccines work). Will continue to see patients online. And spread awareness.
Stay safe. Stay home.
— Dr. Arvinder Singh Soin (@ArvinderSoin) April 18, 2021
‘ನೀವು ಲಸಿಕೆ ಹಾಕಿಸಿಕೊಂಡ ಮಾತ್ರಕ್ಕೆ ನಿಮಗೆ ಕೋವಿಡ್-19 ಬರಬಾರದು ಎಂದೇನಿಲ್ಲ. ಸೋಂಕಿನ ಲಕ್ಷಣಗಳು ಕಡಿಮೆಯಿರಬಹುದು ಅಥವಾ ಜಾಸ್ತಿ ಇರಬಹುದು. ಆಸ್ಪತ್ರೆಗೆ ಭೇಟಿ ನೀಡುವುದು ಅನಿವಾರ್ಯ. ಈ ವಿಚಾರದಲ್ಲಿ ಯಾಮಾರಬೇಡಿ’ ಎಂದು ಅನಿಮೇಶ್ ಚಂದನಿ ಎನ್ನುವವರು ಕಿವಿಮಾತು ಹೇಳಿದ್ದಾರೆ.
ಅಲ್ಟ್ರಾಮ್ಯಾನ್ ಎನ್ನುವ ಟ್ವಿಟರ್ ಹ್ಯಾಂಡ್ಲ್ನಿಂದ ಕಾಮೆಂಟ್ ಮಾಡಿರುವ ವ್ಯಕ್ತಿಯೊಬ್ಬರು ತಮಗೆ ಲಸಿಕೆಯಿಂದ ಅನ್ಯಾಯವಾಗಿದೆ ಎಂದು ದುಃಖ ತೋಡಿಕೊಂಡಿದ್ದಾರೆ. ‘ಲಸಿಕೆ ತೆಗೆದುಕೊಂಡ ನಂತರ ನಮ್ಮ ಕುಟುಂಬದ ನಾಲ್ವರು ಸದಸ್ಯರಿಗೆ ಕೋವಿಡ್-19 ದೃಢಪಟ್ಟಿತು. ನನ್ನ ತಂದೆ ನಿನ್ನೆ ಮೃತಪಟ್ಟರು. ಆಸ್ಪತ್ರೆಯಲ್ಲಿ ಇಂಥ ಹಲವು ಪ್ರಕರಣಗಳನ್ನು ನೋಡಿದೆ. ನನ್ನ ಕುಟುಂಬದ ಉಳಿದವರು ಚೇತರಿಸಿಕೊಂಡ ಮೇಲೆ ಲಸಿಕೆ ಕಂಪನಿಗಳ ಮೇಲೆ ಕೇಸ್ ಹಾಕುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Immediately after taking vaccine 4 of my family members covid positive. Till than no problem. My father expired yesterday. Will file case once others recover. While in hospital saw many such cases. Something is wrong
— Ultraman (@ultraman707) April 18, 2021
ಲಸಿಕೆಗಳು ಕೆಲಸ ಮಾಡುತ್ತವೆ ಎಂದು ವಿನಯ್ ಕುಮಾರ್ ಎಂಬುವವರು ದೃಢವಾಗಿ ವಾದಿಸಿದ್ದಾರೆ. ‘ಲಸಿಕೆ ಪಡೆದುಕೊಂಡವರಿಗೆ ಸೋಂಕು ಬಂದರೂ ಅದು ಐದಾರು ದಿನಗಳಲ್ಲಿ ಹೋಗುತ್ತದೆ. ಆದರೆ ನಿಮ್ಮಿಂದ ಇತರರಿಗೆ ಸೋಂಕು ಹರಡದಂತೆ ಎಚ್ಚರವಹಿಸಬೇಕು. ಲಸಿಕೆಗಳು ಅಮೆರಿಕ / ಬ್ರಿಟನ್ನಲ್ಲಿ ಕೆಲಸ ಮಾಡುತ್ತಿದೆ. ಭಾರತದಲ್ಲೇಕೆ ಮಾಡುವುದಿಲ್ಲ’ ಎಂದು ಅವರು ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ.
ಈ ಟ್ವೀಟ್ಗೆ ಬಂದಿರುವ ಸಾವಿರಾರು ಕಾಮೆಂಟ್ಗಳ ಪೈಕಿ ಗಮನ ಸೆಳೆಯುವಂತಿರುವುದು ಸೂದನ್ ಸುಮನ್ ಕುಮಾರ್ ಅವರ ಮಾತುಗಳು. ‘ನಾನೇನು ವೈದ್ಯಕೀಯ ಪರಿಣಿತನಲ್ಲ. ಆದರೆ ಇಷ್ಟು ಮಾತ್ರ ಹೇಳಬಲ್ಲೆ ಯಾವುದೇ ಕೋವಿಡ್ ಪರೀಕ್ಷೆಯ ಫಲಿತಾಂಶವನ್ನು ನೂರಕ್ಕೆ ನೂರರಷ್ಟು ನಂಬಲು ಸಾಧ್ಯವಿಲ್ಲ. ಲಸಿಕೆಗಳು ಇನ್ನೂ ಪ್ರಾಥಮಿಕ ಹಂತದಲ್ಲಿವೆ. ಅವು ಸಾಕಷ್ಟು ಸುಧಾರಿಸಬೇಕಿದೆ. ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಲು 3-4 ವರ್ಷಗಳೇ ಬೇಕು. ಅಲ್ಲಿಯವರೆಗೆ ಸರಿಯಾದ ಸುರಕ್ಷತಾ ಕ್ರಮಗಳನ್ನು ಪಾಲಿಸುವುದೊಂದೇ ದಾರಿ’ ಎಂದು ಅವರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
ಅಂದಹಾಗೆ ‘ಲಸಿಕೆ ಪಡೆದಿದ್ದರೂ ನನಗೆ ಸೋಂಕು ಬಂದಿದೆ, ಧೃತಿಗೆಡದೆ ರೋಗಿಗಳಿಗೆ ಟೆಲಿಮೆಡಿಸಿನ್ ಮೂಲಕ ಚಿಕಿತ್ಸೆ ನೀಡುತ್ತಿದ್ದೇನೆ’ ಎಂದು ಹೇಳಿಕೊಂಡ ವೈದ್ಯ ಅರವಿಂದರ್ ಸಿಂಗ್ ಸೊಯಿನ್ ದೇಶವ್ಯಾಪಿ ಹೆಸರಾದವರು. ಸ್ವತಃ ಸರ್ಜನ್ ಆಗಿರುವ ಅವರು ಪಿತ್ತಜನಕಾಂಗದ ಕಸಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರು. ಪ್ರಸ್ತುತ ಗುರುಗ್ರಾಮದ ಮೆದಂತ-ದಿ ಮೆಡಿಸಿಟಿ, ಯಕೃತ್ತಿನ ಕಸಿ ಮತ್ತು ರಿಜನರೇಟಿವ್ ಮೆಡಿಸಿನ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಳಿಗಾಗಿ 2010ರಲ್ಲಿ ಸೊಯಿನ್ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು.
ಡಾ. ಸೊಯಿನ್ ಭಾರತದ ಪ್ರಮುಖ ಕಾಸ್ಮೆಟಿಕ್ ಡರ್ಮಟೋಲಜಿ ಕೇಂದ್ರವಾದ ಆಯ್ನಾ ಕ್ಲಿನಿಕ್ನ ಸಹ ಸಂಸ್ಥಾಪಕ ಮತ್ತು ನಿರ್ದೇಶಕರಾಗಿದ್ದಾರೆ. ನವದೆಹಲಿ ಮತ್ತು ಪಂಜಾಬ್ ರಾಜ್ಯದಾದ್ಯಂತ ಇವರ ಆಸ್ಪತ್ರೆಗಳಿವೆ. ಸೊಯಿನ್ ಅವರು ಭಾರತದ ವಿವಿಧೆಡೆ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಶ್ರಮಿಸಿದ್ದಾರೆ. ಕೊವಿಡ್ ಸಾಂಕ್ರಾಮಿಕದ ಹೊತ್ತಲ್ಲಿ ಟ್ವಿಟರ್ ಮೂಲಕ ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ಹಂಚಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ.
(Tweet from Dr Arvinder Singh Soin Started The Discussion on Effectiveness of Vaccines against Covid 19)
ಇದನ್ನೂ ಓದಿ: 92 ದಿನಗಳಲ್ಲಿ 12.2 ಕೋಟಿ ಜನರಿಗೆ ಕೊವಿಡ್ ಲಸಿಕೆ ನೀಡಿದ ಮೊದಲ ದೇಶ ಭಾರತ
ಇದನ್ನೂ ಓದಿ: Explainer: ಭಾರತದಲ್ಲಿ ಕೊವಿಡ್ ಲಸಿಕೆ ಕೊರತೆ: ನಮ್ಮ ಸರ್ಕಾರ ಎಡವಿದ್ದು ಎಲ್ಲಿ? ಏನು ಪರಿಹಾರ?