Supreme Court judges: ಒಂದೇ ದಿನ ಸುಪ್ರೀಂ ಕೋರ್ಟ್‌ಗೆ ಇಬ್ಬರು ಜಡ್ಜ್ ಗಳ ನೇಮಕ: ಯಾರವರು, ಹಿನ್ನೆಲೆಯೇನು?

ಸುಪ್ರೀಂಕೋರ್ಟ್ ನ ಕೊಲಿಜಿಯಂ ಶಿಫಾರಸ್ಸು ಅನ್ನು ಒಪ್ಪಿಕೊಂಡು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಈ ಇಬ್ಬರು ನ್ಯಾಯಮೂರ್ತಿಗಳ ನೇಮಕದ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ 30 ತಿಂಗಳ ನಂತರ 34 ನ್ಯಾಯಾಧೀಶರ ಪೂರ್ಣ ಸಾಮರ್ಥ್ಯದೊಂದಿಗೆ ಸುಪ್ರೀಂಕೋರ್ಟ್ ಕಾರ್ಯನಿರ್ವಹಿಸಲಿದೆ

Supreme Court  judges: ಒಂದೇ ದಿನ ಸುಪ್ರೀಂ ಕೋರ್ಟ್‌ಗೆ ಇಬ್ಬರು ಜಡ್ಜ್ ಗಳ ನೇಮಕ: ಯಾರವರು, ಹಿನ್ನೆಲೆಯೇನು?
ಗೌಹಾಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಜಮಶೆಡ್ ಬುರ್ಜೋರ್ ಪರ್ದಿವಾಲಾ ಅವರಿಬ್ಬರಿಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಗಿದೆ.
Follow us
S Chandramohan
| Updated By: ಸಾಧು ಶ್ರೀನಾಥ್​

Updated on: May 07, 2022 | 6:09 PM

ನಮ್ಮ ದೇಶದಲ್ಲಿ ಕೋರ್ಟ್ ಗಳಲ್ಲಿ ನ್ಯಾಯಾಧೀಶರ ಕೊರತೆಯಿಂದಾಗಿ ಕೇಸ್ ಗಳು ಬೇಗ ಇತ್ಯರ್ಥವಾಗಲ್ಲ. ಬೇಗ ತೀರ್ಪು ಬರಲ್ಲ ಎಂಬ ಅಸಮಾಧಾನ ಜನರಲ್ಲಿದೆ. ಇಂದು ಸುಪ್ರೀಂಕೋರ್ಟ್‌ ಗೆ ಇಬ್ಬರು ನ್ಯಾಯಮೂರ್ತಿಗಳ ನೇಮಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಸುಪ್ರೀಂಕೋರ್ಟ್‌ ಗರಿಷ್ಠ ಸಾಮರ್ಥ್ಯವಾದ 34 ನ್ಯಾಯಮೂರ್ತಿಗಳ ಸಂಖ್ಯಾಬಲದೊಂದಿಗೆ (supreme court regain full strength of 34) ಈಗ ಕಾರ್ಯನಿರ್ವಹಿಸಲಿದೆ. ಹಾಗಾದರೇ, ಇಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡವವರು ಯಾರು? ಅವರ ಹಿನ್ನಲೆ ಏನು ಎನ್ನುವುದರ ಡೀಟೈಲ್ಸ್ ಇಲ್ಲಿದೆ ನೋಡಿ. ಗೌಹಾಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಧಾಂಶು ಧುಲಿಯಾ (Gauhati High Court Chief Justice Sudhanshu Dhulia) ಮತ್ತು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಜಮಶೆಡ್ ಬುರ್ಜೋರ್ ಪರ್ದಿವಾಲಾ (Justice Jamshed B Pardiwala of the Gujarat High Court ) ಅವರಿಬ್ಬರಿಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಗಿದೆ. ಸುಪ್ರೀಂಕೋರ್ಟ್ ನ ಕೊಲಿಜಿಯಂ ಶಿಫಾರಸ್ಸು ಅನ್ನು ಒಪ್ಪಿಕೊಂಡು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಈ ಇಬ್ಬರು ನ್ಯಾಯಮೂರ್ತಿಗಳ ನೇಮಕದ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ 30 ತಿಂಗಳ ನಂತರ 34 ನ್ಯಾಯಾಧೀಶರ ಪೂರ್ಣ ಸಾಮರ್ಥ್ಯದೊಂದಿಗೆ ಸುಪ್ರೀಂಕೋರ್ಟ್ ಕಾರ್ಯನಿರ್ವಹಿಸಲಿದೆ (supreme court).

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ, ಇಬ್ಬರ ಹೆಸರನ್ನು ಶಿಫಾರಸು ಮಾಡಿದ 48 ಗಂಟೆಗಳ ನಂತರ, ಶನಿವಾರ ಮಧ್ಯಾಹ್ನ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜಮಶೆಡ್‌ ಬುರ್ಜೋರ್‌ ಪರ್ದಿವಾಲಾ ಅವರ ನೇಮಕಾತಿಗಳ ಅಧಿಸೂಚನೆಯನ್ನು ಕಾನೂನು ಮತ್ತು ನ್ಯಾಯ ಸಚಿವಾಲಯ ಹೊರಡಿಸಿದೆ. ಈ ನೇಮಕಾತಿಯಿಂದಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆಯು 34 ಕ್ಕೇರಿಕೆಯಾಗಿದೆ. 2019ರ ನವಂಬರ್ ನಲ್ಲಿ ಸುಪ್ರೀಂಕೋರ್ಟ್ 34ನ್ಯಾಯಮೂರ್ತಿಗಳ ಪೂರ್ಣ ಪ್ರಮಾಣದೊಂದಿಗೆ ಕಾರ್ಯನಿರ್ವಹಿಸಿತ್ತು.

ಸಿಜೆಐ ರಮಣ ಮತ್ತು ನ್ಯಾಯಮೂರ್ತಿಗಳಾದ ಉದಯ್ ಯು ಲಲಿತ್, ಎ.ಎಂ. ಖಾನ್ವಿಲ್ಕರ್, ಧನಂಜಯ ವೈ ಚಂದ್ರಚೂಡ್ ಮತ್ತು ಎಲ್. ನಾಗೇಶ್ವರ ರಾವ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಕೊಲಿಜಿಯಂ ಆಗಸ್ಟ್ 2021 ರಲ್ಲಿ ಕರ್ನಾಟಕದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಸೇರಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನೇಮಕಾತಿಗಾಗಿ ದಾಖಲೆಯ ಒಂಬತ್ತು ಹೆಸರುಗಳನ್ನು ಶಿಫಾರಸ್ಸು ಮಾಡಿತ್ತು. ಬಿ.ವಿ.ನಾಗರತ್ನ ಅವರು 2027 ರಲ್ಲಿ ದೇಶದ ಮೊದಲ ಮಹಿಳಾ ಸಿಜೆಐ ಆಗಬಹುದು.

ನ್ಯಾಯಮೂರ್ತಿ ನಾಗರತ್ನ ಅವರನ್ನು ಹೊರತುಪಡಿಸಿ, ಇನ್ನೂ ಇಬ್ಬರು ಮಹಿಳಾ , ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬೇಲಾ ಎಂ ತ್ರಿವೇದಿ ಕೂಡ ಕೊಲಿಜಿಯಂನ ಶಿಫಾರಸಿನ ನಂತರ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದರು. ಜಸ್ಟೀಸ್ ಇಂದಿರಾ ಬ್ಯಾನರ್ಜಿ ಸುಪ್ರೀಂಕೋರ್ಟ್ ನಲ್ಲಿರುವ ಮತ್ತೊಬ್ಬ ಮಹಿಳಾ ನ್ಯಾಯಮೂರ್ತಿಗಳಾಗಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಸದ್ಯ ನಾಲ್ವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಇದು ಇದುವರೆಗಿನ ಅತ್ಯಧಿಕ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆಯಾಗಿದೆ.

ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಬಡ್ತಿಯು ಅವರನ್ನು ಉತ್ತರಾಖಂಡ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ಬರುವ ಎರಡನೇ ನ್ಯಾಯಾಧೀಶರನ್ನಾಗಿ ಮಾಡುತ್ತದೆ, ಆದರೆ ನ್ಯಾಯಮೂರ್ತಿ ಜಮಶೆಡ್ ಪಾರ್ದಿವಾಲಾ ಅವರು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಪೀಠವನ್ನು ಅಲಂಕರಿಸಿದ ಪಾರ್ಸಿ ಸಮುದಾಯದ ನಾಲ್ಕನೇ ಸದಸ್ಯರಾಗಿದ್ದಾರೆ.

2017 ರ ಫೆಬ್ರವರಿಯಲ್ಲಿ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರಿಗೆ ಬಡ್ತಿ ನೀಡಿದಾಗ, ಅಲ್ಪಸಂಖ್ಯಾತ ಸಮುದಾಯದಿಂದ ನ್ಯಾಯಾಧೀಶರ ಕೊನೆಯ ಬಡ್ತಿಯಾಗಿತ್ತು. ಆಗಸ್ಟ್ 2021 ರಲ್ಲಿ ನಿವೃತ್ತರಾದ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಕೊನೆಯ ಪಾರ್ಸಿ ನ್ಯಾಯಾಧೀಶರಾಗಿದ್ದರು.

ನ್ಯಾಯಮೂರ್ತಿ ಜಮಶೆಡ್ ಪರ್ದಿವಾಲಾ ಅವರು ಮೇ 2028 ರಲ್ಲಿ ಸಿಜೆಐ ಆಗಲಿದ್ದಾರೆ, ಎರಡು ವರ್ಷ ಮತ್ತು ಮೂರು ತಿಂಗಳ ಅಧಿಕಾರಾವಧಿಯನ್ನು ಹೊಂದಿರುತ್ತಾರೆ. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು 2025ರಲ್ಲಿ ನಿವೃತ್ತರಾಗಲಿದ್ದಾರೆ. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಹಳ್ಳಿಯಿಂದ ಬಂದವರು. ಎರಡನೇ ತಲೆಮಾರಿನ ಕಾನೂನು ವೃತ್ತಿಪರ.

ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಕಿರಿಯ ಸಹೋದರ ತಿಗ್ಮಾನ್ಶು ಧುಲಿಯಾ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾಗಿದ್ದಾರೆ. ಅವರು ನವೆಂಬರ್ 2008 ರಲ್ಲಿ ಉತ್ತರಾಖಂಡ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ. ನಂತರ ಜನವರಿ 2021 ರಲ್ಲಿ ಅಸ್ಸಾಂ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದರು. ಪ್ರಸ್ತುತ, ಸುಪ್ರೀಂ ಕೋರ್ಟ್, ಉತ್ತರಾಖಂಡದಿಂದ ನ್ಯಾಯಾಧೀಶರನ್ನು ಹೊಂದಿಲ್ಲ.

ನ್ಯಾಯಮೂರ್ತಿ ಜಮಶೆಡ್‌ ಪಾರ್ದಿವಾಲಾ ಅವರು ವಕೀಲರ ಕುಟುಂಬದಲ್ಲಿ ನಾಲ್ಕನೇ ತಲೆಮಾರಿನ ಕಾನೂನು ವೃತ್ತಿಪರರಾಗಿದ್ದಾರೆ. ಅವರು ಮುಖ್ಯವಾಗಿ ಗುಜರಾತ್‌ನ ವಲ್ಸಾದ್ ಮತ್ತು ನವಸಾರಿ ಜಿಲ್ಲೆಗಳಲ್ಲಿ ಅಭ್ಯಾಸ ಮಾಡಿದರು. ಫೆಬ್ರವರಿ 2011 ರಲ್ಲಿ ಅವರು ಗುಜರಾತ್ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ನೇಮಕವಾದರು.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯ ಮೆಮೊರಾಂಡಮ್‌ನ ಅಡಿಯಲ್ಲಿ, ಕೊಲಿಜಿಯಂನ ಶಿಫಾರಸುಗಳನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಕೇಂದ್ರ ಸರ್ಕಾರವು ಶಿಫಾರಸುಗಳನ್ನು ಮರುಪರಿಶೀಲನೆಗಾಗಿ ಕೊಲಿಜಿಯಂಗೆ ವಾಪಸ್‌ ಕಳುಹಿಸುವ ಆಯ್ಕೆಯನ್ನು ಹೊಂದಿದೆ. ಆದರೆ ಕೊಲಿಜಿಯಂ 2ನೇ ಬಾರಿಗೆ ಅದೇ ಹೆಸರುಗಳನ್ನು ಶಿಫಾರಸ್ಸು ಮಾಡಿದರೇ, ಆಗ ಆ ಹೆಸರುಗಳಿಗೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಲೇಬೇಕು.

ಈ ವರ್ಷದಲ್ಲಿ ಸುಪ್ರೀಂ ಕೋರ್ಟ್ ನ ಏಳು ನ್ಯಾಯಾಧೀಶರು ನಿವೃತ್ತರಾಗಲಿದ್ದಾರೆ. ಸಿಜೆಐ ರಮಣ ಅವರು ಆಗಸ್ಟ್ 26 ರಂದು ತಮ್ಮ ಹುದ್ದೆಯಿಂದ ನಿರ್ಗಮಿಸಲಿದ್ದಾರೆ ಮತ್ತು ಎರಡನೇ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಲಲಿತ್ ಅವರ ಉತ್ತರಾಧಿ ಕಾರಿಯಾಗುವ ಸಾಧ್ಯತೆಯಿದೆ. ನ್ಯಾಯಮೂರ್ತಿ ಉದಯ್ ಲಲಿತ್ ಅವರು ನವೆಂಬರ್ 8 ರಂದು ಅಧಿಕಾರ ತ್ಯಜಿಸುವ ಮೊದಲು ಎರಡೂವರೆ ತಿಂಗಳಿಗಿಂತ ಕಡಿಮೆ ಅವಧಿಯ ಸಿಜೆಐ ಆಗುವರು.

2022 ರಲ್ಲಿ ನಿವೃತ್ತರಾಗಲಿರುವ ಇತರರ ನ್ಯಾಯಮೂರ್ತಿಗಳೆಂದರೇ, ಜಸ್ಟೀಸ್ ಎ.ಎಂ. ಖಾನ್ವಿಲ್ಕರ್ (ಜುಲೈ 29), ಜಸ್ಟೀಸ್ ಎಲ್‌. ನಾಗೇಶ್ವರ್ ರಾವ್ (ಜೂನ್ 7), ಜಸ್ಟೀಸ್ ಇಂದಿರಾ ಬ್ಯಾನರ್ಜಿ (ಸೆಪ್ಟೆಂಬರ್ 23), ಜಸ್ಟೀಸ್ ವಿನೀತ್ ಸರನ್ (ಮೇ 10) ಜಸ್ಟೀಸ್‌ ಹೇಮಂತ್ ಗುಪ್ತಾ (ಅಕ್ಟೋಬರ್ 16).