ಪ್ರೀತಿಸುವ ಯುವಕ ಮದುವೆಯಾಗುವ ಪ್ರಾಮಿಸ್ ಮಾಡದ ಹೊರತು ಭಾರತೀಯ ಯುವತಿಯರು ದೈಹಿಕ ಸಂಪರ್ಕಕ್ಕೆ ಒಪ್ಪುವುದಿಲ್ಲ: ಕೋರ್ಟ್
ಯುವತಿಯು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವುದು ಆಕೆ ಸಂಬಂಧದ ಬಗ್ಗೆ ಸೀರಿಯಸ್ ಆಗಿದ್ದಳು ಎನ್ನುವುದನ್ನು ಸೂಚಿಸುತ್ತದೆ. ಆಕೆ ಕೇವಲ ಮೋಜಿಗಾಗಿ ಲೈಂಗಿಕ ಸಂಬಂಧಕ್ಕೆ ಒಪ್ಪಿದ್ದಳು ಎನ್ನುವುದು ತಪ್ಪಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಭಾರತದಲ್ಲಿ ಪ್ರಾಯಕ್ಕೆ ಬಂದ ಅವಿವಾಹಿತ ತರುಣಿಯೊಬ್ಬಳು ತಾನು ಪ್ರೀತಿಸುವ ಯುವಕ ಮದುವೆಯಾಗುವ ಭಾಷೆ ನೀಡದ ಹೊರತು ಅವನೊಂದಿಗೆ ದೈಹಿಕ ಸಂಪರ್ಕಕ್ಕೆ ಅಣಿಯಾಗುವುದಿಲ್ಲ ಎಂದು ಮಧ್ಯ ಪ್ರದೇಶ ಹೈಕೋರ್ಟ್ನ ಇಂದೋರ್ ಪೀಠ ಅಭಿಪ್ರಾಯಪಟ್ಟಿದೆ. ಒಬ್ಬ ಅವಿವಾಹಿತ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸುವ ಪುರುಷ ಮುಂದಾಗಬಹುದಾದ ಪರಿಣಾಮಗಳ ಬಗ್ಗೆ ಅರಿವು ಹೊಂದಿರಬೇಕು ಎಂದು ನ್ಯಾಯಮೂರ್ತಿ ಸುಭೋದ್ ಅಭಯಂಕರ್ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.
‘ಕೆಲವು ವಿರಳ ಸಂದರ್ಭಗಳನ್ನು ಬಿಟ್ಟರೆ ನಮ್ಮಲ್ಲಿನ ನಾಗರಿಕತೆ ಅವಿವಾಹಿತ ಯುವತಿಯರು-ಅವರು ಯಾವುದೇ ಧರ್ಮಕ್ಕೆ ಸಂಬಂಧಪಟ್ಟವರಾಗಿರಲಿ, ಕೇವಲ ಮೋಜಿಗಾಗಿ ಹುಡುಗರೊಂದಿಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವಷ್ಟು ಮುಂದುವರಿದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಮದುವೆಯಾಗುತ್ತೇನೆ ಎಂಬ ಭರವಸೆಯನ್ನು ಯುವಕ ನೀಡಿದರೆ ಯುವತಿಯರು ಆ ನಿಟ್ಟಿನಲ್ಲಿ ಮುಂದುವರಿಯುವ ಸಾಧ್ಯತೆ ಇರುತ್ತದೆ. ಹಾಗೆ ಮೋಸ ಹೋಗುವ ತರುಣಿಯರು ಪ್ರತಿ ಸಲ ಆತ್ಮಹತ್ಯೆಗೆ ಪ್ರಯತ್ನಿಸುವ ಅಗತ್ಯವಿಲ್ಲ,’ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ನಡೆಸಿದ ನಂತರ ಕೋರ್ಟ್ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿತು.
ಸದರಿ ಪ್ರಕರಣದಲ್ಲಿ ಯುವತಿಯು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಯುವಕನ ಪರ ವಾದಿಸಿದ ವಕೀಲರು, ಯುವಕ ಮತ್ತು ಯುವತಿ ರಿಲೇಷನ್ಶಿಪ್ನಲ್ಲಿದ್ದರು ಮತ್ತು ಪರಿಸ್ಪರ ಒಪ್ಪಿಗೆಯಿಂದ ದೈಹಿಕ ಸಂಬಂಧ ಬೆಳೆಸಿದ್ದರು ಎಂದರು.
ಯುವಕನಿಗೆ ಜಾಮೀನು ನೀಡಲು ಯೋಗ್ಯವೆನಿಸುವಂಥ ಪ್ರಕರಣ ಇದಲ್ಲ, ಯಾಕೆಂದರೆ ಅವನು ಯುವತಿಗೆ ಮದುವೆಯಾಗುವ ಆಮಿಷವೊಡ್ಡಿ ದೈಹಿಕ ಸಂಬಂಧಕ್ಕೆ ಆಕೆಯನ್ನು ಪ್ರೇರೇಪಿಸಿದ್ದಾನೆ. ‘ತಾವಿಬ್ಬರು ಬೇರೆ ಬೇರೆ ಧರ್ಮಗಳಿಗೆ ಸೇರಿದವರು ಅಂತ ಚೆನ್ನಾಗಿ ಗೊತ್ತಿದ್ದರೂ ಅವನು ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ,’ ಎಂದು ಕೋರ್ಟ್ ಹೇಳಿದೆ.
‘ಬಹಳಷ್ಟು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯ ವಾದ ಇದೇ ಆಗಿರುತ್ತದೆ. ಸಂತ್ರಸ್ತೆ ಒಪ್ಪಿದ್ದರಿಂದಲೇ ದೈಹಿಕ ಸಂಬಂಧ ಬೆಳೆಯಿತು ಎಂದು ಅವನು ಹೇಳುತ್ತಾನೆ ಮತ್ತು ಇಂಥ ಅನೇಕ ಪ್ರಕರಣಗಳಲ್ಲಿ ಸಂಶಯದ ಲಾಭವನ್ನು ಅರೋಪಿಯೇ ಪಡೆದುಕೊಳ್ಳುತ್ತಾನೆ,’ ಎಂದು ಪೀಠ ಹೇಳಿತು.
ಯುವತಿಯು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವುದು ಆಕೆ ಸಂಬಂಧದ ಬಗ್ಗೆ ಸೀರಿಯಸ್ ಆಗಿದ್ದಳು ಎನ್ನುವುದನ್ನು ಸೂಚಿಸುತ್ತದೆ. ಆಕೆ ಕೇವಲ ಮೋಜಿಗಾಗಿ ಲೈಂಗಿಕ ಸಂಬಂಧಕ್ಕೆ ಒಪ್ಪಿದ್ದಳು ಎನ್ನುವುದು ತಪ್ಪಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಇಂಥ ಪ್ರಕರಣಗಳಲ್ಲಿ ಯುವತಿಯೇ ಯಾವಾಗಲೂ ತೊಂದರೆ ಸಿಲುಕುತ್ತಾಳೆ. ಯಾಕೆಂದರೆ ಆಕೆ ಗರ್ಭಿಣಿಯಾಗುವ ಅಪಾಯವಿರುತ್ತದೆ ಮತ್ತು ಸಂಬಂಧ ಬೆಳಕಿಗೆ ಬಂದರೆ ಸಮಾಜದಲ್ಲಿ ಕಳಂಕಿತೆ ಎನ್ನುವ ಪಟ್ಟ ಕಟ್ಟಿಕೊಂಡು ಜೀವಿಸಬೇಕಾಗುತ್ತದೆ. ಆರೋಪಿಯು ಪ್ರತಿಸಲ ಸಂತ್ರಸ್ತೆಯ ಒಪ್ಪಿಗೆ ಇತ್ತು ಅಂತ ಹೇಳಿ ಮೀಸೆ ಮೇಲೆ ಕೈಹಾಕಿಕೊಂಡು ಮನೆಗೆ ಹೋಗುವಂತಿಲ್ಲ,’ ಎಂದು ಕೋರ್ಟ್ ಹೇಳಿತು.
ಇದನ್ನೂ ಓದಿ: ತಾಯಿಯ ಮನೆ ಹೆಸರು ಬಳಸಲು ಮಗುವಿಗೆ ಹಕ್ಕಿದೆ, ತಂದೆ ಅದನ್ನು ಆಕ್ಷೇಪಿಸುವಂತಿಲ್ಲ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು