ತುಂಗಭದ್ರಾ ನದಿಗೆ ಹೊಸ ಡ್ಯಾಂ ನಿರ್ಮಿಸುವ ಕರ್ನಾಟಕದ ನಿರ್ಧಾರಕ್ಕೆ ಬ್ರೇಕ್ ಹಾಕಿ: ಅಕ್ಬರುದ್ದೀನ್ ಓವೈಸಿ ಒತ್ತಾಯ
ತುಂಗಭದ್ರಾ ನದಿಗೆ ಅಡ್ಡಲಾಗಿ ಕರ್ನಾಟಕ ಹೊಸ ಅಣೆಕಟ್ಟು ನಿರ್ಮಿಸುವುದರಿಂದ ತೆಲಂಗಾಣದ ನೀರಿನ ಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದನ್ನು ತಡೆಯಲು ಕ್ರಮಕೈಗೊಳ್ಳುವಂತೆ ಎಐಎಂಐಎಂ ಪಕ್ಷದ ನಾಯಕ ಅಕ್ಬರುದ್ದೀನ್ ಓವೈಸಿ ತೆಲಂಗಾಣ ಸರ್ಕಾರವನ್ನು ಒತ್ತಾಯಿಸಿದರು.
ಹೈದರಾಬಾದ್, ಫೆಬ್ರವರಿ 14: ತುಂಗಭದ್ರಾ ನದಿಗೆ (Tungabhadra River) ಅಡ್ಡಲಾಗಿ ಕರ್ನಾಟಕ ಹೊಸ ಅಣೆಕಟ್ಟು ನಿರ್ಮಿಸುವುದರಿಂದ ತೆಲಂಗಾಣದ (Telangana) ನೀರಿನ ಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದನ್ನು ತಡೆಯಲು ಕ್ರಮಕೈಗೊಳ್ಳುವಂತೆ ಎಐಎಂಐಎಂ ಪಕ್ಷದ ನಾಯಕ ಅಕ್ಬರುದ್ದೀನ್ ಓವೈಸಿ (Akbaruddin Owaisi) ತೆಲಂಗಾಣ ಸರ್ಕಾರವನ್ನು ಒತ್ತಾಯಿಸಿದರು. ತೆಲಂಗಾಣ ರಾಜ್ಯ ವಿಧಾನಸಭೆಯಲ್ಲಿ ಕೃಷ್ಣಾ ನದಿಗೆ ಸಂಬಂಧಿಸಿದ ‘ಸರ್ಕಾರದ ನಿರ್ಣಯ’ ಕೃಷ್ಣಾ ಮತ್ತು ಕೃಷ್ಣಾ ನದಿ ನಿರ್ವಹಣಾ ಮಂಡಳಿಯ ಯೋಜನೆಗಳು ಮತ್ತು ಸಂಬಂಧಿತ ವಿಷಯಗಳ ಮೇಲಿನ ಚರ್ಚೆಯಲ್ಲಿ ಅವರು ಪ್ರಸ್ತಾಪಿಸಿದರು.
ತುಂಗಭದ್ರಾ ಮಂಡಳಿ ಸಭೆಯಲ್ಲಿ ಪ್ರಸ್ತಾಪ
ಪ್ರಸ್ತುತ ತುಂಗಭದ್ರಾ ಅಣೆಕಟ್ಟಿನ ಹೂಳು ತುಂಬಿರುವುದರಿಂದ ಅದರ ಸಾಮರ್ಥ್ಯ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ತುಂಗಭದ್ರಾ ನದಿಗೆ ಹೊಸ ಅಣೆಕಟ್ಟು ನಿರ್ಮಿಸಲು ಕರ್ನಾಟಕ ನೀರಾವರಿ ಅಧಿಕಾರಿಗಳು 2018ರಲ್ಲಿ ನಡೆದ ತುಂಗಭದ್ರಾ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಹಲವು ವರ್ಷಗಳಿಂದ ಹೂಳು ನಿರ್ಮಾಣವಾಗಿರುವುದರಿಂದ ಅಣೆಕಟ್ಟೆಯ ಸಾಮರ್ಥ್ಯ ಗಣನೀಯವಾಗಿ ಕುಸಿದಿದ್ದು, ಹೂಳು ತೆಗೆಯುವುದು ಅಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ತುಂಗಭದ್ರಾ ಅಣೆಕಟ್ಟು ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ನೀರಿನ ದಾಹವನ್ನು ನೀಗಿಸುತ್ತಿದೆ. ಕರ್ನಾಟಕದ ಪ್ರಸ್ತಾವನೆಯನ್ನು ಮಂಡಳಿ ಸಭೆಯಲ್ಲಿ ಅನುಮೋದಿಸಲು ಸಾಧ್ಯವಿಲ್ಲ, ಏಕೆಂದರೆ ಇದನ್ನು ರಾಜ್ಯ ಸರ್ಕಾರಗಳು ನಿರ್ಧರಿಸಬೇಕು ಎಂದು ತೆಲಂಗಾಣ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ಹೆಚ್ಚು ನೀರು ಬಿಡಬೇಕೆಂಬ ತಮಿಳುನಾಡು ಮನವಿಯನ್ನ ತಿರಸ್ಕರಿಸಿದ ಸಿಡಬ್ಯ್ಲೂಆರ್ಸಿ
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ತುಂಗಭದ್ರಾ ಮಂಡಳಿ ಅಧ್ಯಕ್ಷ ಡಿ ರಂಗಾರೆಡ್ಡಿ, ಪ್ರಸ್ತುತ ಅಣೆಕಟ್ಟಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾದ ಕಾರಣ ಕರ್ನಾಟಕ ಸರ್ಕಾರ ತುಂಗಭದ್ರಾ ಮೇಲೆ 40 ಟಿಎಂಸಿ ಅಡಿ ಸಾಮರ್ಥ್ಯದ ಮತ್ತೊಂದು ಸ್ಟೋರೇಜ್ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ ಎಂದು ಹೇಳಿದ್ದರು.
2020ರ ಅಂದಿನ ಬಿಜೆಪಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುಮತಿ ಪಡೆದ ಬಳಿಕ ಕೊಪ್ಪಳ ಜಿಲ್ಲೆಯ ನವಲಿ ಗ್ರಾಮದಲ್ಲಿ 50 ಟಿಎಂಸಿ ಸಾಮರ್ಥ್ಯದ ಸಮತೋಲಿತ ಜಲಾಶಯವನ್ನು ನಿರ್ಮಿಸಲು ಮುಂದಾಗಿತ್ತು. ಇದರಿಂದ ತುಂಗಭದ್ರಾ ಅಣೆಕಟ್ಟು ಕೆಳಭಾಗದ ರಾಜ್ಯಗಳಿಗೆ ನೀರು ಹರಿವಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.
ಬಜೆಟ್ಗೂ ಮುನ್ನ ಸಮತೋಲಿತ ಅಣೆಕಟ್ಟು ಯೋಜನೆ ಜಾರಿ: ಡಿಕೆಶಿ
ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿದ್ದು, ನವಲಿಯಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ. ಸುಮಾರು 30 ಟಿಎಂಸಿಗೂ ಹೆಚ್ಚು ನೀರು ರಾಜ್ಯಕ್ಕೆ ನಷ್ಟವಾಗುತ್ತಿದೆ. ಆದ ಕಾರಣ ನವಲಿಯಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಾಣದ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಲಾಗಿದೆ. ಈ ಯೋಜನೆಯಿಂದ ಈ ಭಾಗದ ರೈತರ ನೀರಿನ ಕೊರತೆ ಬಗೆಹರಿದಂತಾಗುತ್ತದೆ. ಈ ಯೋಜನೆ ಸಂಬಂಧ ತೆಲಂಗಾಣ, ಆಂಧ್ರ ಪ್ರದೇಶದ ಸರ್ಕಾರದ ಜತೆಗೆ ಮಾತನಾಡಲಾಗುವುದು. ಮೂರು ರಾಜ್ಯಗಳು ಒಟ್ಟಿಗೆ ಸೇರಿ ಈ ಕೆಲಸ ಮಾಡಬೇಕಾಗಿದೆ. ಮುಂದಿನ ಬಜೆಟ್ ವೇಳೆಗೆ ಇದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು.
ತುಂಗಭದ್ರಾ ಅಣೆಕಟ್ಟು ಸಾಮರ್ಥ್ಯ
ತುಂಗಭದ್ರ ಅಣೆಕಟ್ಟು ಒಟ್ಟು101 ಟಿಎಂಸಿ ಅಡಿ ಶೇಖರಣಾ ಸಾಮರ್ಥ್ಯದ ದೊಡ್ಡ ಜಲಾಶಯ. ತುಂಗಭದ್ರಾ ಜಲಾಶಯದ ತಳದಲ್ಲಿ ಸುಮಾರು 31 ಟಿಎಂಸಿ ಅಡಿ ಹೂಳು ಸಂಗ್ರಹವಾಗಿದ್ದು, ಅದರ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ