ಪಶ್ಚಿಮ ಬಂಗಾಳದಲ್ಲಿ 8 ಹಂತದ ಚುನಾವಣೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
West Bengal Assembly Elections 2021: ಪಶ್ಚಿಮ ಬಂಗಾಳದಲ್ಲಿ ಮಾತ್ರ 8 ಹಂತಗಳ ಚುನಾವಣೆ ಹಾಗೂ ಚುನಾವಣಾ ಪ್ರಚಾರದಲ್ಲಿ ಜೈ ಶ್ರೀರಾಮ್ ಘೋಷಣೆ ಈ ಎರಡು ವಿಚಾರಗಳನ್ನು ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ದೆಹಲಿ: ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಸುವುದನ್ನು ವಿರೋಧಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಸಲು ಅನುಮತಿ ನೀಡಬಾರದು ಎಂದು ನ್ಯಾಯವಾದಿ ಎಂ.ಎಲ್. ಶರ್ಮಾ ಅರ್ಜಿ ಸಲ್ಲಿಸಿದ್ದರು. ಚುನಾವಣಾ ಪ್ರಚಾರದಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗುವುದರ ಬಗ್ಗೆಯೂ ಆಕ್ಷೇಪಿಸಿ, ಕೇಂದ್ರ ತನಿಖಾ ಮಂಡಳಿ (CBI) ಈ ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದು ಅವರು ಸೂಚಿಸಿದ್ದರು.
ತಾವು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಚುನಾವಣೆಯನ್ನು ಎಂಟು ಹಂತಗಳಲ್ಲಿ ನಡೆಸುವುದು ಸಮಾನತೆಯ ಹಕ್ಕಿಗೆ ವಿರೋಧವಾಗಿದೆ ಎಂದು ಶರ್ಮ ಹೇಳಿದ್ದರು. ಸಂವಿಧಾನದ 14ನೇ ವಿಧಿ ಪ್ರತಿಪಾದಿಸುವ ಸಮಾನತೆಯನ್ನು ವಿರೋಧಿಸುತ್ತದೆ ಎಂದು ತಿಳಿಸಿದ್ದರು.
ಚುನಾವಣಾ ವಿಚಾರದಲ್ಲಿ ವಿವಿಧ ರಾಜ್ಯಗಳನ್ನು ಅಸಮಾನತೆಯಿಂದ ಕಾಣುವ ಬಗ್ಗೆ ಅರ್ಜಿಯಲ್ಲಿ ಹೇಳಲಾಗಿದೆ. ಮುಂಬರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಿಗೆ ಒಂದು ರೀತಿಯಲ್ಲಿ ಚುನಾವಣಾ ಹಂತವನ್ನು ಹೇಳಿದ್ದರೆ, ಪಶ್ಚಿಮ ಬಂಗಾಳದಲ್ಲಿ ಮಾತ್ರ 8 ಹಂತದಲ್ಲಿ ಮತದಾನ ನಡೆಯುವ ಬಗ್ಗೆ ಹೇಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಯಾವುದೇ ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿಲ್ಲ. ಹಾಗಾಗಿ, ಈ ನಡೆ ಸಂವಿಧಾನ ವಿರೋಧಿ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಹಿಂದೂ ದೇವರಾದ ಶ್ರೀರಾಮನ ಹೆಸರನ್ನು ಚುನಾವಣಾ ಯಾತ್ರೆಯ ಸಂದರ್ಭ ಘೋಷಣೆಯಾಗಿ ಬಳಸುವುದಕ್ಕೂ ಶರ್ಮಾ ಆಕ್ಷೇಪಿಸಿ ಅರ್ಜಿ ಹಾಕಿದ್ದಾರೆ. ಈ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿತ್ತು.
ಜೈ ಶ್ರೀರಾಮ್ ಘೋಷಣೆಯನ್ನು ಚುನಾವಣಾ ಪ್ರಚಾರದಲ್ಲಿ ಬಳಸಿ ಜನರಲ್ಲಿ ದ್ವೇಷದ ಭಾವ ಹೆಚ್ಚುವಂತೆ ಮಾಡಲಾಗುತ್ತಿದೆ ಎಂದು ಶರ್ಮ ತಿಳಿಸಿದ್ದಾರೆ. ಈ ರೀತಿಯ ಘೋಷಣೆಯನ್ನು ಚುನಾವಣಾ ಸಭೆಯಲ್ಲಿ ಬಳಸುವುದರಿಂದ ಪ್ರಜಾಪ್ರತಿನಿಧಿ ಕಾಯ್ದೆ 123 ಮತ್ತು 125ನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಮತ್ತು ನ್ಯಾಯಮೂರ್ತಿ ವಿ. ರಾಮಸುಬ್ರಮಣ್ಯಂ ನೇತೃತ್ವದ ತ್ರಿಸದಸ್ಯ ಪೀಠ ಈ ಸಾರ್ವಜನಿಕ ಹಿತಾಸಕ್ತಿಯನ್ನು ನಿರಾಕರಿಸಿದೆ. ಈ ಕುರಿತಾಗಿ ಹೈಕೋರ್ಟ್ ಅಥವಾ ಚುನಾವಣಾ ಆಯೋಗದ ಮೊರೆ ಹೋಗುವಂತೆ ಕೇಳಿಕೊಂಡಿದೆ.
ಇದನ್ನೂ ಓದಿ: West Bengal Assembly Elections 2021: ದಿನದ 24 ಗಂಟೆಯೂ ಬಂಗಾಳದ ಅಭಿವೃದ್ಧಿಗೆ ಶ್ರಮಿಸುತ್ತೇವೆ: ಪ್ರಧಾನಿ ನರೇಂದ್ರ ಮೋದಿ
ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ, ದೆಹಲಿ ಮಹಿಳೆಯರ ಬಗ್ಗೆ ನರೇಂದ್ರ ಮೋದಿ ಯೋಚಿಸಲಿ: ಮಮತಾ ಬ್ಯಾನರ್ಜಿ
Published On - 6:31 pm, Tue, 9 March 21