ದೆಹಲಿ: ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಣ ಹಗ್ಗಜಗ್ಗಾಟ ಮುಂದುವರಿದಿದೆ. ಮಮತಾ ಬ್ಯಾನರ್ಜಿ ಸೋಮವಾರ ಜಗದೀಪ್ ಧನಕರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಈ ಆರೋಪಗಳನ್ನು ಜಗದೀಪ್ ನಿರಾಕರಿಸಿದ್ದಾರೆ. ರಾಜ್ಯಪಾಲರ ವಿರುದ್ಧ ಮಮತಾ ಬ್ಯಾನರ್ಜಿ ಭ್ರಷ್ಟಾಚಾರದ ಆರೋಪ ಮಾಡಿರುವುದು ಇದೇ ಮೊದಲು ಎನ್ನುವುದು ಗಮನಾರ್ಹ ಸಂಗತಿ. ಜುಲೈ 2ರಿಂದ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಅಧಿವೇಶನ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಆಡಳಿತ ದೃಷ್ಟಿಯಿಂದ ಮಹತ್ವದ್ದು ಎನಿಸಿರುವ ಮುಖ್ಯಮಂತ್ರಿ-ರಾಜ್ಯಪಾಲ ಹುದ್ದೆಗಳ ಸಂಘರ್ಷ ಎಲ್ಲರ ಗಮನ ಸೆಳೆದಿದೆ.
ರಾಜ್ಯಪಾಲ ಜಗದೀಪ್ ಧನ್ಕರ್ ಓರ್ವ ಭ್ರಷ್ಟವ್ಯಕ್ತಿ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ 1996ರ ಜೈನ್ ಹವಾಲಾ ಪ್ರಕರಣದಲ್ಲಿ ಜಗದೀಪ್ ಧನ್ಕರ್ ಸಹ ಭಾಗಿಯಾಗಿದ್ದರು. ಡೈರಿಯೊಂದರಲ್ಲಿ ನಮೂದಾಗಿರುವ ಕಿಕ್ಬ್ಯಾಕ್ ಪಡೆದ ರಾಜಕಾರಿಣಿಗಳ ಪಟ್ಟಿಯಲ್ಲಿ ಧನಕರ್ ಹೆಸರೂ ಇತ್ತು ಎಂದು ಸೋಮವಾರ ಹೇಳಿಕೆ ನೀಡಿದ್ದಾರೆ.
‘ರಾಜ್ಯಪಾಲರ ಹೆಸರು ಜೈನ್ ಹವಾಲ ಪ್ರಕರಣದಲ್ಲಿಯೂ ಕೇಳಿಬಂದಿತ್ತು. ಅವರು ನ್ಯಾಯಾಲಯದ ಮೆಟ್ಟಿಲು ಹತ್ತಿ ತಮ್ಮ ಹೆಸರು ತೆಗೆಸಿಕೊಂಡರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಆದರೆ ಅದಿನ್ನೂ ವಿಚಾರಣೆಗೆ ಬಾಕಿಯಿದೆ. ನಿಮಗೆ ಅರ್ಥವಾಗಬೇಕಾದ್ದು ಇಷ್ಟೇ. ಅವರೊಬ್ಬ ಭ್ರಷ್ಟ. ಇಂಥ ವ್ಯಕ್ತಿಯನ್ನು ರಾಜ್ಯಪಾಲರಾಗಿ ಕೇಂದ್ರ ಸರ್ಕಾರ ಏಕೆ ನಿಯೋಜಿಸುತ್ತದೆ? ಚಾರ್ಜ್ಶೀಟ್ ತೆಗೆದು ನೋಡಿ ಅವರ ಹೆಸರು ಇದೆಯೋ ಇಲ್ಲವೋ ತಿಳಿಯುತ್ತದೆ’ ಎಂದು ಮಮತಾ ಬ್ಯಾನರ್ಜಿ ವರದಿಗಾರರಿಗೆ ತಿಳಿಸಿದರು.
ಉತ್ತರ ಬಂಗಾಳಕ್ಕೆ ನಿರ್ದಿಷ್ಟ ರಾಜಕೀಯ ಉದ್ದೇಶದೊಂದಿಗೆ ರಾಜ್ಯಪಾಲರು ಭೇಟಿ ನೀಡಿದ್ದರು. ಅಲ್ಲಿನ ಬಿಜೆಪಿ ಶಾಸಕರು, ಸಂಸದರನ್ನು ಭೇಟಿಯಾಗಿದ್ದರು ಎಂದು ಮಮತಾ ದೂರಿದರು. ರಾಜ್ಯಪಾಲರು ಇದ್ದಕ್ಕಿದ್ದಂತೆ ಉತ್ತರ ಬಂಗಾಳಕ್ಕೆ ಭೇಟಿ ನೀಡಿದ್ದು ಏಕೆ? ಈ ಭೇಟಿಯ ಹಿನ್ನೆಲೆಯಲ್ಲಿ ನನಗೆ ಬಂಗಾಳವನ್ನು ವಿಭಜಿಸುವ ಸಂಚು ಕಾಣಿಸುತ್ತಿದೆ ಎಂದು ಪರೋಕ್ಷವಾಗಿ ಈಚೆಗೆ ಬಿಜೆಪಿ ನಾಯಕರು ಪ್ರಸ್ತಾಪಿಸುತ್ತಿರುವ ಉತ್ತಮ ಬಂಗಾಳ ಮತ್ತು ಜಂಗಲ್ಮಹಲ್ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡುವ ಹೇಳಿಕೆಗಳನ್ನು ನೆನಪಿಸಿಕೊಂಡರು.
ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ ನಂತರ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ ರಾಜ್ಯಪಾಲ ಧನಕರ್, ‘ಮುಖ್ಯಮಂತ್ರಿ ನೀಡಿರುವ ಹೇಳಿಕೆಯಿಂದ ನನಗೆ ಆಘಾತವಾಗಿದೆ. ನಿಮ್ಮ ರಾಜ್ಯಪಾಲರ ವಿರುದ್ಧ ಯಾವುದೇ ಚಾರ್ಜ್ಶೀಟ್ ಸಲ್ಲಿಕೆಯಾಗಿಲ್ಲ. ಅಂಥ ಯಾವುದೇ ದಾಖಲೆ ಅಸ್ತಿತ್ವದಲ್ಲಿಲ್ಲ. ಇದು ಸತ್ಯಕ್ಕೆ ದೂರವಾದ ಹೇಳಿಕೆ. ಅನುಭವಿ ರಾಜಕಾರಿಣಿಯಿಂದ ಇಂಥ ಹೇಳಿಕೆ ನಿರೀಕ್ಷಿರಲಿಲ್ಲ’ ಎಂದು ಧನಕರ್ ಹೇಳಿದರು.
ಪಶ್ಚಿಮ ಬಂಗಾಳದ ಆಡಳಿತ ಮುಖ್ಯಸ್ಥರಾದ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಹುದ್ದೆಯಲ್ಲಿರುವವರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಹಲವು ನಿದರ್ಶನಗಳಲ್ಲಿ ಸಾಬೀತಾಗಿದೆ. 70 ವರ್ಷದ ಧನಕರ್ ರಾಜ್ಯಪಾಲರಾಗಿ ನಿಯುಕ್ತರಾದ ನಂತರ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹಲವು ಬಾರಿ ರಾಜ್ಯಪಾಲರ ಪೂರ್ವಗ್ರಹ ಮತ್ತು ಬಿಜೆಪಿಯ ಸಿದ್ಧಾಂತಗಳನ್ನು ಹೇರುವ ಪ್ರವೃತ್ತಿಯ ಬಗ್ಗೆ ಮಾತನಾಡಿದ್ದರು.
ಮೇ ತಿಂಗಳಲ್ಲಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲರ ನಡುವಣ ಹಗ್ಗಜಗ್ಗಾಟ ಹೆಚ್ಚಾಗಿದೆ. ಪಶ್ಚಿಮ ಬಂಗಾಳದ ವಿವಿಧೆಡೆ ವರದಿಯಾಗುತ್ತಿರುವ ಹಿಂಸಾಚಾರದ ಬಗ್ಗೆ ರಾಜ್ಯಪಾಲರು ಪ್ರಸ್ತಾಪಿಸಿ, ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಮುಖ್ಯಮಂತ್ರಿ ಗಮನಹರಿಸಬೇಕು ಎಂದು ಹೇಳಿದ್ದರು. ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಸರ್ಕಾರಕ್ಕೆ ರಾಜ್ಯಪಾಲರೇಕೆ ನಿರ್ದೇಶನಗಳನ್ನು ನೀಡಬೇಕು ಎಂದು ಮಮತಾ ಬ್ಯಾನರ್ಜಿ ಇಂದು ಪ್ರಶ್ನಿಸಿದರು.
ಧನಕರ್ ಅವರನ್ನು ರಾಜ್ಯಪಾಲರ ಹುದ್ದೆಯಿಂದ ಪದಚ್ಯುತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಪತ್ರಗಳನ್ನು ಬರೆದಿದ್ದೇನೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಾನು ರಾಜ್ಯಪಾಲರನ್ನು ನಿಯಮಿತವಾಗಿ ಭೇಟಿಯಾಗುತ್ತೇನೆ, ಎಲ್ಲ ಶಿಷ್ಟಾಚಾರಗಳನ್ನು ಪಾಲಿಸುತ್ತೇನೆ. ಆದರೆ ಕೇಂದ್ರ ಸರ್ಕಾರವು ನನ್ನ ಪತ್ರಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಧನಕರ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರು ಬಾರಿ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಜುಲೈ 2ರಿಂದ ಪಶ್ಚಿಮ ಬಂಗಾಳ ವಿಧಾನಸಭೆ ಅಧಿವೇಶನ ನಡೆಯಲಿದೆ. ವಿಧಾನಸಭೆಯಲ್ಲಿ ರಾಜ್ಯಪಾಲರು ಮಾಡಬೇಕಿರುವ ಭಾಷಣದ ರೂಪುರೇಷೆಗಳನ್ನು ಸರ್ಕಾರ ರಾಜ್ಯಪಾಲರ ಕಚೇರಿಗೆ ಕಳಿಸಿದೆ. ಆದರೆ ರಾಜ್ಯಪಾಲರು ಈ ಕುರಿತು ತಮ್ಮೊಂದಿಗೆ ಸರ್ಕಾರ ಚರ್ಚಿಸಬೇಕು ಎಂದು ಹೇಳಿದ್ದಾರೆ. ಈ ಸಂಘರ್ಷದ ನಂತರ ಮಮತಾ ಬ್ಯಾನರ್ಜಿ ಮತ್ತು ಜಗದೀಪ್ ಧನಕರ್ ನಡುವೆ ಹೇಳಿಕೆಗಳ ವಿನಿಮಯ ನಡೆದಿದೆ. ಸರ್ಕಾರ ಸಿದ್ಧಪಡಿಸಿಕೊಡುವ ಭಾಷಣವನ್ನು ರಾಜ್ಯಪಾಲರು ವಿಧಾಸಭೆಯಲ್ಲಿ ಯಥಾವತ್ತಾಗಿ ಓದಬೇಕಿಲ್ಲ. ಸಂವಿಧಾನಬಾಹಿರವಾದ ಅಂಶಗಳನ್ನು ಬರೆದುಕೊಟ್ಟರೆ ನಾನು ಓದಲು ಸಾಧ್ಯವೇ ಎಂದು ರಾಜ್ಯ ಪಾಲ ಧನಕರ್ ಪ್ರಶ್ನಿಸಿದ್ದರು. ಈ ಮೂಲಕ ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ಮತ್ತೊಂದು ಸಂಘರ್ಷಕ್ಕೆ ಮುನ್ನುಡಿ ಬರೆದಿದ್ದರು.
(West Bengal Governor Jagdeep Dhankar is a Corrupt Man Alleges Mamata Banerjee)
ಇದನ್ನೂ ಓದಿ: Narada case: ಮಮತಾ ಬ್ಯಾನರ್ಜಿ ಸಲ್ಲಿಸಿದ ಮನವಿ ಆಲಿಸಲು ನಿರಾಕರಿಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶ ಅನಿರುದ್ಧ ಬೋಸ್
Published On - 10:56 pm, Mon, 28 June 21