Indus Water Treaty: ಪಾಕಿಸ್ತಾನಕ್ಕೆ ಭಾರತದ ಶಾಕ್; ಏನಿದು ಸಿಂಧೂ ಜಲ ಒಪ್ಪಂದ?
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಹಸ್ತಕ್ಷೇಪ ಇನ್ನೂ ಕಡಿಮೆಯಾಗಿಲ್ಲ. ಕಾಶ್ಮೀರವನ್ನು ತನ್ನ ತೆಕ್ಕೆಗೆ ಪಡೆಯಲು ಪಾಕಿಸ್ತಾನದ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. 2019ರಲ್ಲಿ ಪುಲ್ವಾಮಾ ದಾಳಿಯ ಮೂಲಕ ಭಾರತೀಯ ಸೈನಿಕರನ್ನು ಹತ್ಯೆಗೈದಿದ್ದ ಉಗ್ರರು ಮಂಗಳವಾರ ಕಾಶ್ಮೀರಕ್ಕೆ ಬಂದಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ಪಾಕಿಸ್ತಾನವೇ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದ್ದರಿಂದ ಭಾರತ ಈ ಬಾರಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಲು ಮುಂದಾಗಿದೆ. ಹೀಗಾಗಿ, ಪಾಕಿಸ್ತಾನದ ಪಾಲಿಗೆ ಬಹಳ ಅತ್ಯಗತ್ಯವಾದ ಸಿಂಧೂ ಜಲ ಒಪ್ಪಂದವನ್ನು ಭಾರತ ರದ್ದುಗೊಳಿಸಿದೆ. ಹಾಗಾದರೆ, ಏನಿದು ಸಿಂಧೂ ಜಲ ಒಪ್ಪಂದ? ಈ ಒಪ್ಪಂದ ಪಾಕಿಸ್ತಾನಕ್ಕೆ ಏಕೆ ಮುಖ್ಯ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ನವದೆಹಲಿ, ಏಪ್ರಿಲ್ 23: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam Attack) ನಿನ್ನೆ (ಏಪ್ರಿಲ್ 22) ಉಗ್ರರ ದಾಳಿಗೆ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಬಹುತೇಕರು ಪ್ರವಾಸಿಗರಾಗಿದ್ದರು. ಕಾಶ್ಮೀರವನ್ನು ಬಿಡುವ ಮಾತೇ ಇಲ್ಲ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಕಳೆದ ವಾರವಷ್ಟೇ ಇಸ್ಲಾಮಾಬಾದ್ನಲ್ಲಿ ಭಾಷಣ ಮಾಡಿದ್ದರು. ಅದಕ್ಕೆ ಭಾರತ ಕೂಡ ತಕ್ಕ ಉತ್ತರ ನೀಡಿತ್ತು. ಅದಾದ ಒಂದೇ ವಾರದಲ್ಲಿ ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದಿದೆ. ಈ ದಾಳಿ ನಡೆಸಿದ ಟಿಆರ್ಎಫ್ ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ)ದ ಶಾಡೋ ಸಂಘಟನೆಯಾಗಿದೆ. ಹೀಗಾಗಿ, ಭಾರತದ ಮೇಲಿನ ದಾಳಿಗೆ ಪಾಕಿಸ್ತಾನ ತೆರೆಮರೆಯಲ್ಲಿ ಕುಮ್ಮಕ್ಕು ನೀಡಿರುವುದು ಖಚಿತವಾಗಿರುವುದರಿಂದ ಈ ಬಾರಿ ಭಾರತ ರಾಜತಾಂತ್ರಿಕ ಮಾರ್ಗದ ಮೂಲಕ ಪಾಕಿಸ್ತಾನಕ್ಕೆ (Pakistan) ತಿರುಗೇಟು ನೀಡಲು ಮುಂದಾಗಿದೆ.
ಈ ಹಿಂದೆ 2019ರಲ್ಲಿ ಪುಲ್ವಾಮಾ ದಾಳಿ ನಡೆದಾಗ ಭಾರತ ಸರ್ಜಿಕಲ್ ದಾಳಿಯ ಮೂಲಕ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಂಡಿತ್ತು. ಈ ಬಾರಿ 5 ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮೋದಿ ಸರ್ಕಾರ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ. ಅದರಲ್ಲಿ ಬಹಳ ಮುಖ್ಯವಾದುದು ಸಿಂಧೂ ಜಲ ಒಪ್ಪಂದವನ್ನು (Indus Water Treaty) ರದ್ದುಗೊಳಿಸಿದ್ದು. ಪಾಕಿಸ್ತಾನದೊಂದಿಗಿನ ದಶಕಗಳಷ್ಟು ಹಳೆಯದಾದ ಸಿಂಧೂ ನದಿ ನೀರು ಒಪ್ಪಂದವನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸುವುದು ಮೋದಿ ಸರ್ಕಾರದ ಅತ್ಯಂತ ದಿಟ್ಟ ಕ್ರಮವಾಗಿದೆ. ಇದರೊಂದಿಗೆ, ಸಿಂಧೂ ನದಿ ಮತ್ತು ಅದರ ಉಪನದಿಗಳಾದ ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲಜ್‌ಗಳಿಂದ ಪಾಕಿಸ್ತಾನಕ್ಕೆ ನೀರು ಸರಬರಾಜು ಸ್ಥಗಿತಗೊಳ್ಳುತ್ತದೆ. ಈ ನದಿಗಳು ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದು, ಭಾರತ ಸರ್ಕಾರದ ಈ ನಿರ್ಧಾರದಿಂದ ಪಾಕಿಸ್ತಾನದ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: Pahalgam Attack: ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ರಕ್ತದೋಕುಳಿ; ಇಂದು ಉಗ್ರರ ದಾಳಿ ವೇಳೆ ಆಗಿದ್ದೇನು?
ಏನಿದು ಸಿಂಧೂ ನದಿ ನೀರು ಒಪ್ಪಂದ?:
ಸಿಂಧೂ ನದಿ ಮತ್ತು ಅದರ ಉಪನದಿಗಳಲ್ಲಿ ಲಭ್ಯವಿರುವ ನೀರನ್ನು ಬಳಸಲು ಸಿಂಧೂ ಜಲ ಒಪ್ಪಂದವು (ಐಡಬ್ಲ್ಯೂಟಿ) ಭಾರತ ಮತ್ತು ಪಾಕಿಸ್ತಾನದ ನಡುವಿನ ನೀರಿನ ವಿತರಣಾ ಒಪ್ಪಂದವಾಗಿದೆ. 1960ರಲ್ಲಿ ಕರಾಚಿಯಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಆಗಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನಿ ಅಧ್ಯಕ್ಷ ಅಯೂಬ್ ಖಾನ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಸಿಂಧೂ ನದಿ ನೀರು ಒಪ್ಪಂದಕ್ಕೆ ಸೆಪ್ಟೆಂಬರ್ 19, 1960ರಂದು ಸಹಿ ಹಾಕಲಾಯಿತು. ಭಾರತ ಮತ್ತು ಪಾಕಿಸ್ತಾನದ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಒಪ್ಪಂದದಂತೆ ಪೂರ್ವದಿಂದ ಭಾರತದೊಳಕ್ಕೆ ಹರಿಯುವ ಮೂರು ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್, ಪಾಕಿಸ್ತಾನದೊಳಕ್ಕೆ ಹರಿಯುವ 3 ಪಶ್ಚಿಮದ ನದಿಗಳಾದ ಸಿಂಧು, ಚೆನಾಬ್ ಮತ್ತು ಝೀಲಂ ನದಿಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದಾಗಿದೆ. ಸಿಂಧೂ ಜಲ ಒಪ್ಪಂದವು ಸಿಂಧು ನದಿಯ ನೀರಿನ ಗರಿಷ್ಠ ಬಳಕೆಯಲ್ಲಿ ಎರಡೂ ದೇಶಗಳ ಹಕ್ಕಿದೆ. ಭಾರತವು ಪಶ್ಚಿಮ ನದಿ ನೀರನ್ನು ಸೀಮಿತ ನೀರಾವರಿ ಬಳಕೆಗೆ, ವಿದ್ಯುತ್ ಉತ್ಪಾದನೆ, ನ್ಯಾವಿಗೇಷನ್, ಮೀನುಗಾರಿಕೆಗೆ ಬಳಸಲು ಅನುಮತಿಸುತ್ತದೆ. ಈ ಒಪ್ಪಂದದ ಪ್ರಕಾರ, ಶಾಶ್ವತ ಸಿಂಧು ಆಯೋಗವನ್ನು ಸ್ಥಾಪಿಸಲಾಗಿದೆ. ಪ್ರತಿ ದೇಶದಿಂದ ಆಯುಕ್ತರನ್ನು ಹೊಂದಿರುವ ಈ ಆಯೋಗವು ಪರಸ್ಪರ ಸಹಕಾರ ಕಾರ್ಯವಿಧಾನವನ್ನು ಮೇಲ್ವಿಚಾರಣೆ ಮಾಡುತ್ತದೆ. ಸೃಷ್ಟಿಯಾಗುವ ಸಮಸ್ಯೆಗಳನ್ನು ಚರ್ಚಿಸಲು ಎರಡು ದೇಶಗಳು ವಾರ್ಷಿಕವಾಗಿ ಸಭೆ ನಡೆಸುತ್ತವೆ.
ಇದನ್ನೂ ಓದಿ: ಪಾಕ್ಗೆ ಭಾರತ ತಿರುಗೇಟು; ಪಾಕಿಸ್ತಾನಿಯರಿಗೆ ಪ್ರವೇಶ ನಿಷೇಧ, ಸಿಂಧೂ ಜಲ ಒಪ್ಪಂದ ರದ್ದು!
ಸಿಂಧೂ ಜಲ ಒಪ್ಪಂದವು ಪಶ್ಚಿಮ ನದಿಗಳನ್ನು (ಸಿಂಧೂ, ಝೀಲಂ, ಚೆನಾಬ್) ಪಾಕಿಸ್ತಾನಕ್ಕೆ ಮತ್ತು ಪೂರ್ವ ನದಿಗಳನ್ನು (ರವಿ, ಬಿಯಾಸ್, ಸಟ್ಲೆಜ್) ಭಾರತಕ್ಕೆ ಹಂಚಿಕೆ ಮಾಡುವ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸುಸ್ಥಿರ ನೀರಿನ ವಿಭಜನೆಯನ್ನು ಮಾಡಿತ್ತು.
6 ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಮತ್ತು ಮಿಲಿಟರಿ ಉದ್ವಿಗ್ನತೆ ಹೆಚ್ಚಾದಾಗಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಯುತ ನೀರು ಹಂಚಿಕೆಗೆ ಅನುಕೂಲವಾಗುವಂತೆ ಸಿಂಧೂ ಜಲ ಒಪ್ಪಂದ (IWT) ನಿರ್ಣಾಯಕ ಪಾತ್ರ ವಹಿಸಿತ್ತು. ಇದೀಗ ಈ ಒಪ್ಪಂದ ರದ್ದುಗೊಂಡಿದೆ. ಇನ್ನೂ ಮುಖ್ಯವಾದ ವಿಷಯವೆಂದರೆ ಈ ಸಿಂಧೂ ಜಲ ಒಪ್ಪಂದ ಏಷ್ಯಾದ 2 ರಾಷ್ಟ್ರಗಳ ನಡುವಿನ ಏಕೈಕ ಗಡಿಯಾಚೆಗಿನ ನೀರು ಹಂಚಿಕೆ ಒಪ್ಪಂದವಾಗಿದೆ. ಈ ಒಪ್ಪಂದವು ಕೆಳ ಭಾಗದಲ್ಲಿರುವ ದೇಶವಾದ ಪಾಕಿಸ್ತಾನಕ್ಕೆ ಅನುಕೂಲಕರವಾಗಿದೆ. ಇದು ಸಿಂಧೂ ನದಿ ವ್ಯವಸ್ಥೆಯ ಸರಿಸುಮಾರು 80% ನೀರಿನ ಪ್ರವೇಶವನ್ನು ನೀಡುತ್ತದೆ.
2001ರ ಭಾರತೀಯ ಸಂಸತ್ತಿನ ದಾಳಿ ಮತ್ತು 2019ರ ಪುಲ್ವಾಮಾ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ದಾಳಿಗಳು ನಡೆದಾಗಲೂ ಭಾರತ ಸಿಂಧೂ ಜಲ ಒಪ್ಪಂದದಿಂದ ಹಿಂದೆ ಸರಿದಿರಲಿಲ್ಲ. ಆದರೆ, ಈ ಬಾರಿ ಮೋದಿ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ