ಒಂದು ರಾಷ್ಟ್ರ, ಒಂದು ಚುನಾವಣೆ ಎಂದರೇನು?; ಈ ಹಿಂದೆ ಏಕಕಾಲಿಕ ಮತದಾನ ನಡೆದಿತ್ತಾ?

one Nation, one Election: 'ಒಂದು ರಾಷ್ಟ್ರ, ಒಂದು ಚುನಾವಣೆ' ಯೋಜನೆಯು 100 ದಿನಗಳಲ್ಲಿ ನಗರ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆಗಳ ಜೊತೆಗೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದನ್ನು ಪ್ರಸ್ತಾಪಿಸುತ್ತದೆ. ಈ ಬಗ್ಗೆ ಈಗಾಗಲೇ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ರಾಷ್ಟ್ರಪತಿಗಳಿಗೆ ವರದಿ ನೀಡಿದೆ. ಈ ಮಸೂದೆಗೆ ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.

ಒಂದು ರಾಷ್ಟ್ರ, ಒಂದು ಚುನಾವಣೆ ಎಂದರೇನು?; ಈ ಹಿಂದೆ ಏಕಕಾಲಿಕ ಮತದಾನ ನಡೆದಿತ್ತಾ?
ಚುನಾವಣೆ
Follow us
ಸುಷ್ಮಾ ಚಕ್ರೆ
|

Updated on:Dec 12, 2024 | 7:30 PM

ನವದೆಹಲಿ: ಭಾರತದಾದ್ಯಂತ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಗುರಿಯನ್ನು ಹೊಂದಿರುವ “ಒಂದು ರಾಷ್ಟ್ರ, ಒಂದು ಚುನಾವಣೆ” ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮಸೂದೆಗೆ ಬಿಜೆಪಿಸ ಏರಿದಂತೆ ಎನ್​ಡಿಎ ಬೆಂಬಲ ವ್ಯಕ್ತಪಡಿಸಿದರೆ ಇಂಡಿಯಾ ಬಣ ವಿರೋಧಿಸುತ್ತಿದೆ. ಈ ಮಸೂದೆ ಯಾಕೆ ಮುಖ್ಯ? ಈ ಹಿಂದೆ ಎಂದೂ ಭಾರತದಲ್ಲಿ ಏಕಕಾಲಕ್ಕೆ ಚುನಾವಣೆ ನಡೆದಿಲ್ಲವೇ? ಎಂಬ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದು ರಾಷ್ಟ್ರ, ಒಂದು ಚುನಾವಣೆ ಕಾಯಿದೆ ಜಾರಿಯಾದರೆ ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ, ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಅಡೆತಡೆಗಳನ್ನು ಕಡಿಮೆ ಮಾಡುತ್ತದೆ ಎಂದು ಆಡಳಿತ ಪಕ್ಷವಾದ ಎನ್​ಡಿಎ ವಾದಿಸಿದೆ. ಆದರೆ, ಪ್ರಮುಖ ವಿರೋಧ ಪಕ್ಷಗಳು ಸೇರಿದಂತೆ ವಿಮರ್ಶಕರು, ಇದು ಸ್ಥಳೀಯ ಸಮಸ್ಯೆಗಳನ್ನು ಕಡೆಗಣಿಸುತ್ತದೆ ಎಂದು ಆತಂಕ ಹೊರಹಾಕಿದ್ದಾರೆ. ಇದನ್ನು ಕಾರ್ಯಗತಗೊಳಿಸಲು ಸಾಂವಿಧಾನಿಕ ತಿದ್ದುಪಡಿಗಳು ಮತ್ತು ಒಮ್ಮತದ ಅಗತ್ಯವಿರುತ್ತದೆ. ಈ ಕಾಯ್ದೆ ಜಾರಿಯಾಗಲು ಬಹಳ ಸಮಯ ತೆಗೆದುಕೊಳ್ಳಲಿದೆ.

ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಚುನಾವಣೆ ಅನುಷ್ಠಾನಗೊಳಿಸುವುದು ಹೇಗೆ? ಸರ್ಕಾರದ ಪ್ಲ್ಯಾನ್ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ

ಈ ಬಾರಿ ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾಪವನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯ ಭಾಗವನ್ನಾಗಿ ಮಾಡಿಕೊಂಡಿತ್ತು. ಆದರೆ, ರಾಜಕೀಯ ಪಕ್ಷಗಳ ನಡುವೆ ಈ ಕುರಿತು ಒಮ್ಮತ ಮೂಡಿರಲಿಲ್ಲ.

ಈ ಹಿಂದೆಯೂ ನಡೆದಿತ್ತು ಏಕಕಾಲಿಕ ಚುನಾವಣೆ:

ಹಾಗಂತ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತರಲು ಹೊರಟಿರುವ ಒಂದು ರಾಷ್ಟ್ರ, ಒಂದು ಚುನಾವಣೆ ಎಂಬ ಪರಿಕಲ್ಪನೆ ಹೊಸತೇನಲ್ಲ.

ಈ ಹಿಂದೆ 1983ರಲ್ಲಿ ಚುನಾವಣಾ ಆಯೋಗ ಮೊದಲ ಬಾರಿಗೆ ಏಕಕಾಲಿಕ ಚುನಾವಣೆಗಳ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಸಲಹೆ ನೀಡಿತು. 1999ರಲ್ಲಿ ಕಾನೂನು ಆಯೋಗವು ತನ್ನ 170ನೇ ವರದಿಯಲ್ಲಿ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವಂತೆ ಪ್ರತಿಪಾದಿಸಿತು. 2015ರಲ್ಲಿ ಸಂಸದೀಯ ಸ್ಥಾಯಿ ಸಮಿತಿಯು ಏಕಕಾಲಿಕ ಮತದಾನದ ಕಾರ್ಯಸಾಧ್ಯತೆಯ ಬಗ್ಗೆ ವರದಿಯನ್ನು ಸಿದ್ಧಪಡಿಸಿತು. ಇದು ಕಡಿಮೆ ವೆಚ್ಚಗಳು ಮತ್ತು ಸುಧಾರಿತ ಆಡಳಿತ ದಕ್ಷತೆಯಂತಹ ಸಂಭಾವ್ಯ ಪ್ರಯೋಜನಗಳನ್ನು ಎತ್ತಿ ತೋರಿಸುತ್ತದೆ. ಆದರೆ, ಫೆಡರಲಿಸಂ ಮೇಲೆ ಅದರ ಸಂಭವನೀಯ ಪರಿಣಾಮವನ್ನು ಉಲ್ಲೇಖಿಸಿ ಕಲ್ಪನೆಯನ್ನು ಅನುಮೋದಿಸದ ವಿರೋಧ ಪಕ್ಷಗಳು ಎತ್ತಿರುವ ಕಳವಳಗಳನ್ನು ವರದಿಯು ಉಲ್ಲೇಖಿಸಿತ್ತು. ಅಸೆಂಬ್ಲಿಗಳ ಅವಧಿಯನ್ನು 170 ದಿನಗಳವರೆಗೆ ವಿಸ್ತರಿಸಲು ಮತ್ತು 599 ದಿನಗಳವರೆಗೆ ಅವಧಿಯನ್ನು ಮೊಟಕುಗೊಳಿಸಲು ಸಮಿತಿಯು ಸಲಹೆ ನೀಡಿತ್ತು. “2016ರಲ್ಲಿ ಅಥವಾ ಒಂದು ದಶಕದಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಕಾರ್ಯಸಾಧ್ಯವಾಗುವುದಿಲ್ಲ” ಎಂದು ಅದು ತೀರ್ಮಾನ ತಿಳಿಸಿತ್ತು.

ದಕ್ಷಿಣ ಆಫ್ರಿಕಾ, ಸ್ವೀಡನ್, ಬೆಲ್ಜಿಯಂ, ಜರ್ಮನಿ, ಜಪಾನ್, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್‌ನಂತಹ ದೇಶಗಳು ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುತ್ತವೆ. ಇದು ಭಾರತಕ್ಕೆ ಉದಾಹರಣೆಗಳಾಗಿವೆ.

ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಚುನಾವಣೆ, ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆ; ಪ್ರಧಾನಿ ಮೋದಿ

1950-1967: ಭಾರತವು ಗಣರಾಜ್ಯವಾದ ನಂತರ, ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ಅಸೆಂಬ್ಲಿಗಳಿಗೆ ಪ್ರತಿ ಐದು ವರ್ಷಗಳಿಗೊಮ್ಮೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲಾಯಿತು.

1952, 1957, 1962, 1967: ಈ ವರ್ಷಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಸರ್ಕಾರಗಳಿಗೆ ಮತದಾರರು ತಮ್ಮ ಮತಗಳನ್ನು ಚಲಾಯಿಸಿದರು.

1968-1969: ರಾಜ್ಯಗಳ ಮರುಸಂಘಟನೆ ಮತ್ತು ಹೊಸ ರಾಜ್ಯಗಳ ರಚನೆಯಿಂದಾಗಿ ಏಕಕಾಲದಲ್ಲಿ ಮತದಾನದ ವ್ಯವಸ್ಥೆಯನ್ನು ನಿಲ್ಲಿಸಲಾಯಿತು.

1983: ಚುನಾವಣಾ ಆಯೋಗವು ತನ್ನ ವಾರ್ಷಿಕ ವರದಿಯಲ್ಲಿ ಏಕಕಾಲಕ್ಕೆ ಮತದಾನವನ್ನು ಪುನರುಜ್ಜೀವನಗೊಳಿಸಲು ಶಿಫಾರಸು ಮಾಡಿತು.

1999: ಕಾನೂನು ಆಯೋಗವು ಏಕಕಾಲಕ್ಕೆ ಚುನಾವಣೆ ನಡೆಸುವ ವಿಚಾರವನ್ನೂ ಚರ್ಚಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Thu, 12 December 24