Covaxin: ಕೊವ್ಯಾಕ್ಸಿನ್‌ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆ

Covaxin: ಕೊವ್ಯಾಕ್ಸಿನ್‌ಗೆ WHO ಒಪ್ಪಿಗೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್‌ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ದೊರಕಿದೆ.

Covaxin: ಕೊವ್ಯಾಕ್ಸಿನ್‌ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆ
ಕೊವ್ಯಾಕ್ಸಿನ್‌ ಲಸಿಕೆ
Edited By:

Updated on: Nov 03, 2021 | 7:50 PM

ದೆಹಲಿ: ಕೊರೊನಾ ವೈರಸ್ ವಿರುದ್ಧದ ಕೊವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆ ಲಭಿಸಿದೆ. ಭಾರತದ ಕೊವ್ಯಾಕ್ಸಿನ್‌ ಲಸಿಕೆಗೆ ಜಾಗತಿಕ ಮನ್ನಣೆ ಸಿಕ್ಕಿದಂತಾಗಿದೆ. ಕೊವ್ಯಾಕ್ಸಿನ್‌ಗೆ WHO ಒಪ್ಪಿಗೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್‌ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ದೊರಕಿದೆ.

ಕೊವ್ಯಾಕ್ಸಿನ್‌ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದೆ. ಭಾರತದ ಕೊವ್ಯಾಕ್ಸಿನ್‌ ಲಸಿಕೆಗೆ ಇದೀಗ ಜಾಗತಿಕ ಮನ್ನಣೆ ಸಿಕ್ಕಂತಾಗಿದೆ. ಅದರಂತೆ, ಕೊವ್ಯಾಕ್ಸಿನ್ 2 ಡೋಸ್ ಲಸಿಕೆ ಪಡೆದವರು ವಿದೇಶಕ್ಕೆ ತೆರಳಬಹುದಾಗಿದೆ. ಈವರೆಗೆ 8 ಲಸಿಕೆಗಳಿಗೆ ಡಬ್ಲ್ಯುಹೆಚ್‌ಒ ಒಪ್ಪಿಗೆ ನೀಡಿದೆ. ಈಗಾಗಲೇ ಕೊವ್ಯಾಕ್ಸಿನ್‌ಗೆ ಹಲವು ದೇಶಗಳು ಒಪ್ಪಿಗೆ ನೀಡಿತ್ತು. ನಾಲ್ಕು ವಾರಗಳ ಅಂತರದೊಂದಿಗೆ 2 ಡೋಸ್​ಗಳಲ್ಲಿ ಕೊವ್ಯಾಕ್ಸಿನ್ ಬಳಸುವಂತೆ ಶಿಫಾರಸು ಮಾಡಲಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದು ಎಂದು ತಿಳಿಸಲಾಗಿದೆ.

ಕೊವ್ಯಾಕ್ಸಿನ್‌ ಬಳಕೆಯ ಅವಧಿಯನ್ನು 12 ತಿಂಗಳುಗಳಿಗೆ ವಿಸ್ತರಣೆ ಮಾಡಲಾಗಿದೆ ಎಂದು ಲಸಿಕೆ ಅಭಿವೃದ್ಧಿಪಡಿಸಿರುವ ಕಂಪನಿ ಭಾರತ್ ಬಯೋಟೆಕ್ ಇಂದು (ನವೆಂಬರ್ 3) ತಿಳಿಸಿದೆ. ಬಳಕೆಯ ಅವಧಿ ವಿಸ್ತರಣೆಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಬಳಕೆ ಅವಧಿಯು ಒಂದು ವರ್ಷ ಇರಲಿದೆ ಕಂಪನಿ ಹೇಳಿದೆ.

ಕೊವ್ಯಾಕ್ಸಿನ್‌ ತುರ್ತು ಬಳಕೆಗೆ ಡಬ್ಲ್ಯುಹೆಚ್‌ಒನಿಂದ ಒಪ್ಪಿಗೆ ಸಿಕ್ಕಿದ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್​​ಸುಖ್​ ಮಾಂಡವೀಯ ಧನ್ಯವಾದ ತಿಳಿಸಿದ್ದಾರೆ. ಇದು ಸಮರ್ಥ ನಾಯಕತ್ವದ ಸಂಕೇತವಾಗಿದೆ. ಇದು ಪ್ರಧಾನಿ ಮೋದಿಯವರ ಸಂಕಲ್ಪಕ್ಕೆ ನಿದರ್ಶನ ಎಂದು ಟ್ವೀಟ್​ ಮೂಲಕ ಕೇಂದ್ರ ಸಚಿವ ಅಭಿನಂದನೆ ತಿಳಿಸಿದ್ದಾರೆ. ಆದರೆ ಗರ್ಭಿಣಿಯರಿಗೆ ಲಸಿಕೆ ಬಳಕೆಗೆ WHO ಸದ್ಯಕ್ಕೆ ಒಪ್ಪಿಗೆ ನೀಡಿಲ್ಲ. ಗರ್ಭಿಣಿಯರಿಗೆ ಕೊವ್ಯಾಕ್ಸಿನ್‌ ಬಳಕೆಗೆ ಸದ್ಯಕ್ಕೆ ಒಪ್ಪಿಗೆ ಇಲ್ಲ. ಲಸಿಕೆ ಸುರಕ್ಷತೆ ಮತ್ತು ಪರಿಣಾಮಕಾರಿ ಬಗ್ಗೆ ಅಧ್ಯಯನದ ಬಳಿಕ ಗರ್ಭಿಣಿಯರಿಗೆ ಲಸಿಕೆ ಬಳಕೆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಲಾಗಿದೆ.

ಇದಕ್ಕೂ ಮೊದಲು, ನವೆಂಬರ್ 1 ರಂದು ಆಸ್ಟ್ರೇಲಿಯಾದ ಥೆರಪೆಟಿಕ್ ಗೂಡ್ಸ್ ಅಡ್ಮಿನಿಸ್ಟ್ರೇಷನ್ (ಟಿಜಿಎ) ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್​ ಹೆಸರಿನ ಕೊವಿಡ್ 19 ವಿರುದ್ಧದ ಲಸಿಕೆಯನ್ನು ಅಂಗೀಕರಿಸಿತ್ತು. ಈ ಲಸಿಕೆಯು ಆಸ್ಟ್ರೇಲಿಯಾದಲ್ಲಿ ರಿಜಿಸ್ಟರ್ ಆಗಿಲ್ಲ. ಆದರೆ ಗಣನೀಯ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು ಈ ಲಸಿಕೆಯನ್ನು ಹಾಕಿಸಿಕೊಂಡಿರುವುದನ್ನು ಗುರುತಿಸಿ ಈ ನಿರ್ಧಾರ ಕೈಗೊಂಡಿತ್ತು.

ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಜೊತೆಗೆ ಚೀನಾದ BBIBP- CorV ಕೂಡ ಆಸ್ಟ್ರೇಲಿಯಾದ ಪಟ್ಟಿ ಸೇರಿಕೊಂಡಿತ್ತು. ಟಿಜಿಎಯು ಇತ್ತೀಚೆಗಿನ ವಾರದಲ್ಲಿ ಕಂಡುಕೊಂಡ ಮಾಹಿತಿಯನ್ನು ಮತ್ತು ಅಂಕಿ ಅಂಶಗಳನ್ನು ಹೇಳಿದೆ. ಅದರಂತೆ, ಮೇಲೆ ಉಲ್ಲೇಖಿಸಿರುವ ಲಸಿಕೆಗಳು ಕೊರೊನಾ ಹರಡುವಿಕೆಯನ್ನು ತಡೆಗಟ್ಟುತ್ತವೆ ಎಂದು ತಿಳಿಸಿತ್ತು.

ಕೊವ್ಯಾಕ್ಸಿನ್ ಭಾರತದ ಮೊದಲ ಸ್ವದೇಶಿ ಕೊವಿಡ್ 19 ಲಸಿಕೆ ಆಗಿದೆ. ಇದನ್ನು ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಐಸಿಎಮ್​ಆರ್ ಮತ್ತು ಎನ್​ಐವಿ ಜೊತೆಗೂಡಿ ಈ ಲಸಿಕೆ ಸಿದ್ಧಪಡಿಸಲಾಗಿದೆ. ಮಾರಿಷಸ್, ಓಮನ್, ಫಿಲಿಫೈನ್ಸ್, ನೇಪಾಳ, ಮೆಕ್ಸಿಕೊ, ಇರಾನ್, ಶ್ರೀಲಂಕಾ, ಗ್ರೀಸ್, ಎಸ್ಟೋನಿಯಾ ಮತ್ತು ಜಿಂಬಾಬ್ವೆ ಈ ಲಸಿಕೆಗೆ ಅನುಮೋದನೆ ಸೂಚಿಸಿವೆ.

ಇದನ್ನೂ ಓದಿ: ಕೊವ್ಯಾಕ್ಸಿನ್​ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ 24 ಗಂಟೆಯೊಳಗೆ ಅನುಮೋದನೆ ಸಾಧ್ಯತೆ: ನಿರೀಕ್ಷೆ ಹುಟ್ಟಿಸಿದ ವಕ್ತಾರರ ಹೇಳಿಕೆ

ಇದನ್ನೂ ಓದಿ: ಲಸಿಕೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಹೊಸ ಸಮಸ್ಯೆ: ನರೇಂದ್ರ ಮೋದಿ

Published On - 5:36 pm, Wed, 3 November 21