ವ್ಯಕ್ತಿ-ವ್ಯಕ್ತಿತ್ವ: ಟಿಎಂಸಿಯಲ್ಲಿ ಬೆಳೆದ ಸುವೇಂದು ಅಧಿಕಾರಿ ಈಗ ಬಿಜೆಪಿಯ ದೊಡ್ಡ ಅಸ್ತ್ರ
ಟಿಎಂಸಿ ಪಕ್ಷದ ಪ್ರಮುಖ ನಾಯಕನಾಗಿ, ಲೋಕಸಭಾ-ವಿಧಾನಸಭಾ ಸದಸ್ಯನಾಗಿ ಬೆಳೆದು, ಇದೀಗ ಅದೇ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯಿಂದ, ತನ್ನ ಭದ್ರಕೋಟೆ ಎನಿಸಿರುವ ನಂದಿಗ್ರಾಮದಿಂದ ಚುನಾವಣೆಗೆ ನಿಂತಿದ್ದಾರೆ. ಸುವೇಂದು ಅಧಿಕಾರಿ ನಡೆದು ಬಂದ ಹಾದಿಯ ಅವಲೋಕನ ಇಲ್ಲಿದೆ.
ಕಳೆದ ಕೆಲವು ತಿಂಗಳುಗಳಿಂದ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿರುವವರು ಕೇಳಿರಲೇಬೇಕಾದ ಹೆಸರು ಸುವೇಂದು ಅಧಿಕಾರಿ. ಟಿಎಂಸಿ ಪಕ್ಷದ ಪ್ರಮುಖ ನಾಯಕನಾಗಿ, ಲೋಕಸಭಾ-ವಿಧಾನಸಭಾ ಸದಸ್ಯನಾಗಿ ಬೆಳೆದು, ಇದೀಗ ಅದೇ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯಿಂದ, ತನ್ನ ಭದ್ರಕೋಟೆ ಎನಿಸಿರುವ ನಂದಿಗ್ರಾಮದಿಂದ ಚುನಾವಣೆಗೆ ನಿಂತಿದ್ದಾರೆ. ತೃಣಮೂಲ ಕಾಂಗ್ರೆಸ್ನಲ್ಲಿ ಹಂತಹಂತವಾಗಿ ಮೇಲಕ್ಕೇರಿದ ನಾಯಕ ಇದೀಗ ಪಶ್ಚಿಮ ಬಂಗಾಳ ಬಿಜೆಪಿಯ ಮುಖ್ಯ ಅಸ್ತ್ರ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿಬರುವ, ಎಲ್ಲರ ಗಮನ ಸೆಳೆದಿರುವ, ನಂದಿಗ್ರಾಮ ಅಖಾಡದಲ್ಲಿ ಮಮತಾ ಬ್ಯಾನರ್ಜಿ ಎದುರಾಳಿಯಾಗಿ ಪೈಪೋಟಿ ನಡೆಸಲಿರುವ ಸುವೇಂದು ಅಧಿಕಾರಿ ಯಾರು? ಅವರ ಹಿನ್ನೆಲೆ ಏನು?
ಸುವೇಂದು ಅಧಿಕಾರಿ ಡಿಸೆಂಬರ್ 15, 1970ರಂದು ಪೂರ್ವ ಮೇದಿನಿಪುರ ಜಿಲ್ಲೆಯ ಕರ್ಕುಲಿ ಎಂಬಲ್ಲಿ ಜನಿಸಿದರು. ಸುವೇಂದು ತಂದೆ, ಶಿಶಿರ್ ಅಧಿಕಾರಿ ಕೂಡ ರಾಜಕೀಯ ರಂಗದಲ್ಲಿ ಪಳಗಿದವರು. ಪ್ರಸ್ತುತ ಬಿಜೆಪಿ ಸೇರಿರುವ ಶಿಶಿರ್ ಅಧಿಕಾರಿ ಎರಡನೇ ಅವಧಿಯ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾಗಿದ್ದರು. 2009ರಿಂದ ಇಂದಿನವರೆಗೆ ಶಿಶಿರ್ ಅಧಿಕಾರಿ, ಕಾಂತಿ ಕ್ಷೇತ್ರದಿಂದ ಟಿಎಂಸಿ ಪಕ್ಷದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸುವೇಂದು ಅಧಿಕಾರಿ ಸಹೋದರರಾದ ಸೌಮೇಂದು ಅಧಿಕಾರಿ ಮತ್ತು ದಿವ್ಯೇಂದು ಅಧಿಕಾರಿ ಕೂಡ ರಾಜಕೀಯದಲ್ಲಿದ್ದಾರೆ. ಈ ಹಿನ್ನೆಲೆಯ ಕುಟುಂಬದಿಂದ ಬಂದ ಕಾರಣ ರಾಜಕೀಯ ರಂಗಕ್ಕೆ ಧುಮುಕುವುದು ಸುವೇಂದು ಅಧಿಕಾರಿಗೆ ಬಹಳ ಕಷ್ಟವಾಗಿರಲಿಲ್ಲ.
1995ರಿಂದ 1998ರ ವರೆಗೆ ಮೂರು ವರ್ಷಗಳ ಕಾಲ ಸುವೇಂದು ಅಧಿಕಾರಿ ಕಾಂಗ್ರೆಸ್ ಪಕ್ಷದಲ್ಲಿದ್ದರು. 1995ರಲ್ಲಿ ಮೊದಲ ಬಾರಿಗೆ ಕೊಂಟಾಯಿ ಮುನ್ಸಿಪಾಲಿಟಿಯಲ್ಲಿ, ಕಾಂಗ್ರೆಸ್ ಪಕ್ಷದಿಂದ ಕೌನ್ಸೆಲರ್ ಆಗಿ ಆಯ್ಕೆಯಾಗಿದ್ದರು. ಬಳಿಕ, 1998ರಲ್ಲಿ ತೃಣಮೂಲ ಕಾಂಗ್ರೆಸ್ ಸೇರ್ಪಡೆಗೊಂಡ ಸುವೇಂದು ಅಧಿಕಾರಿ, 2006ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಕಾಂತಿ ದಕ್ಷಿಣ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಅದೇ ವರ್ಷ ಕಾಂತಿ ಮುನ್ಸಿಪಲ್ ಕಾರ್ಪೊರೇಷನ್ನ ಅಧ್ಯಕ್ಷರಾಗಿಯೂ ಸುವೇಂದು ಅಧಿಕಾರವಹಿಸಿದ್ದರು.
ಮಮತಾ ಬ್ಯಾನರ್ಜಿ, ಸುವೇಂದು ಅಧಿಕಾರಿ ರಾಜಕೀಯಕ್ಕೆ ರಂಗು ತುಂಬಿದ್ದು 2007! ಅದು 2007ರ ಸಂದರ್ಭ. ಪಶ್ಚಿಮ ಬಂಗಾಳದಲ್ಲಿ ಅಧಿಕಾರ ವಹಿಸಿದ್ದ ಎಡಪಕ್ಷವು, ನಂದಿಗ್ರಾಮದ ಹಳ್ಳಿಯೊಂದರ 10,000 ಎಕರೆ ಜಾಗದಲ್ಲಿ ವಿಶೇಷ ಆರ್ಥಿಕ ವಲಯ ಸೃಷ್ಟಿಸಲು ಯೋಜನೆ ಹಾಕಿಕೊಂಡಿತ್ತು. ಈ ಯೋಜನೆಗೆ ಸಂಬಂಧಿಸಿ ಭೂ ತೆರವು ಮಾಡುವುದನ್ನು ವಿರೋಧಿಸಿ ಭೂಮಿ ತೆರವು ಪ್ರತಿರೋಧ ಸಮಿತಿ ರಚನೆಯಾಯಿತು. ಸುವೇಂದು ಅಧಿಕಾರಿ ಈ ಸಮಿತಿಯ ನೇತೃತ್ವ ವಹಿಸಿದರು. ಇದೇ ಚಳುವಳಿ ಸುವೇಂದು ಅಧಿಕಾರಿ ಹಾಗೂ ಮಮತಾ ಬ್ಯಾನರ್ಜಿ ಇಬ್ಬರ ರಾಜಕೀಯ ಬದುಕಿಗೆ ಹೊಸ ಆಯಾಮ ಒದಗಿಸಿಕೊಟ್ಟಿತು. ಅಧಿಕಾರಿ ತನ್ನ ಕ್ಷೇತ್ರ ನಂದಿಗ್ರಾಮದ ಸುತ್ತಮುತ್ತ ಜನರಿಗೆ ಹತ್ತಿರವಾದರೆ, ಮಮತಾ ಬ್ಯಾನರ್ಜಿ ರಾಜ್ಯ ರಾಜಕಾರಣದಲ್ಲಿ ಕೇಂದ್ರ ಬಿಂದುವಾಗಿ ಕಾಣಲು ತೊಡಗಿದರು.
ನಂದಿಗ್ರಾಮ ಸುತ್ತಮುತ್ತ ಸುವೇಂದು ಅಧಿಕಾರಿ ಛಾಪು! ನಂದಿಗ್ರಾಮದ ಹೋರಾಟ ಯಶಸ್ಸಿನ ಬಳಿಕ ಮಮತಾ ಬ್ಯಾನರ್ಜಿ ಸುವೇಂದು ಅಧಿಕಾರಿಯನ್ನು ಪಶ್ಚಿಮ ಮೇದಿನಿಪುರದ ಪುರುಲಿಯಾ ಹಾಗೂ ಬಂಕುರಾ ಜಿಲ್ಲೆಯಿಂದ ಪಕ್ಷದ ಮುಖ್ಯಸ್ಥನನ್ನಾಗಿ ನೇಮಿಸಿದರು. ಈ ಜಿಲ್ಲೆಗಳಲ್ಲಿ ಸುವೇಂದು ಅಧಿಕಾರಿ ತಮ್ಮ ರಾಜಕೀಯ ಅಡಿಪಾಯವನ್ನು ಭದ್ರಪಡಿಸಿದರು.
2009ರಲ್ಲಿ ಸುವೇಂದು, ತಾಮ್ಲುಕ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಕಮ್ಯುನಿಸ್ಟ್ ಪಕ್ಷದ (CPIM) ಲಕ್ಷ್ಮಣ್ ಸೇಠ್ ವಿರುದ್ಧ ಭರ್ಜರಿ 1,73,000 ಮತಗಳ ಅಂತರದಿಂದ ಗೆಲುವು ಸಾಧಿಸಿದರು. 2009ರಿಂದ 2016ರ ವರೆಗೆ ಸುವೇಂದು ಟಿಎಂಸಿ ಪಕ್ಷದ ಲೋಕಸಭಾ ಸದಸ್ಯನಾಗಿ ಕಾರ್ಯನಿರ್ವಹಿಸಿದರು. ಆದರೆ, 2016ರಲ್ಲಿ ತಾವು ಲೋಕಸಭಾ ಸದಸ್ಯರಾಗಿರುವಾಗಲೇ ಎಡಪಕ್ಷದ ಅಬ್ದುಲ್ ಖಾದಿರ್ ಶೇಖ್ ವಿರುದ್ಧ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ಶಾಸಕ ಸ್ಥಾನ ಪಡೆದ ಬಳಿಕ ಸಂಸದ ಸ್ಥಾನಕ್ಕೆ ಅಧಿಕಾರಿ ರಾಜೀನಾಮೆ ನೀಡಿದರು.
ಅದೇ ಅವಧಿಯಲ್ಲಿ ಅಂದರೆ ಮೇ 27, 2016ರಂದು ಸುವೇಂದು, ಮಮತಾ ಬ್ಯಾನರ್ಜಿ ಸರ್ಕಾರದ ಸಾರಿಗೆ ಸಚಿವರಾಗಿಯೂ ಅಧಿಕಾರ ಚಿಕ್ಕಾಣಿ ಹಿಡಿದರು. ಅಲ್ಲಿಂದ 2016ರಿಂದ 2020ರ ವರೆಗೆ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿಯೇ ಕಂಡಿದ್ದರು. 2020ರ ಬಳಿಕ ಹತ್ತಿದ ಏಣಿಯ ಮೆಟ್ಟಿಲನ್ನು ಒಂದೊಂದೇ ಹೆಜ್ಜೆ ಇಳಿದಂತೆ ಸುವೇಂದು ಅಧಿಕಾರಿ ರಾಜೀನಾಮೆ ಪರ್ವಕ್ಕೆ ಚಾಲನೆ ನೀಡಿದರು.
ನವೆಂಬರ್ 26, 2020ರಂದು ಸುವೇಂದು, ಹೂಗ್ಲಿ ನದಿ ಸೇತುವೆ ಆಯೋಗದ (HRBC) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನವೆಂಬರ್ 27, 2020ರಂದು ಪಶ್ಚಿಮ ಬಂಗಾಳ ಸಾರಿಗೆ ಸಚಿವ ಸ್ಥಾನದಿಂದಲೂ ಕೆಳಕ್ಕಿಳಿದರು. ಡಿಸೆಂಬರ್ 16, 2020ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿ, ಪತ್ರವನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ಸ್ಪೀಕರ್ಗೆ ನೀಡಿದರು. ಡಿಸೆಂಬರ್ 21, 2020ರಂದು ಸುವೇಂದು ಅಧಿಕಾರಿ ರಾಜೀನಾಮೆ ಅಂಗೀಕಾರವಾಯ್ತು.
ಡಿಸೆಂಬರ್ 17, 2020ರಂದು ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ ಸುವೇಂದು ಅಧಿಕಾರಿ ಡಿಸೆಂಬರ್ 19, 2020ರಂದು ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.
ಸುವೇಂದುಗೆ ಎದುರಾದದ್ದು ಎರಡು ಮುಖ್ಯ ವಿವಾದಗಳು 2007ರ ಭೂ ತೆರವು ಪ್ರತಿರೋಧದ ಪ್ರಕರಣ ಸುವೇಂದು ಅಧಿಕಾರಿಯ ರಾಜಕೀಯ ಹಾದಿಗೆ ಮೈಲುಗಲ್ಲಾದಂತೆ ಕೊಂಚ ಅಡಚಣೆಯನ್ನೂ ಮಾಡಿಬಿಟ್ಟಿತ್ತು. CPIM ಪಕ್ಷದ ವಿರುದ್ಧ ಹೋರಾಡಲು ಮಾವೋವಾದಿಗಳಿಗೆ ಆಯುಧ ಸರಬರಾಜು ಮಾಡಿದ್ದರು ಎಂಬ ಆರೋಪಕ್ಕೆ ಸುವೇಂದು ಅಧಿಕಾರಿ ಸಿಲುಕಿದ್ದರು. 2014ರ ಶಾರದಾ ಗ್ರೂಪ್ ಹಣಕಾಸು ಹಗರಣಕ್ಕೆ ಸಂಬಂಧಿಸಿಯೂ ಅಧಿಕಾರಿ ಕೇಂದ್ರೀಯ ತನಿಖಾ ದಳದ ವಿಚಾರಣೆ ಎದುರಿಸಿದ್ದರು.
ಸುವೇಂದು ಅಧಿಕಾರಿ ಯಾಕೆ ಮುಖ್ಯರಾಗುತ್ತಾರೆ? ರಾಜಕೀಯ ಹಿನ್ನಲೆಯ ಕುಟುಂಬದ ಕುಡಿ ಸುವೇಂದು ಅಧಿಕಾರಿ. ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಹಾಗೂ ಪಶ್ಚಿಮ ಮೇದಿನಿಪುರ ಜೊತೆಗೆ ನಂದಿಗ್ರಾಮದಲ್ಲಿ ಬಹಳ ಪ್ರಾಬಲ್ಯ ಹೊಂದಿರುವ ರಾಜಕಾರಣಿ. 2009ರ ಬಳಿಕ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ ಗೆಲುವು ಕಂಡವರು. 2007ರಲ್ಲಿ ನಂದಿಗ್ರಾಮದಲ್ಲಿ ಎಡಪಕ್ಷಗಳ ವಿರುದ್ಧ ನಡೆದ ಟಿಎಂಸಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅದೇ ಹೋರಾಟದ ಮೂಲಕ ಮಮತಾ ಬ್ಯಾನರ್ಜಿ ಕೂಡ ರಾಜಕೀಯದಲ್ಲಿ ಪ್ರಬಲರಾದರು. ಮಮತಾ ಸರ್ಕಾರದಲ್ಲಿ ಪ್ರಮುಖ ಹುದ್ದೆ ನಿಭಾಯಿಸಿದ ಅನುಭವ, ಸ್ಥಳೀಯ ಮತದಾರರ ಒಲವು ಸುವೇಂದುಗೆ ಇದೆ. ಯಾರದೇ ಹಂಗಿರದ, ಯಾರ ನೆರಳೂ ಬೇಕಿರದ ಸ್ವಾವಲಂಬಿ ರಾಜಕಾರಣಿಯಾಗಿ ಸುವೇಂದು ಬೆಳೆದಿರುವುದು ಮತ್ತೊಂದು ಮುಖ್ಯಾಂಶ.
ನಂದಿಗ್ರಾಮದಲ್ಲಿ ಮಮತಾ ವಿರುದ್ಧ ಸುವೇಂದು ಮತಬೇಟೆಯಾಡುತ್ತಾರಾ? ಸೊಲುತ್ತಾರಾ? ಪಶ್ಚಿಮ ಬಂಗಾಳದಲ್ಲಿ ಸುವೇಂದು ಮತ್ತು ಬಿಜೆಪಿಯೂ ಗೆದ್ದರೆ ಸುವೇಂದು ಅಧಿಕಾರಿಯೇ ಮುಖ್ಯಮಂತ್ರಿ ಎನ್ನಲಾಗುತ್ತಿದೆ. ಬಿಜೆಪಿ ಸೋತು ಸುವೇಂದು ಅಧಿಕಾರಿ ಗೆದ್ದರೆ, ಸುವೇಂದು ಅಧಿಕಾರಿ ವಿರೋಧ ಪಕ್ಷದ ನಾಯಕರಾಗಬಹುದೇ? ಒಂದು ವೇಳೆ ಬಿಜೆಪಿ ಹಾಗೂ ಸುವೇಂದು ಇಬ್ಬರೂ ಸೋಲುಂಡರೆ ಸುವೇಂದು ಅಧಿಕಾರಿ ಕಥೆ ಏನು? ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಟ್ಟಲು ಸುವೇಂದು ಅಧಿಕಾರಿ ಶ್ರಮಿಸುತ್ತಾರಾ? ಕಾಲವೇ ಉತ್ತರ ಹೇಳಬೇಕು.
ಇದನ್ನೂ ಓದಿ: ದ್ರೋಹಿಗಳನ್ನು ಗುರುತಿಸದ ನಾನು ದೊಡ್ಡ ಕತ್ತೆ: ಸುವೇಂದು ಕುಟುಂಬವನ್ನು ‘ವಂಚಕರು’ ಎಂದ ಮಮತಾ ಬ್ಯಾನರ್ಜಿ
Published On - 9:03 pm, Sun, 21 March 21