CoWin: ಭಾರತೀಯರು ಸಿದ್ಧಪಡಿಸಿದ ಕೊವಿನ್ ಆಪ್ನೆಡೆಗೆ ಜಗತ್ತೇ ಕಣ್ಣರಳಿಸಿ ನೋಡುತ್ತಿರುವುದೇಕೆ ಗೊತ್ತೇ?
ಕೊವಿನ್ ಭಾರತದ ಲಸಿಕೆ ನೀಡುವಿಕೆಗೆ ಹೇಗೆ ಸಹಾಯ ಮಾಡಿತು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಬೇರೆ ದೇಶಗಳಿಗೆ ಅದರ ಅಗತ್ಯವೇನು? ಕೊರೊನಾ ಹೋರಾಟದಲ್ಲಿ ಇದು ಏಕೆ ಬಹಳ ಪ್ರಮುಖವಾದುದು? ಈ ಎಲ್ಲ ಆ ಅಂಶಗಳನ್ನು ವಿವರವಾಗಿ ಇಲ್ಲಿ ನೀಡಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತದಲ್ಲಿ ಲಸಿಕೆಯನ್ನು ನೀಡಲು ಬಳಸುತ್ತಿರುವ ಕೊವಿನ್ ಆಪ್ನ ಕುರಿತು ‘ಕೊವಿನ್’ ಸಮಾವೇಶದಲ್ಲಿ ಹೇಳಿರುವ ಮಾತುಗಳು ಎಲ್ಲರ ಗಮನ ಸೆಳೆದಿತ್ತು. ಭಾರತವು ಕೊವಿನ್ ಸೋರ್ಸ್ ಸಾಫ್ಟ್ವೇರನ್ನು ಓಪನ್ ಸೋರ್ಸ್ ರೂಪದಲ್ಲಿ ಇರಿಸಿದೆ. ಜಗತ್ತಿನ ಅತ್ಯಂತ ಕಷ್ಟದ ದಿನಗಳಲ್ಲಿಯೂ ದೇಶದ ಎಲ್ಲಾ ಅನುಭವ, ಜ್ಞಾನ ಹಾಗೂ ಸಂಪನ್ಮೂಲಗಳನ್ನು ಜಗತ್ತಿಗೆ ಹಂಚುವ ಕೆಲಸ ನಾವು ಮಾಡಿದ್ದೇವೆ. ಕೊವಿನ್ ‘ವಿಶ್ವಭ್ರಾತೃತ್ವ’ದ ಸಂಕೇತ ಎಂದು ಅವರು ಹೇಳಿದ್ದರು. ಇದರೊಂದಿಗೆ ಕೊವಿನ್ ಆಪ್ ಹೇಗೆ ದೇಶದಲ್ಲಿ ಲಸಿಕೆಯನ್ನು ವ್ಯವಸ್ಥಿತವಾಗಿ ನೀಡಲು ಸಹಾಯ ಮಾಡಿದೆ ಎಂದು ಅವರು ವಿವರಿಸಿದ್ದರು.
ಜಗತ್ತಿನ ಅಗತ್ಯ ಇರುವ ದೇಶಗಳಿಗೆ ಈ ತಂತ್ರಜ್ಞಾನವನ್ನು ಬಳಸಲು ಉಪಯೋಗವಂತೆ ಓಪನ್ ಸೋರ್ಸ್ ಆಗಿ ಅದನ್ನು ಭಾರತ ಸಿದ್ಧಪಡಿಸಿದೆ ಎಂದಿದ್ದ ಅವರು, ಆಯಾ ದೇಶದ ಅಗತ್ಯಕ್ಕೆ ತಕ್ಕಂತೆ ಅದನ್ನು ಮಾರ್ಪಾಡನ್ನೂ ಮಾಡಿಕೊಳ್ಳಬಹುದು ಎಂದಿದ್ದರು. ಅದರ ನಂತರ ಈಗ ಎಲ್ಲರ ಗಮನ ಕೊವಿನ್ ಆಪ್ನತ್ತ ಹರಿದಿದೆ. ಅದು ಹೇಗೆ ಭಾರತದ ಲಸಿಕೆ ನೀಡುವಿಕೆಗೆ ಸಹಾಯ ಮಾಡಿತು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಬೇರೆ ದೇಶಗಳಿಗೆ ಅದರ ಅಗತ್ಯವೇನು? ಕೊರೊನಾ ಹೋರಾಟದಲ್ಲಿ ಇದು ಏಕೆ ಬಹಳ ಪ್ರಮುಖವಾದುದು? ಈ ಎಲ್ಲ ಆ ಅಂಶಗಳನ್ನು ವಿವರವಾಗಿ ಇಲ್ಲಿ ನೀಡಲಾಗಿದೆ.
ಏನಿದು ಕೊವಿನ್? ಕೊವಿನ್ ಎಂದರೆ ಕೊವಿಡ್ ವ್ಯಾಕ್ಸೀನ್ ಇಂಟೆಲಿಜೆನ್ಸ್ ವರ್ಕ್. ಭಾರತ ಸರ್ಕಾರವು ಜನವರಿ 2021ರಲ್ಲಿ ಈ ವೇದಿಕೆಯನ್ನು ಸೃಷ್ಟಿಸಿತು. ದೇಶದಲ್ಲಿ ಕರೊನಾ ಲಸಿಕೆಯನ್ನು ವ್ಯವಸ್ಥಿತವಾಗಿ ನೀಡುವ ಯೋಜನೆಯನ್ನು ಕಾರ್ಯಗತಗೊಳಿಸುವ ಮೂಲ ಉದ್ದೇಶವನ್ನು ಈ ಆಪ್ ಹೊಂದಿದೆ. ಅಂದರೆ, ದೇಶದ ಜನರು ಈ ಆಪ್ ಮುಖಾಂತರ ಕೊರೊನಾ ಲಸಿಕೆಯನ್ನು ಕಾಯ್ದಿರಿಸಬಹುದು. ಲಸಿಕೆ ಲಭ್ಯತೆಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ತಿಳಿಯಬಹುದು. ಒಟ್ಟು ದೇಶದಲ್ಲಿ ಎಷ್ಟು ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ತಿಳಿಯಬಹುದು ಹಾಗೂ ಲಸಿಕೆ ಪಡೆದವರು ಇ-ಸರ್ಟಿಫಿಕೇಟನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಇದರೊಂದಿಗೆ ಆರೋಗ್ಯ ಅಧಿಕಾರಿಗಳಿಗೆ ಲಸಿಕೆಯನ್ನು ಸಂಗ್ರಹಿಸಿ ಅದನ್ನು ಅಗತ್ಯವಿರುವೆಡೆ ಸರಬರಾಜು ಮಾಡಲು ಮತ್ತು ಲಸಿಕೆ ಹಂಚಿಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಈ ಆಪ್ ಸಹಾಯ ಮಾಡುತ್ತದೆ.
ಇದರ ವೈಶಿಷ್ಟ್ಯಗಳೇನು? ದೇಶದ ಯಾವುದೋ ಮೂಲೆಯಿಂದ ಸುಲಭವಾಗಿ ಲಸಿಕೆಯನ್ನು ಕಾಯ್ದಿರಿಸುವ ತಂತ್ರಜ್ಞಾನವನ್ನು ಇದು ಹೊಂದಿದೆ. ಮೊದಲಿಗೆ ಕೊವಿನ್ ಬಳಕೆದಾರರು ತಮ್ಮ ಫೋನ್ ನಂಬರ್ ಮೂಲಕ ರಿಜಿಸ್ಟರ್ ಆಗಬೇಕು. ನಂತರ ಅವರ ದೂರವಾಣಿ ಸಂಖ್ಯೆಗೆ ಬರುವ ಒಟಿಪಿಯನ್ನು ಕೊವಿನ್ನಲ್ಲಿ ನಮೂದಿಸಿ, ಲಸಿಕೆಗಾಗಿ ಸ್ಲಾಟ್ ಅನ್ನು ಬುಕ್ ಮಾಡಿದರೆ ಅವರ ಕಾಯ್ದಿರಿಸುವಿಕೆ ಪೂರ್ಣವಾದಂತೆ. ಅತ್ಯಂತ ಸುಲಭವಾಗಿರುವ ಈ ತಂತ್ರಜ್ಞಾನದಿಂದಾಗಿ ವ್ಯವಸ್ಥಿತವಾಗಿ ಲಸಿಕೆ ಪಡೆಯಲು ಸಾಧ್ಯವಾಗುತ್ತದೆ ಎಂಬುದು ಸರ್ಕಾರದ ಯೋಜನೆ. ಹಾಗೆಯೇ ಲಸಿಕೆ ಪಡೆದವರು ಇ-ಸರ್ಟಿಫಿಕೇಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಪಾಸ್ಪೋರ್ಟ್ ವಿವರಗಳನ್ನೂ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ನಲ್ಲಿ ನಮೂದಿಸಲು ಸಾಧ್ಯವಿದೆ. ಇದರಿಂದ ವಿದೇಶ ಪ್ರಯಾಣ ಮಾಡುವವರಿಗೆ ಸಹಾಯವಾಗುತ್ತದೆ.
ಕೊವಿನ್ಗೆ ಆಸಕ್ತಿ ತೋರಿಸಿರುವ ದೇಶಗಳಾವುವು? ಭಾರತ ಸರ್ಕಾರದ ಮಾಹಿತಿಯಂತೆ 50ಕ್ಕೂ ಅಧಿಕ ದೇಶಗಳು ಕೊವಿನ್ ಮೇಲೆ ಆಸಕ್ತಿ ತೋರಿಸಿವೆ. ಇದರಲ್ಲಿ ಕೆನಡಾ, ಮೆಕ್ಸಿಕೊ, ನೈಜೀರಿಯಾ ಮೊದಲಾದ ದೇಶಗಳು ಸೇರಿವೆ.
ಭಾರತ ಈ ದೇಶಗಳಿಗೆ ಏನು ನೀಡುತ್ತದೆ? ಭಾರತ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದಂತೆ ಕೊವಿನ್ ತಂತ್ರಜ್ಞಾನವು ಓಪನ್ ಸೋರ್ಸ್ ಆಗಿದೆ. ಅಂದರೆ ಕೊವಿನ್ ಮೇಲೆ ಭಾರತವು ಯಾವುದೇ ಹಕ್ಕು ಸ್ವಾಮ್ಯವನ್ನು ಸಾಧಿಸುವುದಿಲ್ಲ. ಯಾವ ದೇಶಗಳು ಪಾರದರ್ಶಕ ಮತ್ತು ವ್ಯವಸ್ಥಿತ ಲಸಿಕೆ ವಿತರಣೆಯನ್ನುನಡೆಸಲು ಬಯಸುತ್ತವೆಯೋ ಅವುಗಳಿಗೆ ಕೊವಿನ್ ತಂತ್ರಜ್ಞಾನವನ್ನು ನೀಡಲಾಗುವುದು ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಇದಕ್ಕಾಗಿ ಸರ್ಕಾರವು ಯಾವುದೇ ವಾಣಿಜ್ಯಾತ್ಮಕ ಅಥವಾ ಇತರ ರೂಪದ ಪ್ರತಿಫಲವನ್ನು ಬಯಸುವುದಿಲ್ಲ ಎಂದು ಹೇಳಿದೆ.
ಭಾರತ ಸರ್ಕಾರವು ಕೊವಿನ್ ಆಪ್ನ ಎಪಿಐ(ಅಪ್ಲಿಕೇಶನ್ ಪ್ರೋಗ್ರಾಮ್ ಇಂಟರ್ಫೇಸ್) ಅನ್ನು ಏಪ್ರಿಲ್ನಲ್ಲಿಯೇ ಥರ್ಡ್ ಪಾರ್ಟೀಸ್ ಬಳಸುವಂತೆ ಮಾಡಿದೆ. ಎಪಿಐ ಎಂದರೆ ಎರಡು ಆಪ್ಗಳು ಒಟ್ಟಿಗೆ ಕಾರ್ಯ ನಿರ್ವಹಿಸಲು ಸಾಧ್ಯವಾಗುವ ತಂತ್ರಜ್ಞಾನ. ಎಪಿಐ ಸೇತು ವೆಬ್ಸೈಟ್ನಲ್ಲಿ ಕೊವಿನ್ ತಂತ್ರಜ್ಞಾನದ ಮೆಟಾಡಾಟಾ, ಅಥೆಂಟಿಕೇಶನ್, ಸರ್ಟಿಫಿಕೇಟ್ ಮೊದಲಾದವುಗಳು ಲಭ್ಯವಿದೆ.
ಇದನ್ನೂ ಓದಿ: CoWIN Global Conclave: ವಿಶ್ವಭ್ರಾತೃತ್ವದ ಸಂಕೇತ ಕೊವಿನ್ ಸಾಫ್ಟ್ವೇರ್: ನರೇಂದ್ರ ಮೋದಿ
(Why world is more interested in Indian made Cowin platform?)