ಚೆನ್ನೈ: ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ನರಭಕ್ಷಕ ಹುಲಿಯ ಕಾಟ ಮಿತಿಮೀರಿದೆ. ಕಳೆದ ಕೆಲ ದಿನಗಳಿಂದ ನಾಲ್ವರು ವ್ಯಕ್ತಿಗಳನ್ನು ಹುಲಿ ಕೊಂದು ಹಾಕಿದೆ. 20 ಜಾನುವಾರುಗಳನ್ನು ತಿಂದು ಹಾಕಿದೆ. ಇದರಿಂದಾಗಿ ತಮಿಳುನಾಡಿನ ಪ್ರಧಾನ ಮುಖ್ಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ವಾರ್ಡನ್ ಈ ನರಭಕ್ಷಕ ಹುಲಿಯನ್ನು ಬೇಟೆಯಾಡಿ ಕೊಲ್ಲಲು ಆದೇಶ ಹೊರಡಿಸಿದ್ದಾರೆ. ಆದರೂ, ಅರಣ್ಯ ಇಲಾಖೆಯ ಅಧಿಕಾರಿಗಳು ಸಂಯಮದಿಂದ ಹುಲಿ ಸೆರೆಗೆ ಆದ್ಯತೆ ನೀಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ನರಭಕ್ಷಕ ಹುಲಿಯ ಕಾಟದಿಂದ ಜನರು ಭಯಭೀತರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ನರಭಕ್ಷಕ ಹುಲಿಯೊಂದು ಜನರ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತಿದೆ. ಕಳೆದೊಂದು ವಾರದಿಂದ ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲಲ್ಲಿ ಬೋನುಗಳನ್ನು ಇಟ್ಟು ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗಿದೆ. ಆದರೆ, ಹುಲಿಯನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ.
ಜನರಿಂದ ಹುಲಿಯನ್ನು ಕೊಲ್ಲಬೇಕು ಎಂಬ ಒತ್ತಡ ಹೆಚ್ಚಾಗಿದೆ. ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯುವ ಕಾರ್ಯಾಚರಣೆ ವಿಫಲವಾದ ಬಳಿಕ ಕೊಲ್ಲುವ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ. ಅಂತಿಮವಾಗಿ ತಮಿಳುನಾಡಿನ ಪ್ರಧಾನ ಮುಖ್ಯ ಅರಣ್ಯ, ವನ್ಯಜೀವಿ ಸಂರಕ್ಷಣೆಯ ವಾರ್ಡನ್ ಡಾಕ್ಟರ್ ಶೇಖರ್ ಕುಮಾರ್ ನೀರಜ್ ಹುಲಿಯನ್ನು ಕೊಲ್ಲಲು ಆದೇಶ ಹೊರಡಿಸಿದ್ದಾರೆ. ವನ್ಯಜೀವಿ ಸಂರಕ್ಷಣೆ ಕಾಯಿದೆ 1972ರ ಸೆಕ್ಷನ್ 11(ಎ) ಅಡಿ ಹುಲಿ ಕೊಲ್ಲಲು ಆದೇಶ ಹೊರಡಿಸಲಾಗಿದೆ. ಉದಕಮಂಡಲದ ಮುತ್ತಾಮಲೈ ಟೈಗರ್ ರಿಸರ್ವ್ ನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಫೀಲ್ಡ್ ಡೈರೆಕ್ಟರ್ ತಕ್ಷಣವೇ ಹುಲಿ ಕೊಲ್ಲಲು ಕಾರ್ಯಾಚರಣೆ ನಡೆಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ನರಭಕ್ಷಕ ಹುಲಿಗೆ MDT-23 ಎಂದು ಹೆಸರಿಡಲಾಗಿದೆ. ಹುಲಿ ಬೇಟೆಯ ಸಂಪೂರ್ಣ ಅಪರೇಷನ್ ಅನ್ನು ವಿಡಿಯೋ ರೆಕಾರ್ಡ್ ಮತ್ತು ಪೋಟೋಗ್ರಾಫ್ನಲ್ಲಿ ರೆಕಾರ್ಡ್ ಮಾಡಬೇಕು. ಅಪರೇಷನ್ ಮುಗಿದ ಬಳಿಕ ಅವರ ವಿಸ್ತೃತ ವರದಿಯನ್ನು ತಮಗೆ ಸಲ್ಲಿಸಬೇಕೆಂದು ಪ್ರಧಾನ ಮುಖ್ಯ ಅರಣ್ಯ, ವನ್ಯಜೀವಿ ಸಂರಕ್ಷಣೆಯ ವಾರ್ಡನ್ ಶೇಖರ್ ಕುಮಾರ್ ನೀರಜ್ ಆದೇಶ ಹೊರಡಿಸಿದ್ದಾರೆ.
ಇದರಿಂದಾಗಿ ಈಗ ನೀಲಗಿರಿ ಜಿಲ್ಲೆಯಲ್ಲಿ ನರಭಕ್ಷಕ ಹುಲಿ ಪತ್ತೆಯಾಗಿರುವ ಗುಡಲೂರು ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ತಜ್ಞರ ತಂಡ ಹಾಗೂ ಎಸ್‌ಟಿಎಫ್ ತಂಡ ಹುಲಿ ಬೇಟೆಗೆ ಕಾರ್ಯಾಚರಣೆ ನಡೆಸುತ್ತಿದೆ. ಕಾರ್ಯಾಚರಣೆಗೆ ಕೇರಳದ ಅರಣ್ಯ ಇಲಾಖೆಯ ಅಧಿಕಾರಿಗಳ ನೆರವುನ್ನು ಪಡೆಯಲಾಗಿದೆ. ಸೆಪ್ಟೆಂಬರ್ 24 ರಂದು ನೀಲಗಿರಿ ಜಿಲ್ಲೆಯ ಗುಡಲೂರು ಪ್ರದೇಶದಲ್ಲಿರುವ ದೇವನ್ ಎಸ್ಟೇಟ್ನಲ್ಲಿ ಚಂದ್ರನ್ ಎನ್ನುವವರು ಹುಲ್ಲು ಕತ್ತರಿಸುತ್ತಿದ್ದರು. ಆ ವೇಳೆ ಹುಲಿ ಚಂದ್ರನ್ ಮೇಲೆ ದಾಳಿ ಮಾಡಿದೆ. ತೀವ್ರವಾಗಿ ಗಾಯಗೊಂಡ ಚಂದ್ರನ್ ಅವರನ್ನು ಊಟಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಸ್ಥಳೀಯ ಜನರಿಂದ ಹುಲಿಯನ್ನು ಜೀವಂತ ಸೆರೆ ಹಿಡಿಯಬೇಕು ಇಲ್ಲವೇ ಕೊಲ್ಲಬೇಕು ಎಂಬ ಒತ್ತಡ ಅರಣ್ಯ ಅಧಿಕಾರಿಗಳ ಮೇಲೆ ಉಂಟಾಗಿದೆ.
ಮಾರನೇ ದಿನ ಹುಲಿಯು ಹಸುವಿನ ಮೇಲೆ ದಾಳಿ ಮಾಡಿದೆ. ಇದಾದ ಬಳಿಕ ನೀಲಗಿರಿ ಜಿಲ್ಲಾಧಿಕಾರಿ ದಿವ್ಯಾ, ಜನರು ಮನೆಯಿಂದ ಹೊರಗಡೆ ಬರಬಾರದು, ಮನೆಗೆ ಅಗತ್ಯ ಆಹಾರ ಸಾಮಗ್ರಿ ಪೂರೈಸುವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಗುಡಲೂರು ಪ್ರದೇಶದಲ್ಲಿ ಹುಲಿಯ ಚಲನವಲನದ ಮೇಲೆ ನಿಗಾ ಇಡಲು ಕ್ಯಾಮರಾಗಳನ್ನು ಆಳವಡಿಸಲಾಯಿತು. ಜೊತೆಗೆ ಡ್ರೋಣ್ ಮೂಲಕವೂ ಹುಲಿಯ ಮೇಲೆ ನಿಗಾ ವಹಿಸಲಾಗುತ್ತಿದೆ. ಬೇರೆ ಬೇರೆ ಕಡೆ ಐದು ಬೋನುಗಳನ್ನು ಇಟ್ಟು ಹುಲಿಯನ್ನು ಬೋನಿಗೆ ಬೀಳಿಸುವ ಪ್ರಯತ್ನ ಕೂಡ ನಡೆದಿದೆ. ಶುಕ್ರವಾರ ಮಸೀನಗುಡಿ ಪ್ರದೇಶದಲ್ಲಿ ಸಿಂಗಾರ ಎಂಬ ಮತ್ತೊಬ್ಬ ವ್ಯಕ್ತಿಯನ್ನು ನರಭಕ್ಷಕ ಹುಲಿ ಕೊಂದಿದೆ.
ತಮಿಳುನಾಡು ಅರಣ್ಯ ಇಲಾಖೆಯ ಅಧಿಕಾರಿಗಳ ಮನವಿ ಮೇರೆಗೆ ಕೇರಳ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಹುಲಿ ಬೇಟೆಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ತಮಿಳುನಾಡಿನ ಈರೋಡ್ ಜಿಲ್ಲೆಯ ಅರಣ್ಯಾಧಿಕಾರಿಗಳು ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಆದರೆ, ಹುಲಿಯನ್ನು ಸೆರೆ ಹಿಡಿಯಲು ಮಾತ್ರ ಸಾಧ್ಯವಾಗಿಲ್ಲ. ದೇವನ್ ಎಸ್ಟೇಟ್ ನಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಲೇ ಇದೆ. ದಟ್ಟವಾದ ಕಾಫಿ ಎಸ್ಟೇಟ್ನ ಗಿಡ ಮರಗಳು, ಬೆಟ್ಟಗುಡ್ಡಗಳ ಭೂಪ್ರದೇಶ, ಸ್ಥಳೀಯರಿಂದ ಎದುರಾಗುತ್ತಿರುವ ಅಡ್ಡಿಗಳಿಂದ ಹುಲಿಯನ್ನು ಸೆರೆ ಹಿಡಿಸಲು ಸಾಧ್ಯವಾಗುತ್ತಿಲ್ಲ ಎಂದು ಶೇಖರ್ ಕುಮಾರ್ ನೀರಜ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
2018ರಲ್ಲಿ ಮಹಾರಾಷ್ಟ್ರದಲ್ಲಿ ಅವನಿ ಹುಲಿ ಹತ್ಯೆ
ಮಹಾರಾಷ್ಟ್ರ ರಾಜ್ಯದಲ್ಲೂ ಇದೇ ರೀತಿ ಹುಲಿಯೊಂದು ನರಭಕ್ಷಕವಾಗಿ ಪರಿವರ್ತನೆಯಾಗಿತ್ತು. ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಅವನಿ ಹೆಸರಿನ ಹುಲಿಯನ್ನು 2018ರ ನವಂಬರ್ ನಲ್ಲಿ ಕೊಲ್ಲಲು ಆದೇಶ ನೀಡಲಾಗಿತ್ತು. ಅವನಿ ಹುಲಿಯು 13 ಜನರನ್ನು ಕೊಂದಿತ್ತು. ಕೊನೆಗೆ ಅವನಿ ಹುಲಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಶಾರ್ಪ್ ಶೂಟರ್ ಬೋರತಿ ಗ್ರಾಮದ ಬಳಿ ಕೊಂದು ಹಾಕಿದ್ದರು ಅವನಿ ಹುಲಿಗೆ ಟಿ1 ಎಂದು ಹೆಸರಿಡಲಾಗಿತ್ತು. ಸುಪ್ರೀಂಕೋರ್ಟ್ ಹುಲಿ ಕೊಲ್ಲಲು ಅನುಮತಿ ಕೊಟ್ಟ ಮೂರು ತಿಂಗಳ ಬಳಿಕ ಹುಲಿಯನ್ನು ಕೊಲ್ಲಲಾಗಿತ್ತು. ಅವನಿ ಹುಲಿಯನ್ನು ಕೊಂದಿದ್ದು ವನ್ಯಜೀವಿ ಪ್ರಿಯರಿಂದ ಟೀಕೆಗೂ ಕಾರಣವಾಗಿತ್ತು. ಅವನಿ ಹುಲಿಯನ್ನು ಜೀವಂತ ಸೆರೆ ಹಿಡಿಯಬಹುದಿತ್ತು. ಗುಂಡು ಹಾರಿಸುವ ಬದಲು ಅರವಳಿಕೆ ಗನ್ ಮೂಲಕ ಪ್ರಜ್ಞೆ ತಪ್ಪಿಸುವ ಹಾಗೆ ಮಾಡಬಹುದಿತ್ತು ಎಂದು ವನ್ಯಜೀವಿ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ಹೀಗಾಗಿ ಈಗ ತಮಿಳುನಾಡಿನ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಹುಲಿಯನ್ನು ಕೊಲ್ಲಲು ಒತ್ತಡ ಇದ್ದರೂ, ಹುಲಿ ಕೊಲ್ಲಲು ಆದ್ಯತೆ ನೀಡಿಲ್ಲ. ಬದಲಿಗೆ ಅರವಳಿಕೆ ಇಂಜೆಕ್ಷನ್ ನೀಡುವ ತಜ್ಞರನ್ನು ಮುಂಚೂಣಿಯಲ್ಲಿ ಬಿಟ್ಟು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಪೆಷಲ್ ಟಾಸ್ಕ್ ಪೋರ್ಸ್ ಗೂ ಹುಲಿ ಕಂಡರೆ, ತಕ್ಷಣ ಅದರ ಮೇಲೆ ಗುಂಡು ಹಾರಿಸದಂತೆ ಸೂಚಿಸಲಾಗಿದೆ ಎಂದು ತಮಿಳುನಾಡಿನ ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಹುಲಿ ಬೇಟೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಮಟ್ಟಿಗೆ ಸಂಯಮ ತೋರಿಸುತ್ತಿದ್ದಾರೆ.
ವಿಶೇಷ ವರದಿ: ಎಸ್ ಚಂದ್ರಮೋಹನ್, ನ್ಯಾಷನಲ್ ಬ್ಯೂರೋ ಮುಖ್ಯಸ್ಥರು, ಟಿವಿ9 ಕನ್ನಡ
ಇದನ್ನೂ ಓದಿ: ಬಂಡಿಪುರ ಅರಣ್ಯದಲ್ಲಿ ಹುಲಿ ಕಳೆಬರ ಪತ್ತೆ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಇದನ್ನೂ ಓದಿ: ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಏಕಕಾಲಕ್ಕೆ ತಾಯಿ-ಮಕ್ಕಳ ದರ್ಶನ, ಸಫಾರಿಗೆ ಬಂದವರು ಫುಲ್ ಖುಷ್
Published On - 4:40 pm, Sat, 2 October 21