Zika virus ಕೇರಳದಲ್ಲಿ ಮೊದಲ ಬಾರಿ ಝಿಕಾ ವೈರಸ್ ಪತ್ತೆ : ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲು ನಿರ್ದೇಶನ
ಸಾಮಾನ್ಯವಾಗಿ ಝಿಕಾ ವೈರಸ್ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದಿಲ್ಲ. ರೋಗಿಯು ವಿಶ್ರಾಂತಿ ಪಡೆದರೆ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಗರ್ಭಿಣಿಯರಿಗೆ ಝಿಕಾ ವೈರಸ್ ಸೋಂಕು ತಗುಲಿದರೆ ಹುಟ್ಟುವ ಮಗುವಿಗೆ ಸಮಸ್ಯೆ ತರಬಹುದು
ತಿರುವನಂತಪುರಂ: ಕೇರಳದಲ್ಲಿ ಮೊದಲ ಬಾರಿಗೆಮಹಿಳೆಯೊಬ್ಬರಿಗೆ ಝಿಕಾ ವೈರಸ್ ಸೋಂಕು ತಗುಲಿರುವುದಾಗಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾರಶಾಲಾದ 24 ವರ್ಷದ ಗರ್ಭಿಣಿಯಲ್ಲಿ ಈ ರೋಗ ಪತ್ತೆಯಾಗಿದೆ. ಜೂನ್ 28 ರಂದು ಮಹಿಳೆಯನ್ನು ಜ್ವರ, ತಲೆನೋವು ಮತ್ತು ಕೆಂಪು ಕಲೆಗಳಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ನಡೆದ ಮೊದಲ ಪರೀಕ್ಷೆಯಲ್ಲಿ ಅಲ್ಪ ಪ್ರಮಾಣದ ಧನಾತ್ಮಕ ಅಂಶ ಕಂಡುಬಂದಿದೆ.
ಝಿಕಾ ವೈರಸ್ ಅನ್ನು ಪತ್ತೆಹಚ್ಚಲು ಎನ್ಐವಿ ಅನ್ನು ಬಳಸಬಹುದು. ಮಾದರಿಗಳನ್ನು ಪುಣೆಗೆ ಕಳುಹಿಸಲಾಗಿದೆ. ಅದೇ ಸಮಯದಲ್ಲಿ, ತಿರುವನಂತಪುರಂ ಜಿಲ್ಲೆಯ ಕೆಲವು ಭಾಗಗಳಿಂದ ಕಳುಹಿಸಲಾದ 19 ಮಾದರಿಗಳಲ್ಲಿ 13 ಮಾದರಿಗಳು ಝಿಕಾ ಪಾಸಿಟಿವ್ ಎಂದು ಶಂಕಿಸಲಾಗಿದೆ. ಆದರೆ ಎನ್ಐವಿ ಪುಣೆಯಿಂದ ಯಾವುದೇ ದೃಢೀ ಬಂದಿಲ್ಲ ಎಂದು ಸಚಿವರು ಹೇಳಿದರು.
ಪ್ರಸ್ತುತ,ಯುವತಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ಜುಲೈ 7 ರಂದು ಮಹಿಳೆಗೆ ಹೆರಿಗೆಯಾಗಿದೆ . ಕೇರಳದ ಹೊರಗೆ ಆಕೆ ಪ್ರಯಾಣಿಸಿಲ್ಲ. ಆದರೆ ಅವರ ಮನೆ ತಮಿಳುನಾಡು ಗಡಿಯಲ್ಲಿದೆ. ಒಂದು ವಾರದ ಹಿಂದೆ, ಅವರ ತಾಯಿಗೆ ಇದೇ ರೀತಿಯ ಲಕ್ಷಣಗಳು ಕಂಡುಬಂದವು.
ಝಿಕಾ ವೈರಸ್ ಎಂದು ಗುರುತಿಸಿದಾಗ ಆರೋಗ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡಿತು. ಜಿಲ್ಲಾ ಕಣ್ಗಾವಲು ತಂಡ, ಜಿಲ್ಲಾ ವೆಕ್ಟರ್ ನಿಯಂತ್ರಣ ಘಟಕ ಮತ್ತು ರಾಜ್ಯ ಕೀಟಶಾಸ್ತ್ರ ತಂಡ ಪಾರಶಾಲ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ನಿಯಂತ್ರಣ ಕ್ರಮಗಳನ್ನು ಪ್ರಾರಂಭಿಸಿತು. ಪೀಡಿತ ಪ್ರದೇಶ ಮತ್ತು ಹತ್ತಿರದ ಪ್ರದೇಶಗಳಿಂದ ಸಂಗ್ರಹಿಸಿದ ಎಡಿಸ್ ಸೊಳ್ಳೆಗಳ ಮಾದರಿಗಳನ್ನು ಪಿಸಿಆರ್ ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಪ್ರದೇಶದಲ್ಲಿ ರಕ್ಷಣಾ ಚಟುವಟಿಕೆಗಳನ್ನು ಬಲಪಡಿಸಲಾಗುತ್ತದೆ. ಎಲ್ಲಾ ಜಿಲ್ಲೆಗಳಿಗೆ ಎಚ್ಚರಿಕೆಯಂದಿರುವಂತೆ ನಿರ್ದೇಶನ ನೀಡಲಾಗಿದೆ.
ಝಿಕಾ ಎಂಬುದು ಮುಖ್ಯವಾಗಿ ಈಡಿಸ್ ಸೊಳ್ಳೆಗಳಿಂದ ಹರಡುವ ರೋಗ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಜ್ವರ, ಕೆಂಪು ಕಲೆಗಳು, ಸ್ನಾಯು ನೋವು, ಕೀಲು ನೋವು ಮತ್ತು ತಲೆನೋವು ಮುಖ್ಯ ಲಕ್ಷಣಗಳಾಗಿವೆ. ರೋಗಲಕ್ಷಣಗಳು ಸಾಮಾನ್ಯವಾಗಿ 2 ರಿಂದ 7 ದಿನಗಳವರೆಗೆ ಇರುತ್ತದೆ. ಝಿಕಾ ವೈರಸ್ ಕಾವು ಕಾಲಾವಧಿ 3 ರಿಂದ 14 ದಿನಗಳು. ಝಿಕಾ ವೈರಸ್ ಸೋಂಕಿನ ಹೆಚ್ಚಿನ ಜನರಿಗೆ ಯಾವುದೇ ಲಕ್ಷಣಗಳಿಲ್ಲ. ಸಾವು ಸಂಭವಿಸುವುದು ಅಪರೂಪ.
ಝಿಕಾ ವೈರಸ್ ಮುಖ್ಯವಾಗಿ ಗರ್ಭಿಣಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಸಿಕಾ ವೈರಸ್ ಹುಟ್ಟುವ ಮಕ್ಕಳಲ್ಲಿ ಸಮಸ್ಯೆಗೆ ಕಾರಣವಾಗಬಹುದು. ಗರ್ಭಾವಸ್ಥೆಯಲ್ಲಿ ಮತ್ತು ಗರ್ಭಪಾತದ ಸಮಯದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು.
ಈ ರೋಗ ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಪ್ರಸ್ತುತ ಯಾವುದೇ ಔಷಧಿ ಲಭ್ಯವಿಲ್ಲ. ಪೂರಕ ಚಿಕಿತ್ಸೆಯನ್ನು ನಡೆಸಲಾಗುತ್ತದೆ. ರೋಗಲಕ್ಷಣ ಹೊಂದಿರುವ ಜನರು ಸಾಕಷ್ಟು ವಿಶ್ರಾಂತಿ ಪಡೆಯಬೇಕು ಮತ್ತು ಸಾಕಷ್ಟು ನೀರು ಕುಡಿಯಬೇಕು. ರೋಗಲಕ್ಷಣಗಳು ಹೆಚ್ಚಾದರೆ, ಚಿಕಿತ್ಸೆಯನ್ನು ಪಡೆಯಬೇಕು. ಝಿಕಾ ಪೀಡಿತ ಪ್ರದೇಶದಲ್ಲಿ ರೋಗಲಕ್ಷಣಗಳನ್ನು ಹೊಂದಿರುವ ಗರ್ಭಿಣಿಯರು ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಪಡೆಯಬೇಕು.
ತಡೆಗಟ್ಟುವ ಮುಖ್ಯ ಮಾರ್ಗವೆಂದರೆ ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು. ಹಗಲು ಮತ್ತು ಸಂಜೆ ಸಮಯದಲ್ಲಿ ಸೊಳ್ಳೆ ಕಡಿತದಿಂದ ರಕ್ಷಣೆ ಪಡೆಯುವುದು ಬಹಳ ಮುಖ್ಯ. ಗರ್ಭಿಣಿಯರು, ಗರ್ಭಧಾರಣೆಗೆ ತಯಾರಿ ನಡೆಸುತ್ತಿರುವ ಮಹಿಳೆಯರು, ಮತ್ತು ಚಿಕ್ಕ ಮಕ್ಕಳು ಸೊಳ್ಳೆಗಳಿಂದ ಕಚ್ಚದಂತೆ ಎಚ್ಚರ ವಹಿಸಬೇಕು. ಸೊಳ್ಳೆ ಕಡಿತದಿಂದ ವೈಯಕ್ತಿಕ ರಕ್ಷಣೆ ಪಡೆಯಿರಿ. ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿ ಇಲ್ಲವೇ ಸೊಳ್ಳೆ ಪರದೆ ಹಾಕಿ. ಶಿಶುಗಳು ಮತ್ತು ಗರ್ಭಿಣಿಯರು ಹಗಲಿನಲ್ಲಿ ಅಥವಾ ಸಂಜೆ ಸೊಳ್ಳೆ ಪರದೆಯಡಿಯಲ್ಲಿ ಮಲಗಬೇಕು. ಸೊಳ್ಳೆಗಳ ಮೂಲ ನಾಶಮಾಡವುದು ಮುಖ್ಯ. ಮನೆಗಳು, ಸುತ್ತಮುತ್ತಲಿನ ಪ್ರದೇಶಗಳು ಮತ್ತು ಸಂಸ್ಥೆಗಳನ್ನು ನೀರು ತಂಗಲು ಬಿಡಬಾರದು . ಒಳಾಂಗಣ ಸಸ್ಯಗಳು ಮತ್ತು ರೆಫ್ರಿಜರೇಟರ್ ನೀರನ್ನು ವಾರಕೊಮ್ಮೆ ಸ್ವಚ್ಛಗೊಳಿಸಬೇಕು ಎಂದು ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.
ಇದನ್ನೂ ಓದಿ:ಜುಲೈ 12 ರಿಂದ ಕರ್ನಾಟಕದಿಂದ ಕೇರಳದ ವಿವಿಧ ಭಾಗಗಳಿಗೆ ಕೆಎಸ್ಅರ್ಟಿಸಿ ಬಸ್ ಸಂಚಾರ ಅರಂಭ: ಕೆಎಸ್ಅರ್ಟಿಸಿ
(Zika virus infection confirmed in Kerala for the first time says health minister Veena George)
Published On - 7:25 pm, Thu, 8 July 21