ನಾನು ಬಂಡೆ ಆಗಿರಲಾರೆ, ವಿಧಾನಸೌಧದ ಮೆಟ್ಟಿಲಿನ ಚಪ್ಪಡಿಯಾದರೆ ಸಾಕು- ಡಿಕೆಶಿ

ಬೆಂಗಳೂರು:  ಯಾರು ಏನೇ ತೊಂದರೆ ಮಾಡಲಿ, ಎಷ್ಟೇ ಆಮಿಷ ಕೊಡಲಿ, ನಮ್ಮನ್ನು ಜೈಲಿಗೆ ಹಾಕಲಿ.. ಯಾವುದಕ್ಕೂ ನಾನು ಜಗ್ಗುವುದಿಲ್ಲ. ಕೆಲವರು ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಕರೆಯಲಿ, ಆದರೆ ನಾನು ಬಂಡೆ ಆಗುವುದಕ್ಕೆ ಇಷ್ಟಪಡುವುದಿಲ್ಲ. ಬದಲು ವಿಧಾನಸೌಧದ ಮೆಟ್ಟಿಲಿನ ಚಪ್ಪಡಿಯಾದರೆ ಸಾಕು. ಅದೇ ನನ್ನ ಪಾಲಿಗೆ ಸುದೈವ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ನನ್ನ ಪಾಲಿಗೆ ಇದೊಂದು ಐತಿಹಾಸಿಕ ದಿನ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಅಧಿಕಾರದ ಹಂಬಲ ಇರಲಿಲ್ಲ. ಆದರೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ನಮ್ಮ ಪಕ್ಷದ ನಾಯಕರು ಈ ಜವಾಬ್ದಾರಿ ನೀಡಿದ್ದಾರೆ. ಅವರ ನಂಬಿಕೆ ಹುಸಿಯಾಗದಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.

ಸೋನಿಯಾ ಗಾಂಧಿ ಸ್ಮರಿಸಿದ ಡಿಕೆಶಿ
ಕೆಪಿಸಿಸಿ ಅಧ್ಯಕ್ಷನಾಗಿ ನನ್ನ ಮುಂದೆ ದೊಡ್ಡ ಜವಾಬ್ದಾರಿ ಇದೆ. ಡಿಕೆಶಿ ಕುಟುಂಬ ಏನೂ ತಪ್ಪು ಮಾಡದಿದ್ರೂ ನನ್ನನ್ನು ತಿಹಾರ್ ಜೈಲಿಗೆ ಕಳಿಸಿದ್ದರು. ಜೈಲಿನಲ್ಲಿದ್ದಾಗ ಸೋನಿಯಾಗಾಂಧಿ ಜೈಲಿಗೆ ಬಂದು ನನ್ನನ್ನು ಭೇಟಿಯಾಗಿದ್ದರು. ಆಗ ಸುಮಾರು ಒಂದು ಗಂಟೆ ನನ್ನ ಜತೆ ಚರ್ಚಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಜವಾಬ್ದಾರಿ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಅದರಂತೆ ಇಂದು ನನಗೆ ಆ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಹಂಗಾಮಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಡಿಕೆಶಿ ಸ್ಮರಿಸಿದರು.

ದೇವರಾಜ್‌ ಅರಸ್‌ ಸ್ಮರಿಸಿದ ಡಿಕೆಶಿ
ನನಗೆ ವೈಯಕ್ತಿಕ ನಾಯಕತ್ವದ ಮೇಲೆ ನಂಬಿಕೆ ಇಲ್ಲ. ನಾನು ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದೇನೆ. ‘ಅವಕಾಶಗಳು ಯಾವುದೂ ನಿನಗೆ ಸಿಗುವುದಿಲ್ಲ’. ಅವಕಾಶಗಳನ್ನು ನೀನೇ ಕಲ್ಪಿಸಿಕೊಳ್ಳಬೇಕು ಎಂದು ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಅರಸು ಹೇಳಿದ್ದರು ಎಂದು ಡಿಕೆಶಿ ದಿವಂಗತ ದೇವರಾಜ್‌ ಅರಸು ಅವರನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.

ಮೊದಲು ಕಾರ್ಯಕರ್ತ, ಆಮೇಲೆ ನನಗೆ ಈ ಸ್ಥಾನ 
ನಾನು ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ಹಲವು ನಾಯಕರ ಕೆಳಗೆ ನಾನು ಕೆಲಸ ಮಾಡಿದ್ದೇನೆ. ‘ನಾನು ಮೊದಲು ಕಾರ್ಯಕರ್ತ, ಆಮೇಲೆ ನನಗೆ ಈ ಸ್ಥಾನ’. ನಾನು ನುಡಿದಂತೆ ನಡೆದಿದ್ದೇನೆ ಯಾರಿಗೂ ದ್ರೋಹ ಮಾಡಿಲ್ಲ. ಏನೇ ತಪ್ಪು ಮಾಡಿದ್ದರೂ ಶಿಕ್ಷೆ ಅನುಭವಿಸಲು ಸಿದ್ಧ ಎಂದು ರಾಜ್ಯದ ಜನತೆಯ ಮುಂದೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ ಎಂದು ನೆರೆದಿದ್ದ ಕಾರ್ಯಕರ್ತರಿಗೆ ಶಿವಕುಮಾರ್‌ ಭರವಸೆ ನೀಡಿದರು.

ನಾನು ಅನೇಕ ರಾಜ್ಯಗಳಿಗೆ ಹೋಗಿ ಕೆಲಸ ಮಾಡಿದ್ದೇನೆ. ಪಕ್ಷ ಹೇಳಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಯಾವತ್ತೂ ಪಕ್ಷದ ನಾಯಕತ್ವದ ಮೇಲೆ ಚಕಾರವೆತ್ತಿಲ್ಲ. ಇದು ಪಕ್ಷಕ್ಕಿರುವ ನನ್ನ ಬದ್ಧತೆ. ನನ್ನ ಜೀವ ಇರುವ ವರೆಗೂ ಗಾಂಧಿ ಕುಟುಂಬವನ್ನ ಮರೆಯಲ್ಲ. ನನ್ನ ಕಣಕಣದಲ್ಲೂ ಕಾಂಗ್ರೆಸ್ ಇದೆ ಎಂದು ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾವುಕರಾದರು.

ಕಾರ್ಯಕರ್ತರೇ ಪಕ್ಷದ ಆಧಾರಸ್ತಂಭ
ಕಾರ್ಯಕರ್ತರು, ಜಿಲ್ಲಾಧ್ಯಕ್ಷರೇ ಪಕ್ಷದ ಆಧಾರಸ್ತಂಭ. ಐದು ಬೆರಳು ಸೇರಿದರೆ ಮಾತ್ರ ಕಾಂಗ್ರೆಸ್ ಚಿಹ್ನೆಗೆ ಅರ್ಥ. ಬೂತ್ ಮಟ್ಟದ ಕಾರ್ಯಕರ್ತರಿಗೆ ಶಕ್ತಿಯನ್ನು ತುಂಬಬೇಕು. ಇದು ಕೇರಳ ಮಾಡೆಲ್. ಇದೇ ಕೇರಳ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸುತ್ತೇವೆಂದು ಡಿಕೆಶಿ ಕೆ.ಸಿ.ವೇಣುಗೋಪಾಲ್‌ಗೆ ತಿಳಿಸಿದರು.

ನಾನು ಯಾವುದೇ ವೈಯಕ್ತಿಕ ತೀರ್ಮಾನ ಮಾಡುವುದಿಲ್ಲ. ನನಗೆ ಕಾಂಗ್ರೆಸ್ ಧರ್ಮ, ಕಾಂಗ್ರೆಸ್ ಜಾತಿ ಕಾಂಗ್ರೆಸ್ ಗುಂಪಿನ ಮೇಲೆ ಮಾತ್ರ ನಂಬಿಕೆ ಇದೆ. ಯಾವುದೇ ಗುಂಪು, ಧರ್ಮ, ಜಾತಿ ಮೇಲೆ ನಂಬಿಕೆ ಇಲ್ಲ. ನನಗೆ ಯಾವುದೇ ಹಿಂಬಾಲಕರು ಬೇಡ. ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡಿ ಎಂದು ಕಾರ್ಯಕರ್ತರಿಗೆ ಡಿಕೆಶಿ ಮನವಿ ಮಾಡಿದರು.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ನೆನೆದ ಕನಕಪುರ ಬಂಡೆ
ದೇಶದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಫೌಂಡೇಷನ್ ಹಾಕಿದ್ದೇ ಮಾಜಿ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ. ಇದನ್ನು ಯಾರಿಂದಲೂ ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಡಿಕೆಶಿ ಮಾಜಿ ಪ್ರಧಾನಿಯನ್ನ ಸ್ಮರಿಸಿದರು.

ಕೊರೊನಾ ನಿಯಂತ್ರಣಕ್ಕೆ ನಾವೆಲ್ಲಾ ಪಕ್ಷಭೇದ ಮರೆತು ನಾವು ಸಹಾಯ ಮಾಡಿದೆವು. ಕೊರೊನಾ ಹೆಮ್ಮಾರಿ ಯಾವುದೇ ಜಾತಿಗೆ ಸಂಬಂಧಿಸಿಲ್ಲ. ಸುಮ್ಮನೆ ಯಾವುದೇ ಜಾತಿ ಮೇಲೆ ಹಾಕಿದರೆ ನಾವು ಸುಮ್ಮನಿರಲ್ಲ. ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಶಿವಕುಮಾರ್‌ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯರ ಅನ್ನಭಾಗ್ಯ ಯೋಜನೆ ಹೊಗಳಿದ ಡಿಕೆಶಿ
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಅನ್ನಭಾಗ್ಯ ಯೋಜನೆಯನ್ನ ಕೊಡಬೇಕಾದ್ರೆ ಯಾವುದೇ ಜಾತಿ ನೋಡಿ ಕೊಟ್ಟರಾ? ಎಲ್ಲರೂ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಮಾಜಿ ಮಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನ್ನ ಭಾಗ್ಯ ಯೋಜನೆಯನ್ನ ಕೊಂಡಾಡಿದರು.

ಬಿಜಿಪಿ ಸರ್ಕಾರ ರಾಜ್ಯದಲ್ಲಿ ಒಂದೇ ಒಂದು ಒಂದು ಸರಿಯಾದ ಮಾರ್ಕೆಟ್ ವ್ಯವಸ್ಥೆಯನ್ನ ಕೃಷಿಕನಿಗೆ ಮಾಡಿಲ್ಲ. ಹೀಗಾಗಿ ಪಕ್ಷದ ನಾಯಕರ ಸಲಹೆಯಂತೆ ಕಾಂಗ್ರೆಸ್‌ ಪಕ್ಷದಿಂದ ರಾಜ್ಯದಲ್ಲಿ 100 ಕೋಟಿ ರೂ. ತರಕಾರಿ ಖರೀದಿ ಮಾಡಿ ರಾಜ್ಯದ ಜನತೆಗೆ ವಿತರಿಸಿದೆವು ಎಂದು ಡಿಕೆಶಿ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.

Related Tags:

Related Posts :

Category:

error: Content is protected !!