ಭಾರತ VS ನ್ಯೂಜಿಲೆಂಡ್​: 2ನೇ ಟೆಸ್ಟ್​ನಲ್ಲೂ ವಿರಾಟ್‌ ಪಡೆಗೆ ಮೂವರು ವಿಲನ್ಸ್​!

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ, ಕಿವೀಸ್ ಬೌಲರ್​ಗಳ ಉರಿ ದಾಳಿಗೆ ಕೊಹ್ಲಿ ಸೈನ್ಯ ಪತರಗುಟ್ಟಿ ಹೋಗಿದ್ದು ನಿಮಗೆ ಗೊತ್ತೇ ಇದೆ. ವಿಶ್ವದ ಬಲಾಡ್ಯ ತಂಡಗಳ ಬೌಲರ್​ಗಳನ್ನ ಹುಟ್ಟಡಗಿಸಿದ್ದ ನಂಬರ್ ವನ್ ತಂಡದ ಬ್ಯಾಟ್ಸ್​ಮನ್​ಗಳು, ಕೇನ್ ಬೌಲರ್​ಗಳ ಬೆಂಕಿಯುಂಡೆಯಲ್ಲಿ ಬೆಂದು ಬೆಂಡಾಗಿ ಹೋದ್ರು.

ಕೇವಲ ಒಂದು ಪಂದ್ಯದಲ್ಲಿ ನೀಡಿದ ಕಳಪೆ ಪ್ರದರ್ಶನದಿಂದ ನಮ್ಮ ಸಾಮರ್ಥ್ಯವನ್ನ ಯಾರೂ ಪ್ರಶ್ನಿಸೋ ಹಾಗಿಲ್ಲ ಅಂತಾ ಕ್ಯಾಪ್ಟನ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ ನಿಜ. ಆದ್ರೆ ಎಚ್ಚರಿಕೆ ನೀಡಿದ ಮಾತ್ರಕ್ಕೆ ಕ್ರೈಸ್ಟ್​ಚರ್ಚ್​ನಲ್ಲಿ ನಡೆಯೋ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡೋದು ಸುಲಭದ ಮಾತಲ್ಲ.

ಯಾಕಂದ್ರೆ ಕ್ರೈಸ್ಟ್​ ಚರ್ಚ್​ನಲ್ಲಿ ಭಾರತದ ಬ್ಯಾಟಿಂಗ್ ಬೆನ್ನೆಲುಬನ್ನ ಆ ತ್ರಿವಳಿ ವೇಗಿಗಳು ಸುಲಭವಾಗಿ ಪುಡಿ ಪುಡಿ ಮಾಡೋ ಸಾಮರ್ಥ್ಯ ಹೊಂದಿದ್ದಾರೆ. ಬನ್ನಿ ಹಾಗಾದ್ರೆ ಕ್ರೈಸ್ಟ್​ಚರ್ಚ್​ನಲ್ಲಿ ನಡೆಯೋ 2ನೇ ಟೆಸ್ಟ್ ಪಂದ್ಯದಲ್ಲಿ ಆ ಮೂವರು ವೇಗಿಗಳು, ಕೊಹ್ಲಿ ಸೈನ್ಯಕ್ಕೆ ಹೇಗೆ ವಿಲನ್ ಆಗಿ ಕಾಡ್ತಾರೆ ಅನ್ನೋದನ್ನ ಒಂದೊಂದಾಗೇ ತೋರಿಸ್ತೀವಿ.

ಮೊದಲನೇ ವಿಲನ್ ಟ್ರೆಂಟ್ ಬೌಲ್ಟ್:
ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲೇ ಐದು ವಿಕೆಟ್ ಪಡೆದು ಕೊಹ್ಲಿ ಸೈನ್ಯವನ್ನ ಕಾಡಿರೋ ಟ್ರೆಂಟ್ ಬೌಲ್ಟ್​ನನ್ನ, ಕ್ರೈಸ್ಟ್​ ಚರ್ಚ್​ನಲ್ಲಿ ಹಿಡಿಯೋಕಾಗಲ್ಲ. ಯಾಕಂದ್ರೆ ನ್ಯೂಜಿಲೆಂಡ್ ಕ್ರೈಸ್ಟ್​ಚರ್ಚ್​ನಲ್ಲಿ ಗೆದ್ದಿರೋ ಎಲ್ಲಾ ಪಂದ್ಯಗಳಲ್ಲೂ ಟ್ರೆಂಟ್ ಬೌಲ್ಟ್ ಅದ್ಭುತ ಸ್ಪೆಲ್​ನಿಂದಲೇ ಗೆಲುವಿನ ರಣಕೇಕೆ ಹಾಕಿದೆ. ಕ್ರೈಸ್ಟ್​ಚರ್ಚ್​ನಲ್ಲಿ ಕೇವಲ 6 ಟೆಸ್ಟ್ ಪಂದ್ಯಗಳನ್ನಾಡಿರುವ ಟ್ರೆಂಟ್ ಬೌಲ್ಟ್, ಬರೋಬ್ಬರಿ 37 ವಿಕೆಟ್ ಪಡೆದು ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡಿದ್ದಾನೆ.

 ಎರಡನೇ ವಿಲನ್ ಟಿಮ್ ಸೌಥಿ:
ಕೊಹ್ಲಿ ಪಡೆಗೆ ಬ್ಯಾಡ್ ಲಕ್ ಹೇಗಿದೆ ಅಂದ್ರೆ ಕಳೆದೊಂದು ವರ್ಷದಿಂದ ಕಳಪೆ ಫಾರ್ಮ್​ನಲ್ಲಿದ್ದ ಟಿಮ್ ಸೌಥಿ, ಭಾರತದ ವಿರುದ್ಧವೇ ಫಾರ್ಮ್ ಕಂಡುಕೊಂಡಿದ್ದಾನೆ. ಟ್ರೆಂಟ್ ಬೌಲ್ಟ್​ಗಿಂತ ಪರಾಕ್ರಮ ತೋರಿಸಿದ ಟಿಮ್ ಸೌಥಿ ಮೊದಲ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಪಡೆದು ನಡುಕ ಹುಟ್ಟಿಸಿದ್ದಾನೆ. ಇನ್ನು ಕ್ರೈಸ್ಟ್ ಚರ್ಚ್​ನಲ್ಲೂ ಸೌಥಿ ಎದುರಾಳಿಗಳ ಎದೆ ನಡುಗಿಸೋ ಸಾಧನೆ ಮಾಡಿದ್ದಾನೆ. ಬೌಲ್ಟ್ ಬಳಿಕ ಕ್ರೈಸ್ಟ್​ಚರ್ಚ್​ನಲ್ಲಿ ಅದ್ಭುತ ಸ್ಪೆಲ್ ಮಾಡಿರುವ ಟಿಮ್ ಸೌಥಿ ಆಡಿರೋ 6 ಟೆಸ್ಟ್ ಪಂದ್ಯಗಳಲ್ಲಿ 32 ವಿಕೆಟ್ ಪಡೆದು ಮಿಂಚಿದ್ದಾನೆ.

ಮೂರನೇ ವಿಲನ್ ನೀಲ್ ವ್ಯಾಗ್ನರ್:
2ನೇ ಟೆಸ್ಟ್ ಪಂದ್ಯಕ್ಕೆ ಕೇನ್ ಬತ್ತಳಿಕೆಗೆ ಸೇರ್ಪಡೆಯಾದ ಅಸ್ತ್ರ ಈ ನೀಲ್ ವ್ಯಾಗ್ನರ್.. ಟ್ರೆಂಟ್ ಬೌಲ್ಟ್​ನಂತೆ ಕ್ಯಾಪ್ಟನ್ ಕೊಹ್ಲಿಗೆ ವಿಲನ್ ಆಗಿರೋ ವ್ಯಾಗ್ನರ್, ಕ್ರೈಸ್ಟ್​ಚರ್ಚ್ ಮೈದಾನದಲ್ಲಿ ಮೆರದಾಡಿರೋ ಸಾಧಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾನೆ. ಕ್ರೈಸ್ಟ್​ಚರ್ಚ್​ನಲ್ಲಿ ಬೌಲ್ಟ್ ಮತ್ತು ಸೌಥಿಯಷ್ಟೇ ಟೆಸ್ಟ್ ಪಂದ್ಯಗಳನ್ನಾಡಿರುವ ನೀಲ್ ವ್ಯಾಗ್ನರ್ 23 ವಿಕೆಟ್ ಕಬಳಿಸಿದ್ದಾನೆ.

ನೋಡಿದ್ರಲ್ಲ.. ಕ್ರೈಸ್ಟ್​ಚರ್ಚ್ ಮೈದಾನದಲ್ಲಿ ಈ ತ್ರಿವಳಿ ವೇಗಿಗಳ ಆರ್ಭಟ ಹೇಗಿದೆ ಅಂತ. ಅದ್ರಲ್ಲೂ ಕಿವೀಸ್ ವೇಗದ ವಿಭಾಗಕ್ಕೆ ಈಗ ನೀಲ್ ವ್ಯಾಗ್ನರ್ ಕೂಡ ಎಂಟ್ರಿ ಕೊಟ್ಟಿರೋದು, ಮತ್ತಷ್ಟು ಸ್ಟ್ರಾಂಗ್ ಆಗುವಂತೆ ಮಾಡಿದೆ.

ಇನ್ನು ಕ್ರೈಸ್ಟ್​ಚರ್ಚ್​ನಲ್ಲಿ ನ್ಯೂಜಿಲೆಂಡ್ ತಂಡದ ಸಾಧನೆಯನ್ನ ನೋಡೋದಾದ್ರೆ, ಆಡಿರೋ ಆರು ಟೆಸ್ಟ್ ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಮುಗ್ಗರಿಸಿದೆ. ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ ಈ ಮೂವರು ವೇಗಿಗಳ ನೆರವಿನಿಂದ ಕೇನ್ ಪಡೆ, 2016ರಿಂದ ಈ ಮೈದಾನದಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಹೀಗಾಗಿ ಕ್ಯಾಪ್ಟನ್ ಕೊಹ್ಲಿ ನಂಬರ್ ವನ್ ಪಟ್ಟದ ಘನತೆಯನ್ನ ಕಿವೀಸ್ ನೆಲದಲ್ಲಿ ಕಾಪಾಡಿಕೊಳ್ಳಬೇಕು ಅಂದ್ರೆ, ನಿರೀಕ್ಷೆಗೂ ಮೀರಿದ ರಣತಂತ್ರವನ್ನ ಹೆಣೆಯಬೇಕು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!