ಕೈ ಬೀಸಿ ಕರೆಯುತಿದೆ ಸೀಗೆಗುಡ್ಡ, ಆದ್ರೆ ಸುಂದರ ತಾಣದಲ್ಲಿ ರಸ್ತೆಯೇ ಇಲ್ಲ!

ಹಾಸನ: ಅದು ಸುಂದರ ಪ್ರವಾಸಿ ತಾಣ, ಬಯಲು ಸೀಮೆಯಲ್ಲಿದ್ರೂ ಮಲೆನಾಡಿನ ಅಂದವನ್ನೂ ನಾಚಿಸೋ ಇಲ್ಲಿನ ಸೊಬಗು, ನಿಸರ್ಗ ಸಿರಿಗೆ ಮನಸೋಲದವರೂ ಇಲ್ಲಾ… ಆದ್ರೆ, ಈ ಪ್ರಕೃತಿ ಸೊಬಗಿನ ತಾಣಕ್ಕೆ ಹೋಗಲು ಹಲವು ತೊಡಕುಗಳು ಎದುರಾಗಿರೋದು ಪ್ರವಾಸಿಗರನ್ನ ಹೈರಾಣಾಗಿಸಿದೆ..

ಕಣ್ಣು ಹಾಯಿಸಿದಷ್ಟೂ ದೂರ ಹಚ್ಚ ಹಸಿರು.. ಮುಗಿಲು ಚುಂಬಿಸೋ ಬೆಳ್ಳಿ ಬೆಟ್ಟಗಳ ಸಾಲು.. ಬೆಟ್ಟದ ಮೇಲಿಂದ ಕೆಳಗೆ ಕಾಣೋ ಕೆರೆ ಕಟ್ಟೆ.. ಹೊಲ ಗದ್ದೆಗಳ ಮನೋಹರ ದೃಶ್ಯ.. ಹೌದು, ನೋಡಿದ ಕೂಡಲೇ ಥಟ್ಟನೆ ಹೇಳಬಹುದು ಇದು ಪ್ರಕೃತಿ ಸೊಬಗಿನ ತಾಣಾ ಅಂತಾ… ಹೌದು, ನಿಸರ್ಗ ಸಿರಿಯ ನಾಡು ಇರೋದು ಹಾಸನದ ಹಳೆಬೀಡು ರಸ್ತೆಯ ಸೀಗೆ ಗ್ರಾಮದಲ್ಲಿ ಸೀಗೆ ಗುಡ್ಡ..

ಮಲೆನಾಡಿನ ಅಂದವನ್ನೂ ನಾಚಿಸೋ ಈ ಪ್ರವಾಸಿ ತಾಣಕ್ಕೆ ನಿತ್ಯವೂ ನೂರಾರು ಪ್ರವಾಸಿಗರು ಲಗ್ಗೆ ಹಿಡ್ತಾರೆ. ಚಾರಣಕ್ಕೆ ಹೇಳಿ ಮಾಡಿಸಿದಂತಿರೋ ಈ ಹಸಿರು ಕಾನನದ ನಡುವಿನ ಮುಗಿಲು ಚುಂಬಿಸೋ ಬೆಟ್ಟಗಳ ಸಾಲಿನ ಅಂದ ಸವಿಯೋಕೆ ಬಂದ್ರೆ ವಾಪಸ್ ಹೋಗೋಕೇ ಮನಸ್ಸೇ ಬರಲ್ಲಾ. ನೋಡಿದಷ್ಟೂ ನೋಡಬೇಕೆನಿಸೋ ಇಲ್ಲಿಗೆ ಬರೋಕೆ ರಸ್ತೆಯಿಲ್ಲ ಅನ್ನೋದೇ ಜನರ ಕೊರಗು.

ಬೆಟ್ಟದ ಮೇಲೆ ನೆಲೆಸಿರೋ ಮಳೆ ಮಲ್ಲೇಶ್ವರನ ಸನ್ನಿಧಿಗೆ ಪ್ರತೀ ತಿಂಗಳ ಹುಣ್ಣಿಮೆಯಂದು ನಾಲ್ಕೈದು ಸಾವಿರದಷ್ಟು ಭಕ್ತರು ಬರ್ತಾರೆ. ಎಲೆಕ್ಷನ್ ವೇಳೆ ರಾಜಕಾರಣಿಗಳು ಹತ್ತಡಿ ಅಗಲದ ರಸ್ತೆಯಾಗಿಸಿದ್ರು. ಬಳಿಕ ಇಡಿ ಸುಝಲಾನ್ ಕಂಪನಿಗೆ ಗಾಳಿ ವಿದ್ಯುತ್ ತಯಾರಿಕೆಗಾಗಿ ಗುತ್ತಿಗೆ ನೀಡಿದಾಗ, ಅಲ್ಲಿ 30 ಅಡಿ ಅಗಲದ ರಸ್ತೆ ಮಾಡಲಾಗಿದೆ.

ಈಗ ಸರ್ಕಾರದಿಂದ ಮೂರುವರೆ ಕೋಟಿ ಹಣ ಬಿಡುಗಡೆಯಾಗಿದ್ರೂ, ಉತ್ತಮ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಡ್ಡಿಯಾಗಿದೆ. ಒಟ್ನಲ್ಲಿ ಪ್ರವಾಸೋದ್ಯಮ ಬೆಳೆಸಬೇಕು, ಅದರ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ನೀಡೋ ಜೊತೆಗೆ ಜನರಿಗೆ ಪ್ರಕೃತಿ ಬಗ್ಗೆ ಆಸಕ್ತಿ ಮೂಡಿಸಿ ಪರಿಸರ ಉಳಿವಿಗೆ ಯತ್ನಿಸಬೇಕಿದೆ. ಆದ್ರೆ, ಅಧಿಕಾರಿಗಳ ದ್ವಂದ್ವ ನಿಲುವು ಪ್ರವಾಸೋದ್ಯಮ ಹಿನ್ನಡೆಗೆ ಕಾರಣವಾಗ್ತಿರೋದು ನಿಜಕ್ಕೂ ದುರಂತ.

Related Tags:

Related Posts :

Category:

error: Content is protected !!