ಕೋಟಿ ಕೋಟಿ ಸುರಿದ್ರೂ ಸ್ಮಾರ್ಟ್ ಆಗದ ‘ಬೆಣ್ಣೆ ನಗರಿ’!

ದಾವಣಗೆರೆ: ಎಲ್ಲಾ ಅಂದುಕೊಂಡಂತೆ ನಡೆದಿದ್ರೆ ಮಧ್ಯ ಕರ್ನಾಟಕದ ಜನರಿಗೆ ಆ ನಗರ ಎಲ್ಲಾ ಸೌಕರ್ಯಗಳನ್ನ ಒದಗಿಸಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರ ಎಡವಟ್ಟಿನಿಂದ ಪರಿಸ್ಥಿತಿ ಬೇರೆಯದ್ದೇ ರೂಪ ಪಡೆದಿದೆ. ಕೋಟಿ ಕೋಟಿ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.

ಸುಂದರವಾಗಿರೋ ಸಿಮೆಂಟ್ ರಸ್ತೆ ಅಗೆಯುತ್ತಿರೋ ಯಂತ್ರಗಳು. ಇನ್ನೊಂದ್ಕಡೆ ಸಂಚರಿಸಲು ಪರದಾಡ್ತಿರೋ ಸವಾರರು. ಅಂದಹಾಗೆ ಎಲ್ಲಾ ಅಂದುಕೊಂಡಂತೆ ನಡೆದಿದ್ರೆ ಇವತ್ತು ಈ ನಗರ ಸ್ಮಾರ್ಟ್ ಸಿಟಿ ಆಗಿರಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಎಡವಟ್ಟಿನಿಂದಾಗಿ ಜನ ಹೀಗೆ ಪರದಾಡುವಂತಾಗಿದೆ.

ಕೋಟಿ ಕೋಟಿ ಖರ್ಚು ಮಾಡಿದ್ದ ರಸ್ತೆ ಉಡೀಸ್!
ಹೌದು ದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಬಂದಾಗ ರಾಜ್ಯದಿಂದ ಆಯ್ಕೆಯಾದ ಕೆಲವೇ ನಗರಗಳ ಪೈಕಿ ದಾವಣಗೆರೆ ಕೂಡ ಒಂದು. ನಗರವನ್ನ ಹೈಟೆಕ್ ಸಿಟಿಯಾಗಿ ರೂಪುಗೊಳಿಸಲು ಯೋಜನೆ ಸಿದ್ಧವಾಗಿತ್ತು. ಆದರೆ ಗುತ್ತಿಗೆದಾರರ ಎಡವಟ್ಟಿನಿಂದ ಇವತ್ತು ಬೆಣ್ಣೆ ನಗರಿಯ ನಿವಾಸಿಗಳು ನರಳಾಡುವಂತಾಗಿದೆ. ಕೋಟ್ಯಂತರ ರೂಪಾಯಿ‌ ಖರ್ಚು ಮಾಡಿ ನಿರ್ಮಿಸಿದ್ದ ಸಿಮೆಂಟ್ ರಸ್ತೆಗಳನ್ನ ಕಿತ್ತು ಚರಂಡಿ ನಿರ್ಮಿಸ್ತಿದ್ದಾರೆ. ಹೀಗಾಗಿ ದಾವಣಗೆರೆಯ ಪ್ರಮುಖ ರಸ್ತೆಗಳೆಲ್ಲಾ ಗುಂಡಿಮಯವಾಗಿದ್ದು, ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ.

ಪಿ.ಬಿ.ರಸ್ತೆ ಸೇರಿದಂತೆ ಹಲವೆಡೆ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಕೆ-ಶಿಪ್ ಯೋಜನೆ ರೂಪುಗೊಂಡಿತ್ತು. ಆದ್ರೆ ಕಾಮಗಾರಿ ಸರಿಯಾಗಿ ನಡೆಯದೆ ನೀರು ಹೋಗಲು ನಿರ್ಮಿಸಿದ್ದ ಒಳಚರಂಡಿ ವ್ಯವಸ್ಥೆಯನ್ನೇ ಹಾಳು ಮಾಡಿದ್ರಿಂದ ಸಾಕಷ್ಟು ಸಮಸ್ಯೆಯಾಗಿತ್ತು. ಹೀಗಾಗಿ ಚರಂಡಿ ವ್ಯವಸ್ಥೆ ಸರಿಪಡಿಸಲು ರಸ್ತೆ ಅಗೆಯಲಾಗಿದೆ. ಇನ್ನು ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿರೋ ಗುತ್ತಿಗೆ ಪಡೆದಿದ್ದ ಕಂಪನಿಗೆ ಲಕ್ಷ ಲಕ್ಷ ದಂಡವನ್ನೂ ವಿಧಿಸಲಾಗಿದೆಯಂತೆ.

ಒಟ್ನಲ್ಲಿ ಯಾರೋ ಮಾಡಿದ ತಪ್ಪಿನಿಂದ ಸವಾರರು ಪರದಾಡುವಂತಾಗಿದೆ. ತೆರಿಗೆ ಹಣ ಸುರಿದು ನಿರ್ಮಾಣ ಮಾಡಿದ್ದ ರಸ್ತೆಗಳನ್ನ ಅನಿವಾರ್ಯವಾಗಿ ಕಿತ್ತುಹಾಕಲಾಗ್ತಿದೆ. ಇನ್ನು ಮುಂದೆಯಾದ್ರು ಕಾಮಾಗಾರಿ ಕೈಗೊಳ್ಳುವ ಮುನ್ನ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಒಂದಷ್ಟು ಹಿಂದು-ಮುಂದು ನೋಡುವುದು ಒಳಿತು.
Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!