ಒಡನಾಡಿಯ ನೆನಪು | ಬದುಕಿನ ಹಾದಿಯಲ್ಲಿ ಪ್ರೀತಿ-ವಿಶ್ವಾಸ ಕಾಣಿಸಿದ ಗುರು

ಸಮಾಜಕ್ಕೆ ನಾವು ಏನು ಕೊಡುಗೆ ಕೊಡಬಹುದು? ಅಶಕ್ತರಿಗೆ ಹೇಗೆಲ್ಲಾ ಸಹಾಯ ಮಾಡಬಹುದು.. ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸ್ವಾಮಿಗಳು ನಮಗೆ ಹೇಳಿಕೊಡದ ವಿದ್ಯೆಯಿಲ್ಲ. ಎಲ್ಲಾ ಬಗೆಯ ಒಳ್ಳೆಯ ವಿಚಾರಗಳನ್ನೂ ಮನಸ್ಸಿಗೆ ತುಂಬಿದ್ದಾರೆ.

  • TV9 Web Team
  • Published On - 21:42 PM, 12 Jan 2021
ಎಲ್ಲ ವಯೋಮಾನದವರನ್ನೂ ಆಪ್ತವಾಗಿ ಕಾಣುತ್ತಿದ್ದ ಹರ್ಷಾನಂದರು. (ಚಿತ್ರಕೃಪೆ: twitter.com/kiranks)

ರಾಮಕೃಷ್ಣ ಮಠದ ಸ್ವಾಮಿ ಹರ್ಷಾನಂದ (91) ವರ್ಷ ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರನ್ನು ಅತಿ ಸನಿಹದಿಂದ ಬಲ್ಲ ಬಸವನಗುಡಿಯ ರಾಮಕೃಷ್ಣ ಮಠದ ಸ್ವಯಂ ಸೇವಕರೊಬ್ಬರು ಸ್ವಾಮಿಗಳು ದಿನಿತ್ಯದ ಬದುಕಿನಲ್ಲಿ ಹೇಗಿರುತ್ತಿದ್ದರು? ಅವರು ಹೇಗೆ ತಮ್ಮ ಒಡನಾಡಿಗಳೊಂದಿಗೆ ವ್ಯವಹರಿಸುತ್ತಿದ್ದರು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸ್ವಾಮಿಗಳಿಗೂ ನನಗೂ ಸುಮಾರು 30 ವರ್ಷಗಳ ಒಡನಾಟವಿದೆ. ಅವರು ಒಂದು ಅರ್ಥಪೂರ್ಣ ಬದುಕಿಗೆ ಬೇಕಾದ ಎಲ್ಲಾ ವಿಷಯಗಳನ್ನೂ ಕಲಿಸಿದ್ದಾರೆ. ಹೇಗಿರಬೇಕು? ಏನು ಹವ್ಯಾಸ ಬೆಳೆಸಿಕೊಳ್ಳಬೇಕು? ಕಷ್ಟಗಳನ್ನು ಹೇಗೆ ಸುಲಭವಾಗಿ ಪರಿಹರಿಸಿಕೊಳ್ಳಬಹುದು? ಸಮಾಜಕ್ಕೆ ನಾವು ಏನು ಕೊಡುಗೆ ಕೊಡಬಹುದು? ಅಶಕ್ತರಿಗೆ ಹೇಗೆಲ್ಲಾ ಸಹಾಯ ಮಾಡಬಹುದು.. ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸ್ವಾಮಿಗಳು ನಮಗೆ ಹೇಳಿಕೊಡದ ವಿದ್ಯೆಯಿಲ್ಲ. ಎಲ್ಲಾ ಬಗೆಯ ಒಳ್ಳೆಯ ವಿಚಾರಗಳನ್ನೂ ಮನಸ್ಸಿಗೆ ತುಂಬಿದ್ದಾರೆ.

ಪ್ರಾರ್ಥನೆ ಎನ್ನುವುದು ದೈನಂದಿನ ಬದುಕಿನಲ್ಲಿ ಎಷ್ಟು ಮುಖ್ಯ ಎನ್ನುವುದನ್ನು ಕಲಿಸಿಕೊಟ್ಟಿದ್ದಾರೆ. ವಿಷ್ಣು ಸಹಸ್ರನಾಮದ ಪ್ರಾಮುಖ್ಯತೆಯನ್ನು ಹೆಳಿಕೊಟ್ಟಿದ್ದಾರೆ. ಮಕ್ಕಳಿಗೆ ಓದು, ಬರಹಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಉತ್ತೇಜಿಸುತ್ತಿದ್ದರು. ತಾಯ್ನಾಡಿಗಾಗಿ ಸೇವೆ ಸಲ್ಲಿಸುವಂತೆ ಕರೆ ನೀಡುತ್ತಿದ್ದರು. ರಾಮಕೃಷ್ಣರ ತತ್ವಗಳು, ವಿವೇಕಾನಂದರ ಚಿಂತನೆಗಳು, ದಾರ್ಶನಿಕರ ಮಾತುಗಳು ಎಲ್ಲವನ್ನೂ ಧಾರೆ ಎರೆದ ಮಹನೀಯರು.

ಸ್ವಾಮಿಗಳು ನಮಗೆ ಪ್ರೀತಿ, ವಿಶ್ವಾಸದ ಮೂಲಕ ಬದುಕನ್ನು ಸಾಗಿಸುವುದನ್ನು ಕಲಿಸಿಕೊಟ್ಟಿದ್ದಾರೆ. ಅದರಿಂದಾಗಿಯೇ ನಮಗೆ ಮಠದೊಂದಿಗೆ ಒಡನಾಟ ಬೆಳೆದಿದೆ. ಅವರು ನಮ್ಮ ವೈಯಕ್ತಿಕ ಬದುಕಿನ ಬಗ್ಗೆಯೂ ಕಾಳಜಿ ತೋರುತ್ತಿದ್ದರು. ವೃತ್ತಿ ಬದುಕಿನ ಬಗ್ಗೆ, ಅಲ್ಲಿ ಆಗುವ ಏರಿಳಿತಗಳ ಬಗ್ಗೆ ಅವರು ಅತ್ಯಂತ ಮುಕ್ತವಾಗಿ ಮಾತನಾಡುತ್ತಿದ್ದರು. ಬದುಕಿನಲ್ಲಿ ಎಂತಹದ್ದೇ ಕಷ್ಟ ಬಂದರೂ ನಿಮ್ಮ ವೈಯಕ್ತಿಕ ತತ್ವಗಳಿಗೆ ವಿರೋಧವಾಗಿ ಏನನ್ನೂ ಮಾಡಬೇಡಿ. ಅಂತಹ ಪರಿಸ್ಥಿತಿಗಳಲ್ಲಿ ಗಟ್ಟಿಧ್ವನಿ ಎತ್ತುವುದನ್ನು ಅಭ್ಯಸಿಸಿಕೊಳ್ಳಿ ಎಂದು ಹೇಳುತ್ತಿದ್ದರು.

ಸ್ವಾಮಿಗಳು ಸಾಮಾನ್ಯವಾಗಿ ಜಾಸ್ತಿ ಮಾತನಾಡುತ್ತಿರಲಿಲ್ಲ. ಆದರೆ, ಅವರು ಆಡುತ್ತಿದ್ದ ಪ್ರತಿ ಮಾತು ಕೂಡ ಅಳೆದು, ತೂಗಿ ಆಡುವಂತಹದ್ದಾಗಿರುತ್ತಿತ್ತು. ಅವರ ಮಾತು ತುಂಬಾ ತೂಕವಾಗಿದ್ದು, ಮನಸ್ಸಿಗೆ ನಾಟುವಂತೆ ಇರುತ್ತಿದ್ದವು. ವಿಶೇಷವೆಂದರೆ ಗಂಭೀರ ವಿಚಾರಗಳನ್ನೂ ಸರಳವಾಗಿ ಹೇಳುತ್ತಿದ್ದ ಅವರು ತಮ್ಮ ಪ್ರತಿ ಮಾತುಗಳನ್ನೂ ಕಥೆ, ದೃಷ್ಟಾಂತಗಳ ಮೂಲಕ ವಿವರಿಸಿ ಚಿಕ್ಕಮಕ್ಕಳನ್ನೂ ತಲುಪುವ ವಿಶಿಷ್ಟತೆ ಹೊಂದಿದ್ದರು.

(ನಿರೂಪಣೆ: ಸ್ಕಂದ)

ವಿವೇಕಾನಂದರ ಜನ್ಮ ದಿನವಾದ ಇಂದೇ ಇಹಲೋಕ ತ್ಯಜಿಸಿದ ಸ್ವಾಮಿ ಹರ್ಷಾನಂದ

ನಿತ್ಯ ಬಳಸುವ ಪದಗಳಿಗೆ ಭಾವ-ಜೀವ ತುಂಬಿದ್ದ ಅಪರೂಪದ ಅಧ್ಯಾತ್ಮ ಸಾಧಕ ಸ್ವಾಮಿ ಹರ್ಷಾನಂದ ಮಹಾರಾಜ್

ಸ್ವಾಮಿ ಹರ್ಷಾನಂದರ ನೆನಪು | ಸದಾ ಪ್ರೋತ್ಸಾಹ, ಸ್ಫೂರ್ತಿ ನೀಡುತ್ತಿದ್ದ ಹಿರಿಯ ಸೋದರ

ಸ್ವಾಮಿ ಹರ್ಷಾನಂದರ ಸ್ಮರಣೆ | ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಎಂಬಂತಿದ್ದರು ಗುರುಗಳು

ಸ್ವಾಮಿ ಹರ್ಷಾನಂದರ ಸ್ಮರಣೆ | ಮಗುವಿನಂತೆ ಕರೆಯುತ್ತಿದ್ದ ಮಹಾನ್​ ವ್ಯಕ್ತಿ, ಸಕಲರನ್ನೂ ಗೌರವಿಸುತ್ತಿದ್ದ ಸ್ವಾಮೀಜಿ