ಕುಮಾರಸ್ವಾಮಿ ಇಲ್ಲದ ಈ ಬಾರಿಯ ವಿಧಾನಮಂಡಲ ಅಧಿವೇಶನ ವಿಪಕ್ಷ ಪಾಳಯದಲ್ಲಿ ಶೂನ್ಯ ಅವಧಿ

ಮಾಜಿ ಮುಂಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದಾರೆ. ಆದರೆ ವಿಧಾನ ಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಬಲವಾಗಿ ಟಕ್ಕರ್​ ಕೊಡುವರು ಯಾರು ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಈ ಪ್ರಶ್ನೆ ಉದ್ಭವಿಸಲು ಕಾರಣವೇನು? ಈ ಲೇಖನ ಓದಿ

ಕುಮಾರಸ್ವಾಮಿ ಇಲ್ಲದ ಈ ಬಾರಿಯ ವಿಧಾನಮಂಡಲ ಅಧಿವೇಶನ ವಿಪಕ್ಷ ಪಾಳಯದಲ್ಲಿ ಶೂನ್ಯ ಅವಧಿ
ಹೆಚ್​ಡಿ ಕುಮಾರಸ್ವಾಮಿ
Follow us
ವಿವೇಕ ಬಿರಾದಾರ
| Updated By: ಡಾ. ಭಾಸ್ಕರ ಹೆಗಡೆ

Updated on:Jul 15, 2024 | 1:30 PM

ವಿಧಾನ ಮಂಡಲ ಅಧಿವೇಶನ ಸೋಮವಾರ ಆರಂಭವಾಗುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಮತ್ತು ಇ.ತುಕಾರಾಂ ಮೂವರು ಶಾಸಕರು ಲೋಕಸಭೆ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ವಿಧಾನಸಭೆಯ ಕಾರ್ಯ ಕಲಾಪಗಳಿಗೆ ಅವರ ಕೊಡುಗೆಯನ್ನು ಅದರಲ್ಲೂ ವಿಶೇಷವಾಗಿ ಹೆಚ್.ಡಿ.ಕುಮಾರಸ್ವಾಮಿಯವರ ಸಾಧನೆಯನ್ನು ಹಲವು ಶಾಸಕರು ನೆನಪಿಸಿಕೊಳ್ಳುತ್ತಿದ್ದಾರೆ. ಭಾರೀ ಜನ ಬೆಂಬಲದೊಂದಿಗೆ 135 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಇಂತಹ ಸುಭದ್ರ ಸರ್ಕಾರವನ್ನು ಮತ್ತು ಬಲಾಢ್ಯ ಮುಖ್ಯಮಂತ್ರಿಯನ್ನು ಎದುರಿಸುವುದು ವಿರೋಧ ಪಕ್ಷಗಳಿಗೆ ಸುಲಭವಲ್ಲ.

ಚುನಾವಣೆಯಲ್ಲಿ ಸೋತಿದ್ದ ಬಿಜೆಪಿಯವರಿಗೆ ತಕ್ಷಣ ಅಧಿಕಾರದ ಗುಂಗಿನಿಂದ ಹೊರಗೆ ಬಂದು ವಿರೋಧ ಪಕ್ಷಗಳ ಸಾಲಿನಿಂದ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಗುಣವನ್ನು ರೂಢಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಬೇಕಿತ್ತು. ಆದರೆ, ಇಂತಹ ಸಮಸ್ಯೆ ಮೂರೂವರೆ ವರ್ಷಗಳಿಂದ ವಿರೋಧ ಪಕ್ಷದ ಸಾಲಿನಲ್ಲಿಯೇ ಇದ್ದ ಜೆಡಿಎಸ್ ಪಕ್ಷಕ್ಕೆ ಎದುರಾಗಲಿಲ್ಲ. ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕೇವಲ 19 ಸೀಟುಗಳನ್ನು ಗೆದ್ದಿದ್ದರೂ ತಕ್ಷಣ ಸಾವರಿಸಿಕೊಂಡು ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಆರಂಭದಿಂದಲೇ ದಾಳಿಯನ್ನು ಆರಂಭಿಸಿದರು.

ಬಿಜೆಪಿ ಆರಂಭದಲ್ಲಿ ವಿರೋಧ ಪಕ್ಷದ ನಾಯಕನನ್ನೂ ನೇಮಕ ಮಾಡಲಿಲ್ಲ. ಕುಮಾರಸ್ವಾಮಿಯವರ ಪ್ರಬಲ ಹೋರಾಟವನ್ನು ಗಮನಿಸಿದ ಕೆಲವು ಜನರು ಒಂದು ಹಂತದಲ್ಲಿ ಅವರೇ ವಿರೋಧ ಪಕ್ಷದ ನಾಯಕರು ಎಂದು ಭಾವಿಸಿದ್ದೂ ಉಂಟು. ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ ಆರಂಭವಾದಾಗ, ಅದು ಕಾರ್ಯ ಸಾಧ್ಯವಲ್ಲದಿದ್ದರೂ, ಈ ಎರಡೂ ಪಕ್ಷಗಳು ವಿಲೀನವಾಗಿ ಕುಮಾರಸ್ವಾಮಿಯವರೇ ವಿರೋಧ ಪಕ್ಷದ ನಾಯಕರಾಗಲಿ ಎನ್ನುವ ಆಶಯವೂ ಕೆಲವು ಆಸಕ್ತ ವಲಯಗಳಲ್ಲಿ ವ್ಯಕ್ತವಾಗಿತ್ತು.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯವರನ್ನು ಹೇಗೆ ಅನಾಮತ್ತಾಗಿ ಎದುರಿಸುತ್ತಿದ್ದರು? ಅವರಿಬ್ಬರ ನಡುವೆ ಚರ್ಚೆ ಹೇಗೆ ಕಾವೇರುತ್ತಿತ್ತು ಎನ್ನುವುದಕ್ಕೆ ಒಂದೇ ಒಂದು ಪ್ರಸಂಗವನ್ನು ಉಲ್ಲೇಖಿಸಬಹುದು. ಒಂದು ವರ್ಷದ ಹಿಂದೆ ಮಂಡ್ಯ ಜಿಲ್ಲೆಯ ಕೆಎಸ್​ಆರ್​ಟಿಸಿ ನೌಕರರೊಬ್ಬರು ವರ್ಗಾವಣೆ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಪ್ರಕರಣವನ್ನು ಕುಮಾರಸ್ವಾಮಿ ಪ್ರಸ್ತಾಪಿಸಿದ್ದರು. ಆದರೆ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅದಕ್ಕೆ ಸ್ಪಷ್ಟನೆ ನೀಡುವ ಸಂದರ್ಭದಲ್ಲಿ ಚರ್ಚೆ ರಾಜಕಾರಣದತ್ತ ಹೊರಳಿ ಪ್ರಾಸಂಗಿಕವಾಗಿ ಅವರು ಜೆಡಿಎಸ್ ಕುಟುಂಬ ರಾಜಕಾರಣವನ್ನೂ ಪ್ರಸ್ತಾಪಿಸಿದರು. ಚೆಲುವರಾಯ ಸ್ವಾಮಿ ಉತ್ತರವನ್ನು ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರ ಕೈ ಕುಲುಕಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ ಕುಮಾರಸ್ವಾಮಿ ದಿಗ್ಗನೆ ಎದ್ದು ನಿಂತರು.

ಸವಾಲಿಗೆ ಸವಾಲ್: ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದ ಅವರು “ದೇವೇಗೌಡ್ರ ಕುಟುಂಬದ ಬಗ್ಗೆ ಚರ್ಚೆಗೆ ಪರ್ಮಿಷನ್ ಕೊಟ್ಟಿದ್ದೀರಾ ನೀವು?” ಎಂದು ಆಕ್ಷೇಪ ವ್ಯಕ್ತಪಡಿಸಿದರು.”ಷೇಕ್ ಹ್ಯಾಂಡ್ ಬೇರೆ ನಮ್ಮ ಮುಖ್ಯ ಮಂತ್ರಿಯವರದ್ದು. ಚೆನ್ನಾಗಿ ಉತ್ತರ ಕೊಟ್ಟಿದ್ದೀಯಾ ಅಂತ..ರೀ..ಇದಕ್ಕೆಲ್ಲ ಕೇರ್ ಮಾಡಲ್ಲರಿ.. ಈ ಥರ ರಾಜಕಾರಣವನ್ನು ನಾವು ಮಾಡೋಲ್ಲ. ಇಂಥ ರಾಜಕಾರಣ ಯಾರಿಗೂ ಶಾಶ್ವತವಲ್ಲ..ಇದೆಲ್ಲ ಬಹಳ ನೋಡಿ ಬಿಟ್ಟಿದ್ದೀವಿ.. ಇದನ್ನೆಲ್ಲ ನಾನೂ ಗಮನಿಸ್ತಾ ಇದ್ದೇನೆ..”ಎಂದು ಏರಿದ ಧ್ವನಿಯಲ್ಲಿ ಸವಾಲು ಹಾಕಲು ಆರಂಭಿಸಿದರು.

ಆಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎದ್ದು ನಿಂತು “ರೀ ಕುಮಾರಸ್ವಾಮಿಯವರೇ ನಿಮಗೆ ಹೆದರಕತೀವ ನಾವು.. ನೀವು ಕೇರ್ ಮಾಡಲ್ಲ ಅಂದ್ರೆ ನಾವೂ ಕೇರ್ ಮಾಡಲ್ಲ..ನಿಮ್ಮ ಕಂಡ್ರೆ ಯಾರೂ ಹೆದರ್ಕಳವರು ಇಲ್ಲ..ಯಾರ್ರೀ ಹೆದರಕಳ್ತಾರೆ ನಿಮಗೆ..ಅವರು (ಚೆಲುವರಾಯಸ್ವಾಮಿ) ಬಂದ ತಕ್ಷಣ ನಾನು ಕೈಕುಲುಕಿದರೆ ‘ನೀನು ಚೆನ್ನಾಗಿ ಉತ್ತರ ಕೊಟ್ಟೆ ಅಂತ ಕೈ ಕುಲುಕಿದೆ’ ಅಂತ ಅಂದ್ರೆ..ನನಗೂ ಇದಕ್ಕೂ ಸಂಬಂಧವೇ ಇಲ್ಲ.. ಕೆಲಸಕ್ಕೆ ಬರದೇ ಇರೋದನ್ನ ಮಾತಾಡ್ತಿರಲ್ರಿ.. ನೀವು ಕೇರ್ ಮಾಡಲ್ಲ ಅಂದ್ರೆ.. ನಾನು ಅಪ್ಪನಷ್ಟು ಕೇರ್ ಮಾಡಲ್ಲ” ಎಂದು ಆರ್ಭಟಿಸುತ್ತಿದ್ದಂತೆ ಸದನದಲ್ಲಿ ಕಾವೇರಿದ ವಾತಾವರಣ ಸಿದ್ದರಾಮಯ್ಯನವರ ಸವಾಲಿಗೆ ಕುಮಾರಸ್ವಾಮಿಯವರೂ” ನಾನೂ ಅದೇ ಥರ..ನಾವೇನು ನಿಮ್ಮ ಮುಲಾಜಲ್ಲಿ ಬರ್ಲಿಲ್ಲ..” ಎಂದು ಪ್ರತಿ ಸವಾಲು ಹಾಕಿದರು.

ಮಾತಿನ ಚಕಮಕಿ: ಈ ಮಾತಿನ ಚಕಮಕಿ ಹಾಗೆಯೇ ಮುಂದುವರಿಯಿತು. “ಯಾರಿಗೆ ಹೆದರಿಸ್ತಾ ಇದೀರಿ ನೀವು..? ಇವರು ಕೇರ್ ಮಾಡದಿದ್ದರೆ ಹೆದರಿಕೊಂಡುಬಿಡ್ತಿನಾ ನಾನು..? ಬಹಳ ಜನರನ್ನು ನೋಡಿ ಬಿಟ್ಟಿದ್ದೀನಿ ನಾನು..”ಎಂದು ಸಿದ್ದರಾಮಯ್ಯ ಗುಡುಗಿದರು. ಆಗ ಕುಮಾರಸ್ವಾಮಿಯವರು “ನಮ್ಮ ಹತ್ರ ಬೆಳೆದೋರನ್ನ ಕರ್ಕೊಂಡು ಈಗ ನಮ್ಮ ಹತ್ರ ಆಟ ಆಡ್ತೀರಾ.. ನಾವೂ ಆಟ ಆಡ್ತೀವಿ..ಆರು ತಿಂಗಳಲ್ಲಿ ಏನಾಗುತ್ತೆ ನೋಡಿ..” ಎಂದು ಸವಾಲು ಹಾಕಿದರು.

ನಾನಾ ರೀತಿಯ ಹಿನ್ನಡೆಗಳು ಮತ್ತು ಹೀನಾಯ ಸೋಲುಗಳ ನಡುವೆಯೂ ಕುಮಾರಸ್ವಾಮಿಯವರು ಹಿಂಜರಿಯದೆ ಪ್ರತಿ ಪಕ್ಷವೊಂದರ ಸಮರ್ಥ ನಾಯಕರಾಗಿ ವಿಜೃಂಭಿಸಿದ್ದು ಹೇಗೆ? 2004 ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ 58 ಸ್ಥಾನಗಳೇ ಜೆಡಿಎಸ್ ಪಕ್ಷದ ಇದುವರೆಗಿನ ಅತ್ಯಧಿಕ ದಾಖಲೆ. ಬಿಜೆಪಿಗೆ ಅಧಿಕಾರವನ್ನು ಹಸ್ತಾಂತರ ಮಾಡದ ಹಿನ್ನೆಲೆಯಲ್ಲಿ” ವಚನ ಭ್ರಷ್ಟತೆ ಪ್ರಸಂಗದ ನಂತರ ಪ್ರತಿ ಚುನಾವಣೆಯಲ್ಲಿಯೂ 28, 40, 37, 19 ಹೀಗೆ ಜೆಡಿಎಸ್ ಫಲಿತಾಂಶ ಕುಸಿಯುತ್ತಲೇ ಇದೆ. ಪ್ರತಿ ಬಾರಿಯೂ ಕೆಲವು ನಾಯಕರ ನಿರ್ಗಮನದಿಂದ ಪಕ್ಷ ಕ್ಷೀಣಿಸುತ್ತಲೇ ಇದೆ. ನಿರ್ಗಮನ ಪ್ರಕ್ರಿಯೆಯೋ ಅಥವಾ ನಿರ್ಮೂಲನೆ ಪ್ರಕ್ರಿಯೆಯೋ ಒಟ್ಟಿನಲ್ಲಿ ಸಿದ್ದರಾಮಯ್ಯನವರ ಉಚ್ಛಾಟನೆಯಿಂದಲೇ ಆರಂಭವಾದ ಈ ಕ್ರಿಯೆ ನಡೆಯುತ್ತಲೇ ಇದೆ. ಇತ್ತೀಚಿಗೆ, ಒಂದು ಕಾಲದಲ್ಲಿ ಕುಮಾರಸ್ವಾಮಿಯವರ ಆಪ್ತ ವಲಯದಲ್ಲಿದ್ದ ಎನ್.ಚೆಲುವರಾಯಸ್ವಾಮಿ, ಹೆಚ್.ಸಿ.ಬಾಲಕೃಷ್ಣ, ಎಸ್. ಆರ್. ಶ್ರೀನಿವಾಸ್, ಕೆ.ಎಂ. ಶಿವಲಿಂಗೇಗೌಡ ಜೆಡಿಎಸ್​​ನಿಂದ ದೂರ ಸರಿದಿದ್ದಾರೆ.

1994ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಕರ್ನಾಟಕ ಕಾಂಗ್ರೆಸ್ ಪಕ್ಷದ ಹತ್ತು ಶಾಸಕರ ಪೈಕಿ ಐದು ಶಾಸಕರು ಮಾಲೀಕಯ್ಯ ಗುತ್ತೇದಾರ್ ನೇತೃತ್ವದಲ್ಲಿ ಪಕ್ಷಾಂತರ ಮಾಡಿದ್ದರು. ಆಗ ಪತ್ರಕರ್ತರು ಬಂಗಾರಪ್ಪನವರನ್ನು ಈ ಬಗ್ಗೆ ಪ್ರಶ್ನಿಸಿದಾಗ ಅವರು “ಎಂಜಿನ್​ನನ್ನ ಹಿಂದೆ ಒಂದು ಬೋಗಿ ಇದೆಯೋ?..ಅಥವಾ ನೂರು ಬೋಗಿ ಇವೆಯೋ?..ಅದರ ಬಗ್ಗೆ ನಾನು ಯಾಕೆ ತಲೆ ಕೆಡಿಸಿಕೊಳ್ಳಲಿ? ನಾನು ಯಾವತ್ತಿದ್ರೂ ಇಂಜಿನ್​” ಎಂದು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಉತ್ತರಿಸಿದ್ದರು. ಅದೇ ರೀತಿ ಕುಮಾರಸ್ವಾಮಿಯವರು ಕೂಡ, ಜೆಡಿಎಸ್ ಗೆದ್ದ ಸೀಟುಗಳ ಸಂಖ್ಯೆ 19 ಇರಲಿ ಅಥವಾ 37 ಇರಲಿ, ಒನ್ ಮ್ಯಾನ್ ಆರ್ಮಿ..!

ಫಿನಿಕ್ಸ್: ಗ್ರೀಕ್ ಪುರಾಣದ ಫಿನಿಕ್ಸ್ ಪಕ್ಷಿ ಪ್ರತಿ ಬಾರಿಯೂ ಮೈಗೆ ಬೆಂಕಿ ಹಚ್ಚಿಕೊಂಡು ಭಸ್ಮವಾಗಿ ಅದೇ ಧೂಳಿನಿಂದ ಮತ್ತೆ ಜೀವಂತವಾಗಿ ಪುಟಿದೇಳುತ್ತದಂತೆ. ಅದೇ ರೀತಿ ಹೆಚ್.ಡಿ. ದೇವೇಗೌಡರ ಕುಟುಂಬದ ಬಗ್ಗೆಯೂ ಒಂದು ದಂತ ಕತೆಯಿದೆ. 1989 ರಲ್ಲಿ ತಾವು ಸ್ಪರ್ದಿಸಿದ್ದ ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ಸೋತಿದ್ದ ದೇವೇಗೌಡರು 1994 ರಲ್ಲಿ ಮುಖ್ಯಮಂತ್ರಿ ಮತ್ತು 1996 ರಲ್ಲಿ ಪ್ರಧಾನಮಂತ್ರಿ ಕುರ್ಚಿಗಳನ್ನು ಅಲಂಕರಿಸಿದ್ದರು. ಒಂದು ವರ್ಷದ ಹಿಂದೆ ಕೇವಲ 19 ಸೀಟುಗಳೊಂದಿಗೆ ಹೀನಾಯವಾಗಿ ಸೋತಿದ್ದ ಜೆಡಿಎಸ್ ಅಧ್ಯಕ್ಷ ಹೆಚ್ .ಡಿ. ಕುಮಾರಸ್ವಾಮಿ ಈಗ ಕೇಂದ್ರ ಸರ್ಕಾರದ ಪ್ರಭಾವಿ ಸಚಿವರು ಮತ್ತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಸದಸ್ಯರಾಗಿ ಮಹತ್ವದ ಸ್ಥಾನ ಅಲಂಕರಿಸಿದ್ದಾರೆ.

ಮತ್ತೆ ಅದೇ ಪ್ರಶ್ನೆ. ವಿಧಾನಸಭೆಯಲ್ಲಿ ಕುಮಾರ ಸ್ವಾಮಿ ಪ್ರತಿ ಪಕ್ಷವೊಂದರ ಪ್ರಭಾವಿ ನಾಯಕರಾಗಿ ವಿಜೃಂಭಿಸಿದ್ದು ಹೇಗೆ?

ರಾಜಕೀಯ ವಿಶ್ಲೇಷಕ ಪ್ರೊ.ರವೀಂದ್ರ ರೇಷ್ಮೆಯವರ ಪ್ರಕಾರ ಆಡಿದ್ದನ್ನ ಮಾಡಿ ತೋರಿಸುವ ಛಾತಿ, ಸೋಲಿನಿಂದ ತಕ್ಷಣ ಚೇತರಿಸಿಕೊಂಡು ಮತ್ತೆ ಯುದ್ಧ ಭೂಮಿಯ ಮುಂಚೂಣಿಯಲ್ಲಿ ನಿಲ್ಲುವ ಗುಣ, ಮಹತ್ವಾಕಾಂಕ್ಷೆಯನ್ನು ಸಾಧಿಸುವ ತನ್ನ ಗುರಿಯ ಮೇಲೆ ಅಚಲ ದೃಷ್ಟಿ. ಇವೇ ಕುಮಾರಸ್ವಾಮಿಯವರ ಗೆಲುವಿನ ಸೂತ್ರಗಳು. ಹಿಟ್ ಅಂಡ್ ರನ್: ಇದರ ಜೊತೆಗೆ ಕುಮಾರಸ್ವಾಮಿಯವರ ಮೇಲಿನ ಒಂದು ಮುಖ್ಯ ಆರೋಪವೆಂದರೆ ಅವರೊಬ್ಬ ಹಿಟ್ ಅಂಡ್ ರನ್ ನಾಯಕ ಎನ್ನುವುದು. ಆದರೆ ಈ ಬಾರಿ ಅವರು ಈ ಆರೋಪವನ್ನು ಸುಳ್ಳಾಗಿಸುವಂತೆ ಸದನದಲ್ಲಿ ಬಹುತೇಕ ವಿಷಯಗಳನ್ನು ಮತ್ತು ಹೋರಾಟಗಳನ್ನು ಕೊನೆಯ ಹಂತದವರೆಗೆ ಒಯ್ದಿದ್ದು ವಿಶೇಷವಾಗಿತ್ತು.

ಜೆರಾಕ್ಸ್: ಅವರ ಇನ್ನೊಂದು ಅನುಕೂಲವೆಂದರೆ ಅವರು ಅಧಿಕಾರಿಗಳೊಂದಿಗೆ ಗಳಿಸಿರುವ ವಿಶ್ವಾಸ. ಅವರಿಗೆ ಸರ್ಕಾರದ ವಿದ್ಯಮಾನಗಳ ಮಾಹಿತಿಗಳನ್ನು ನೀಡಲು ಅಧಿಕಾರಿಗಳು ಸದಾ ತುದಿಗಾಲ ಮೇಲೆ ನಿಂತಿರುತ್ತಾರೆ. ಬಹಳ ಹಿಂದೆ “ಮುಖ್ಯಮಂತ್ರಿಗಳು ಯಾರೇ ಇದ್ದರೂ ಅವರು ಹೊರಡಿಸುವ ಆದೇಶಗಳ ಒಂದೊಂದು ಜೆರಾಕ್ಸ್ ಪ್ರತಿಗಳು ದೇವೇಗೌಡರ ಮೇಜಿನ ಮೇಲಿರುತ್ತವೆ” ಎನ್ನುವ ಮಾತು ಜನಜನಿತವಾಗಿತ್ತು.

ಆತಂಕ: ಜೆಡಿಎಸ್ ಶಾಸಕರ ಮತ್ತೊಂದು ಆತಂಕವೆಂದರೆ ಈ ಬಾರಿ ಹೆಚ್.ಡಿ.ರೇವಣ್ಣ ಅವರು ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಲ್ಲಿ ಸದನದ ಕಾರ್ಯ ಕಲಾಪಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುವುದಿಲ್ಲವೇನೋ ಎನ್ನುವುದು.

ಪ್ರಾಯಶಃ ಇದೇ ಮೊದಲ ಬಾರಿಗೆ ದೇವೇಗೌಡರ ಕುಟುಂಬದಿಂದ ಹೊರತಾದವರೊಬ್ಬರು ಸದನದಲ್ಲಿ ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳುವ ಪ್ರಮೇಯ ಬರಬಹುದು. ಇದರ ಜತೆಗೆ ಸರ್ಕಾರ ಕೆಲವು ಹಗರಣಗಳ ಸುಳಿಯಲ್ಲಿ ಸಿಲುಕಿರುವುದರಿಂದ ಉಗ್ರ ಹೋರಾಟಗಳಿಗೆ ಸನ್ನಿವೇಶ ಫಲವತ್ತಾಗಿದೆ. ಇಂತಹ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಈ ಸದನದಲ್ಲಿಯೇ ಇರಬೇಕಾಗಿತ್ತು ಎನ್ನುವುದು ಕೆಲವು ಜೆಡಿಎಸ್ ಶಾಸಕರ ಅಭಿಪ್ರಾಯ. ಒಟ್ಟಿನಲ್ಲಿ ಕುಮಾರಸ್ವಾಮಿ ವಿಧಾನ ಸಭೆಯಲ್ಲಿ ತಮ್ಮದೇ ಆದ ಒಂದು ಪ್ರಭಾವ ವಲಯವನ್ನು ಸೃಷ್ಟಿಸಿಕೊಂಡಿದ್ದರು. ಅದೀಗ ಶೂನ್ಯವಾಗಿದೆ.

ಲೇಖನ- ಸಿ. ರುದ್ರಪ್ಪ

Published On - 1:51 pm, Sun, 14 July 24

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?