The Kashmir Files: ಕಾಶ್ಮೀರ್ ಫೈಲ್ಸ್ ಬಗ್ಗೆ ಹೊಸ ಚರ್ಚೆ- ಸಿದ್ದರಾಮಯ್ಯ ಮತ್ತು ಡಿಕೆಶಿ ಓದಲೇಬೇಕಾದ ಅಂಶಗಳು ಇಲ್ಲಿವೆ ನೋಡಿ

ಕಾಶ್ಮೀರ್ ಫೈಲ್ಸ್ ಮುಗಿಸಲು ಜೇಮ್ಸ್ ಸಿನಿಮಾವನ್ನು ಎತ್ತಿಕಟ್ಟಲು ಹೋಗಿ ಅದರಲ್ಲಿ ಸಫಲತೆ ಪಡೆಯದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮತ್ತವರ ಗುಂಪು ಕಾಶ್ಮೀರ್ ಫೈಲ್ಸ್ ಬಗ್ಗೆ ಕೇಳದ ಹಲವಾರು ವಿಚಾರ ಇಲ್ಲಿದೆ ನೋಡಿ.

The Kashmir Files: ಕಾಶ್ಮೀರ್ ಫೈಲ್ಸ್ ಬಗ್ಗೆ ಹೊಸ ಚರ್ಚೆ- ಸಿದ್ದರಾಮಯ್ಯ ಮತ್ತು ಡಿಕೆಶಿ ಓದಲೇಬೇಕಾದ ಅಂಶಗಳು ಇಲ್ಲಿವೆ ನೋಡಿ
ಸಿದ್ದರಾಮಯ್ಯ, ಅನುಪಮ್​ ಖೇರ್, ಡಿಕೆಶಿ
Follow us
ಡಾ. ಭಾಸ್ಕರ ಹೆಗಡೆ
|

Updated on:Mar 25, 2022 | 12:36 PM

ಒಂದು ದಶಕದ ಇತ್ತೀಚೆಗೆ ಒಂದು ಸಿನಿಮಾ ಇಷ್ಟು ಸುದ್ದಿ ಮಾಡಿರಲಿಲ್ಲ. ಬಾಹುಬಲಿ (Bahubali) ಬಿಡುಗಡೆಯಾದಾಗ ತುಂಬಾ ಸುದ್ದಿ ಮಾಡಿತ್ತು. ಆದರೆ, ಆ ಸಿನಿಮಾಕ್ಕೆ ವಿವಾದ ಸುತ್ತಿಕೊಂಡಿರಲಿಲ್ಲ. ಬಿಡುಗಡೆಯಾದ ದಿನದಿಂದ, ದಿ ಕಾಶ್ಮೀರ ಫೈಲ್ಸ್ ಸುದ್ದಿ ಮಾಡುತ್ತಲೇ ಇದೆ. ಮಜವೆನ್ನಿ ಅಥವಾ ವಿಷಾದ ಎನ್ನಿ. ಬಾಕ್ಸಾಫೀಸಿನಲ್ಲಿ (Box Office) ಈ ಸಿನಿಮಾ ಯಾವತ್ತು ಯಶಸ್ಸು ಕಾಣಲು ಶುರುವಾಯ್ತೋ ಅಲ್ಲಿಂದ ಶುರುವಾಯಿತು ನೋಡಿ, ಪರ ಮತ್ತು ವಿರೋಧದ ಚರ್ಚೆ. ಯಾವ ಸಿನಿಮಾ ಕೂಡ ಕೊರೊನಾ ನಂತರ, ಥಿಯೇಟರ್ಗಳಲ್ಲಿ ಇಷ್ಟು ಯಶಸ್ಸು ಕಂಡಿರಲಿಲ್ಲ ಅಂತ ಸಿನಿಮಾ ಉದ್ಯಮ ವಿಶ್ಲೇಷಕ ತರಣ್ ಆದರ್ಶ (Taran Adarsh) ಹೇಳುವುದನ್ನು ನಾವೆಲ್ಲ ಓದಿದ್ದೇವೆ.

ಯಾವಾಗ ಜನ ಈ ಸಿನಿಮಾ ನೋಡಲು ಪ್ರಾರಂಭಿಸಿದರೋ ಅಲ್ಲಿಂದ ಶುರುವಾಯ್ತು ಕೆಲವರಿಗೆ ಸಂಕಟ. ಕಳೆದ ಹತ್ತು ದಿನಗಳಿಂದ ಇಡೀ ದೇಶದ ರಾಜಕಾರಿಣಿಗಳು, ಪತ್ರಕರ್ತರು, ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲವಾಗಿರುವ ಜನ-ಹೀಗೆ ಎಲ್ಲರನ್ನು ಹಿಡಿದಿಟ್ಟ ಏಕೈಕ ವಿಷಯ-ಈ ಸಿನಿಮಾ. ಒಂದಿಷ್ಟು ಜನ ಇದರ ಪರವಾಗಿ ಬ್ಯಾಟಿಂಗ್ ಬೀಸಿದರು. ಅದಕ್ಕೆ ಸರಿಯಾಗಿ ಸಿನಿಮಾ ನೋಡಿ ಬಂದವರು ತಮಗೆ ಆದ ಶಾಕ್ನ್ನು ಹಂಚಿಕೊಂಡರು. ಅದಕ್ಕೆ ತದ್ವಿರುದ್ಧವಾಗಿ ಇನ್ನೊಂದಿಷ್ಟು ಜನ, ಈ ಸಿನಿಮಾದಲ್ಲಿ ಸತ್ಯಾಂಶವೇ ಇಲ್ಲ. ಈ ಸಿನಿಮಾ, ಒಂದು ರಾಜಕೀಯ ವ್ಯವಸ್ಥೆಯ ಪ್ರಚಾರದ ವಸ್ತು (propaganda) ಎಂದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ರೀತಿಯ ಅಭಿಪ್ರಾಯ ಬರುತ್ತಿರುವುದನ್ನು ಕಾಣಬಹುದು. 1. ಕಾಶ್ಮೀರದಲ್ಲಿ ಜನಾಂಗೀಯ ಹತ್ಯೆ ನಡೆದೇ ಇಲ್ಲ, ಆದ್ದರಿಂದ ಈ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಒಂದು ಬೋಗಸ್ ಸಿನಿಮಾ. ಆದ್ದರಿಂದ ಇದು ಬರೀ ಸಮಾಜಕ್ಕೆ ಬೆಂಕಿ ಹಾಕುವ ಹುನ್ನಾರದ ಒಂದು ಭಾಗ. 2. ಎರಡನೇ ರೀತಿಯ ಜನ, ಕಾಶ್ಮೀರದಲ್ಲಿ ಇಂತಹ ಘಟನೆ ನಡೆದಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಈಗ ಇಂತಹ ಸಿನಿಮಾ ತೆಗೆಯುವ ಮೂಲಕ ಅದನ್ನು ಕೆದಕಿ ಸಮಾಜದಲ್ಲಿ ಬೆಂಕಿ ಹಾಕುವ ಅವಶ್ಯಕತೆ ಇರಲಿಲ್ಲ ಎನ್ನುತ್ತಿದ್ದಾರೆ. 3. ಮೂರನೇ ವರ್ಗದ ಜನ ದಿ ಕಾಶ್ಮೀರ್ ಫೈಲ್ಸ್ ಮಾಡಿದ್ದು ಸರಿ ಇದೆ. ಯಾಕೆಂದರೆ ಅಲ್ಲಿ ಅಂತಹ ಘಟನೆ ನಡೆದಿತ್ತು ಎಂದು ಹೇಳುತ್ತಿದ್ದಾರೆ.

ಕಾಶ್ಮೀರದಲ್ಲಿ ಮುಖ್ಯಮಂತ್ರಿಯಾಗಿದ್ದ ಓಮರ್ ಅಬ್ದುಲ್ಲಾ ಆ ಘಟನೆ ಆಗಿದ್ದಾಗ ನನ್ನ ತಂದೆ ಮುಖ್ಯಮಂತ್ರಿ ಆಗಿರಲಿಲ್ಲ. ಹಾಗಾಗಿ ಈ ಸಿನಿಮಾದಲ್ಲಿನ ಕಥೆ ಸುಳ್ಳಿನ ಹಂದರ ಎಂದರು. ಆದರೆ, ಕಾಶ್ಮೀರ ಪಂಡಿತರ ಮೇಲಿನ ಹಿಂಸಾಚಾರದ ಘಟನೆ ನಡೆದಿದೆಯೇ ಎಂಬುದರ ಬಗ್ಗೆ ಮುಗುಮ್ಮಾಗಿ ಇರುವುದನ್ನು ನಾವು ಕಾಣಬಹುದು. ಹಲವಾರು ಕಾಂಗ್ರೆಸ್ ನಾಯಕರು ಮತ್ತು ಪ್ರಗತಿಪರ ಚಿಂತಕರು ಈ ಸಿನಿಮಾ ದೇಶವನ್ನು ಒಡೆಯುವ ಒಂದು ಅಟಾಂ ಬಾಂಬ್ ಎಂದರು. ಸಿನಿಮಾ ಬಿಡುಗಡೆ ಆಗಿ ಇಷ್ಟು ದಿನ ಕಳೆಯಿತು. ಈಗ ಈ ಸಿನಿಮಾ ಬಗ್ಗೆ ಹೊಸ ವಿಷಯದೊಂದಿಗೆ ಒಂದು ಚರ್ಚೆ ಮಾಡಲು ಸಾಧ್ಯವೇ? ನೋಡೋಣ.

ಇತಿಹಾಸದ ಮೇಲೆ ಹೆಣೆದ ಕಟ್ಟು ಕಥೆ ಈ ಸಿನಿಮಾ ಅಂತ ಯಾರೆಲ್ಲ ಅನ್ನುತ್ತಾರೋ ಅವರು ಈ ಹಿಂದೆ ಏನಾದರೂ ಬರೆದಿದ್ದಾರೋ? ಇಲ್ಲಿದೆ ನೋಡಿ ಒಂದು ತಮಾಷೆ. ಕಾಂಗ್ರೆಸ್ನ ಹಿರಿಯ ನಾಯಕ ಮತ್ತು ರಾಹುಲ್ ಗಾಂಧಿ ಅವರ ಕಣ್ಣು ಮತ್ತು ಕಿವಿ ಎಂಬಂತಿರುವ ಜೈರಾಮ್ ರಮೇಶ್ ಈ ಕುರಿತು ಮಾರ್ಚ 19 ರಂದು ತಮ್ಮ ಟ್ವಿಟರ್ನ ಹೇಳಿಕೆಯಲ್ಲಿ ಏನು ಹೇಳಿದರು ನೋಡಿ. “ಕೆಲ ಸಿನಿಮಾಗಳು ಬದಲಾವಣೆಗೆ ಪ್ರೇರೇಪಿಸುತ್ತವೆ. ಕಾಶ್ಮೀರ್ ಫೈಲ್ಸ್ ಸಿನಿಮಾ ದ್ವೇಷವನ್ನು ಬಿತ್ತುತ್ತದೆ. ಸತ್ಯದ ಮೂಲಕ ನ್ಯಾಯ ಮತ್ತು ಜನರ ಪುನರುಜ್ಜೀವನವಾಗಿ ಶಾಂತಿ ಕಾಣುವುದು ಒಂದು ಮಾರ್ಗ. ಅಗ್ಗದ ಪ್ರಚಾರದ ವಸ್ತುವಿನ ಮೂಲಕ ಇತಿಹಾಸ ತಿರುಚಿ ದ್ವೇಷ ಬಿತ್ತುವ ಹುನ್ನಾರ ಕಾಶ್ಮೀರ್ ಫೈಲ್ಸ್ ಸಿನಿಮಾದ್ದು. ರಾಜನೀತಿಜ್ಞರು ಗಾಯವನ್ನು ಗುಣಪಡಿಸಿದರೆ, ಪ್ರಚಾರಕರು (ಆರ್ಎಸ್ಎಸ್) ಭಯ ಮತ್ತು ಪೂರ್ವಾಗ್ರಹವನ್ನು ಆಧಾರ ಮಾಡಿಕೊಂಡು ಸಮಾಜ ಒಡೆದು ಆಳಲು ನೋಡುತ್ತಾರೆ (Some films inspire change. Kashmir Files incites hate. Truth can lead to justice, rehabilitation, reconciliation & peace. Propaganda twists facts, distorts history to whip up anger & promote violence. Statesmen heal wounds. Pracharaks exploit fear and prejudice to divide & rule. March 19 –Jairam Ramesh)”.

ನಿಜವೇ? ಈ ಜೈರಾಮ್ ರಮೇಶ್ ಇರುವ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಕಳೆದ ವರ್ಷ ಸೆಪ್ಟೆಂಬರ್ 21 ರಂದು ಏನು ಟ್ವೀಟ್ ಮಾಡಿದ್ದರು ನೋಡಿ. “ನಾನು ಕೂಡ ಕಾಶ್ಮೀರ್ ಪಂಡಿತ. ನಿಮ್ಮ ನೋವು ನನಗೂ ಬಾಧಿಸುತ್ತಿದೆ. ನಿಮಗೆ ನ್ಯಾಯ ದೊರಕಿಸಲು ನಾನು ಹೋರಾಡುತ್ತೇನೆ.” ಕಾಶ್ಮೀರಿ ಪಂಡಿತರಿಗೆ ಏನೂ ಆಗಿರಲಿಲ್ಲ. ಎಲ್ಲ ಸರಿ ಇದ್ದಾಗ ಅವರು ಗುಳೆ ಎದ್ದು ಹೊರಟರು ಎನ್ನುವ ಭಾವನೆಯ ಧ್ವನಿಯಲ್ಲಿರುವ ಜೈರಾಮ್ ರಮೇಶ್ ಅವರ ಟ್ವೀಟ್ಗೂ ರಾಹುಲ್ ಅವರ ಹೇಳಿಕೆಯಲ್ಲಿ ಸಾಮ್ಯತೆ ಕಂಡು ಬರುತ್ತಿಲ್ಲ ಅಲ್ಲವೇ?

ಈಗ ರಾಜಕೀಯದ ವಿಚಾರಕ್ಕೆ ಬರೋಣ. ಅದೇನೆಂದರೆ, ಕೇಂದ್ರದಲ್ಲಿ ಆಗ ವಿಪಿ ಸಿಂಗ್ ಸರಕಾರ ಇತ್ತು ಮತ್ತು ಅದಕ್ಕೆ ಬಿಜೆಪಿ ಬೆಂಬಲ ನೀಡುತ್ತಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ಅವರ ಸರಕಾರ ಇರಲಿಲ್ಲ. ಜಗಮೋಹನ್ ಅವರು ಇದ್ದರು ಎಂಬ ರಾಜಕೀಯದ ವಿಚಾರವನ್ನು ನೋಡೋಣ. ಮಂಗಳವಾರ ಇಂಗ್ಲಿಷ್ ಟಿವಿ ಚಾನೆಲ್ ಇಂಡಿಯಾ ಟುಡೆಯ ರಾಜ್ ಚೆಂಗಪ್ಪ ಅವರಿಗೆ ನೀಡಿದ ಸಂದರ್ಶನದಲ್ಲಿ, ಫಾರೂಕ್ ಅಬ್ದುಲ್ಲಾ ಹೇಳಿದ್ದಾದರೂ ಏನು? ತಾನು ಈ ಅತ್ಯಾಚಾರಕ್ಕೆ ಬೆಂಬಲಿಸಿಯೂ ಇರಲಿಲ್ಲ. ತಾನು ಪ್ರಾಮಾಣಿಕ ಎನ್ನುತ್ತ ಅವರು ಒಂದು ಹೆಜ್ಜೆ ಮುಂದೆ ಹೋಗಿ ಹೇಳಿದ್ದೇನು ಗೊತ್ತಾ? ಕಾಶ್ಮೀರದಲ್ಲಿ ethnic cleansing ನಡೆದಿತ್ತು. ಒಂದು ಜನಾಂಗವನ್ನು ಸಂಪೂರ್ಣ ನಿರ್ನಾಮ ಮಾಡುವ ಪ್ರಕ್ರಿಯೆಯನ್ನು ಇಂಗ್ಲಿಷಿನಲ್ಲಿ ethnic cleansing ಅಥವಾ genocide ಅಂತ ಹೇಳುತ್ತಾರೆ. ಹೀಗೆ ಹೇಳುವ ಮೂಲಕ ಫಾರೂಕ್ ಅಬ್ದುಲ್ಲಾ ಒಂದು ವಿಚಾರಕ್ಕೆ ತೆರೆ ಎಳೆದರು. ಅದೇನೆಂದರೆ, ಕಾಶ್ಮೀರ ಪಂಡಿತ ಮೇಲೆ ಜನಾಂಗೀಯ ಹತ್ಯೆ ನಡೆದಿತ್ತು ಎಂಬುದು.

ಇನ್ನು ವಿಪಿ ಸಿಂಗ್ ಸರಕಾರಕ್ಕೆ ಬಿಜೆಪಿ ಬೆಂಬಲ ನೀಡಿತ್ತು ಎಂಬ ವಿಚಾರ. ದಿ ಕಾಶ್ಮೀರ ಫೈಲ್ಸ್ ಸಿನಿಮಾ ಟೀಕಿಸುವವರು ಇದನ್ನು ಬಿಡಿಸಿ ಹೇಳಲ್ಲ. ಅವರ ಮಾತಿನಗ ಗೂಢಾರ್ಥ ಏನೆಂದರೆ, ಆಗ ಕೇಂದ್ರ ಸರಕಾರದ ಭಾಗವಾಗಿದ್ದ ಬಿಜೆಪಿಗೆ ಈಗ ಕಾಶ್ಮೀರಿ ಪಂಡಿತರ ಮೇಲೆ ಆದ ಹಿಂಸಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಆದರೆ, ಈ ಹಿಂಸಾಚಾರ ನಡೆದಿದ್ದರ ಹಿಂದೆ 1989 ರಲ್ಲಿ ಪ್ರಾರಂಭವಾದ ಭಯೋತ್ಪಾದನೆಗೆ ಬೀಜ, ಗೊಬ್ಬರ ಮತ್ತು ನೀರು ಹಾಕಿ ಬೆಳೆಸಲಾಗಿತ್ತು. ಅದು 1991 ರಲ್ಲಿ ಫಲ ನೀಡಿತ್ತು. ಒಂದು ವರದಿ ಪ್ರಕಾರ ಜಗಮೋಹನ್ ಹೋಗಿ ಅಲ್ಲಿ ನೆಲೆಯೂರುವ ಮೊದಲೇ ಈ ಹಿಂಸಾಚಾರ ನಡೆದಿತ್ತು.

ಸಾಮಾಜಿಕ ಜಾಲತಾಣದಲ್ಲಿ ಇನ್ನೊಂದು ವಿಚಾರ ಬಂದಿದೆ. ಅದೇನೆಂದರೆ, ಪಲ್ಲವಿ ಜೋಷಿಯ ಪಾತ್ರ ಮತ್ತು ಅವಳ ಭಾಷಣ ಹೊಸದಲ್ಲ. ಅಲ್ಲಿ ಯಾವ ಕ್ರಿಯಾತ್ಮಕತೆ ಇಲ್ಲ. ದೆಹಲಿಯ ಒಂದು ವಿಶ್ವವಿದ್ಯಾಲಯದ ಮಹಿಳಾ ಪ್ರೊಫೆಸರ್ ಮಾಡಿದ ಭಾಷಣದ ಮಕ್ಕಿ ಕಾ ಮಕ್ಕಿ ಕಾಪಿ ಈ ಪಲ್ಲವಿ ಜೋಷಿಯವರು ಸಿನಿಮಾದಲ್ಲಿ ಮಾಡಿದ ಭಾಷಣ. ಹಾಗಾಗಿ ಈ ಸಿನಿಮಾದಲ್ಲಿ creativity ಇಲ್ಲ. ಇದು ಬೋಗಸ್ ಸಿನಿಮಾ ಅಂತ. ತಪ್ಪೇನು ಅದರಲ್ಲಿ? ಅಂದರೆ, ಕಾಶ್ಮೀರದಲ್ಲಿ ಜನಾಂಗೀಯ ಹಿಂಸಾಚಾರ ನಡೆದಿತ್ತು ಎನ್ನುವುದನ್ನು ಮುಚ್ಚಿ ಹಾಕಲು ಅಂದಿನಿಂದಲೂ ಪ್ರಯತ್ನ ನಡೆದಿತ್ತು ಎನ್ನುವುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಂತಾಯಿತು. ಆ ಘಟನೆ ನಡೆದಿತ್ತು. ಅದು ಗೊತ್ತಾದ ಮೇಲೆ, ಆ ಮಹಿಳಾ ಪ್ರೊಫೆಸರ್ ಕಾಶ್ಮೀರದಲ್ಲಿ ಏನೂ ನಡೆದಿರಲಿಲ್ಲ ಎಂದು ಭಾಷಣ ಮಾಡಿದ್ದರು ಅಂತ ಆಯ್ತಲ್ಲ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ.

ಇಂತದೊಂದು ಘಟನೆ ನಡೆದಿದೆಯೇ? ಇಷ್ಟೆಲ್ಲ ಓದಿದ ಮೇಲೆ ಮತ್ತೆ ಅನುಮಾನ ಬರುತ್ತಿಲ್ಲವೇ? ಜಮ್ಮು ಮತ್ತು ಕಾಶ್ಮೀರ ಸರಕಾರಕ್ಕೆ ಹಾಕಿಕೊಂಡ ಅರ್ಜಿಗೆ ನೀಡಿದ RTI ಉತ್ತರದಲ್ಲಿ, ಅಂತಹ ಗಂಭೀರ ಘಟನೆ ಏನು ಆಗಿಲ್ಲ, ಬರೀ 45-50 ಕುಟುಂಬಕ್ಕೆ ತೊಂದರೆ ಆಗಿ ಅವರು ಗುಳೆ ಹೋದರು ಎಂದು ಉತ್ತರಿಸಲಾಗಿದೆ. ಹಾಗಾದರೆ RTI ನಲ್ಲಿ ಪಡೆದ ಮಾಹಿತಿ ಸುಳ್ಳಾಗಲು ಸಾಧ್ಯವೇ? ಈ ಕುರಿತು ಇನ್ನು ಏನಾದರೂ ಮಾಹಿತಿ ಇದೆಯೇ ನೋಡೋಣ.

ಕಾಶ್ಮೀರಿ ಪಂಡಿತ, ರಾಕೇಶ್ ಕೌಲ್ ಅವರ ಪ್ರಕಾರ ಕಾಶ್ಮೀರ ಪಂಡಿತರ ಮೇಲೆ ಎರಡು ವರ್ಷ ವೈದ್ಯಕೀಯ ಟೀಂನ ಒಂದು ಅಧ್ಯಯನ ನಡೆದಿತ್ತು. ಅದರ ಅಂತಿಮ ವರದಿ ಪ್ರಕಾರ, 11,600 ಪಂಡಿತರಲ್ಲಿ ಸುಮಾರು 91 ಪ್ರತಿಶತ ತೀವ್ರ ಮಾನಸಿಕ ಸಮಸ್ಯೆಯಲ್ಲಿದ್ದರು; ಅಂದರೆ, 11 ಪ್ರತಿಶತ ಜನ ಹಿಸ್ಟೀರಿಯಾ ಮತ್ತು 8 ಪ್ರತಿಶತ ಜನ ಅಪವಾಸ್ತವ (delusional disorders)ಕ್ಕೆ ಗುರಿಯಾಗಿದ್ದರು. ಇದರ ಜೊತೆಗೆ ಇನ್ನೊಂದು ವಿಚಾರವನ್ನು ಇಲ್ಲಿ ಹೇಳಲೇ ಬೇಕು. 2011 ರಲ್ಲಿ ಅಂಕುರ್ ದತ್ತ ಎನ್ನುವವರು ಕಾಶ್ಮೀರಿ ಪಂಡಿತರ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿದ್ದರು. ಅವರು ಸಲ್ಲಿಸಿದ ಮಹಾಪ್ರಬಂಧಕ್ಕೆ ಲಂಡನ್ ಸ್ಕೂಲ್ ಆಫ್ ಇಕಾನ್ಮಿಕ್ಸ್ ಪಿಎಚ್ಡಿ ನೀಡಿತು. ಅವರ ಈ ಪ್ರಬಂಭದಲ್ಲಿ ಈ ಪಂಡಿತ ಜನಾಂಗದ ಮೇಲೆ ನಡೆದ ಹಿಂಸಾಚಾರ ಮತ್ತು ಅದರ ಪರಿಣಾಮದ ಬಗ್ಗೆ ವಿವರ ಇದೆ. ಅದನ್ನು ಯಾರು ಬೇಕಾದರೂ ಓದಬಹುದು. ಇದೆಲ್ಲ ಯಾಕೆ ಹೇಳಬೇಕಾಯಿತು ಎಂದರೆ, ಇಂತದೊಂದು ಘಟನೆ ನಡೆದೇ ಇಲ್ಲ ಎಂದು ಹೇಳುವವರಿಗೆ ಇದನ್ನು ತೋರಿಸಬೇಕಲ್ಲ.

2016 ರಲ್ಲಿ ಒಂದು ಬ್ರಿಟಿಶ್ ಸಿನಿಮಾ ಬಂದಿತ್ತು. ಅದರ ಹೆಸರು, ಡಿನಾಯಲ್ ಅಂತ. ಇದು ಒಂದು ಸತ್ಯ ಕಥೆ ಆದರಿಸಿ ತಯಾರಿಸಿದ ಸಿನಿಮಾ. ಜ್ಯೂ ಸಮುದಾಯದ ಜನರನ್ನು ಗ್ಯಾಸ್ ಚೇಂಬರಿಗೆ ಹಾಕಿ ಕೊಲ್ಲುವ ಹಾಲೋಕಾಸ್ಟ್ ಆಗಿಲ್ಲ ಎಂದಿದ್ದ ಓರ್ವ ಮಹಾನುಭಾವ ಮತ್ತು ಓರ್ವ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯೊಬ್ಬರ ನಡುವೆ ನಡೆದ ಕೋರ್ಟ ಕೇಸೇ ಈ ಸಿನಿಮಾದ ವಸ್ತು. ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ, ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಿರುವ ಹಾಲೋಕಾಸ್ಟ್ ನಡೆದಿಲ್ಲ ಎಂದು ಹೇಳುವ ಜನ ಯೂರೋಪಿನಲ್ಲಿ ಇದ್ದಾರೆ. ಅಂದರೆ, ನಮ್ಮಲ್ಲಿ ಸರಿಯಾಗಿ ವರದಿಯಾಗಿರದ ಪಂಡಿತರ ಹತ್ಯಾಕಾಂಡ ನಡೆದೇ ಇಲ್ಲ ಎಂದು ಕೆಲವರು ಹೇಳಿದರೆ ಆಶ್ಚರ್ಯ ಇಲ್ಲ.

ಸಿನಿಮಾ ಬಿಜೆಪಿ ಪ್ರಚಾರದ ಭಾಗ? ಸಿನಿಮಾ ಒಂದು ಪ್ರಚಾರದ ಭಾಗ ಎಂಬ ವಿವಾದಕ್ಕೆ ಬರೋಣ. ಈ ಸಿನಿಮಾ ಮಾರುಕಟ್ಟೆಯಲ್ಲಿ ಯಶಸ್ಸು ಗಳಿಸದಿದ್ದರೆ ಯಾರಿಗೂ ಹೊಟ್ಟೆ ಕೆಡುತ್ತಿರಲಿಲ್ಲ. ಆಗ ವಿರೋಧ ಪಕ್ಷಗಳು ಮಾತನಾಡುತ್ತಿರಲಿಲ್ಲ. ಬಿಜೆಪಿಯವರಿಗೆ ಮತ್ತು ಅವರ ಬೆಂಬಲಿಗರಿಗೆ ಮೌಲ್ಯಯುತ ಸಿನಿಮಾ ಅಂದರೆ ಗೊತ್ತಿಲ್ಲ, ಕಸವನ್ನೇ ಒಳ್ಳೇ ಸರಕು ಅಂತ ಚುನಾವಣೆಗೋಸ್ಕರ ನೀಡುತ್ತಿದ್ದಾರೆ ಮತ್ತು ಹಿಂದು-ಮುಸ್ಲಿಂ ಸಮುದಾಯ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಬೆಂಬಲದಿಂದ ಈ ಸಿನಿಮಾ ಇಷ್ಟು ಹಣ ಗಳಿಸಿದೆ. ಹೌದಾ? ಹಾಗಾದರೆ 2019 ರ ಮೇ 24 ರಂದು ಬಿಡುಗಡೆಗೊಂಡ ಪ್ರಧಾನಿ ನರೇಂದ್ರ ಮೋದಿ ಮೇಲಿನ ಜೀವನಚರಿತ್ರೆಯ ಸಿನಿಮಾ ಯಾಕೆ ಇಷ್ಟು ಯಶಸ್ಸು ಗಳಿಸಲಿಲ್ಲ? ಎರಡನೇ ಬಾರಿಗೆ ಪ್ರಧಾನಿಯಾಗಿ ಆಗಷ್ಟೇ ಆಯ್ಕೆಯಾಗಿ ಬಂದಿದ್ದ ಮೋದಿ ಅವರ ಬೆಂಬಲಿಗರು ಹುಚ್ಚೆದ್ದು ಆ ಸಿನಿಮಾ ನೋಡಬಹುದಿತ್ತು. ತಮ್ಮ ಬೆಂಬಲಿಗರಿಗೆ ಆ ಸಿನಿಮಾವನ್ನು ಪುಕ್ಕಟೆ ತೋರಿಸಿ ಮಾರುಕಟ್ಟೆಯಲ್ಲಿ ಅದನ್ನು ಸೂಪರ್ ಸಕ್ಸಸ್ ಮಾಡಬಹುದಿತ್ತಲ್ಲ? ಆಗ ಆಗದ ಕೆಲಸ ಈಗ ಹೇಗಾಯ್ತು. ಅದರ ಅರ್ಥ ಇಷ್ಟೆ; ಜನಕ್ಕೆ ಮೋದಿಯವರ ಮೇಲಿನ ಸಿನಿಮಾ ಇಷ್ಟವಾಗಿಲ್ಲದಿರಬಹುದು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಇಷ್ಟವಾಗಿರಬಹುದು. ಮೋದಿ ಸಿನಿಮಾವನ್ನು ಸೂಪರ್ ಸಕ್ಸಸ್ ಮಾಡದ ಜನ ಈ ಸಿನಿಮಾವನ್ನು ಏಕೆ ಆ ರೀತಿ ಒಪ್ಪಿಕೊಂಡರು? ಭಾರತದಲ್ಲಿ, ಹಿಂದು-ಮುಸ್ಲಿಂ ಹೊಡೆದಾಟದ ಕಥೆಗಳನ್ನು ತುಂಬಾ ನಿರ್ದೇಶಕರು ರೊಮ್ಯಾಂಟಿಕ್ ಆಗಿ ಚಿತ್ರಿಸಿದ್ದು ಇದೆ. ಅದು ಹೊಸದಲ್ಲ. ಈ ಸಿನಿಮಾವನ್ನು ಅಗ್ಗದ ಬಿಜೆಪಿ ಜಾಹೀರಾತಿನ ವಸ್ತು ಎನ್ನುವವರು ಮೋದಿ ಬಯೋಪಿಕ್ಗೆ ಹೋಲಿಸಿ ನೋಡಿದರೆ ಗೊತ್ತಾಗಬಹುದು. ನಿಜವಾದ ಕಾರಣ ಎಲ್ಲಿದೆ ಎಂದು. ಆ ಸಿನಿಮಾ ಮತ್ತು ಈ ಸಿನಿಮಾ ಬೇರೆ ಬೇರೆ ಪ್ರಕಾರದ (genre) ಸಿನಿಮಾಗಳು. ಎರಡು ಮಾತಿಲ್ಲ. ಬಿಜೆಪಿ ನಾಯಕರು ಸಿನಿಮಾ ಟಿಕೆಟ್ ಕೊಡಿಸುತ್ತಾರೆ ಎಂದಾಕ್ಷಣ, ಥಿಯೇಟರ್ಗಳಿಗೆ ಹೋಗುವಷ್ಟು ನಮ್ಮ ಜನ ಅಮಾಯಕರಲ್ಲ. ಈ ಸಿನಿಮಾದ ಟೀಕಾಕಾರರು ಪ್ರಾಯಶಃ ಇಲ್ಲಿಯೇ ತಪ್ಪು ಮಾಡಿರಬಹುದು ಎನ್ನಿಸುತ್ತಿದೆ. ಈ ಸಿನಿಮಾದ ಟೀಕಾಕಾರರು, ಇದರ ಯಶಸ್ಸಿನ ನಿಜವಾದ ಕಾರಣ ಹುಡುಕಲು ವಿಫಲರಾಗಿದ್ದಾರೆನೋ ಎಂಬ ಗುಮಾನಿ ಬರತೊಡಗಿದೆ. ಇಂತದೊಂದು ಹಿಂಸಾಚಾರ ಭಾರತದಲ್ಲಿ ಸ್ವಾತಂತ್ರ್ಯಾ ನಂತರ ನಡೆದಿದೆ. ಅದು ನಮಗೆ ಗೊತ್ತೇ ಇರಲಿಲ್ಲ ಎಂದು ನೋಡುಗರಿಗೆ ಅನ್ನಿಸಿರಬೇಕು. ಈ ಕಥೆ ಸಾಮಾನ್ಯ ಜನರಿಗೆ ಶಾಕಿಂಗ್ ವಾಲ್ಯು ಹೊತ್ತು ತಂದ ಸಿನಿಮಾ. ಆದ್ದರಿಂದ ಜನ ನೋಡಿದರು. ಇನ್ನು ನೋಡುತ್ತಿದ್ದಾರೆ.

ಮೊನ್ನೆ ಮೊನ್ನೆ ಮುಗಿದ ಐದು ರಾಜ್ಯ ಚುನಾವಣೆ ಅದರಲ್ಲಿಯೂ ಉತ್ತರ ಪ್ರದೇಶದ ಚುನಾವಣೆಗೆ ಎರಡು ಮೂರು ತಿಂಗಳು ಮೊದಲು ಈ ಸಿನಿಮಾ ಬಂದಿದ್ದರೆ ಬಿಜೆಪಿಯ ಪ್ರಚಾರದ ವಸ್ತು ಎನ್ನಬಹುದಿತ್ತು. ಆದರೆ, ಈಗ ಯಾವ ಚುನಾವಣೆ ಇಲ್ಲ. ಇನ್ನು 6-7 ತಿಂಗಳು ಯಾವ ಚುನಾವಣೆ ಇಲ್ಲ. ಹಾಗಾಗಿ ಚುನಾವಣೆಗೆ ಬಿತ್ತಿದ ಬೀಜ ಎಂದು ಹೇಳುವ ಆರೋಪದಲ್ಲಿ ಹುರುಳಿಲ್ಲ.

ಕೊನೆಯಲ್ಲಿ ಇನ್ನೊಂದು ಅಂಶವನ್ನು ಪರಾಮರ್ಶಿಸಲೇಬೇಕು. ಈ ಸಿನಿಮಾ ತೋರಿಸಿದ ಹಿಂಸಾಚಾರದ ಪ್ರಭಾವಕ್ಕೆ ಬಂದ ಹಿಂದೂಗಳು ಹಿಂಸಾಚಾರಕ್ಕೆ ಇಳಿಯಬಹುದು. ಆ ಮೂಲಕ ಸಮಾಜ ಒಡೆಯುವ ಕೆಲಸ ಮಾಡುತ್ತದೆ ಈ ಸಿನಿಮಾ, ಎಂದು ಖ್ಯಾತ ನಟ ಪ್ರಕಾಶ ರಾಜ್ ಕೂಡ ಹೇಳಿದ್ದಾರೆ. ಪ್ರಕಾಶ್ ರಾಜ್ ಮತ್ತು ಈ ಸಿನಿಮಾವನ್ನು ಟೀಕಿಸುವ ಬೇರೆ ಜನ ಹಾಲಿವುಡ್ನಲ್ಲಿ ಕ್ರೌರ್ಯವನ್ನು ವಿಜ್ರಂಭಿಸುವ ಸಿನಿಮಾಗಳ ಬಗ್ಗೆ ಗೊತ್ತಿಲ್ಲ ಎಂದು ಕಾಣುತ್ತದೆ. ಎ ಸೆರ್ಬಿಯನ್ ಫಿಲ್ಮ ಎನ್ನುವುದೇ ಒಂದು ಸಿನಿಮಾ ಹೆಸರು. ಇದು ಸೆರ್ಬಿಯಾ ದೇಶದಲ್ಲಿ ನಡೆದ ಯುದ್ಧದ ನಡುವಿನ ಬದುಕು ಮತ್ತು ಅಲ್ಲಿನ ಮಧ್ಯಮವರ್ಗದ ಮೌನದ ಬಗ್ಗೆ ಮಾಡಿದ ಸಿನಿಮಾ. ಇದು ಹಾಲಿವುಡ್ಡಿನ ಸಿನಿಮಾ ಅಲ್ಲ. ಇದರಲ್ಲಿರುವ ಹಿಂಸಾಚಾರವನ್ನು ನೋಡಿ ಜನ ಬೆಚ್ಚಿ ಬಿದ್ದಿದ್ದರು. ಆದರೆ ಆ ಸಿನಿಮಾ ನೋಡಿದವರಿಗೆ ಯುದ್ಧದ ಬಗೆಗೆ ವಾಕರಿಕೆ ಬರಬೇಕು ಹಾಗಿತ್ತು.

ಒಂದು ಸಿನಿಮಾ ರೊಮ್ಯಾಂಟಿಕ್​ ಆಗಿದ್ದರೆ ಮಾತ್ರ ಸರಿ. ಅಥವಾ ರಾಜಕೀಯ ಡ್ರಾಮಾ ಅಂದರೆ ರಾಜಕೀಯದ ದ್ರವ್ಯ ಇಟ್ಟುಕೊಂಡು ಕಲ್ಪಿತ ಸಿನಿಮಾ ಮಾಡಿದರೆ ಅದು ಜನರಿಗೆ ಮುಟ್ಟುತ್ತದೆ. ಆಗ ಜನರಿಗೆ ಆ ಸಿನಿಮಾದ ಸಂದೇಶ ತಲುಪುತ್ತದೆ ಮತ್ತು ಜನ ಅದರ ಮೂಲಕ ಪಾಠ ಕಲಿಯುತ್ತಾರೆ ಅಥವಾ ತಮ್ಮೊಳಗಿನ ಬದಲಾವಣೆ ತಂದುಕೊಳ್ಳುವ ಒತ್ತಾಸೆಗೆ ತಿದಿ ಒತ್ತುತ್ತಾರೆ ಎನ್ನುವ ವಿಚಾರಕ್ಕೆ ಇಲ್ಲಿವರೆಗೆ ಯಾವ ಸಾಕ್ಷ್ಯಾಧಾರಗಳೂ ಸಿಕ್ಕಿಲ್ಲ. ಹಾಗಾಗಿ ದಿ ಕಾಶ್ಮೀರ ಫೈಲ್ಸ್​ ಸಿನಿಮಾ ತಾನು ತೋರಿಸಿದ ಹಿಂಸೆ ಮೂಲಕ ಜನರನ್ನು ಹಾದಿ ತಪ್ಪಿಸುತ್ತದೆ ಎಂದು ಹೇಳುವುದು ಕೂಡ ತಪ್ಪಾಗಬಹುದು.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಜನ ಚರ್ಚೆ ಮಾಡುತ್ತಿದ್ದಾರೆ. ಇಂಥದೊಂದು ಘಟನೆ ಇತಿಹಾಸದ ಪುಟ ಸೇರದೇ ಮಣ್ಣೊಳಗೆ ಹೇಗೆ ಹೋಯ್ತು ಅಂತ. ಆದ್ದರಿಂದ, ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಮತ್ತು ಭಾರತದಲ್ಲಿ ಆಗುವ ಹಿಂಸಾಚಾರವನ್ನು ಮುಚ್ಚಿಡುವ ಚಾಳಿಯ ಬಗ್ಗೆ ಆರೋಗ್ಯಯುತ ಚರ್ಚೆಯ ಅವಶ್ಯಕತೆ ಅಗಬೇಕಿದೆ. ಆ ಹಿಂಸಾಚಾರವನ್ನೂ ಯಾರೇ ಮಾಡಿರಲಿ, ಅದನ್ನು ಚರ್ಚೆ ಮಾಡಬೇಕಿದೆ. ಈ ರೀತಿಯ ಸಿನಿಮಾ ನೋಡಿ, ಜನಾಂಗೀಯ ಹತ್ಯೆ ಬಗ್ಗೆ ಒಂದು catharsis ಆಗಬೇಕಾದದ್ದು ಒಳಿತು. ಅಲ್ಲಿ ಮುಸ್ಲಿಂರ ಮೇಲಿನ ಹಲ್ಲೆಯನ್ನು ಸೇರಿಸೋಣ. ಖಂಡಿತ ತಪ್ಪಿಲ್ಲ. ಇಡೀ ಮಾನವೀಯ ಮೌಲ್ಯ ಇಂತಹ ಸಂದರ್ಭದಲ್ಲಿ ಹತಾಶ ಸೋಲನ್ನು ಅನುಭವಿಸುವುದರ ಬಗ್ಗೆ ಚರ್ಚೆ ಆಗಬೇಕೇ ಹೊರತು, ದಿ ಕಾಶ್ಮೀರ್ ಫೈಲ್​ನ್ನು ತಿರಸ್ಕರಿಸುವ ಮನೋಭಾವವಲ್ಲ.

ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್​​​ ತೆರಿಗೆ ಮುಕ್ತ ಮಾಡುವುದಕ್ಕಿಂತ ಯೂಟ್ಯೂಬ್​​ನಲ್ಲೇ ಹಾಕಿಬಿಡಿ, ಎಲ್ಲರೂ ನೋಡಲಿ: ಅರವಿಂದ ಕೇಜ್ರಿವಾಲ್

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ‘ಜೇಮ್ಸ್‌’ ಸಿನಿಮಾಗೆ ತೊಂದರೆಯಿಲ್ಲ: ಶಿವರಾಜ್​ಕುಮಾರ್​ ಹೇಳಿಕೆ

Published On - 6:00 am, Fri, 25 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ