Explainer: ಉತ್ತರಾಖಂಡ್ನಲ್ಲಿ ಸತತ ಎರಡನೇ ಬಾರಿಗೆ ಬಿಜೆಪಿ ಗದ್ದುಗೆ ಏರಿದ್ದು ಹೇಗೆ? ಪ್ರಹ್ಲಾದ್ ಜೋಷಿ ರೂಪಿಸಿದ ಚುನಾವಣಾ ಸ್ಟ್ರಾಟಜಿ ಏನು?

| Updated By: ಆಯೇಷಾ ಬಾನು

Updated on: Mar 13, 2022 | 8:06 PM

ಉತ್ತರಾಖಂಡ್ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ನಡುವೆ ಬಹುಮತಕ್ಕಾಗಿ ಟೈಟ್ ಫೈಟ್ ಇದೆ ಎಂದೇ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೇ ಕೆಲ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯವಾಣಿಯನ್ನು ಸುಳ್ಳಾಗಿಸಿ ಬಿಜೆಪಿ ಭರ್ಜರಿಯಾಗಿ 46 ಕ್ಷೇತ್ರಗಳಲ್ಲಿ ಗೆದ್ದು ಭರ್ಜರಿ ಬಹುಮತವನ್ನೇ ಗಳಿಸಿದೆ. ಕಳೆದ ಚುನಾವಣೆಯಲ್ಲಿ 11 ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್ ಈಗ 19 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದೆ.

Explainer: ಉತ್ತರಾಖಂಡ್ನಲ್ಲಿ ಸತತ ಎರಡನೇ ಬಾರಿಗೆ ಬಿಜೆಪಿ ಗದ್ದುಗೆ ಏರಿದ್ದು ಹೇಗೆ? ಪ್ರಹ್ಲಾದ್ ಜೋಷಿ ರೂಪಿಸಿದ ಚುನಾವಣಾ ಸ್ಟ್ರಾಟಜಿ ಏನು?
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ
Follow us on

ದೆಹಲಿ: ಉತ್ತರಾಖಂಡ್ನಲ್ಲಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಟೈಟ್ ಫೈಟ್ ಇರುತ್ತೆ ಎಂಬ ನಿರೀಕ್ಷೆ ಇತ್ತು. ಕಳೆದ ಬಾರಿ ಬಿಜೆಪಿ 56 ಕ್ಷೇತ್ರಗಳಲ್ಲಿ ಗೆದ್ದಿತ್ತು. ಆಗ ಕಾಂಗ್ರೆಸ್ ಬರೀ 11 ಕ್ಷೇತ್ರಗಳಲ್ಲಿ ಗೆದ್ದಿತ್ತು. ಆದರೇ, ಕಳೆದ 5 ವರ್ಷದಲ್ಲಿ ಮೂವರು ಸಿಎಂಗಳನ್ನು ಬಿಜೆಪಿ ನೇಮಕ ಮಾಡಿತ್ತು. ಕಳೆದ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದಿರಲಿಲ್ಲ. ಬಿಜೆಪಿ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳೂ ಇದ್ದವು. 2021ರ ಜುಲೈನಲ್ಲಿ ಸಿಎಂ ಆಗಿ ನೇಮಕವಾದ ಪುಶ್ಕರ್ ಸಿಂಗ್ ಧಾಮಿಗೆ ಪಕ್ಷದ ಪರ ವಾತಾವರಣ ನಿರ್ಮಿಸುವ ಸಮಯಾವಕಾಶವೂ ಹೆಚ್ಚು ಇರಲಿಲ್ಲ. ಇದರಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದು ಕಷ್ಟ ಎಂಬ ಭಾವನೆಯೂ ಬಿಜೆಪಿ ನಾಯಕರು ಹಾಗೂ ರಾಜಕೀಯ ಪಂಡಿತರಲ್ಲಿತ್ತು. ಆದರೇ, ಎಲ್ಲರ ನಿರೀಕ್ಷೆ, ರಾಜಕೀಯ ಪಂಡಿತರ ಲೆಕ್ಕಚಾರ ತಲೆಕೆಳಗಾಗಿಸಿ ಉತ್ತರಾಖಂಡ್ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇನ್ನೇನು ಉತ್ತರಾಖಂಡ್ನಲ್ಲಿ ಅಧಿಕಾರಕ್ಕೆ ಬಂದೇಬಿಟ್ಟೇವು ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಫಲಿತಾಂಶ ನೋಡಿ ಶಾಕ್ ಆಗಿದೆ. ಇದಕ್ಕೆ ಕಾರಣ ಉತ್ತರಾಖಂಡ್ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ.

ಉತ್ತರಾಖಂಡ್ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ನಡುವೆ ಬಹುಮತಕ್ಕಾಗಿ ಟೈಟ್ ಫೈಟ್ ಇದೆ ಎಂದೇ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೇ ಕೆಲ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯವಾಣಿಯನ್ನು ಸುಳ್ಳಾಗಿಸಿ ಬಿಜೆಪಿ ಭರ್ಜರಿಯಾಗಿ 46 ಕ್ಷೇತ್ರಗಳಲ್ಲಿ ಗೆದ್ದು ಭರ್ಜರಿ ಬಹುಮತವನ್ನೇ ಗಳಿಸಿದೆ. ಕಳೆದ ಚುನಾವಣೆಯಲ್ಲಿ 11 ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್ ಈಗ 19 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದೆ. ಇದಕ್ಕೆ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿದ್ದ ಪ್ರಹ್ಲಾದ್ ಜೋಷಿ ರೂಪಿಸಿದ ಚುನಾವಣಾ ಸ್ಟ್ರಾಟಜಿಗಳು ಕಾರಣ. ಉತ್ತರಾಖಂಡ್, ದೇವಭೂಮಿ ಎಂದೇ ಹೆಸರಾಗಿರುವ ರಾಜ್ಯ. ಕೇದಾರನಾಥ್, ಬದರಿನಾಥ, ಗಂಗೋತ್ರಿ, ಯಮುನೋತ್ರಿ ಸೇರಿದಂತೆ ಚಾರ್ ಧಾಮ್ ಗಳ ನಾಡು. ಗುಡ್ಡಗಾಡು ರಾಜ್ಯ. ಹಿಮಾಲಯದ ತಪ್ಪಲಲ್ಲಿರುವ ರಾಜ್ಯ . ಒಂದೆಡೆ ಚೀನಾ , ಮತ್ತೊಂದೆಡೆ ನೇಪಾಳದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯ . ಇಂಥ ರಾಜ್ಯದಲ್ಲಿ ಯುವಕರು ಹೆಚ್ಚಾಗಿ ಸೇನೆಗೆ ಸೇರುತ್ತಾರೆ. ಪ್ರತಿ ಮನೆಯಲ್ಲೂ ಒಬ್ಬರು ಭಾರತೀಯ ಸೇನೆಯಲ್ಲಿ ಕೆಲಸ ಮಾಡ್ತಾರೆ. ಗ್ರಾಮದ ಎಲ್ಲ ಮನೆಗಳಲ್ಲೂ ಸೈನಿಕರೇ ಇರುವ ಗ್ರಾಮಗಳೂ ಇವೆ. ಇಂಥ ರಾಜ್ಯದಲ್ಲಿ ಈಗ ಗ್ರಾಮಗಳೇ ಕಣ್ಮರೆಯಾಗುತ್ತಿವೆ. ಉತ್ತರಾಖಂಡ್ ನಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಬೆಟ್ಟದ ಮೇಲೆ ಮನೆಗಳಿರುವ ಕಾರಣದಿಂದ ಎಲ್ಲೆಡೆ ರಸ್ತೆ, ವಿದ್ಯುತ್, ಕುಡಿಯುವ ನೀರು, ಆಸ್ಪತ್ರೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳೂ ಇಲ್ಲ. ಈ ಕಾರಣದಿಂದ ಜನರು ನಗರಗಳತ್ತ ದೊಡ್ಡ ಸಂಖ್ಯೆಯಲ್ಲಿ ವಲಸೆ ಹೋಗ್ತಾರೆ. ಪರಿಣಾಮ ಗ್ರಾಮಗಳೇ ಸಂಪೂರ್ಣ ಖಾಲಿಯಾಗಿ ಈಗ ಗೋಸ್ಟ್ ಗ್ರಾಮಗಳಾಗಿವೆ. ಮಳೆಗಾಲದಲ್ಲಿ ಇಲ್ಲಿನ ಜನರು ಬದುಕು ದುಸ್ತರವಾಗುತ್ತೆ. ಉದ್ಯೋಗ ಅರಸಿ ಜನರು ಡೆಹಾರಾಡೂನ್, ದೆಹಲಿ, ಮುಂಬೈ, ಚಂಡೀಘಡ, ಬೆಂಗಳೂರಿನಂಥ ನಗರಗಳತ್ತ ಮುಖ ಮಾಡೋದು ಸಾಮಾನ್ಯ. ಇಂಥ ಉತ್ತರಾಖಂಡ್ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಯೂ ಸಹಜವಾಗಿಯೇ ಇದೆ.

ಯಾವುದೇ ಸರ್ಕಾರವು ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಉದಾಹರಣೆಯೂ ಇಲ್ಲ. 2000 ನೇ ಇಸವಿಯಲ್ಲಿ ಉತ್ತರ ಪ್ರದೇಶದಿಂದ ಪ್ರತೇಕವಾಗಿ ಉತ್ತರಾಖಂಡ್ ರಾಜ್ಯ ರಚನೆಯಾದ ಬಳಿಕ ಒಮ್ಮೆ ಕಾಂಗ್ರೆಸ್ ಆಳ್ವಿಕೆ ನಡೆಸಿದರೇ, ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಸತತ ಎರಡನೇ ಬಾರಿಗೆ ಬಿಜೆಪಿಯೇ ಉತ್ತರಾಖಂಡ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಈ ಮೂಲಕ ಹೊಸ ಇತಿಹಾಸ ಉತ್ತರಾಖಂಡ್ ರಾಜ್ಯದಲ್ಲಿ ನಿರ್ಮಾಣವಾಗಿದೆ. ಬಿಜೆಪಿ ಸತತ ಎರಡನೇ ಬಾರಿಗೆ ಉತ್ತರಾಖಂಡ್ ನಲ್ಲಿ ಅಧಿಕಾರದ ಗದ್ದುಗೆ ಹಿಡಿಯುತ್ತಿರುವುದರ ಹಿಂದಿನ ಶಿಲ್ಪಿಯೇ ಬಿಜೆಪಿ ಚುನಾವಣಾ ಉಸ್ತುವಾರಿ ಆಗಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ. ಆರು ತಿಂಗಳ ಹಿಂದೆ ಉತ್ತರಾಖಂಡ್ ಚುನಾವಣಾ ಉಸ್ತುವಾರಿ ಆಗಿ ನೇಮಕಗೊಂಡಿದ್ದ ಪ್ರಹ್ಲಾದ್ ಜೋಷಿ ರೂಪಿಸಿದ್ದ ಚುನಾವಣಾ ತಂತ್ರಗಳ ಫಲವಾಗಿಯೇ ಉತ್ತರಾಖಂಡ್ ನಲ್ಲಿ ಬಿಜೆಪಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಹೊಸ ಇತಿಹಾಸ ನಿರ್ಮಿಸಿದೆ. ದಕ್ಷಿಣದ ಕರ್ನಾಟಕದಿಂದ ಹಿಮಾಲಯದ ತಪ್ಪಲಿನ ಉತ್ತರಾಖಂಡ್ ಗೆ ಹೋದ ಪ್ರಹ್ಲಾದ್ ಜೋಷಿ ಮಾಡಿದ ಚುನಾವಣಾ ತಂತ್ರ, ರೂಪಿಸಿದ ಪ್ಲ್ಯಾನ್, ಜನರನ್ನು ಒಲಿಸಿಕೊಳ್ಳಲು ಮಾಡಿದ ಯತ್ನಗಳು ಫಲ ನೀಡಿವೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಉತ್ತರಾಖಂಡ್ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುತ್ತಿದೆ. ಇದರ ಫುಲ್ ಕ್ರೆಡಿಟ್ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಹ್ಲಾದ್ ಜೋಷಿ ಅವರಿಗೆ ಸಲ್ಲುತ್ತೆ ಎಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಹಾಗಾದರೇ, ಉತ್ತರಾಖಂಡ್ ನಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ಆಗಿ ಪ್ರಹ್ಲಾದ್ ಜೋಷಿ ರೂಪಿಸಿದ ಚುನಾವಣಾ ಕಾರ್ಯತಂತ್ರ ಹೇಗಿತ್ತ? ಯಾವ ಯಾವ ಅಂಶಗಳಿಗೆ ಪ್ರಹ್ಲಾದ್ ಜೋಷಿ ಒತ್ತು ಕೊಟ್ಟಿದ್ದರು? ಪ್ರಹ್ಲಾದ್ ಜೋಷಿ ತಾವೊಬ್ಬ ಚುನಾವಣಾ ಮಾಸ್ಟರ್ ಸ್ಟ್ರಾಟಜಿಸ್ಟ್ ಎನ್ನುವುದನ್ನು ಸಾಧಿಸಿ ತೋರಿಸಿದ್ದೇಗೆ ಎನ್ನುವುದನ್ನು ಈಗ ವಿವರವಾಗಿ ಒಂದೊಂದಾಗಿ ಹೇಳ್ತೀವಿ ಓದಿ.

ಪ್ರಹ್ಲಾದ್ ಜೋಷಿ ರೂಪಿಸಿದ ಚುನಾವಣಾ ಕಾರ್ಯತಂತ್ರವೇನು?
ಪ್ರಹ್ಲಾದ್ ಜೋಷಿ ಉತ್ತರಾಖಂಡ್ ಬಿಜೆಪಿ ಚುನಾವಣಾ ಉಸ್ತುವಾರಿ ಆಗಿ ರೂಪಿಸಿದ ಚುನಾವಣಾ ಕಾರ್ಯತಂತ್ರಗಳು ಫಲ ನೀಡಿವೆ. ಯಾರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು, ಯಾರಿಗೆ ಟಿಕೆಟ್ ನಿರಾಕರಿಸಬೇಕು ಎನ್ನುವ ಬಗ್ಗೆ ಬಿಜೆಪಿ ಪಕ್ಷದಲ್ಲೇ ಅಂತರಿಕ ಸರ್ವೇ ನಡೆಸಿ ಟಿಕೆಟ್ ನೀಡುವ ಬಗ್ಗೆ ತೀರ್ಮಾನ ಕೈಗೊಂಡ ಜೋಷಿ, ಈ ಬಗ್ಗೆ ಬಿಜೆಪಿ ಹೈಕಮಾಂಡ್ ಗೆ ಶಿಫಾರಸ್ಸು ಮಾಡಿದ್ದರು. ಅದರಂತೆ ಟಿಕೆಟ್ ಹಂಚಿದ್ದು ಫಲ ನೀಡಿದೆ. ಪರಿಣಾಮವಾಗಿಯೇ ಬಿಜೆಪಿ ಭರ್ಜರಿಯಾಗಿ ಬಹುಮತದ ಮ್ಯಾಜಿಕ್ ನಂಬರ್ ಆದ 36 ಅನ್ನು ದಾಟಿ 46 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಉತ್ತರಾಖಂಡ್ 70 ವಿಧಾನಸಭಾ ಕ್ಷೇತ್ರಗಳಿರುವ ಚಿಕ್ಕ ರಾಜ್ಯ. ಇಂಥ ರಾಜ್ಯದಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಸೋಲು-ಗೆಲುವೇ ಯಾವ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಬೇಕು ಎನ್ನುವುದನ್ನು ನಿರ್ಧರಿಸುತ್ತೆ. ಹೀಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕೇ, ಹೊಸಬರಿಗೆ ಟಿಕೆಟ್ ನೀಡಬೇಕೇ, ಪಕ್ಷಾಂತರಿಗಳಿಗೆ ಮಣೆ ಹಾಕಬೇಕೇ ಎಂಬ ಬಗ್ಗೆ ಅಳೆದು ತೂಗಿ ಪ್ರಹ್ಲಾದ್ ಜೋಷಿ ತೆಗೆದುಕೊಂಡ ತೀರ್ಮಾನಗಳು ಈಗ ಫಲ ನೀಡಿವೆ.

ಕಡಿಮೆ ಅಂತರದಲ್ಲಿ ಸೋತಿದ್ದ ಕ್ಷೇತ್ರಗಳ ಗೆಲ್ಲಲು ಒತ್ತು
ಬಿಜೆಪಿ ಪಕ್ಷವು ಕಳೆದ ಬಾರಿ 56 ಕ್ಷೇತ್ರಗಳಲ್ಲಿ ಗೆದ್ದಿದ್ದರೂ, ಇನ್ನೂ 14 ಕ್ಷೇತ್ರಗಳಲ್ಲಿ ಸೋತಿತ್ತು. ಸೋತಿದ್ದ ಕ್ಷೇತ್ರಗಳನ್ನು ಈ ಬಾರಿ ಗೆಲ್ಲಲೇಬೇಕೆಂದು ಚುನಾವಣೆಗೆ ಆರು ತಿಂಗಳು ಮುಂಚಿನಿಂದಲೇ ಕಾರ್ಯತಂತ್ರ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದರು. ಎಲ್ಲೆಲ್ಲಿ ಕಳೆದ ಬಾರಿ ಬಿಜೆಪಿಗೆ ಹಿನ್ನಡೆಯಾಗಿತ್ತೋ ಅಲ್ಲೆಲ್ಲಾ ಈ ಬಾರಿ ಮತದಾರನ ಒಲವು ಗಳಿಸಿ ಮತ ಪಡೆಯಬೇಕೆಂದು ಸ್ಥಳೀಯ ನಾಯಕರು, ಅಭ್ಯರ್ಥಿಗಳಿಗೆ ಮುಂಚಿತವಾಗಿಯೇ ಪ್ರಹ್ಲಾದ್ ಜೋಷಿ ತಾಕೀತು ಮಾಡಿದ್ದರು. ಇದರ ಪರಿಣಾಮವಾಗಿ ಕಳೆದ ಬಾರಿ ಸೋತಿದ್ದ ಕ್ಷೇತ್ರಗಳನ್ನು ಈ ಬಾರಿ ಗೆಲ್ಲಲು ಸಾಧ್ಯವಾಯಿತು. ಇದರಿಂದ ಬಿಜೆಪಿ 46 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿದೆ. ಉತ್ತರಾಖಂಡ್ ನ 70 ಕ್ಷೇತ್ರಗಳಲ್ಲಿ 36 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರೆಡೂ ಗೆದ್ದಿವೆ. ಇವುಗಳನ್ನು ಸ್ವಿಂಗ್ ಕ್ಷೇತ್ರಗಳು ಎನ್ನುತ್ತೇವೆ. ಈ ಕ್ಷೇತ್ರಗಳಲ್ಲಿ ಮತ್ತೆ ಬಿಜೆಪಿಯೇ ಗೆಲ್ಲಲು ಪ್ಲ್ಯಾನ್ ರೂಪಿಸಿದ್ದರು. ಉಳಿದ 34 ಕ್ಷೇತ್ರಗಳಲ್ಲಿ ಹಾಲಿ ಶಾಸಕರೇ ಎರಡನೇ ಬಾರಿಯೂ ಗೆದ್ದು ಬಂದ ಉದಾಹರಣೆ ಇದೆ.

ಅಬ್ ಕೀ 60 ಪಾರ್ ಎಂಬ ಬಿಜೆಪಿ ಘೋಷಣೆ
ಪ್ರತಿಯೊಂದು ಚುನಾವಣೆಯಲ್ಲೂ ಬಿಜೆಪಿ ಬಹುಮತಕ್ಕಿಂತ ಹೆಚ್ಚಿನ ಕ್ಷೇತ್ರಗಳನ್ನೇ ಗೆಲ್ಲಬೇಕೆಂಬ ಗುರಿ ಹೊಂದಿರುತ್ತೆ. ಹೆಚ್ಚಿನ ಸ್ಥಾನದ ಗುರಿ ಹೊಂದಿದ್ದರೇ, ಕನಿಷ್ಠ ಬಹುಮತದ ಕ್ಷೇತ್ರಗಳನ್ನಾದರೂ ಗೆಲ್ಲಬಹುದು ಎಂಬ ಪ್ಲ್ಯಾನ್ ಬಿಜೆಪಿಯದ್ದು. ಕರ್ನಾಟಕದಲ್ಲೂ ಬಹುಮತದ ಮ್ಯಾಜಿಕ್ ನಂಬರ್ ಆದ 113 ಅನ್ನು ದಾಟಿ 150 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಗುರಿಯನ್ನು ಬಿಜೆಪಿ ಹೊಂದಿತ್ತು. ಉತ್ತರ ಪ್ರದೇಶದಲ್ಲಿ 300 ಕ್ಷೇತ್ರಗಳನ್ನ ಗೆಲ್ಲಬೇಕೆಂಬ ಗುರಿ ಹೊಂದಿತ್ತು. ಇದೇ ತಂತ್ರವನ್ನು ಪ್ರಹ್ಲಾದ್ ಜೋಷಿ ಅವರು ಉತ್ತರಾಖಂಡ್ ನಲ್ಲೂ ಆಳವಡಿಸಿಕೊಂಡಿದ್ದರು. ಕಳೆದ ಬಾರಿ 56 ಕ್ಷೇತ್ರ ಗೆದ್ದಿದ್ದರಿಂದ ಅಬ್ ಕೀ 60 ಪಾರ್ ಅಂದರೇ, ಈ ಬಾರಿ 60 ಕ್ಕಿಂತ ಹೆಚ್ಚಿನ ಕ್ಷೇತ್ರ ಗೆಲ್ಲಬೇಕೆಂಬ ಘೋಷಣೆ ಮೊಳಗಿಸಿದ್ದರು. ಉತ್ತರಾಖಂಡ್ ರಾಜ್ಯ ಬಿಜೆಪಿ ನಾಯಕರಿಗೂ 60 ಕ್ಕಿಂತ ಹೆಚ್ಚಿನ ಕ್ಷೇತ್ರ ಗೆಲ್ಲುವ ಕಠಿಣ ಟಾರ್ಗೆಟ್ ನೀಡಿ ಪಕ್ಷವನ್ನು ಚುನಾವಣೆಗೆ ಆಣಿಗೊಳಿಸಿದ್ದರು. ದೊಡ್ಡ ಟಾರ್ಗೆಟ್ ಹೊಂದಿದ್ದರಿಂದ ಈಗ 46 ಸೀಟುಗಳಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗಿದೆ.

ಕಾಂಗ್ರೆಸ್ ಒಳಜಗಳದ ಲಾಭ ಪಡೆಯುವ ಪ್ಲ್ಯಾನ್ ಯಶಸ್ವಿ
ಉತ್ತರಾಖಂಡ್ನಲ್ಲಿ ಎರಡೇ ಪಕ್ಷಗಳ ಆಳ್ವಿಕೆ. ಈ ಬಾರಿ ಆಮ್ ಆದ್ಮಿ ಪಾರ್ಟಿ ಎಂಟ್ರಿಯಾಗಿದ್ದರೂ, ಪ್ರಬಲ ರಾಜಕೀಯ ಶಕ್ತಿಯಾಗಿರಲಿಲ್ಲ. ಬಿಜೆಪಿಯ ಪ್ರಬಲ ಎದುರಾಳಿ ಅಂದರೇ ಕಾಂಗ್ರೆಸ್ ಪಕ್ಷ. ಆದರೇ, ಉತ್ತರಾಖಂಡ್ ಕಾಂಗ್ರೆಸ್ ಪಕ್ಷದಲ್ಲಿ ಅಂತರಿಕ ಕಚ್ಚಾಟ, ಬಣ ರಾಜಕೀಯ, ಗುಂಪುಗಾರಿಕೆ ಇತ್ತು. ಕಾಂಗ್ರೆಸ್ ಪಕ್ಷದ ಒಳಜಗಳದ ಲಾಭ ಪಡೆಯುವ ಪ್ಲ್ಯಾನ್ ಅನ್ನು ಜೋಷಿ ರೂಪಿಸಿ ಜಾರಿಗೆ ತಂದರು. ಅದು ಈಗ ಫಲ ನೀಡಿದೆ. ಕಾಂಗ್ರೆಸ್ ಪಕ್ಷದ ಮಾಜಿ ಸಿಎಂ ಹರೀಶ್ ರಾವತ್ ಅವರಿಗೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಆಸೆ ಇತ್ತು. ಆದರೇ, ಕಾಂಗ್ರೆಸ್ ಹೈಕಮಾಂಡ್ ರಾಮನಗರ ಕ್ಷೇತ್ರದಲ್ಲಿ ಹರೀಶ್ ರಾವತ್ ಗೆ ಟಿಕೆಟ್ ನೀಡಿರಲಿಲ್ಲ. ಕಾಂಗ್ರೆಸ್ ಪಕ್ಷ ಕೆಲವೊಂದು ಕ್ಷೇತ್ರಗಳಿಗೆ ಸೂಕ್ತವಲ್ಲದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದರ ಲಾಭ ಪಡೆಯಲು ಬಿಜೆಪಿಯ ಪ್ರಹ್ಲಾದ್ ಜೋಷಿ ಪ್ಲ್ಯಾನ್ ರೂಪಿಸಿ ಕಾರ್ಯರೂಪಕ್ಕೆ ತಂದರು. ಅದು ಈಗ ಫಲ ನೀಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆಯ ಬಗ್ಗೆ ಸರಿಯಾದ ಚುನಾವಣಾ ಹಾಗೂ ರಾಜಕೀಯ ಸ್ಟ್ರಾಟಜಿ ಇರಲಿಲ್ಲ. ಇದರ ಲಾಭವನ್ನು ಪಡೆಯಲು ಪ್ರಹ್ಲಾದ್ ಜೋಷಿ ಮಾಡಿದ ಪ್ರಯತ್ನಗಳು ಈಗ ನೀಡಿ ಬಿಜೆಪಿಗೆ ಭರ್ಜರಿ ಬಹುಮತ ಸಿಗಲು ಕಾರಣವಾಗಿವೆ.

ಅಧಿಕಾರ ವಿರೋಧಿ ಅಲೆ ಪರಿಣಾಮ ಬೀರದಂತೆ ಕ್ರಮ
5 ವರ್ಷ ಯಾವುದೇ ರಾಜ್ಯದಲ್ಲಿ ಆಡಳಿತ ನಡೆಸಿದ ರಾಜಕೀಯ ಪಕ್ಷ, ಅಧಿಕಾರ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗುತ್ತೆ. ಉತ್ತರಾಖಂಡ್ ನಲ್ಲೂ ಬಿಜೆಪಿ 5 ವರ್ಷ ಆಳ್ವಿಕೆ ನಡೆಸಿದ್ದರಿಂದ ಅಧಿಕಾರ ವಿರೋಧಿ ಅಲೆಯಲ್ಲಿ ಬಿಜೆಪಿ ಸೋಲುವ ಬಗ್ಗೆ ಬಿಜೆಪಿ ನಾಯಕರಿಗೆ ಆತಂಕ ಇತ್ತು. ಜೊತೆಗೆ 5 ವರ್ಷದಲ್ಲಿ ಮೂವರು ಸಿಎಂಗಳನ್ನು ನೀಡಿದೆ ಎಂಬ ವಿಪಕ್ಷಗಳ ಟೀಕೆ, ವಾಗ್ದಾಳಿಯ ಆರ್ಭಟವೂ ಜೋರಾಗಿತ್ತು. ಇವೆರಡನ್ನೂ ಮೆಟ್ಟಿ ನಿಂತು ಉತ್ತರಾಖಂಡ್ ನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಹ್ಲಾದ್ ಜೋಷಿ ಅವರಿಗೆ ಸಲ್ಲುತ್ತೆ. ಈ ಬಾರಿಯ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲೆ ಅಧಿಕಾರ ವಿರೋಧಿ ಅಲೆಯು ಪರಿಣಾಮ ಬೀರದಂತೆ ಪ್ರಹ್ಲಾದ್ ಜೋಷಿ ಮುನ್ನೆಚ್ಚರಿಕೆ ವಹಿಸಿದ್ದರು.

ಬಿಜೆಪಿ ತಪ್ಪುಗಳನ್ನು ಸರಿಪಡಿಸಿದ ಪ್ರಹ್ಲಾದ್ ಜೋಷಿ
ಉತ್ತರಾಖಂಡ್ ನಲ್ಲಿ 5 ವರ್ಷ ಆಳ್ವಿಕೆ ನಡೆಸಿದ ಬಿಜೆಪಿ ಕೆಲ ತಪ್ಪು ತೀರ್ಮಾನಗಳನ್ನು ಆಡಳಿತ ನಡೆಸುವಾಗ ಕೈಗೊಂಡಿತ್ತು. ಮೊದಲಿಗೆ ಸಿಎಂ ಆಗಿದ್ದ ತ್ರಿವೇಂದ್ರ ಸಿಂಗ್ ರಾವತ್ ಉತ್ತರಾಖಂಡ್ ರಾಜ್ಯದ ಚಾರ್ ಧಾಮ ದೇವಾಲಯಗಳು ಸೇರಿದಂತೆ 50 ದೇವಸ್ಥಾನಗಳನ್ನು ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವ ತೀರ್ಮಾನ ಕೈಗೊಂಡಿದ್ದರು. ದೇವಸ್ಥಾನ ಬೋರ್ಡ್ ಕಾಯಿದೆಯನ್ನು ಜಾರಿಗೆ ತರಲು ತ್ರಿವೇಂದ್ರ ಸಿಂಗ್ ರಾವತ್ ನಿರ್ಧರಿಸಿದ್ದರು. ಇದಕ್ಕೆ ಜನರು, ದೇವಾಲಯಗಳ ಆಡಳಿತ ಮಂಡಳಿಯಿಂದ ಬಾರಿ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ವಿರುದ್ಧ ಜನ ಅಂದೋಲನವೇ ನಡೆದಿತ್ತು. ದೇವಾಲಯಗಳ ಅರ್ಚಕರು ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್ ಕೂಡ ಹೌದು. ಹೀಗಾಗಿ ಇದನ್ನು ಅರ್ಥ ಮಾಡಿಕೊಂಡ ಪ್ರಹ್ಲಾದ್ ಜೋಷಿ ಅವರು ಪುಷ್ಕರ್ ಸಿಂಗ್ ದಾಮಿ ಸಿಎಂ ಆದ ಬಳಿಕ ದೇವಾಲಯಗಳನ್ನು ಸರ್ಕಾರದ ನಿಯಂತ್ರಣಕ್ಕೆ ಪಡೆಯುವ ನಿರ್ಧಾರ ಕೈ ಬಿಡುವಂತೆ ಮಾಡಿದ್ದರು. ಇದರಿಂದ ಬಿಜೆಪಿ ಮೇಲಿನ ಜನರ ಸಿಟ್ಟು, ಆಕ್ರೋಶ ಕರಗುವಂತೆ ಮಾಡಿದ್ದರು. ಬಿಜೆಪಿಯ ಸಿದ್ದಾಂತವಾದ ಹಿಂದುತ್ವದ ತತ್ವ, ಸಿದ್ದಾಂತವನ್ನು ಜನರಿಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟರು. ಭಾರತೀಯ ಸೇನೆಯ ಸೈನಿಕರಿಗೆ ಒನ್ ಱಂಕ್ , ಒನ್ ಪೆನ್ಷನ್ ಯೋಜನೆ ಜಾರಿಗೊಳಿಸಿದ್ದು ಕೇಂದ್ರದ ಮೋದಿ ಸರ್ಕಾರ ಎಂಬುದನ್ನು ಜನರಿಗೆ ಮತ್ತೊಮ್ಮೆ ನೆನಪಿಸಿದರು. ಬಿಜೆಪಿ 5 ವರ್ಷದಲ್ಲಿ ಮೂವರು ಸಿಎಂ ನೀಡಿದ್ದರೂ, ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ಪ್ರಹ್ಲಾದ್ ಜೋಷಿ ಮನವರಿಕೆ ಮಾಡಿಕೊಡಲು ಪ್ಲ್ಯಾನ್ ರೂಪಿಸಿದ್ದರು. ಇದರಿಂದಾಗಿ ಉತ್ತರಾಖಂಡ್ ರಾಜ್ಯ ಆಳಲು ಮತ್ತೊಮ್ಮೆ ಬಿಜೆಪಿಗೆ ಜನಾದೇಶ ನೀಡಬೇಕೆಂಬ ಭಾವನೆ ಜನರಲ್ಲಿ ಮೂಡುವಂತೆ ಪ್ರಹ್ಲಾದ್ ಜೋಷಿ ಮಾಡಿದ್ದರು.

ಡಬಲ್ ಇಂಜಿನ್ ಸರ್ಕಾರ, ಸಿಎಂ ಬದಲಾವಣೆಯ ಫಲ
ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇದೆ. ಉತ್ತರಾಖಂಡ್ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದರೇ ಅಭಿವೃದ್ದಿಗೆ ವೇಗ ಸಿಗುತ್ತೆ. ಡಬಲ್ ಇಂಜಿನ್ ಸರ್ಕಾರ ಇದ್ದಾಗ ಅಭಿವೃದ್ದಿಗೆ ಎರಡು ಪಟ್ಟು ವೇಗ ಸಿಗುತ್ತೆ ಎನ್ನುವುದನ್ನ ಪ್ರಹ್ಲಾದ್ ಜೋಷಿ ಚುನಾವಣೆಯಲ್ಲಿ ಪ್ರಚಾರ ಮಾಡಲು ಕಾರ್ಯತಂತ್ರ ರೂಪಿಸಿದ್ದರು. ಇದಕ್ಕೆ ಜನರು ಮನ್ನಣೆ ನೀಡಿದ್ದಾರೆ. ಇನ್ನೂ 2017 ರಲ್ಲಿ ಸಿಎಂ ಆಗಿದ್ದ ತ್ರಿವೇಂದ್ರ ಸಿಂಗ್ ರಾವತ್, ವಿರೋಧಿ ಅಲೆ ಇತ್ತು. ಹೀಗಾಗಿ ಬಿಜೆಪಿ ಸಿಎಂ ಬದಲಾಯಿಸುವ ತೀರ್ಮಾನ ಕೈಗೊಂಡಿದ್ದು ವಿಧಾನಸಭಾ ಚುನಾವಣೆಯಲ್ಲಿ ಫಲ ನೀಡಿದೆ. ಪುಷ್ಕರ್ ಸಿಂಗ್ ಧಾಮಿ , ಜನಾಕರ್ಷಣೆಯ ನಾಯಕರಲ್ಲ. ಆದರೇ, ಅವರ ಬಗ್ಗೆ ಹೆಚ್ಚಿನ ನೆಗೆಟಿವ್ ಅಂಶಗಳೂ ಇರಲಿಲ್ಲ. ಫುಷ್ಕರ್ ಸಿಂಗ್ ಧಾಮಿ ಸಿಎಂ ಆಗಿ ನೇಮಕ ಮಾಡಿದ್ದು, ಬಿಜೆಪಿ ಗೆಲುವಿಗೆ ಸಹಾಯಕವಾಯಿತು. ಜೊತೆಗೆ ಮೋದಿ ಫ್ಯಾಕ್ಟರ್ ಕೂಡ ಬಿಜೆಪಿ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದೆ.

ಮಹಿಳೆಯರ ಮತ ಸೆಳೆಯುವ ಪ್ರಯತ್ನ ಯಶಸ್ವಿ
ಉತ್ತರಾಖಂಡ್ ನಲ್ಲಿ ಬಿಜೆಪಿಯು ಪ್ರಹ್ಲಾದ್ ಜೋಷಿ ನಾಯಕತ್ವದಲ್ಲಿ ಮಹಿಳೆಯರ ಮತಗಳನ್ನು ಚುನಾವಣೆಯಲ್ಲಿ ಸೆಳೆಯುವ ಕಾರ್ಯತಂತ್ರ ರೂಪಿಸಿತ್ತು. ಮಹಿಳೆಯರಿಗೆ ಉಜ್ವಲ್ ಯೋಜನೆಯ ಗ್ಯಾಸ್ ಸಿಲಿಂಡರ್ ನೀಡಿಕೆ, ಕನ್ಯಾದಾನ ಯೋಜನೆ ಮೂಲಕ ಮದುವೆಗೆ ನೆರವು ಸೇರಿದಂತೆ ಮಹಿಳಾ ಪರ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಈ ಯೋಜನೆಗಳ ಫಲಾನುಭವಿಗಳ ಮತಗಳನ್ನು ಬಿಜೆಪಿಯತ್ತ ಸೆಳೆಯಲು ಪ್ರಹ್ಲಾದ್ ಜೋಷಿ ಕಾರ್ಯತಂತ್ರ ರೂಪಿಸಿದ್ದರು. ಇದರಿಂದಾಗಿ ಚುನಾವಣೆಯಲ್ಲಿ ಮಹಿಳೆಯರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಬಂದಿವೆ. ಬಿಜೆಪಿಗೆ ಬಹುಮತ ಸಿಗಲು ಪ್ರಹ್ಲಾದ್ ಜೋಷಿ ರೂಪಿಸಿದ ಈ ತಂತ್ರ ಉತ್ತಮ ಫಲ ನೀಡಿದೆ.

ಸಮಾಜ ಕಲ್ಯಾಣ ಯೋಜನೆ ಮತಗಳಾಗಿ ಪರಿವರ್ತನೆ
ಕೇಂದ್ರ ಸರ್ಕಾರವು ಕೋವಿಡ್ ಕಾಲದಲ್ಲಿ ಬಡವರಿಗೆ ಉಚಿತ ಆಹಾರಧಾನ್ಯ ನೀಡಿತ್ತು. ಜನರಿಗೆ ಉದ್ಯೋಗ ಸಿಗಲೆಂದು ಹೆಚ್ಚಿನ ಮಾನವ ದಿನಗಳ ಮೂಲಕ ನರೇಗಾ ಯೋಜನೆ ಉದ್ಯೋಗಾವಕಾಶ ನೀಡಲಾಗಿತ್ತು. ರೈತರ ಬ್ಯಾಂಕ್ ಖಾತೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೂಲಕ ನೇರ ಹಣ ವರ್ಗಾವಣೆ ಮಾಡಲಾಗಿತ್ತು. ಸರ್ಕಾರದ ಈ ಯೋಜನೆಗಳು ಮತಗಳಾಗಿ ಪರಿವರ್ತನೆಯಾಗುವಂತೆ ಪ್ರಹ್ಲಾದ್ ಜೋಷಿ ಕಾರ್ಯತಂತ್ರ ರೂಪಿಸಿ, ಜಾರಿಗೆ ತಂದರು.

ರೈತರ ಪ್ರತಿಭಟನೆ, ಕುಂಭಮೇಳ ಚುನಾವಣೆ ಮೇಲೆ ಪರಿಣಾಮವಿಲ್ಲ
ದೆಹಲಿಯಲ್ಲಿ ರೈತರು ಕೇಂದ್ರದ ಕೃಷಿ ಕಾಯಿದೆ ವಿರುದ್ಧ ನಡೆಸಿದ ಪ್ರತಿಭಟನೆಗಳು ಉತ್ತರಾಖಂಡ್ ರಾಜ್ಯದ ಚುನಾವಣೆ ಮೇಲೂ ಪರಿಣಾಮ ಬೀರುತ್ತಿದ್ದವು. ಉತ್ತರಾಖಂಡ್ ರಾಜ್ಯದಲ್ಲೂ ಉದಾಮ್ ಸಿಂಗ್ ನಗರ, ನೈನಿತಾಲ್, ಹರಿದ್ವಾರ್ ಸೇರಿದಂತೆ ಕೆಲ ಜಿಲ್ಲೆಗಳು ಕೃಷಿ ಮೇಲೆ ಅವಲಂಬಿತವಾಗಿವೆ. ಉತ್ತರಾಖಂಡ್ ರೈತರು ಕೂಡ ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಆದರೇ, ಕೇಂದ್ರದ ಕೃಷಿ ಕಾಯಿದೆ ವಾಪಸ್ ಪಡೆದ ಬಳಿಕ ರೈತರ ಪ್ರತಿಭಟನೆ ವಿಷಯ ಚುನಾವಣಾ ವಿಷಯವಾಗದಂತೆ ನೋಡಿಕೊಳ್ಳಲಾಗಿತ್ತು. ಜೊತೆಗೆ ಉತ್ತರಾಖಂಡ್ ಹರಿದ್ವಾರದಲ್ಲಿ ಕೋವಿಡ್ ಮಧ್ಯೆಯೂ ಕುಂಭಮೇಳ ನಡೆಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದು ಕೂಡ ಚುನಾವಣಾ ವಿಷಯವಾಗದಂತೆ ನೋಡಿಕೊಳ್ಳಲಾಗಿತ್ತು. ಇವೆಲ್ಲವೂ ಪ್ರಹ್ಲಾದ್ ಜೋಷಿ ಅವರ ಚುನಾವಣಾ ಸ್ಟ್ರಾಟಜಿಗಳು.

ಈ ಸ್ಟ್ರಾಟಜಿಗಳೇ ಈಗ ಉತ್ತರಾಖಂಡ್ ನಲ್ಲಿ ಬಿಜೆಪಿಯು ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದು ಹೊಸ ಇತಿಹಾಸ ನಿರ್ಮಾಣಕ್ಕೆ ಕಾರಣವಾಗಿವೆ. ಈ ಮೂಲಕ ತಮ್ಮ ತವರು ಕ್ಷೇತ್ರ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ 2004 ರಿಂದ ಗೆಲ್ಲುತ್ತಾ ಬಂದಿರುವ ಪ್ರಹ್ಲಾದ್ ಜೋಷಿ ದೂರದ ಉತ್ತರಾಖಂಡ್ ನಲ್ಲೂ ತಮ್ಮ ಚುನಾವಣಾ ಅನುಭವ, ಆಡಳಿತ ಅನುಭವವನ್ನು ಉತ್ತರಾಖಂಡ್ ನಲ್ಲೂ ಸಮರ್ಪಕವಾಗಿ ಬಿಜೆಪಿ ಪರವಾಗಿ ಬಳಸಿದ್ದಾರೆ. ಜನರ ನಾಡಿಮಿಡಿತ ಅರ್ಥ ಮಾಡಿಕೊಂಡು ಆಯಾ ರಾಜ್ಯಕ್ಕೆ ಅನುಗುಣವಾಗಿ ಚುನಾವಣಾ ಸ್ಟ್ರಾಟಜಿ ರೂಪಿಸುವ ಶಕ್ತಿ ಸಾಮರ್ಥ್ಯ ತಮಗೂ ಇದೆ ಎಂಬುದನ್ನ ಸಾಧಿಸಿ ತೋರಿಸಿದ್ದಾರೆ. ಅನಂತಕುಮಾರ್ ಈ ಹಿಂದೆ ರಾಷ್ಟ್ರ ಮಟ್ಟದಲ್ಲಿ ತಮ್ಮ ಸಂಘಟನಾ ಸಾಮರ್ಥ್ಯ, ಬುದ್ದಿಶಕ್ತಿಯಿಂದ ಹೈಕಮಾಂಡ್ ನಾಯಕರ ಒಲವು ಗಳಿಸಿಕೊಂಡಿದ್ದರು. ಈಗ ರಾಷ್ಟ್ರ ಮಟ್ಟದಲ್ಲಿ ಅನಂತಕುಮಾರ್ ಸ್ಥಾನವನ್ನು ಅವರ ಶಿಷ್ಯರೇ ಆದ ಪ್ರಹ್ಲಾದ್ ಜೋಷಿ ಸಮರ್ಥವಾಗಿ ತುಂಬುತ್ತಿದ್ದಾರೆ. ಗುರುವಿನ ಸ್ಥಾನವನ್ನು ಶಿಷ್ಯ ತುಂಬುವುದು ಬಹಳ ಕಷ್ಟ. ಆದರೇ, ಪ್ರಹ್ಲಾದ್ ಜೋಷಿ ತಮ್ಮ ಚಾಣಾಕ್ಯ ನಡೆಯಿಂದ ತಾವೊಬ್ಬ ಚುನಾವಣಾ ಚಾಣಾಕ್ಯರೂ ಹೌದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ಕಾರವಾರ: ಕಾಳಿ ನದಿಯಿಂದ ಆಹಾರ ಅರಸಿ ಬಂದ ಮೊಸಳೆ ಪಾಳು ಬಾವಿಗೆ ಬಿದ್ದು ಸಾವು

Published On - 8:05 pm, Sun, 13 March 22