Hijab Verdict: ಕರ್ನಾಟಕದ ಹಿಜಾಬ್ ವಿವಾದಕ್ಕೂ, ಇರಾನ್​ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗೂ ಇದೆ ಹಲವು ವ್ಯತ್ಯಾಸ

| Updated By: ರಶ್ಮಿ ಕಲ್ಲಕಟ್ಟ

Updated on: Oct 13, 2022 | 2:02 PM

ಇರಾನ್‌ನಲ್ಲಿನರುವ ಹಿಜಾಬ್ ಕಾನೂನುಗಳ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಮತ್ತು ಮಹ್ಸಾ ಅಮಿನಿಯ ನಿಲುವಿಗೆ ಬೆಂಬಲ ಸೂಚಿಸಿಇರಾನ್‌ನಾದ್ಯಂತ ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್‌ಗಳನ್ನು ಸುಡುತ್ತಿದ್ದಾರೆ

Hijab Verdict: ಕರ್ನಾಟಕದ ಹಿಜಾಬ್ ವಿವಾದಕ್ಕೂ, ಇರಾನ್​ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗೂ ಇದೆ ಹಲವು ವ್ಯತ್ಯಾಸ
ಪ್ರಾತಿನಿಧಿಕ ಚಿತ್ರ
Follow us on

22 ವರ್ಷದ ಮಹ್ಸಾ ಅಮಿನಿಯ (Mahsa Amini) ಸಾವು ಪ್ರಪಂಚದಾದ್ಯಂತದ ನಾಗರಿಕ ಸಮಾಜದ ಸಾಮೂಹಿಕ ಆತ್ಮಸಾಕ್ಷಿಯನ್ನು ತಲ್ಲಣಗೊಳಿಸಿದೆ. ಆಕೆಯ ದಿರಿಸು ಸರಿಯಿಲ್ಲ ಇರಾನ್‌ನಲ್ಲಿ ನೈತಿಕ ಪೊಲೀಸರು ಅವಳನ್ನು ಬಂಧಿಸಿದರು. ಪೊಲೀಸರಿಂದ ಥಳಿತಕ್ಕೊಳಗಾದ, ಅವಳು ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಳು. ಎರಡು ದಿನಗಳ ಕಾಲ ಕೋಮಾದಲ್ಲಿದ್ದ ಆಕೆ ಸಾವಿಗೀಡಾದಾಗ ಎರಡು ಕೂದಲಿಗಾಗಿ ಆಕೆಯನ್ನು ಸಾಯಿಸಿದರು ಎಂದು ಅಮಿನಿಯ ಅಪ್ಪ ಕಣ್ಣೀರಾದರು. ಆಕೆಯ ಸಾವಿನ ನಂತರದ ಬೃಹತ್ ಪ್ರತಿಭಟನೆಗಳು ನಡೆದಿವೆ. ಇರಾನ್‌ನ ಭದ್ರತಾ ಪಡೆಗಳೊಂದಿಗೆ ಹಿಂಸಾತ್ಮಕ ಘರ್ಷಣೆಗಳಲ್ಲಿ ಕನಿಷ್ಠ 75 ನಾಗರಿಕರು ತಮ್ಮ ಜೀವ ಕಳೆದುಕೊಂಡಿದ್ದು ಇನ್ನೂ ಅನೇಕರು ತೀವ್ರ ಗಾಯಗಳಿಗೆ ಒಳಗಾಗಿದ್ದಾರೆ. ಇರಾನ್‌ನಲ್ಲಿನರುವ ಹಿಜಾಬ್ (Hijab) ಕಾನೂನುಗಳ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಮತ್ತು ಮಹ್ಸಾ ಅಮಿನಿಯ ನಿಲುವಿಗೆ ಬೆಂಬಲ ಸೂಚಿಸಿಇರಾನ್‌ನಾದ್ಯಂತ ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್‌ಗಳನ್ನು ಸುಡುತ್ತಿದ್ದಾರೆ. ಇನ್ನು ಕೆಲವರು ತಮ್ಮ ಕೂದಲನ್ನು ಕತ್ತರಿಸುತ್ತಿದ್ದಾರೆ. ಓಸ್ಲೋ ಮೂಲದ ಸಂಘಟನೆಯಾದ ಇರಾನ್ ಹ್ಯೂಮನ್ ರೈಟ್ಸ್, ಬೀದಿ ಹಿಂಸಾಚಾರವು 80 ಕ್ಕೂ ಹೆಚ್ಚು ಪಟ್ಟಣಗಳು ಮತ್ತು ನಗರಗಳಿಗೆ ಹರಡಿದೆ ಎಂದು ವರದಿ ಮಾಡಿದೆ. ಪ್ರತಿಭಟನಾಕಾರರ ದೊಡ್ಡ ಕೂಟಗಳಿಗೆ ಅಡ್ಡಿಪಡಿಸುವ ಪ್ರಯತ್ನದಲ್ಲಿ ಇಂಟರ್ನೆಟ್ ಬಳಕೆಯ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲು ಚಿಂತನೆ ನಡೆದಿದೆ.

ಆದಾಗ್ಯೂ, ಇರಾನ್‌ನಲ್ಲಿ ಹಿಜಾಬ್ ವಿರೋಧಿ ಮತ್ತು ಸ್ಥಾಪನೆ ವಿರೋಧಿ ಪ್ರತಿಭಟನಾಕಾರರು ಬೀದಿಗಿಳಿದಿರುವುದು ಇದೇ ಮೊದಲಲ್ಲ. 1979 ರಲ್ಲಿ ಇಸ್ಲಾಮಿಕ್ ಕ್ರಾಂತಿಯ ನಂತರ, ಇರಾನ್‌ನಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಎಲ್ಲಾ ಸಮಯದಲ್ಲೂ ಹಿಜಾಬ್ ಧರಿಸಲು ಕಾನೂನಿನ ಮೂಲಕ ಕಡ್ಡಾಯಗೊಳಿಸಲಾಗಿದೆ. ಹಿಜಾಬ್ ಧರಿಸದೇ ಇದ್ದರೆ ಭಾರೀ ದಂಡಗಳು, ಜೈಲು ಶಿಕ್ಷೆ ಅಥವಾ ತೀವ್ರವಾದ ದೈಹಿಕ ನಿಂದನೆ ಅನುಭವಿಸಬೇಕಾಗುತ್ತದೆ. ಇದನ್ನು ನೈತಿಕ ಪೋಲೀಸರು “ಮರು-ಶಿಕ್ಷಣ” ಎಂದು ಕರೆಯುತ್ತಾರೆ.

ಡಿಸೆಂಬರ್ 2017 ರಲ್ಲಿ, 31 ವರ್ಷದ ವಿದಾ ಮೊವಾಹೆಡ್ ತನ್ನ ಸ್ಕಾರ್ಫ್ ಅನ್ನು ಸಾರ್ವಜನಿಕವಾಗಿ ತೆಗೆದು ಬೀಸಿದ್ದಕ್ಕಾಗಿ ಬಂಧಿಸಲಾಯಿತು, ಇದು ವ್ಯಾಪಕ ಖಂಡನೆಗೆ ಕಾರಣವಾಯಿತು. ನರ್ಗೆಸ್ ಹೊಸೇನಿ, ಅಜಮ್ ಜಾಂಗ್ರಾವಿ, ಶಪರಾಕ್ ಶಜರಿಜಾದೆ, ಮರ್ಯಮ್ ಶರಿಯತ್ಮದರಿ ಮತ್ತು ಹಮ್ರಾಜ್ ಸದೇಘಿ ಸೇರಿದಂತೆ ಹಲವಾರು ಮಹಿಳೆಯರು ಇದೇ ರೀತಿ ಪ್ರತಿಭಟಿಸಿದ್ದು ಕಾನೂನು ಅಧಿಕಾರಿಗಳಿಂದ ತೀವ್ರ ಕ್ರಮಗಳನ್ನು ಎದುರಿಸಿದರು. ಸೆಯ್ಯದ್ ಮೆಹದಿ ತಬತಾಬಾಯಿಯಂತಹ ಇಸ್ಲಾಮಿಕ್ ವಿದ್ವಾಂಸರು ಕೂಡ ಹಿಜಾಬ್ ಅನ್ನು ಜನರ ಮೇಲೆ ಬಲವಂತವಾಗಿ ಹೇರುವುದು ಇಸ್ಲಾಂಗೆ ವಿರುದ್ಧವಾಗಿದೆ ಎಂದಿದ್ದಾರೆ.

ಭಾರತದಲ್ಲಿ ಮಹಿಳೆಯರು ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ಆದರೆ ಇರಾನ್‌ನಲ್ಲಿ ಮಹಿಳೆಯರು ಹಿಜಾಬ್ ಧರಿಸುವುದು ಬೇಡ ಎಂಬ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ಎರಡೂ ಸ್ಥಳಗಳಲ್ಲಿ ಮಹಿಳೆಯರು ಹೇಗೆ ಹೋರಾಡುತ್ತಿದ್ದಾರೆ ಎಂಬುದರ ಕುರಿತು ಭಾರತೀಯ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಈ ಎರಡೂ ಪ್ರತಿಭಟನೆಗಳು ಭಿನ್ನವಾಗಿದ್ದರೂ ಮಹಿಳೆಯರು ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಿದ್ದಾರೆ.

ಈ ನಿರೂಪಣೆಯು ಮೇಲೆ ಹೇಳಿದ ಎರಡು ದೇಶಗಳಲ್ಲಿನ ಸನ್ನಿವೇಶಗಳ ಸಮೀಪದೃಷ್ಟಿಯ ತಿಳುವಳಿಕೆಯನ್ನು ಸೂಚಿಸುತ್ತದೆ. ಮಹಿಳೆಯರು ತಮಗೆ ಬೇಕಾದುದನ್ನು ಧರಿಸುವ ಆಯ್ಕೆಯನ್ನು ಹೊಂದಿರಬೇಕೇ? ಇದಕ್ಕೆ ಉತ್ತರ ಹೌದು. ಭಾರತ ಮತ್ತು ಇರಾನ್‌ನಲ್ಲಿನ ಹಿಜಾಬ್ ಪರಿಸ್ಥಿತಿಯ ನಡುವೆ ಏನಾದರೂ ದೂರದ ಸಮಾನತೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎಂಬುದಾಗಿದೆ.

ಕರ್ನಾಟಕದ ಜೂನಿಯರ್ ಕಾಲೇಜೊಂದರ ಕೆಲವು ಮುಸ್ಲಿಂ ವಿದ್ಯಾರ್ಥಿಗಳಿಗೆ ತಮ್ಮ ಉಡುಪು ಕಾಲೇಜಿನ ಸಮವಸ್ತ್ರ ನೀತಿಯನ್ನು ಉಲ್ಲಂಘಿಸುತ್ತಿದೆ ಎಂಬ ಕಾರಣಕ್ಕಾಗಿ ಪ್ರವೇಶವನ್ನು ನಿರಾಕರಿಸಿದಾಗ ಭಾರತದಲ್ಲಿ ಹಿಜಾಬ್ ವಿವಾದವುಂಟಾಯಿತು.

ಮೊದಲನೆಯದಾಗಿ, ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿಗಳು ಆವರಣದೊಳಗೆ ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿಲ್ಲ. ಅವರು ಕ್ಯಾಂಪಸ್‌ನಲ್ಲಿ ಬುರ್ಖಾ ಮತ್ತು ನಿಖಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ಸಮವಸ್ತ್ರ ಮತ್ತು ವಿದ್ಯಾರ್ಥಿಯ ಗುರುತನ್ನು ಸಂಪೂರ್ಣವಾಗಿ ಮರೆಮಾಚುತ್ತದೆ. ಅವರ ಬೇಡಿಕೆಗಳ ಕಠಿಣತೆಯನ್ನು ಕಡಿಮೆ ಮಾಡಲು “ಹಿಜಾಬ್” ಪದವನ್ನು ಬಳಸಲಾಗುತ್ತಿದೆ.

ಎರಡನೆಯದಾಗಿ, ಭಾರತೀಯ ಸಂವಿಧಾನದಲ್ಲಿ ಮಹಿಳೆಯರಿಗೆ ನೀತಿ ಸಂಹಿತೆಯನ್ನು ಕಡ್ಡಾಯಗೊಳಿಸುವ ಯಾವುದೇ ಕಾನೂನು ಇಲ್ಲ, ಇದು ಇರಾನಿನ ಧರ್ಮಪ್ರಭುತ್ವವನ್ನು ಸ್ವಲ್ಪವೇ  ಹೋಲುತ್ತದೆ. ಬದಲಿಗೆ, ಭಾರತೀಯ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಮಾನವ ಘನತೆಯೊಂದಿಗೆ ಬದುಕುವ ಹಕ್ಕುನಿಂದ ರಕ್ಷಿಸಲ್ಪಟ್ಟಿದೆ, ಭಾರತದಲ್ಲಿನ ಮುಸ್ಲಿಂ ಮಹಿಳೆಯರು ಯಾವುದೇ ಕಾನೂನು ಪರಿಣಾಮಗಳಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಅಥವಾ ಬುರ್ಖಾವನ್ನು ಧರಿಸಲು ಸಂಪೂರ್ಣವಾಗಿ ಸ್ವತಂತ್ರರಾಗಿದ್ದಾರೆ.

ಅದೇ ರೀತಿ, ಸಂಸ್ಥೆಯು ತನ್ನ ಆವರಣದೊಳಗೆ ಡ್ರೆಸ್ ಕೋಡ್ ಅನ್ನು ಹೇರುವ ಹಕ್ಕನ್ನು ಸಹ ಹೊಂದಿದೆ ಎಂದು ಒಪ್ಪಿಕೊಳ್ಳುವುದು ಕಡ್ಡಾಯವಾಗಿದೆ. ಮಹಿಳೆಯೊಬ್ಬಳು ತನ್ನ ಇಚ್ಛೆಯಂತೆ ಉಡುಗೆ ತೊಡುಗೆ ಧರಿಸಬಹುದು. ಆದರೆ ಡ್ರೆಸ್ ಕೋಡ್ ನಿರ್ಧರಿಸುವ ಸಂಸ್ಥೆಯ ಹಕ್ಕನ್ನು ತಳ್ಳಿಹಾಕುವುದಿಲ್ಲ. ಇದು ಕಾಲೇಜು ಸಮವಸ್ತ್ರಗಳಿಗೆ ಮಾತ್ರ ಅನ್ವಯಿಸುವುದಿಲ್ಲ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಯಾವುದೇ ಖಾಸಗಿ ಅಥವಾ ಸರ್ಕಾರಿ ಕಚೇರಿ ಆವರಣಗಳಿಗೂ ಸಹ ನಿಯಮ ಅನ್ವಯವಾಗುತ್ತದೆ. ಉದಾಹರಣೆಗೆ ಮದರಸಾದಲ್ಲಿ ತನ್ನ ಆಯ್ಕೆಯ ಬಟ್ಟೆಗಳನ್ನು ಧರಿಸಿರುವ ಮಹಿಳೆಯನ್ನು ಒಳಗೆ ಅನುಮತಿಸಲಾಗುವುದಿಲ್ಲ,
ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಅತ್ಯಗತ್ಯವಾದ ಆಚರಣೆಯಾಗಿದೆ, ಇದು ಪ್ರತಿ ಮಹಿಳೆಯ ಮೇಲೆ ಕಡ್ಡಾಯವಾಗಿದೆ ಎಂದು ವಾದವನ್ನು ನೀಡಲಾಗುತ್ತಿದೆ. ಹೀಗಿರುವಾಗ, “ಆಯ್ಕೆ” ವಿಷಯದಲ್ಲಿ ಇರಾನ್ ಜತೆ ಹೋಲಿಕೆ ಸರಿಯಲ್ಲ . ಅದೇ ಸಮಯದಲ್ಲಿ, ಇರಾನಿನ ಪ್ರತಿಭಟನಾಕಾರರು ಮತ್ತು ಹಲವಾರು ಮೌಲ್ವಿಗಳು ಹಿಜಾಬ್ ಇಸ್ಲಾಂನಲ್ಲಿ ಅತ್ಯಗತ್ಯ ಅಭ್ಯಾಸವಲ್ಲ ಎಂದು ಹೇಳುವಾಗ, ಅದನ್ನು ಮತ್ತೊಮ್ಮೆ ಕಾಲೇಜು ಆವರಣದಲ್ಲಿ ಧರಿಸಬೇಕೆಂಬ ಬೇಡಿಕೆಯನ್ನು  ಪರಿಶೀಲಿಸಬೇಕಾಗುತ್ತದೆ. ನ್ಯಾಯಾಲಯಗಳನ್ನು ಸಂಪರ್ಕಿಸುವ ಮೊದಲು ಮತ್ತು ಸಂವಿಧಾನವನ್ನು ಉಲ್ಲೇಖಿಸುವ ಮೊದಲು, ಹಿಜಾಬ್ ಅನ್ನು ಇಸ್ಲಾಮಿಕ್ ಕಾನೂನಿನಿಂದ ಕಡ್ಡಾಯಗೊಳಿಸಲಾಗಿದೆಯೇ ಅಥವಾ ಅದು ಮಹಿಳೆಯ ಆಯ್ಕೆಯಾಗಿದೆಯೇ ಎಂಬುದರ ಕುರಿತು ಒಮ್ಮತಕ್ಕೆ ಬರಬೇಕಾದ ಅವಶ್ಯಕತೆಯಿದೆ, ಏಕೆಂದರೆ ಒಂದೇ ಸಮಯದಲ್ಲಿ ಎರಡೂ ಆಗಬಾರದು.

ದೇಹವನ್ನು ಪೂರ್ಣವಾಗಿ ಮುಚ್ಚುವ ನೀಳವಾದ ಅಂಗಿ ಮತ್ತು ಮುಖದ ಮೇಲಿನ ಮುಸುಕುಗಳು ಸಮವಸ್ತ್ರವನ್ನು ಮರೆ ಮಾಚುತ್ತದೆ. ಸಮವಸ್ತ್ರ ಎಲ್ಲರಿಗೂ ಒಂದೇ ಆಗಿರಬೇಕು. ವಿದ್ಯಾರ್ಥಿಯ ಗುರುತು ಅದೇ. ಹೀಗಿರುವಾಗ ಮುಸ್ಲಿಂ ಮಹಿಳೆಯರು ಕಾಲೇಜಿನ ಡ್ರೆಸ್ ಕೋಡ್ ಉಲ್ಲಂಘಿಸಿ ತಮ್ಮ ಬುರ್ಖಾ ಮತ್ತು ನಿಖಾಬ್‌ನೊಂದಿಗೆ ಕ್ಯಾಂಪಸ್‌ಗಳನ್ನು ಪ್ರವೇಶಿಸಲು ಅನುಮತಿಸಬೇಕೇ? ಹಾಗೆ ಅನುಮತಿ ನೀಡುವುದಾದರೆ ಅ ಒಂದು ಸವಲತ್ತು. ಇದು ದಶಕಗಳಿಂದ ಅಡೆತಡೆಯಿಲ್ಲದೆ, ಮೂಲಭೂತ ಹಕ್ಕು ಎಂದು ತಪ್ಪಾಗಿ ಗ್ರಹಿಸಲ್ಪಟ್ಟಿದೆ.
ಇರಾನ್‌ನಲ್ಲಿ ಮುಸ್ಲಿಂ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸದಿರುವ ಹಕ್ಕಿಗಾಗಿ ಕಾನೂನು ಪರಿಣಾಮಗಳನ್ನು ಮತ್ತು ತೀವ್ರ ಪೊಲೀಸ್ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ, ಆದರೆ ಕರ್ನಾಟಕದ ಮುಸ್ಲಿಂ ಮಹಿಳೆಯರು ಶಿಕ್ಷಣ ಸಂಸ್ಥೆಯ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿ ಕಾಲೇಜಿನೊಳಗೆ ಬುರ್ಖಾ ಮತ್ತು ನಿಖಾಬ್ ಧರಿಸಲು ಸವಲತ್ತು ಕೇಳುತ್ತಿದ್ದಾರೆ. ಇರಾನ್ ಮತ್ತು ಭಾರತದಲ್ಲಿನ “ಹಿಜಾಬ್” ಪರಿಸ್ಥಿತಿಯನ್ನು ಹೋಲಿಸುವುದು ನೈತಿಕವಾಗಿ ವಿಶ್ವಾಸಘಾತುಕ ಮತ್ತು ಬೌದ್ಧಿಕವಾಗಿ ಅಪ್ರಾಮಾಣಿಕವಾಗಿದೆ. ಇದು ಗೌರವಾನ್ವಿತ ಜೀವನವನ್ನು ನಡೆಸಲು ತಮ್ಮ ಜೀವನವನ್ನು ಹಾಕುತ್ತಿರುವ ಮಹ್ಸಾ ಅಮಿನಿ ಮತ್ತು ಇತರರಿಗೆ ಅವಮಾನವಾಗಿದೆ.

ಫಸ್ಟ್ ಪೋಸ್ಟ್  ಡಾಟ್ ಕಾಂನಲ್ಲಿ  ಪ್ರಕಟವಾದ ಈ  ಲೇಖನದ ಲೇಖಕರು  ಓಮರ್ ಘಾಜಿ, ಇವರು ಇತಿಹಾಸ, ಸಂಸ್ಕೃತಿ ಮತ್ತು ಭೌಗೋಳಿಕ ರಾಜಕೀಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಅವರು ಧಾರ್ಮಿಕ ಸುಧಾರಣೆಯ ಪ್ರತಿಪಾದಕರಾಗಿದ್ದಾರೆ ಮತ್ತು “ಸಂಗೀತದ ಮೂಲಕ ವೈದಿಕ ಜ್ಞಾನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸುವ ಭಾರತೀಯ ಮುಸ್ಲಿಂ” ಎಂದು ಗುರುತಿಸಿಕೊಳ್ಳುತ್ತಾರೆ.

Disclaimer: ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ಅಭಿಪ್ರಾಯಗಳಾಗಿವೆ. ಲೇಖನದಲ್ಲಿ ಕಂಡುಬರುವ ಸತ್ಯಗಳು ಮತ್ತು ಅಭಿಪ್ರಾಯಗಳು Tv9 ಸಂಸ್ಥೆಯ ನಿಲುವುಗಳನ್ನು ಪ್ರತಿಬಿಂಬಿಸುವುದಿಲ್ಲ ಮತ್ತು Tv9 ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ಹೊಂದುವುದಿಲ್ಲ